ಬದುಕಿನ ಕಂಡ ಕಷ್ಟಗಳು ನೂರಾರು, ಎಲ್ಲರಂತೆ ಇರದ ಇಬ್ಬರೂ ಮಕ್ಕಳು. ಈ ಎಲ್ಲಾ ನೋವನ್ನು ಮರೆತು ತಮ್ಮ ಕೃಷಿಯ ಕಾಯಕದಲ್ಲೇ ಖುಷಿ ಕಾಣುತ್ತಿರುವ ಈ ಸಾವಯವ ಕೃಷಿ ಮಹಿಳೆಯೇ ಪ್ರೇಮಾ ಶಂಕರ ಗಾಣಿಗೇರ. ಕೃಷಿ ತರಬೇತಿ, ಸಾವಯವ ಕೃಷಿಯ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವ ಈ ದಿಟ್ಟ ಮಹಿಳೆಯು ಮೂಲತಃ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಘಟಪ್ರಭ ನದಿಯ ತಟದಲ್ಲಿರುವ ಸುಣಧೋಳಿ ಗ್ರಾಮದವರು.
ಓದುವ ವಯಸ್ಸಿನಲ್ಲಿ ಮದುವೆಯ ಬಂಧನಕ್ಕೆ ಒಳಗಾಗಿ ಸಂಸಾರ ಹೊಣೆ ಹೊತ್ತರು. ಐದನೇ ತರಗತಿಯಲ್ಲಿರುವಾಗಲೇ ತನ್ನ ಸೋದರ ಸಂಬಂಧಿಯೊಂದಿಗೆ ಮದುವೆಯಾದರು ಈ ಪ್ರೇಮಾ. ಹದಿನಾಲ್ಕನೇ ವಯಸ್ಸಿಗೆ ಗಂಡು ಮಗುವಿಗೆ ಜನ್ಮ ನೀಡಿದರು. ಆದರೆ ಈ ಮಗು ಎಲ್ಲಾ ಮಗುವಿನಂತೆ ಇರಲಿಲ್ಲ. ಮಗು ಬೆಳೆಯುತ್ತಿದ್ದಂತೆ ಬುದ್ಧಿಮಾಂದ್ಯ ಮಗು ಎನ್ನುವುದು ತಿಳಿಯಿತು. ಊರಲ್ಲಿರುವ ಎಲ್ಲಾ ಆಸ್ಪತ್ರೆಗಳು ಹಾಗೂ ದೇವಸ್ಥಾನವನ್ನು ಸುತ್ತಿದರೂ ಏನು ಪ್ರಯೋಜನವಾಗಲಿಲ್ಲ. ಇಟ್ಟ ಪ್ರೇಮ ಅವರಿಗೆ ಹುಟ್ಟಿದ ಇನ್ನೊಬ್ಬ ಮಗ ಕೂಡ ಬುದ್ಧಿಮಾಂದ್ಯನಾಗಿದ್ದನು. ಈ ಸಣ್ಣ ವಯಸ್ಸಿನಲ್ಲಿ ನುಂಗಲಾರದ ನೋವನ್ನು ಒಡಲಲ್ಲಿ ತುಂಬಿಕೊಂಡು ಪತಿ ಶಂಕರಪ್ಪರವರ ಜೊತೆಗೆ ಕೃಷಿ ಕೆಲಸಕ್ಕೆ ಕೈ ಜೋಡಿಸಿದರು.
ಹೀಗಿರುವಾಗಲೇ ತಮ್ಮ ಕೃಷಿಭೂಮಿಯಲ್ಲಿ ಸಾವಯವ ಕೃಷಿ ಮಾಡಲು ಮುಂದಾದರು. ಲಾಭ ನಷ್ಟಗಳ ಬಗ್ಗೆ ಯೋಚಿಸದೆ ಏನಾದರೂ ಸಾಧಿಸುವ ಎಂದು ಒಂದು ಹೆಜ್ಜೆ ಮುಂದೆ ಇಟ್ಟ ಪ್ರೇಮಾರವರು ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಕಳೆದ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಎಂಟು ಎಕರೆ ಜಮೀನನ್ನು ಹೊಂದಿದ್ದಾರೆ. ಇದರಲ್ಲಿ ಮೂರು ಎಕರೆಗಳಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಶೇಂಗಾ, ಗೋವಿನಜೋಳ, ಅರಿಶಿಣ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ, ಪಪ್ಪಾಯಿ, ಹಿರೇಕಾಯಿ, ಹಾಗಲಕಾಯಿ, ಸೌತೆಕಾಯಿ, ದ್ವಿದಳ ಧಾನ್ಯಗಳನ್ನು ಬೆಳೆದು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಕೃಷಿಗೆ ಬೇಕಾದ ನೀರಾವರಿ ಸೌಲಭ್ಯವನ್ನು ಮಾಡಿಕೊಂಡಿದ್ದಾರೆ. ಅದಲ್ಲದೇ ಬೆಳೆಗೆ ಎರೆಹುಳ ಗೊಬ್ಬರ, ಬಯೋಡೈಜೀಸ್ಟರ್, ಬಯೋಗ್ಯಾಸ್, ದೇಸಿ ಆಕಳ ಗೋಮೂತ್ರದಿಂದ ತಯಾರಿಸಿದ ಪಂಚಗವ್ಯ ಜೀವಾಮೃತಗಳನ್ನು ಬಳಸಿ ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ಸಾವಯವ ಕೃಷಿಯನ್ನೇ ನಂಬಿಕೊಂಡಿರುವ ಪ್ರೇಮಾರವರು ವರ್ಷಕ್ಕೆ 8-10 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ದೇಸಿ ತಳಿ ಹಸು ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದಾರೆ.
ಇದನ್ನೂ ಓದಿ: ಮದುವೆ ತಯಾರಿಯ ವೇಳೆ ಒತ್ತಡ ಅನುಭವಿಸಬೇಡಿ? ವಧು – ವರರು ಈ ಟಿಪ್ಸ್ ಪಾಲಿಸಿ
ಕಳೆದ ಹಲವು ವರ್ಷಗಳಿಂದ ಕೃಷಿಯಲ್ಲಿ ಸಾಧನೆ ಮಾಡಿದ ಇವರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಮತ್ತು ತಾಲೂಕಾ ಮಟ್ಟದಲ್ಲಿ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಸಾವಯವ ಗೊಬ್ಬರಆದಿತ್ಯಾ ಗ್ರೂಪ್‌ನಿಂದ ಸಾವಯವ ದೃಢೀಕರಣ ಪತ್ರವನ್ನು ಪಡೆದಿದ್ದಾರೆ. ಜೊತೆಗೆ ಬೆಳಗಾವಿ ಮತ್ತು ಧಾರವಾಡದಲ್ಲಿ ಸಾವಯವ ರೈತ ಮಹಿಳೆ ಪ್ರಶಸ್ತಿಯೊಂದಿಗೆ ಸುತ್ತ ಮುತ್ತಲಿನವರಿಗೆ ಚಿರಪರಿಚಿತ ಮಹಿಳೆಯಾ ಗಿದ್ದಾರೆ.
ತೋಟಗಾರಿಕೆ ಇಲಾಖೆ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳಲ್ಲಿ ರೈತರಿಗೆ ಹಾಗೂ ಪದವೀಧರರಿಗೆ ಉಪನ್ಯಾಸ ನೀಡುವುದರಲ್ಲಿ ಇವರು ಎತ್ತಿದ ಕೈ. ಅದರೊಂದಿಗೆ ಬೇರೆ ಬೇರೆ ಕಡೆಗಳಿಗೆ ತೆರಳಿ ಅಲ್ಲಿನ ರೈತರಿಗೆ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿರುವ ಮಕ್ಕಳಿಗೆ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿ, ಅವರನ್ನು ಕೃಷಿಯತ್ತ ಒಲವು ಮೂಡಿಸಬೇಕು ಎನ್ನುವ ಕನಸು ಇವರಿಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Wed, 6 March 24