ಮನೆಯಲ್ಲಿ ಇಲಿಗಳ ಕಾಟವೇ? ಈ ಟಿಪ್ಸ್ ಪಾಲಿಸಿದರೆ ಈ ಸಮಸ್ಯೆಯಿಂದ ನಿಮಗೆ ಸಿಗುತ್ತೆ ಮುಕ್ತಿ
ಕೆಲವರ ಮನೆಯಲ್ಲಿ ಸಿಕ್ಕಾಪಟ್ಟೆ ಇಲಿಗಳ ಕಾಟ ಇರುತ್ತೆ. ಡಬ್ಬಗಳಲ್ಲಿಟ್ಟ ಕಾಳು, ಆಹಾರದಿಂದ ಹಿಡಿದು ಬಟ್ಟೆ ಇತ್ಯಾದಿ ಮನೆ ವಸ್ತುಗಳನ್ನು ಸಹ ಹಾಳು ಮಾಡಿ ಬಿಡುತ್ತದೆ. ಈ ಕಾಟದಿಂದ ಬೇಸತ್ತು ಹೆಚ್ಚಿನವರು ಮನೆಯಲ್ಲಿ ಬೆಕ್ಕು ಸಾಕುವುದೋ ಇಲ್ಲವೇ ವಿಷವಿಟ್ಟು ಇಲಿ ಕಾಟದಿಂದ ಮುಕ್ತಿ ಪಡೆಯಲು ಯತ್ನಿಸುತ್ತಾರೆ. ಆದ್ರೆ ಈ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಇಲಿಗಳನ್ನು ಸಾಯಿಸದೆಯೇ, ಅವುಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಹಲ್ಲಿ, ಜಿರಳೆಗಳ ಕಾಟವಿರುವಂತೆ ಹೆಚ್ಚಿನ ಮನೆಗಳಲ್ಲಿ ಇಲಿಗಳ (Rats) ಕಾಟ ಸಹ ಇದ್ದೇ ಇರುತ್ತದೆ. ಜಿರಳೆಗಳಿಗೆ ಹೋಲಿಸಿದರೆ ಇಲಿಗಳ ಕಾಟವೇ ತೀರಾ ಹೆಚ್ಚು. ಹೌದು ಇವುಗಳು ದಿನಸಿ, ಕಾಳುಗಳನ್ನು ಹಾಳು ಮಾಡುವುದು ಮಾತ್ರವಲ್ಲದೆ ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ಹಾನಿ ಮಾಡುತ್ತವೆ. ಇವುಗಳ ಈ ಕಾಟದಿಂದ ಮುಕ್ತಿ ಪಡೆಯಲು ಹೆಚ್ಚಿನವರು ಆಹಾರದಲ್ಲಿ ವಿಷ ಹಾಕಿ ಇಟ್ಟು ಬಿಡುತ್ತಾರೆ. ಆದ್ರೆ ಕೆಲವೊಂದು ಬಾರಿ ಇಲಿಗಳಿಗೆ ಇಟ್ಟಂತಹ ಈ ಆಹಾರಗಳನ್ನು ಮನೆಯಲ್ಲಿರುವ ಸಾಕು ಪ್ರಾಣಿಗಳು ತಿಂದು ಅಪಾಯಕ್ಕೆ ಸಿಲುಕುತ್ತವೆ. ಹೀಗಿರುವಾಗ ಇಲಿಗಳನ್ನು ಸಾಯಿಸದೆ ಅವುಗಳ ಕಾಟದಿಂದ ಹೇಗಪ್ಪಾ ಮುಕ್ತಿ (remove rats from the home) ಪಡೆಯುವುದು ಎಂದು ಯೋಚಿಸುತ್ತಿದ್ದರೆ, ನಿಮಗಾಗಿ ಇಲ್ಲಿವೆ ಕೆಲವೊಂದು ಸಲಹೆಗಳು.
ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಸುಲಭ ಸಲಹೆಗಳು:
ಕರ್ಪೂರ: ಇಲಿಗಳನ್ನು ಓಡಿಸಲು ಕರ್ಪೂರ ಪರಿಣಾಮಕಾರಿಯಾಗಿದೆ. ಹೌದು ಕರ್ಪೂರ ಇದ್ದರೆ, ನಿಮ್ಮ ಮನೆಯಲ್ಲಿ ಇಲಿಗಳ ಕಾಟವೇ ಇರುವುದಿಲ್ಲ. ಕರ್ಪೂರದ ವಾಸನೆ ಎಷ್ಟು ಪ್ರಬಲವಾಗಿದೆಯೆಂದರೆ ಇಲಿಗಳು ಅವುಗಳನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಕರ್ಪೂರವನ್ನು ಇರಿಸಿ ಅಥವಾ ನೀವು ಕರ್ಪೂರವನ್ನು ಸುಟ್ಟು ಅದರ ಹೊಗೆಯನ್ನು ಮನೆಯಲ್ಲಿ ಹರಡಬಹುದು ಈ ಮೂಲಕ ಇಲಿಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಪಲಾವ್ ಎಲೆ: ಬೇ ಲೀಫ್ ಅಥವಾ ಪಲಾವ್ ಎಲೆ ಕೂಡ ಇಲಿಗಳನ್ನು ಓಡಿಸಲು ಪರಿಣಾಮಕಾರಿಯಾಗಿದೆ. ಇಲಿಗಳಿಗೆ ಇದರ ಕಟುವಾದ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳದಲ್ಲಿ 8-10 ಪಲಾವ್ ಎಲೆಗಳನ್ನು ಇಟ್ಟು ಬಿಡಿ. ಇದರ ವಾಸನೆಗೆ ಇಲಿಗಳು ನಿಮ್ಮ ಮನೆಯ ಹತ್ತಿರಕ್ಕೂ ಸುಳಿಯುವುದಿಲ್ಲ.
ದಾಲ್ಚಿನ್ನಿ: ಈ ಮಸಾಲೆ ಪದಾರ್ಥ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇಲಿಗಳನ್ನು ಓಡಿಸಲು ಸಹ ಪರಿಣಾಮಕಾರಿ ಮನೆಮದ್ದಾಗಿದೆ. ಇದಕ್ಕಾಗಿ, ನೀವು ಮೊದಲು ದಾಲ್ಚಿನ್ನಿಯ ಪುಡಿಯನ್ನು ತಯಾರಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲಿ ಇರಿಸಿ. ಇಲಿಗಳು ಇವುಗಳ ವಾಸನೆ ಗ್ರಹಿಸಿದರೆ ಅಲ್ಲಿಂದ ಓಡಿ ಬಿಡುತ್ತವೆ.
ಇದನ್ನೂ ಓದಿ: ಈ ಪಕ್ಷಿಗಳ ಫೋಟೋವನ್ನು ಮನೆಯಲ್ಲಿಟ್ಟರೆ, ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ
ಬೆಳ್ಳುಳ್ಳಿ ಮತ್ತು ಕರಿಮೆಣಸು: ಇಲಿಗಳಿಗೆ ಬೆಳ್ಳುಳ್ಳಿ ಮತ್ತು ಕರಿಮೆಣಸಿನ ವಾಸನೆಯೂ ಇಷ್ಟವಾಗುವುದಿಲ್ಲ. ಹೀಗಿರುವಾಗ ಇಲಿಗಳನ್ನು ಮನೆಯಿಂದ ಓಡಿಸಲು ನೀವು ಬೆಳ್ಳುಳ್ಳಿ ಮತ್ತು ಕರಿಮೆಣಸನ್ನು ಪುಡಿ ಮಾಡಿ ಬಳಿಕ ಅದರ ಉಂಡೆ ತಯಾರಿಸಿ, ಇಳಿಗಳು ವಿಪರೀತವಾಗಿ ಓಡಾಡುವ ಸ್ಥಳದಲ್ಲಿ ಇಟ್ಟುಬಿಡಿ.
ಪುದೀನಾ, ಲವಂಗ: ಇದಲ್ಲದೆ ಇಲಿಗಳಿಗೆ ಪುದೀನಾ ಮತ್ತು ಲವಂಗದ ವಾಸನೆಯೂ ಇಷ್ಟವಾಗುವುದಿಲ್ಲ. ಹಾಗಾಗಿ ಇದು ಕೂಡಾ ಇಲಿಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ನೀವು ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳದಲ್ಲಿ ಪುದೀನಾದ ಎಲೆಗಳು ಹಾಗೂ ಲವಂಗವನ್ನು ಹರಡಿ. ಇವುಗಳ ಕಟುವಾದ ವಾಸನೆಯಿಂದಾಗಿ ಇಲಿಗಳು ಓಡಿ ಹೋಗುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








