ಚಳಿಗಾಲದಲ್ಲಿ ಒಣ ಚರ್ಮವನ್ನು ಕಾಪಾಡಿಕೊಳ್ಳಲು ಈ ರೀತಿ ಮಾಡಿ
ನೀವು ಬಿಸಿ ನೀರಿನ ಸ್ನಾನ ಮಾಡಿದರೆ ನಿಮ್ಮ ಚರ್ಮ ಒಣಗಬಹುದು. ಕೆಲವೊಮ್ಮೆ ಶುಷ್ಕ, ಚಳಿಯ ವಾತಾವರಣದಲ್ಲಿ ವಾಸಿಸುವುದರಿಂದ ಕೂಡ ಚರ್ಮ ಒಣಗುತ್ತದೆ. ಚಳಿಗಾಲದ ಶುಷ್ಕ ಚರ್ಮವನ್ನು ಕಾಪಾಡಿಕೊಳ್ಳಲು ಕೆಲವು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಒಣ ಚರ್ಮದವರು ಚಳಿಗಾಲದಲ್ಲಿ ಬಹಳ ಚರ್ಮದ ಕಿರಿಕಿರಿ ಅನುಭವಿಸುತ್ತಾರೆ. ಒಣ ಚರ್ಮ ಚಳಿಗಾಲದಲ್ಲಿ ಇನ್ನಷ್ಟು ಶುಷ್ಕವಾಗುತ್ತದೆ, ಕಾಂತಿಯನ್ನು ಕಳೆದುಕೊಳ್ಳುತ್ತದೆ. ಚರ್ಮವು ಬೇಗನೆ ತೇವಾಂಶವನ್ನು ಕಳೆದುಕೊಂಡಾಗ ಚರ್ಮದ ಶುಷ್ಕತೆ ಎಂದು ಕರೆಯಲ್ಪಡುವ ಸ್ಥಿತಿಯು ಉಂಟಾಗುತ್ತದೆ. ಚಳಿಗಾಲದಲ್ಲಿ ಇದು ಬಹಳ ಸಾಮಾನ್ಯವಾಗಿದೆ.
ಚರ್ಮದ ನೈಸರ್ಗಿಕ ತೈಲಗಳು ಮತ್ತು ಕೊಬ್ಬನ್ನು ಕಡಿಮೆ ಮಾಡುವ ಡಿಯೋಡರೆಂಟ್‌ಗಳು, ಕೆಲವು ಸಾಬೂನುಗಳು ಮತ್ತು ಕಠಿಣವಾದ ಸೌಂದರ್ಯ ಉತ್ಪನ್ನಗಳು ನಿಮ್ಮ ಚರ್ಮವನ್ನು ಒಣಗಿಸಲು ಕಾರಣವಾಗಬಹುದು. ನೀವು ದೀರ್ಘವಾದ, ಬಿಸಿ ನೀರಿನ ಸ್ನಾನ ಮಾಡಿದರೆ ನಿಮ್ಮ ಚರ್ಮ ಒಣಗಬಹುದು. ಕೆಲವೊಮ್ಮೆ ಶುಷ್ಕ, ಚಳಿಯ ವಾತಾವರಣದಲ್ಲಿ ವಾಸಿಸುವುದರಿಂದ ಕೂಡ ಚರ್ಮ ಒಣಗುತ್ತದೆ. ಚಳಿಗಾಲದ ಶುಷ್ಕ ಚರ್ಮವನ್ನು ಕಾಪಾಡಿಕೊಳ್ಳಲು ಕೆಲವು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಗಿಡಮೂಲಿಕೆ ತೈಲಗಳು:
ಒಣ ಚರ್ಮದ ಮೇಲೆ ನೀವು ಕೊಬ್ಬಿನಾಮ್ಲಭರಿತ ಗಿಡಮೂಲಿಕೆಯ ತೈಲಗಳನ್ನು ಹಚ್ಚಬಹುದು. ಉದಾಹರಣೆಗೆ, ಹೆಚ್ಚಿನ ಕೊಬ್ಬಿನಾಮ್ಲದ ಅಂಶವನ್ನು ಹೊಂದಿರುವ ಪ್ರೈಮ್ರೋಸ್ ಎಣ್ಣೆಯನ್ನು ಬಳಸುವುದು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ, ಚರ್ಮವು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ತೆಂಗಿನಕಾಯಿ, ಎಳ್ಳು ಮತ್ತು ಸೂರ್ಯಕಾಂತಿ ಎಣ್ಣೆಗಳನ್ನು ಕೂಡ ಬಳಸಬಹುದು.
ಇದನ್ನೂ ಓದಿ: Skin Care Tips: ಸೆನ್ಸಿಟಿವ್ ಚರ್ಮವನ್ನು ಗುರುತಿಸುವುದು ಹೇಗೆ?
ಆಲಿವ್ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್:
ಸ್ಕ್ರಬ್ ಮಾಡಲು ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಬಳಸಿ. 1/2 ಕಪ್ ಸಕ್ಕರೆ ಮತ್ತು 2 ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ನೀವು ಲ್ಯಾವೆಂಡರ್‌ನಂತಹ ಸಾರಭೂತ ತೈಲವನ್ನು ಸಹ ಇದಕ್ಕೆ ಸೇರಿಸಿಕೊಳ್ಳಬಹುದು. ಇದು ನೈಸರ್ಗಿಕ ಪರಿಮಳವನ್ನು ಹೊಂದಿರುತ್ತದೆ ಮತ್ತು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಮೃದುವಾಗಿ ನಿಮ್ಮ ಚರ್ಮಕ್ಕೆ ಸ್ಕ್ರಬ್ ಅನ್ನು ಹಚ್ಚಿಕೊಂಡು, ನಂತರ ಅದನ್ನು ತೊಳೆಯಿರಿ.
ಮಲಗುವ ಮುನ್ನ ತೆಂಗಿನ ಎಣ್ಣೆ ಹಚ್ಚಿ:
ತೆಂಗಿನ ಎಣ್ಣೆಯನ್ನು ಮಲಗುವ ಮುನ್ನ ಲೋಷನ್ ಆಗಿ ಬಳಸಿ. ಒಡೆದ ಕೈಗಳು ಮತ್ತು ಹಿಮ್ಮಡಿಗಳ ಮೇಲೆ ಎಣ್ಣೆಯನ್ನು ಹಚ್ಚಿಕೊಳ್ಳಿ. ನಂತರ ದಪ್ಪ ಸಾಕ್ಸ್ ಅಥವಾ ಲ್ಯಾಟೆಕ್ಸ್ ಅಲ್ಲದ ಗ್ಲೌಸ್ ಹಾಕಿಕೊಳ್ಳಿ. ಕೊಬ್ಬರಿ ಎಣ್ಣೆಯು ಚರ್ಮಕ್ಕೆ ಅತ್ಯಂತ ಉಪಯುಕ್ತ ಅಂಶವಾಗಿದೆ.
ಇದನ್ನೂ ಓದಿ: ಒಣ ಚರ್ಮದವರು ಮುಖಕ್ಕೆ ಒಮ್ಮೆ ಈ ಫೇಸ್ಪ್ಯಾಕ್ ಹಚ್ಚಿ ನೋಡಿ
ಬಾಳೆಹಣ್ಣು ಮತ್ತು ಜೇನುತುಪ್ಪದ ಫೇಸ್ಪ್ಯಾಕ್:
ಆ್ಯಂಟಿಆಕ್ಸಿಡೆಂಟ್‌ಗಳು, ಫೈಟೊಕೆಮಿಕಲ್‌ಗಳು ಮತ್ತು ತೇವಾಂಶವು ಬಾಳೆಹಣ್ಣಿನಲ್ಲಿ ಹೇರಳವಾಗಿದೆ. ಈ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಅಂಶವು ಚರ್ಮವನ್ನು ಪರಿಣಾಮಕಾರಿಯಾಗಿ ತೇವಗೊಳಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿರುವ ಹ್ಯೂಮೆಕ್ಟಂಟ್ ಜೇನುತುಪ್ಪವಾಗಿದೆ. ಇದು ಚರ್ಮವನ್ನು ತೇವಗೊಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಒಂದು ಚಮಚ ಅಕ್ಕಿ ಹಿಟ್ಟಿನೊಂದಿಗೆ ಮಾಗಿದ ಒಂದು ಬಾಳೆಹಣ್ಣನ್ನು ಮಿಶ್ರಣ ಮಾಡಿ ಮತ್ತು ಒಂದೂವರೆ ಚಮಚ ಜೇನುತುಪ್ಪ ಸೇರಿಸಿ. ಅದಕ್ಕೆ ಸ್ವಲ್ಪ ಅರಿಶಿನ ಪುಡಿ ಮಿಕ್ಸ್ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿದ ನಂತರ ನೀರಿನಿಂದ ತೊಳೆಯುವ ಮೊದಲು 15ರಿಂದ 20 ನಿಮಿಷಗಳ ಕಾಲ ಬಿಡಿ.
ಅಲೋವೆರಾ:
ಒಣ ಚರ್ಮವನ್ನು ತೇವಾಂಶಗೊಳಿಸಲು ಅಲೋವೆರಾ ಬಳಸಬಹುದು. ಇದು ಪಾಲಿಸ್ಯಾಕರೈಡ್‌ಗಳನ್ನು ಹೊಂದಿದ್ದು, ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಚರ್ಮದ ಸಾಮರ್ಥ್ಯವನ್ನು ಹೊಂದಿದೆ. ಇದು ಚರ್ಮದ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ