ಆರೋಗ್ಯಕರ ಜೀವನ ನಡೆಸಲು ಬಯಸಿದರೆ ಈ ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ

ಆರೋಗ್ಯಕರ ಜೀವನ ನಮ್ಮದಾಗಬೇಕೆಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ. ಅದಕ್ಕಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಇದರ ಜೊತೆಗೆ ಈ ಕೆಲವೊಂದು ದೈನಂದಿ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಆರೋಗ್ಯಕ ಜೀವನ ನಡೆಸಬಹುದು. ಹಾಗಿದ್ದರೆ ಆರೋಗ್ಯಕ ಜೀವನ ನಡೆಸಲು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಆರೋಗ್ಯಕರ ಜೀವನ ನಡೆಸಲು ಬಯಸಿದರೆ ಈ  ಅಭ್ಯಾಸಗಳನ್ನು ಇಂದೇ ಬಿಟ್ಟುಬಿಡಿ
ಸಾಂದರ್ಭಿಕ ಚಿತ್ರ
Image Credit source: Freepik

Updated on: May 11, 2026 | 8:22 PM

ನಮ್ಮ ಅಭ್ಯಾಸಗಳು ಕೂಡ ನಮ್ಮ ಆರೋಗ್ಯದ (health) ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ.  ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವನೆ ಮಾಡುವುದು, ಮೊಬೈಲ್‌ ಫೋನ್‌ನ ಮಿತ ಬಳಕೆ, ರಾತ್ರಿ ಬೇಗ ಮಲಗುವುದು ಈ ಎಲ್ಲಾ ಅಭ್ಯಾಸಗಳು ಆರೋಗ್ಯದ ಮೇಲೆ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವಂತೆ ತಿಳಿದೋ ತಿಳಿಯದೆಯೋ ಮಾಡುವ ಕೆಲವೊಂದು ತಪ್ಪುಗಳು, ದೈನಂದಿನ ಅಭ್ಯಾಸಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಕಾಲಾನಂತರದಲ್ಲಿ, ಈ ಅಭ್ಯಾಸಗಳು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಕೆಲವೊಂದು ದೈನಂದಿನ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಆರೋಗ್ಯಕ ಜೀವನವನ್ನು ನಡೆಸಿ.

ಆರೋಗ್ಯಕರ ಜೀವನಕ್ಕಾಗಿ ಇಂದೇ ಈ ಅಭ್ಯಾಸಗಳನ್ನು ತ್ಯಜಿಸಿ:

 ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವುದು: ಅನೇಕ ಸಂದರ್ಭದಲ್ಲಿ ಹೆಚ್ಚಿನವರು ಮೂತ್ರವನ್ನು ತಡೆದಿಟ್ಟುಕೊಳ್ಳುತ್ತಾರೆ. ಆ ಕ್ಷಣಕ್ಕೆ ಇದರ ಪರಿಣಾಮ ಆರೋಗ್ಯದ ಮೇಲೆ ಬೀರದಿದ್ದರೂ ನಂತರದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ವಾಸ್ತವವಾಗಿ, ಮೂತ್ರವು ಮೂತ್ರಕೋಶದಲ್ಲಿ ಸಿಕ್ಕಿಹಾಕಿಕೊಂಡಾಗ, ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯಬಹುದು, ಇದು ಮೂತ್ರನಾಳದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮೂತ್ರವನ್ನು ತಡೆದಿಟ್ಟುಕೊಳ್ಳುವ ಅಭ್ಯಾಸವನ್ನು ಬಿಟ್ಟು ಬಿಡಿ.

ಬಾಯಿ ತೆರೆದು ಮಲಗುವುದು: ಕೆಲವರು ಬಾಯಿ ತೆರೆದು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದು ಸಣ್ಣದಾಗಿ ಕಂಡರೂ ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಬಾಯಿ ತೆರೆದು ಮಲಗುವುದರಿಂದ ನಿದ್ರೆಯ ಗುಣಮಟ್ಟ ಕಡಿಮೆಯಾಗಬಹುದು ಅಲ್ಲದೆ ಈ ಸ್ಥಿತಿಯು ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ದೀರ್ಘಕಾಲ ತಪ ಸ್ಥಾನದಲ್ಲಿ ಕುಳಿತುಕೊಳ್ಳುವುದು: ದೀರ್ಘಕಾಲ ಒಂದೇ ಸ್ಥಾನದಲ್ಲಿ ಅಥವಾ  ತಪ್ಪು ಸ್ಥಾನದಲ್ಲಿ ಕುಳಿತುಕೊಳ್ಳುವುದು ಕೂಡ ಆರೋಗ್ಯಕ್ಕೆ ಹಾನಿಕಾರಕ. ಉದಾಹರಣೆಗೆ ದೀರ್ಘ ಕಾಲ ಬಾಗಿ ಕುಳಿತುಕೊಳ್ಳುವುದು ಅಥವಾ ಕೆಲಸ ಮಾಡುವುದು, ಇದು ಬೆನ್ನು ಮತ್ತು ಕುತ್ತಿಗೆಯ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದಲ್ಲದೆ, ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ನಂತರ ಇದು ಕೀಲುಗಳ ಸಮಸ್ಯೆಗಳಿಗೂ ಕಾರಣವಾಗಬಹುದು.

ಶೌಚಾಲಯದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು:  ಹೆಚ್ಚಿನ ಜನರು ಮೊಬೈಲ್ ಫೋನ್ ನೋಡುತ್ತಾ ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಹೀಗೆ ದೀರ್ಘಕಾಲ ಶೌಚಾಲಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ಹೆಚ್ಚು ಹೊತ್ತು ಶೌಚಾಲಯದಲ್ಲಿ ಕುಳಿತುಕೊಳ್ಳುವುದರಿಂದ ರಕ್ತನಾಳಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ, ಇದು ಮೂಲವ್ಯಾಧಿ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಅಬ್ಬಬ್ಬಾ… ಮನೆಯಲ್ಲಿ ನಾಯಿ ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಮುಖವನ್ನು ಆಗಾಗ್ಗೆ ಮುಟ್ಟುವುದು: ನಿಮ್ಮ ಮುಖವನ್ನು ಆಗಾಗ್ಗೆ ಸ್ಪರ್ಶಿಸುವ ಅಭ್ಯಾಸವಿದ್ದರೆ, ಇಂದೇ ಈ ಅಭ್ಯಾಸವನ್ನು ಬದಲಾಯಿಸಿ. ಏಕೆಂದರೆ ನಮ್ಮ ಕೈಗಳು ದಿನವಿಡೀ ಅನೇಕ ವಸ್ತುಗಳನ್ನು ಸ್ಪರ್ಶಿಸುತ್ತವೆ, ಅವು ಬ್ಯಾಕ್ಟೀರಿಯಾಗಳನ್ನು ಸಂಗ್ರಹಿಸುತ್ತವೆ. ಅದೇ ಕೈಗಳಿಂದ ನಿಮ್ಮ ಮುಖವನ್ನು ಸ್ಪರ್ಶಿಸುವುದರಿಂದ ಚರ್ಮದ ಸೋಂಕು, ದದ್ದುಗಳು ಮತ್ತು ಕಿರಿಕಿರಿ ಉಂಟಾಗುತ್ತದೆ.

ಅವಸರದಲ್ಲಿ ತಿನ್ನುವುದು: ನಮ್ಮಲ್ಲಿ ಅನೇಕರು ಆಹಾರವನ್ನು ಗಡಿಬಿಡಿಯಲ್ಲಿ ಬೇಗ ಬೇಗನೇ ತಿಂದು ಮುಗಿಸುತ್ತಾರೆ. ಈ ಅಭ್ಯಾಸ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಅಗತ್ಯಕ್ಕಿಂತ ಹೆಚ್ಚು ತಿನ್ನುವಂತೆ ಮಾಡುತ್ತದೆ, ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಹಾಗಾಗಿ ಯಾವಾಗಲೂ ನಿಧಾನವಾಗಿ ಜಗಿದು ಆಹಾರವನ್ನು ಸೇವಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us