ಹೆಚ್ಚಿನ ಜನರು ಹಳೆಯ ಬಟ್ಟೆಗಳಿದ್ದರೆ ಅದನ್ನು ಒಂದಾ ಬೇರೆಯವರಿಗೆ ನೀಡುತ್ತಾರೆ, ಇಲ್ಲವೇ ಹಳೆ ಬಟ್ಟೆಗಳಿಂದ ಏನು ಉಪಯೋಗವಿಲ್ಲವೆಂದು ಎಸೆದುಬಿಡುತ್ತಾರೆ. ಆದರೆ ಅವುಗಳನ್ನು ಎಸೆಯುವ ಬದಲು ಅವುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು. ಹೌದು ನೀವು ನಿಷ್ಪ್ರಯೋಜಕವೆಂದು ಪರಿಗಣಿಸಿ ಬಿಸಾಡುವ ಹಳೆಯ ಬಟ್ಟೆಗಳು ನಿಜವಾಗಿಯೂ ನಿಮಗೆ ಉಪಯುಕ್ತವಾಗಿದೆ. ನಿಮ್ಮ ಬಳಿ, ಟೀ-ಶರ್ಟ್, ಕುರ್ತಾ, ದುಪಟ್ಟಾ, ಜೀನ್ಸ್, ಸೀರೆಗಳಂತಹ ಯಾವುದೇ ಹಳೆಯ ಬಟ್ಟೆಗಳಿದ್ದರೆ, ಅವುಗಳನ್ನು ಹಲವು ವಿಧಗಳಲ್ಲಿ ಮರುಬಳಕೆ ಮಾಡಬಹುದು.
ಫ್ರೇಮ್ ತಯಾರಿಸಬಹುದು:
ನಿಮ್ಮ ಮನೆಯ ಗೋಡೆಗಳನ್ನು ಅಲಂಕರಿಸಲು ಬಯಸಿದರೆ, ಹಳೆಯ ಬಟ್ಟೆಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಯಾವುದೇ ಬಟ್ಟೆಯಲ್ಲಿ ಸುಂದರವಾದ ವಿನ್ಯಾಸ, ಚಿತ್ರ ಅಥವಾ ಟೀ ಶರ್ಟ್ಗಳಲ್ಲಿ ಅರ್ಥಪೂರ್ಣ ಬರಹಗಳಿದ್ದರೆ ಅದನ್ನು ಫೋಟೋ ಫ್ರೇಮ್ ಗಾತ್ರದಲ್ಲಿ ಕತ್ತರಿಸಿ ಅದಕ್ಕೆ ಸುಂದರವಾದ ಫ್ರೇಮ್ ಹಾಕಿ ಗೋಡೆಗೆ ಅಂಟಿಸಿ. ಅಲ್ಲದೆ ಹಳೆಯ ಜೀನ್ಸ್ ಗಳಿಂದಲ್ಲೂ ವಾಲ್ ಆರ್ಟ್ ಮಾಡಬಹುದು.
ಪರ್ಸ್ ಅಥವಾ ಬ್ಯಾಗ್ :
ನೀವು ಹಳೆಯ ಬಟ್ಟೆಗಳನ್ನು ಬಳಸಿಕೊಂಡು ಚೀಲ ಅಥವಾ ಪರ್ಸ್ ಕೂಡಾ ತಯಾರಿಸಬಹುದು. ಜೀನ್ಸ್ ಅಥವಾ ಸುಂದರವಾದ ವಿನ್ಯಾಸಗಳಿರುವ ಬಟ್ಟೆಗಳನ್ನು ನಿಮಗೆ ಬೇಕಾದ ಗಾತ್ರದಲ್ಲಿ ಕತ್ತರಿಸಿ ಅವುಗಳಿಂದ ಸುಂದರವಾದ ಬ್ಯಾಗ್ ಅಥವಾ ಪರ್ಸ್ ತಯಾರಿಸಬಹುದು.
ಮಕ್ಕಳಿಗಾಗಿ ಬಟ್ಟೆ ತಯಾರಿಸಿ:
ಕೆಲವೊಬ್ಬರು ತಮ್ಮ ಸುಂದರವಾದ ಉಡುಪುಗಳನ್ನು ಎಸೆಯಲು ಇಷ್ಟಪಡುವುದಿಲ್ಲ. ಅಂತಹ ಸಂದರ್ಭದಲ್ಲಿ ನೀವು ಹಳೆಯ ಬಟ್ಟೆಗಳು ಅಥವಾ ಸೀರೆಗಳನ್ನು ಕತ್ತರಿಸಿ ಅದನ್ನು ಹೊಸ ರೂಪಕ್ಕೆ ಪರಿವರ್ತಿಸಬಹುದು. ನಿಮ್ಮ ಬಣ್ಣ ಬಣ್ಣದ ಉಡುಪು ಅಥವಾ ಸೀರೆಗಳನ್ನು ಬಳಸಿ ಪುಟ್ಟ ಮಕ್ಕಳಿಗೆ ಲಂಗ ದಾವಣಿ ಅಥವಾ, ಫ್ರಾಕ್, ಗೌನ್ ರೀತಿಯ ಬಟ್ಟೆಗಳನ್ನು ಹೊಲಿಯಬಹುದು.
ಇದನ್ನೂ ಓದಿ: ಕ್ರ್ಯಾಶ್ ಡಯಟ್ ಎಂದರೇನು? ಈ ಡಯಟ್ ಪಾಲನೆ ನಟಿ ಶ್ರೀದೇವಿ ಪ್ರಾಣಕ್ಕೆ ಮುಳುವಾಯಿತೇ?
ಸ್ಕ್ರಂಚಿಗಳನ್ನು ತಯಾರಿಸಬಹುದು:
ಇತ್ತೀಚಿನ ದಿನಗಳಲ್ಲಿ ಹುಡುಗಿಯರು ತಮ್ಮ ಕೂದಲಿಗೆ ರಬ್ಬರ್ ಬ್ಯಾಂಡ್ ಬದಲಿಗೆ ಸ್ಕ್ರಂಚಿಗಳನ್ನು ಧರಿಸಲು ಇಷ್ಟಪಡುತ್ತಾರೆ. ಕೂದಲಿಗೆ ಮಾತ್ರವಲ್ಲದೆ ಕೆಲವು ಯುವತಿಯರು ತಮ್ಮ ಕೈಗಳಿಗೂ ಸ್ಕ್ರಂಚಿಗಳನ್ನು ಹಾಕಿಕೊಳ್ಳುತ್ತಾರೆ. ಹೀಗಿರುವಾಗ ನಿಮ್ಮ ಬಳಿ ಹಳೆಯ ಸ್ಯಾಟಿನ್ ಬಟ್ಟೆಗಳಿದ್ದರೆ ಅದನ್ನು ಎಸೆಯುವ ಬದಲು ಅದನ್ನು ಕತ್ತರಿಸಿ ಸುಂದರವಾದ ಸ್ಕ್ರಂಚಿಗಳನ್ನು ತಯಾರಿಸಬಹುದು.
ಫ್ರಿಡ್ಜ್ ಮತ್ತು ವಾಶಿಂಗ್ ಮೆಷಿನ್ ಗೆ ಕವರ್ ತಯಾರಿಸಬಹುದು:
ಹಳೆಯ ಬಟ್ಟೆಗಳ ಸಹಾಯದಿಂದ ನೀವು ರೆಫ್ರಿಜರೆಟರ್ ಮತ್ತು ವಾಶಿಂಗ್ ಮೆಷಿನ್ ಕವರ್ ಕೂಡಾ ತಯಾರಿಸಬಹುದು. ಅನೇಕ ಬಾರಿ ಎಷ್ಟೇ ಸ್ವಚ್ಛಗೊಳಿಸಿದರು ಫ್ರಿಡ್ಜ್ ಮೇಲೆ ಧೂಳು ಮತ್ತು ಕಲೆ ಹಾಗೇನೇ ಉಳಿದುಬಿಡುತ್ತದೆ. ಅದಕ್ಕಾಗಿ ಹಳೆಯ ಬಟ್ಟೆಯಿಂದ ಸುಂದರ ನೋಟವನ್ನು ನೀಡುವ ಕವರ್ಗಳನ್ನು ತಯಾರಿಸಬಹುದು.
ದಿಂಬು ಮತ್ತು ಸೋಫಾ ಕವರ್:
ನೀವು ಹತ್ತಿಯಂತೆ ಬಟ್ಟೆಗಳನ್ನು ದಿಂಬಿನೊಳಗೆ ತುಂಬುವ ಮೂಲಕ ವಿವಿಧ ಆಕಾರಗಳಲ್ಲಿ ದಿಂಬುಗಳನ್ನು ತಯಾರಿಸಬಹುದು. ಅಲ್ಲದೆ ಸುಂದರವಾದ ಸೋಫಾ ಕವರ್ ಮತ್ತು ಅದಕ್ಕೆ ಮ್ಯಾಚ್ ಆಗುವ ದಿಂಬು ಕವರ್ಗಳನ್ನು ಕೂಡಾ ಹಳೆಯ ಬಟ್ಟೆಗಳಿಂದ ತಯಾರಿಸಬಹುದು.
ಮ್ಯಾಟ್:
ಮನೆಯಲ್ಲಿ ಹಳೆಯ ಸೀರೆ ಅಥವಾ ಬಟ್ಟೆಗಳಿದ್ದರೆ ಅವುಗಳನ್ನು ಎಸೆಯುವ ಬದಲು ಅವುಗಳನ್ನು ಉದ್ದಕ್ಕೆ ಕತ್ತರಿಸಿ ಆ ಬಟ್ಟೆ ತುಂಡುಗಳನ್ನು ನೇಯ್ಗೆ ಮಾಡುವ ಮೂಲಕ ಕಾರ್ಪೆಟ್, ಫ್ಲೋರ್ ಮ್ಯಾಟ್, ಮಕ್ಕಳು ಆಟವಾಡುವ ಬೊಂಬೆಗಳಿಗೆ ಉಡುಪುಗಳು ಅಥವಾಇನ್ನೇನಾದರೂ ಹೊಸದನ್ನು ತಯಾರಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: