ವಿಚ್ಛೇದನದ ಯೋಚನೆ ಮಾಡುವ ದಂಪತಿ ಈ ವಿಷಯವನ್ನೆಂದೂ ಮರೆಯಬೇಡಿ
ಗಂಡ-ಹೆಂಡತಿ ಸಂಬಂಧವನ್ನು ನಿಭಾಯಿಸುವುದು ಸುಲಭದ ಮಾತೇನಲ್ಲ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳೇ ದೊಡ್ಡದಾಗಿ ಬೀದಿ ರಂಪವಾದ ಉದಾಹರಣೆಗಳೂ ಇವೆ. ಇನ್ನು ಕೆಲವು ಸಂದರ್ಭದಲ್ಲಿ ತೀರಾ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದ ಘಟನೆಗಳೂ ನಡೆದಿವೆ. ಈಗಂತೂ ವಿಚ್ಛೇದನ ಹಾಗೂ ಮರುಮದುವೆಯೆಂಬುದು ಬಹಳ ಸಾಮಾನ್ಯವಾಗಿಬಿಟ್ಟಿದೆ. ವಿಚ್ಛೇದನ ಹೊಸ್ತಿಲಿಗೆ ಬಂದು ನಿಂತಿರುವ ದಾಂಪತ್ಯ ಜೀವನವನ್ನು ಮತ್ತೆ ಹಳಿಗೆ ತರಲು ಕೆಲವು ಸಲಹೆಗಳು ಇಲ್ಲಿವೆ.
ಗಂಡ ಗೊರಕೆ ಹೊಡೆಯುತ್ತಾನೆ, ಹೆಂಡತಿ ಅತಿಯಾಗಿ ಶಾಪಿಂಗ್ ಮಾಡುತ್ತಾಳೆ, ಗಂಡ ಕ್ಲೀನ್ ಆಗಿರುವುದಿಲ್ಲ, ಹೆಂಡತಿ ಚೆನ್ನಾಗಿ ಅಡುಗೆ ಮಾಡುವುದಿಲ್ಲ ಹೀಗೆ ಸಣ್ಣಪುಟ್ಟ ವಿಷಯಗಳೂ ಕೋರ್ಟ್ ಮೆಟ್ಟಿಲೇರಿ, ವಿಚ್ಛೇದನದಲ್ಲಿ ಅಂತ್ಯಗೊಂಡ ಉದಾಹರಣೆಗಳು ಕೂಡ ಇವೆ. ಗಂಡ-ಹೆಂಡತಿ ಕೊನೆಯವರೆಗೂ ಒಟ್ಟಾಗಿ ಇರಬೇಕೆಂದು ಜಾತಕ ಹೊಂದಿಸಿ, ಒಳ್ಳೆಯ ದಿನ- ಮುಹೂರ್ತ ನೋಡಿಸಿ ಮದುವೆ ಮಾಡುತ್ತಾರೆ. ಆದರೆ, ಈಗಿನ ಕಾಲದ ದಂಪತಿಗೆ ಸಣ್ಣಪುಟ್ಟ ವಿಷಯಗಳಿಗೂ ಹೊಂದಾಣಿಕೆ ಮಾಡಿಕೊಳ್ಳುವ ಮನಸು ಇರುವುದಿಲ್ಲ. ಈ ಅಹಂನಿಂದಲೇ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆ.
ನಿಮ್ಮ ವೈವಾಹಿಕ ಜೀವನದ ಆರಂಭದಲ್ಲಿ ಎಲ್ಲವೂ ಸಂತೋಷವಾಗಿ ಕಾಣಿಸಬಹುದು. ಆದರೆ, ದಿನ ಕಳೆದಂತೆ, ಜವಾಬ್ದಾರಿ ಹೆಚ್ಚಾದಂತೆ ಒಂದೊಂದೇ ಸಮಸ್ಯೆಗಳು ಕಾಣಿಸತೊಡಗುತ್ತವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಬಾಂಧವ್ಯವು ಹದಗೆಟ್ಟಾಗ ಅದನ್ನು ಸರಿಪಡಿಸಿಕೊಳ್ಳಲು ಇಬ್ಬರ ಪ್ರಯತ್ನವೂ ಮುಖ್ಯ. ಕೆಲವೊಮ್ಮೆ ಸೋಲುವುದರಿಂದ ಸಂಬಂಧ ಉಳಿಯುತ್ತದೆ ಎಂದಾದರೆ ಕಾಂಪ್ರಮೈಸ್ ಆಗುವುದರಲ್ಲಿ ತಪ್ಪೇನಿಲ್ಲ ಎಂಬುದನ್ನು ನೆನಪಿಡಿ.
ವಿಚ್ಛೇದನದ ಬಗ್ಗೆ ಯೋಚಿಸುವ ಮೊದಲು ನಿಮ್ಮ ಸಂಬಂಧವನ್ನು ಉಳಿಸುವ ಸಾಧ್ಯತೆಯನ್ನು ಪರಿಗಣಿಸುವುದು ಬಹಳ ಮುಖ್ಯ. ವಿಚ್ಛೇದನದ ಅಂಚಿನಲ್ಲಿರುವ ದಾಂಪತ್ಯವನ್ನು ಉಳಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳು ಇಲ್ಲಿವೆ.
ಇದನ್ನೂ ಓದಿ: ನಿಮ್ಮ ಸಂಗಾತಿ ಜೊತೆ ಜಗಳವಾಡಿದಾಗ ಈ ತಪ್ಪನ್ನೆಂದೂ ಮಾಡಬೇಡಿ!
ಮುಕ್ತ ಸಂವಹನ:
ಮುಕ್ತ ಮತ್ತು ಪ್ರಾಮಾಣಿಕವಾಗಿ ದಂಪತಿಯಿಬ್ಬರೂ ಮಾತನಾಡುವುದರಿಂದ ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇಬ್ಬರೂ ತಮ್ಮ ಆಲೋಚನೆಗಳು, ಭಾವನೆಗಳು ಮತ್ತು ದೃಷ್ಟಿಕೋನಗಳನ್ನು ಪರಸ್ಪರ ಮಾತನಾಡಿಕೊಳ್ಳಿ. ಇದು ಅನೇಕ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುತ್ತದೆ.
ಹೇಳುವುದನ್ನು ಕೇಳಿ:
ನಿಮ್ಮ ಸಂಗಾತಿ ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಆಲಿಸಿ. ನಿಮ್ಮ ಸಂಪೂರ್ಣ ಗಮನವನ್ನು ಅವರಿಗೆ ನೀಡುವ ಮೂಲಕ, ಕಣ್ಣಿನ ಸಂಪರ್ಕವನ್ನು ಕಾಪಾಡಿಕೊಳ್ಳುವ ಮೂಲಕ ನೀವು ಅವರ ದೃಷ್ಟಿಕೋನವನ್ನು ಗೌರವಿಸುತ್ತೀರಿ ಎಂದು ತೋರಿಸಿ. ಇದು ಅವರಿಗೆ ನಿಮ್ಮ ಮೇಲೆ ನಂಬಿಕೆ ಮೂಡಿಸುತ್ತದೆ.
ಸಹಾನುಭೂತಿಯನ್ನು ಬೆಳೆಸಿಕೊಳ್ಳಿ:
ಇತರ ವ್ಯಕ್ತಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಮತ್ತು ಅವರ ಭಾವನೆಗಳನ್ನು ಅಂಗೀಕರಿಸಲು ಪ್ರಯತ್ನಿಸಿ. ಪರಾನುಭೂತಿಯು ನಿಮ್ಮನ್ನು ಅವರ ಸ್ಥಾನದಲ್ಲಿ ನಿಂತು ಯೋಚಿಸುವಂತೆ ಮಾಡುತ್ತದೆ.
ರಾಜಿ ಮಾಡಿಕೊಳ್ಳುವುದು ತಪ್ಪಲ್ಲ:
ರಾಜಿ ಮಾಡಿಕೊಳ್ಳಲು ಸಿದ್ಧರಾಗಿರಿ. ಕೆಲವೊಮ್ಮೆ ಸಂಬಂಧ ಉಳಿಯಬೇಕೆಂದರೆ ಇಬ್ಬರಲ್ಲಿ ಒಬ್ಬರಾದರೆ ರಾಜಿ ಮಾಡಿಕೊಳ್ಳಲು ತಯಾರಿರಬೇಕು. ಇಲ್ಲವಾದರೆ ಸಮಸ್ಯೆ ಇನ್ನಷ್ಟು ಕಗ್ಗಂಟಾಗುತ್ತದೆ.
ಇದನ್ನೂ ಓದಿ: ಹೆಂಗಸರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳಿವು
ಜವಾಬ್ದಾರಿಯನ್ನು ತೆಗೆದುಕೊಳ್ಳಿ:
ನಿಮ್ಮ ತಪ್ಪಿನಿಂದಲೇ ಜಗಳ ಶುರುವಾಗಿದ್ದರೆ ಅದರ ಜವಾಬ್ದಾರಿಯನ್ನು ನೀವೇ ತೆಗೆದುಕೊಂಡು, ಕ್ಷಮೆ ಕೇಳಿ. ಇನ್ನೊಮ್ಮೆ ಈ ರೀತಿ ಆಗುವುದಿಲ್ಲವೆಂದು ಸಂಗಾತಿಗೆ ಅರ್ಥ ಮಾಡಿಸಿ.
ಒಟ್ಟಿಗೇ ಸಮಯ ಕಳೆಯಿರಿ:
ಸಂಗಾತಿಗಳಿಬ್ಬರೂ ಒಟ್ಟಿಗೆ ಗುಣಮಟ್ಟದ ಸಮಯ ಕಳೆಯಿರಿ. ದೈನಂದಿನ ಜೀವನದ ಗಡಿಬಿಡಿಯಲ್ಲಿ ದಂಪತಿಗಳು ಸಾಮಾನ್ಯವಾಗಿ ಮೊಬೈಲ್ ಮೂಲಕವೇ ಮಾತುಕತೆ ಮುಗಿಸಿಬಿಡುತ್ತಾರೆ. ಒಟ್ಟಿಗೇ ಕುಳಿತು ಸಮಯ ಕಳೆಯಲು ಅವರಿಗೆ ಬಿಡುವು ಇರುವುದಿಲ್ಲ. ಆದರೆ, ನಿಮ್ಮ ದಾಂಪತ್ಯಕ್ಕಾಗಿ ನೀವು ಸ್ವಲ್ಪವಾದರೂ ಸಮಯ ಂಆಡಿಕೊಳ್ಳಬೇಕಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ