ಚಿಕನ್ ಪೆಪ್ಪರ್ ಡ್ರೈ (Chicken Pepper Dry) ಅಂದರೆ ಮಾಂಸ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಆದರೆ ಪೆಪ್ಪರ್ ಡ್ರೈ ಮಾಡುವುದು ರಗಳೆ ಅಂತ ಬ್ಯಾಚ್ಯುಲರ್ಸ್ ಹೋಟೆಲ್, ರೆಸ್ಟೋರೆಂಟ್ಗೆ ಹೋಗಿ ತಿನ್ನುತ್ತಾರೆ. ಅದು ಕೆಲವೊಮ್ಮೆ ತೃಪ್ತಿ ಕೊಡಲ್ಲ. ಎಷ್ಟೇ ಫೇಮಸ್ ರೆಸ್ಟೋರೆಂಟ್ಗೆ ಹೋಗಿ ಚಿಕನ್ ಪೆಪ್ಪರ್ ಡ್ರೈ ಸೇವಿಸಿದರೂ ಮನೆಯಲ್ಲಿ ಅಮ್ಮ ಮಾಡಿದ ರೀತಿ ಇಲ್ಲ ಅಂತ ಬ್ಯಾಚ್ಯುಲರ್ಸ್ ಅಂದುಕೊಳ್ತಾರೆ. ಆದರೆ ಅನಿವಾರ್ಯಕ್ಕೆ ರೆಸ್ಟೋರೆಂಟ್, ಹೋಟೆಲ್ಗೆ ಹೋಗುತ್ತಾರೆ. ಈ ಬಗ್ಗೆ ಬ್ಯಾಚ್ಯುಲರ್ಸ್ ಚಿಂತೆ ಪಡುವ ಅಗತ್ಯವಿಲ್ಲ.
ನಾವು ನಿಮಗೆ ಸುಲಭವಾಗಿ, ರುಚಿ ರುಚಿಯಾದ ಚಿಕನ್ ಪೆಪ್ಪರ್ ಡ್ರೈ ಮಾಡುವುದು ಹೇಗೆ ಅಂತ ಇಲ್ಲಿ ತಿಳಿಸಿದ್ದೇವೆ, ಗಮನಿಸಿ.
ಚಿಕನ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು (Ingredients)
ಅರ್ಧ ಕೆಜಿ ಕೋಳಿ ಮಾಂಸ
ಒಂದು ಸಣ್ಣ ಗಾತ್ರದ ಈರುಳ್ಳಿ
ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ
ಒಂದು ಸಣ್ಣ ಗಾತ್ರದ ಟೊಮ್ಯಾಟೋ
ಕಾಳು ಮೆಣಸಿನ ಪುಡಿ
ಶುಂಠಿ, ಬೆಳ್ಳುಳ್ಳಿ ಪೆಸ್ಟ್
ಕೊತ್ತಂಬರಿ ಸೊಪ್ಪು
ಅರಿಶಿನ ಪುಡಿ
ಖಾರದ ಪುಡಿ
ನಿಂಬೆಹಣ್ಣು
ಉಪ್ಪು
ಮೊದಲು ಈರಳ್ಳಿ ಮತ್ತು ಟೊಮ್ಯಾಟೋವನ್ನು ಸಣ್ಣದಾಗಿ ಕತ್ತರಿಸಿ. ಹಸಿಮೆಣಸಿನಕಾಯಿ ಒಂದರಲ್ಲಿ ನಾಲ್ಕು ತುಂಡುಗಳಾಗಿ ಕತ್ತರಿಸಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಬಗ್ಗೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಸಿಗುತ್ತದೆ. ಒಂದು ಪ್ಯಾಕೆಟ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಂದಿಟ್ಟುಕೊಳ್ಳಿ. ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಿರಿ. ಮೂರರಿಂದ ನಾಲ್ಕು ಬಾರಿ ತೊಳೆದ ಬಳಿಕ ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಒಂದು ಟೇಬಲ್ ಸ್ಪೂನ್ ಉಪ್ಪು ಹಾಕಿ ಮಿಶ್ರಣ ಮಾಡಿ. 10 ನಿಮಿಷ ಹಾಗೇ ಬಿಡಿ.
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿ ಹಾಕಿ. ಈರುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಹಸಿಮೆಣಸಿನಕಾಯಿ ಸೇರಿಸಿ. 30 ಸೆಕೆಂಡ್ ನಂತರ ಟೊಮ್ಯಾಟೋ ಹಾಕಿ ಫ್ರೈ ಮಾಡಿ. ಈಗ ಅದಕ್ಕೆ ಕೋಳಿ ಮಾಂಸ ಸೇರಿಸಿ. ಮಾಂಸಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ಮೂರರಿಂದ ನಾಲ್ಕು ಚಮಚ ಕಾಳು ಮೆಣಸಿನ ಪುಡಿ ಹಾಕಿ. ನಿಮಗೆ ಖಾರ ಇಷ್ಟವಾದರೆ ಇನ್ನೊಂದು ಚಮಚ ಜಾಸ್ತಿ ಹಾಕಬಹುದು. ನಂತರ ಒಂದು ಚಮಚ ಖಾರದ ಪುಡಿ ಹಾಕಿ. ಮಾರುಕಟ್ಟೆಯಲ್ಲಿ ಸಿಗುವ ಚಿಕನ್ ಮಸಾಲ ಪೌಡರ್ ಎರಡು ಚಮಚ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಕೊನೆಯದಾಗಿ ನಿಂಬೆಹಣ್ಣಿನ ರಸ ಸೇರಿಸಿ. ಗ್ಯಾಸ್ ಇಳಿಸುವ ಒಂದು ನಿಮಿಷದ ಮೊದಲು ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ.
ಅಕ್ಕಿ ರೊಟ್ಟಿಯೊಂದಿಗೆ ಚಿಕನ್ನ ಪೆಪ್ಪರ್ ಡ್ರೈ ಸವಿಯಿರಿ.
ಇದನ್ನೂ ಓದಿ
Shocking News: 3 ಲಕ್ಷ ರೂ. ಟಿಪ್ ಪಡೆದ ಮಹಿಳಾ ಸರ್ವರ್ ರೆಸ್ಟೋರೆಂಟ್ ಕೆಲಸದಿಂದ ಅಮಾನತು!