ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಮೈಸೂರು ಪಾಕ್ ಘಮ
ರಾಷ್ಟ್ರಪತಿ ಭವನವು ಎಷ್ಟು ವಿಶೇಷವಾಗಿದೆಯೋ, ಇಲ್ಲಿ ಏರ್ಪಡಿಸುವ ಔತಣಕೂಟವು ವಿವಿಧ ಖಾದ್ಯಗಳಿಂದ ಅಷ್ಟೇ ವಿಶೇಷತೆಯಿಂದ ಕೂಡಿರುತ್ತದೆ. ದೇಶ ವಿದೇಶಗಳಿಂದ ಬರುವ ಅತಿಥಿಗಳು ಈ ಔತಣಕೂಟದಲ್ಲಿ ಭಾಗಿಯಾಗಿ ಭಾರತದ ವಿವಿಧ ಬಗೆಯ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಈ ಬಾರಿಯ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ‘ಅಟ್ ಹೋಮ್’ ಔತಣಕೂಟವು ದಕ್ಷಿಣ ಭಾರತದ ಪಾಕ ಪದ್ಧತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಹಾಗಾದ್ರೆ ಈ ಔತಣಕೂಟವು ಏನೆಲ್ಲಾ ವಿಶೇಷತೆಗಳನ್ನೊಳಗೊಂಡಿತ್ತು? ಊಟದ ಮೆನುವಿನಲ್ಲಿ ಯಾವೆಲ್ಲಾ ಖಾದ್ಯಗಳಿದ್ದವು ಎನ್ನುವ ಮಾಹಿತಿ ಇಲ್ಲಿದೆ.

ಜನವರಿ 26 ರಂದು 76 ನೇ ಗಣರಾಜ್ಯೋತ್ಸವದಂದು ಅತಿಥಿಗಳಿಗಾಗಿ ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರು ‘ಅಟ್ ಹೋಮ್’ ಔತಣಕೂಟವನ್ನು ಆಯೋಜಿಸಿದ್ದರು. ಈ ಸಮಾರಂಭವು ದಕ್ಷಿಣ ಭಾರತದ ಪಾಕ ಪದ್ಧತಿ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಮೇಲೆ ಕೇಂದ್ರೀಕೃತವಾಗಿತ್ತು. ಆಯಾ ಪ್ರದೇಶದ ರುಚಿಕರವಾದ ಭಕ್ಷ್ಯಗಳು, ಉಡುಗೆ ತೊಡುಗೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿಯ ಪ್ರಮುಖ ಆಕರ್ಷಕಣೆಯಾಗಿತ್ತು.
ಈ ವರ್ಷದ ಗಣರಾಜ್ಯೋತ್ಸವದ ಪರೇಡ್‌ನ ಮುಖ್ಯ ಅತಿಥಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಉಪರಾಷ್ಟ್ರಪತಿ ಜಗದೀಪ್ ಧನ್‌ಖರ್, ಪ್ರಧಾನಿ ನರೇಂದ್ರ ಮೋದಿ, ಹಲವಾರು ಕೇಂದ್ರ ಸಚಿವರು, ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳು ಹಾಗೂ ರಾಜತಾಂತ್ರಿಕರು ಭಾಗವಹಿಸಿದ್ದರು. ಅತಿಥಿಗಳನ್ನು ದಕ್ಷಿಣದ ಐದು ರಾಜ್ಯಗಳ (ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ) ದಂಪತಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು, ತಮ್ಮ ಪ್ರಾಂತ್ಯದ ಭಾಷೆಯಲ್ಲೇ ಸ್ವಾಗತಿಸಿದರು.
ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಂಗೀತ ಕಲಾವಿದರಿಂದ ಸಾಂಪ್ರದಾಯಿಕ ವಾದ್ಯಗಳಾದ ವೀಣೆ, ಪಿಟೀಲು, ಮೃದಂಗ ಹಾಗೂ ಕೊಳಲುಗಳನ್ನು ನುಡಿಸುವಿಕೆ ಹೀಗೆ ವಿವಿಧ ಸಾಂಸ್ಕೃತಿಕ ಪ್ರದರ್ಶನವು ಕಣ್ಮನ ಸೆಳೆಯಿತು. ವಿವಿಧ ರಾಜ್ಯಗಳ ಉಡುಗೆ ತೊಡುಗೆಗಳ ಪ್ರದರ್ಶನದೊಂದಿಗೆ, ರುಚಿಕರ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಗಿತ್ತು. ರುಚಿಕರ ಖಾದ್ಯಗಳು ಅತಿಥಿಗಳ ಹೊಟ್ಟೆ ತಣಿಸುವಂತೆ ಮಾಡಿತ್ತು.
ಔತಣ ಕೂಟದಲ್ಲಿ ದಕ್ಷಿಣ ಭಾರತದ ಖಾದ್ಯಗಳ ಘಮ
ಊಟದ ಮೆನುವಿನಲ್ಲಿ ಉಪ್ಪಿನಕಾಯಿ ಸ್ಟಫ್ಡ್ ಕುಜಿ ಪಣಿಯಾರಂ, ಆಂಧ್ರ ಶೈಲಿಯ ಮಿನಿ ಸಮೋಸ, ಟೊಮೊಟೊ ಶೇಂಗಾ ಚಟ್ನಿ, ಕರುವೆಪ್ಪಿಲೈ ಪೋಡಿ, ತುಪ್ಪ ಮಿಶ್ರಿತ ಮಿನಿ ಇಡ್ಲಿ (ರಾಗಿ ಇಡ್ಲಿ), ಫಿಂಗರ್ ರಾಗಿ ರೈಸ್ ಕೇಕ್, ಉಡುಪಿಯ ಉದ್ದಿನ ವಡೆ, ಮಿನಿ ಮಸಾಲೆ ಉತ್ತಪ್ಪಮ್, ಕೊಂಡಕದಲೈ ಸುಂಡಲ್, ಮುರುಕ್ಕು, ಬಾಳೆ ಚಿಪ್ಸ್ ಹೀಗೆ ಬಗೆಬಗೆಯ ಖಾದ್ಯಗಳನ್ನು ಒಳಗೊಂಡಿತ್ತು.
ಇದನ್ನೂ ಓದಿ: ಕ್ಯಾರೆಟ್ ಮತ್ತು ಬೀಟ್ರೂಟ್ ಜ್ಯೂಸ್ ತೂಕವನ್ನು ಹೆಚ್ಚಿಸುತ್ತದೆಯೇ?
ಅದಲ್ಲದೇ, ರವೆ ಕೇಸರಿ, ಪರಿಪ್ಪು ಪ್ರದಮನ್, ಮೈಸೂರು ಪಾಕ್, ಒಣ ಹಣ್ಣು ಪುತ್ತರೆಕಾಳು, ರಾಗಿ ಲಡ್ಡು ವಿವಿಧ ಬಗೆಯ ಸಿಹಿ ತಿಂಡಿಗಳು ಹಾಗೂ ಹಸಿರು ತರಕಾರಿಗಳ ಜ್ಯೂಸ್, ಕಿತ್ತಳೆ ಜ್ಯೂಸ್, ತೆಂಗಿನಕಾಯಿ ನೀರು, ಏಲಕ್ಕಿ ಚಹಾ , ನೀಲಗಿರಿ ಫಿಲ್ಟರ್ ಕಾಫಿ ಹಾಗೂ ಹಾಗೂ ಗ್ರೀನ್ ಟೀ ಸೇರಿದಂತೆ ವಿವಿಧ ಪಾನೀಯಗಳು ಮೆನುವಿನಲ್ಲಿತ್ತು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ