Skin Care Tips : ಮೊಟ್ಟೆ ಚಿಪ್ಪನ್ನು ಈ ರೀತಿ ಬಳಸಿದ್ರೆ ತ್ವಚೆಯ ಹೊಳಪು ಹೆಚ್ಚುತ್ತೆ
ಮೊಟ್ಟೆ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ನಾವೆಲ್ಲರೂ ಮೊಟ್ಟೆ ತಿಂದು ಚಿಪ್ಪನ್ನು ಎಸೆಯುತ್ತೇವೆ. ಇದರಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಮುಖದ ಸೌಂದರ್ಯ ಹೆಚ್ಚಿಸಲು ಮೊಟ್ಟೆ ಚಿಪ್ಪನ್ನು ಬಳಸಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ ನೈಸರ್ಗಿಕ ಚರ್ಮದ ಹೊಳಪನ್ನು ಹೆಚ್ಚಿಸಬಹುದು. ಹಾಗಾದ್ರೆ ವೇಸ್ಟ್ ಎಂದು ಬಿಸಾಡುವ ಮೊಟ್ಟೆ ಚಿಪ್ಪು ಮುಖದ ಸೌಂದರ್ಯಕ್ಕೆ ಹೇಗೆ ಸಹಕಾರಿ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಮೊಟ್ಟೆಯೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮೊಟ್ಟೆಯನ್ನು ಬೇಯಿಸಿ ಇಲ್ಲವಾದರೆ ವಿವಿಧ ರುಚಿಕರ ಗ್ರೇವಿ ಮಾಡಿ ಸವಿಯುತ್ತಾರೆ. ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಮೊಟ್ಟೆಯೂ ಆರೋಗ್ಯಕ್ಕೆ ಉತ್ತಮವೆನ್ನುವುದು ಎಲ್ಲರಿಗೂ ತಿಳಿದಿಲ್ಲ. ಆದರೆ ವೇಸ್ಟ್ ಎಂದು ಬಿಸಾಡುವ ಮೊಟ್ಟೆ ಚಿಪ್ಪು ಮುಖದ ಸೌಂದರ್ಯಕ್ಕೆ ಹೆಚ್ಚಿಸುವಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ ಮನೆಯಲ್ಲಿ ಮೊಟ್ಟೆ ಬೇಯಿಸಿದ ಬಳಿಕ ಚಿಪ್ಪನ್ನು ಬಿಸಾಡುತ್ತಿದ್ದರೆ ಅದನ್ನು ಈ ರೀತಿ ಬಳಸಿ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
- ಚರ್ಮದ ಮೇಲೆ ಕಪ್ಪು ಕಲೆಗಳಿದ್ದರೆ ಮೊಟ್ಟೆ ಚಿಪ್ಪು ಹಾಗೂ ಜೇನುತುಪ್ಪದಿಂದ ಮಾಡಿದ ಫೇಸ್‌ಪ್ಯಾಕ್ ಬಳಸುವುದು ಉತ್ತಮ. ಮೊದಲು ಮೊಟ್ಟೆ ಚಿಪ್ಪನ್ನು ತೊಳೆದು ಒಣಗಿಸಿ, ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಹಚ್ಚಿ, ಸಂಪೂರ್ಣ ಒಣಗಿದ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಮುಖದ ಮೇಲಿನ ಕಲೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
- ಚರ್ಮದ ಕಾಂತಿ ಹೆಚ್ಚಾಗಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನ ಬಳಸುವುದಕ್ಕಿಂತ ಮೊಟ್ಟೆ ಚಿಪ್ಪಿನ ಪುಡಿಯನ್ನು ಹೀಗೆ ಬಳಸಬಹುದು. ಒಂದು ಮೊಟ್ಟೆಯ ಬಿಳಿಭಾಗ ಹಾಗೂ ಸಮ ಪ್ರಮಾಣದಲ್ಲಿ ಮೊಟ್ಟೆ ಚಿಪ್ಪಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಮುಖದ ಮೇಲೆ ಹಚ್ಚಿ ಒಂದು ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿ ಇದನ್ನು ಹಚ್ಚಿದರೆ ಮುಖವು ಕಾಂತಿ ಹೆಚ್ಚುತ್ತದೆ.
- ಚರ್ಮದ ಉರಿಯೂತ ಕಡಿಮೆ ಮಾಡಲು ಮೊಟ್ಟೆ ಚಿಪ್ಪಿನ ಪುಡಿಯೊಂದಿಗೆ ಆ್ಯಪಲ್ ಸೈಡರ್ ವಿನೇಗರ್, ಲವಂಗ ವನ್ನು ಬಳಸಬಹುದು. ಅರ್ಧ ಕಪ್ ಆ್ಯಪಲ್ ಸೈಡರ್ ವಿನೇಗರ್‌ಗೆ ಸ್ವಲ್ಪ ಪ್ರಮಾಣದಲ್ಲಿ ಮೊಟ್ಟೆಯ ಚಿಪ್ಪುಗಳನ್ನು ಸೇರಿಸಿ ಸರಿಸುಮಾರು ಐದು ದಿನಗಳ ಕಾಲ ನೆನೆಸಿಡಿ. ಆ ಬಳಿಕ ಪೇಸ್ಟ್ ತಯಾರಿಸಿ, ಇದನ್ನು ಹತ್ತಿ ಉಂಡೆಯಲ್ಲಿ ಉಜ್ಜಿ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಹೀಗೆ ವಾರಕ್ಕೆ ಒಂದೆರಡು ಬಾರಿ ಮಾಡಿದ್ರೆ ಉರಿಯೂತದಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.
- ಮುಖದಲ್ಲಿ ಮೊಡವೆ ಕಲೆಗಳಿದ್ದರೆ ಎರಡು ಚಮಚ ಮೊಟ್ಟೆ ಚಿಪ್ಪನ್ನು ಪುಡಿಗೆ ನಿಂಬೆರಸ ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ತ್ವಚೆಯ ಮೇಲೆ ಕಲೆ ಇರುವಲ್ಲಿಗೆ ಹಚ್ಚಿ ಸ್ವಲ್ಪ ಸಮಯದ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮೊಟ್ಟೆ ಚಿಪ್ಪನ್ನು ಬಳಸಿದ್ರೆ ಕಲೆ ನಿವಾರಣೆಯಾಗಿ ಮುಖದ ಸೌಂದರ್ಯ ಹೆಚ್ಚಾಗಲು ಸಹಕಾರಿಯಾಗಿದೆ.
ಸೂಚನೆ : ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಈ ಮನೆ ಮದ್ದನ್ನು ಪ್ರಯತ್ನಿಸುವ ಮುನ್ನ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




