ನೀವು ಬೆಳಿಗ್ಗೆ ಎದ್ದು, ಶುಂಠಿ ಚಹಾವನ್ನು ಹೀರುತ್ತೀರಾ? ಶುಂಠಿ ನಿಮಗೆ ತಿಳಿದಿರುವಂತೆ, ಯಾವುದೇ ಖಾದ್ಯ, ಆಹಾರ ಅಥವಾ ಪಾನೀಯಕ್ಕೆ ಅದರ ವಿಶಿಷ್ಟ ರುಚಿಯೊಂದಿಗೆ ಪರಿಮಳವನ್ನು ಸೇರಿಸುತ್ತದೆ. ಆದರೆ ಬೆಳಿಗ್ಗೆ ಶುಂಠಿ ನೀರು ಅಥವಾ ಚಹಾ ಕುಡಿಯುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅಥವಾ ಈ ಅಭ್ಯಾಸ ನಿಮಗಿದೆಯಾ? ಹಾಗಾದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು? ಆಯುರ್ವೇದಲ್ಲಿಯೂ ಕೂಡ ಶುಂಠಿಯನ್ನು ಔಷಧೀಗಳ ತಯಾರಿಕೆಗೆ ಬಳಸಿಕೊಳ್ಳಲಾಗುತ್ತದೆ. ಇಂತಹ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವುದರಿಂದಲೇ ಇದನ್ನು ಪ್ರಾಚೀನ ಔಷಧಗಳಲ್ಲಿ ವಿವಿಧ ರೋಗಗಳ ಅಪಾಯವನ್ನು ನಿವಾರಿಸಲು ಗಿಡಮೂಲಿಕೆಯಾಗಿ ಬಳಸಲಾಗುತ್ತಿತ್ತು.
ನೀವು ಆರೋಗ್ಯಕರ ಆಹಾರದ ಸೇವನೆ ಮಾಡುವವರಾಗಿದ್ದರೆ ಬೆಳಿಗ್ಗೆ ಶುಂಠಿ ನೀರನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ಶುಂಠಿಯಲ್ಲಿರುವ ಎಲ್ಲಾ ಪ್ರಯೋಜನಗಳು ನಿಮ್ಮ ದೇಹಕ್ಕೆ ಹೀರಲ್ಪಡುತ್ತವೆ. ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಹೆಲ್ತ್ ಶಾಟ್ಸ್ ಪೌಷ್ಟಿಕ ತಜ್ಞ ಅವನಿ ಕೌಲ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಶುಂಠಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಸತು, ಮ್ಯಾಂಗನೀಸ್ ಮತ್ತು ಕ್ರೋಮಿಯಂ ಮುಂತಾದ ಅಗತ್ಯ ಪೋಷಕಾಂಶಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿವೆ. ಖಾಲಿ ಹೊಟ್ಟೆಯಲ್ಲಿ ಶುಂಠಿ ರಸವನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
1. ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ:
“ಶುಂಠಿ ರಸವು ಜೀರ್ಣಕಾರಿ ಸಮಸ್ಯೆ ನಿವಾರಣೆ ಮಾಡಲು ಹೆಸರುವಾಸಿಯಾಗಿದೆ, ಇದು ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ವಾಕರಿಕೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದು ಪೌಷ್ಟಿಕ ತಜ್ಞ ಅವನಿ ಕೌಲ್ ಹೇಳುತ್ತಾರೆ. ಇದಲ್ಲದೆ, ಶುಂಠಿ ನೀರನ್ನು ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿರ್ಮೂಲನೆ ಮಾಡಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ದೂರವಿರಿಸಲು ಸಹಾಯ ಮಾಡುತ್ತದೆ.
2. ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ:
ಶುಂಠಿಯ ಉರಿಯೂತ ನಿವಾರಕ ಗುಣಲಕ್ಷಣಗಳು ಕೀಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಇದು ಸಂಧಿವಾತ ಹೊಂದಿರುವ ಜನರಿಗೆ ಪ್ರಯೋಜನಕಾರಿಯಾಗಿದೆ. ಜೊತೆಗೆ, ಶುಂಠಿಯ ಈ ಸ್ವಭಾವವು ಉರಿಯೂತವನ್ನು ಪ್ರಚೋದಿಸುವ ಸೂಕ್ಷ್ಮಜೀವಿಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
3. ನೈಸರ್ಗಿಕ ರೋಗನಿರೋಧಕ ವರ್ಧಕವಾಗಿ ಕೆಲಸ ಮಾಡುತ್ತದೆ:
ಇದು ನೈಸರ್ಗಿಕ ರೋಗನಿರೋಧಕವಾಗಿ ಕೆಲಸ ಮಾಡುತ್ತದೆ, ಸೋಂಕುಗಳ ವಿರುದ್ಧ ಹೋರಾಡಲು ದೇಹವನ್ನು ಬಲಪಡಿಸುತ್ತದೆ. ಈ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
4. ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ:
ಇದಲ್ಲದೆ, ಶುಂಠಿ ರಸದ ಉತ್ಕರ್ಷಣ ನಿರೋಧಕ ಅಂಶವು ಸೆಲ್ಯುಲಾರ್ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
5. ವಾಕರಿಕೆ ನಿವಾರಕ ಗುಣಗಳನ್ನು ಹೊಂದಿದೆ:
“ಶುಂಠಿಯು ಗರ್ಭಾವಸ್ಥೆಯಲ್ಲಿ ನೈಸರ್ಗಿಕವಾಗಿ ಕಂಡು ಬರುವ ವಾಕರಿಕೆಯನ್ನು ತಡೆಯುತ್ತದೆ. ಅಸ್ವಸ್ಥತೆ, ಮೈಗ್ರೇನ್ ಅಥವಾ ಬೆಳಗ್ಗೆ ಅನಾರೋಗ್ಯಕ್ಕೆ ಗುರಿಯಾಗುವವರಿಗೆ ವಿಶೇಷವಾಗಿ ಅನುಕೂಲಕರವಾಗಿದೆ” ಎಂದು ತಜ್ಞರು ಹೇಳುತ್ತಾರೆ. ಅದೂ ಅಲ್ಲದೆ ಇದು ಸಾಮಾನ್ಯ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
6. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:
ಶುಂಠಿ ರಸ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಮೂಲಕ, ತೂಕ ನಿರ್ವಹಣೆಗೆ ಸಹಕಾರಿಯಾಗಿದೆ ಎಂದು ಅವನಿ ಕೌಲ್ ಹೇಳುತ್ತಾರೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಶುಂಠಿ ರಸದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ.
ಇದನ್ನೂ ಓದಿ: ಚಳಿಯಿಂದ ನಿಮ್ಮ ಹಸುಗೂಸನ್ನು ರಕ್ಷಿಸುವುದು ಹೇಗೆ?
ಶುಂಠಿ ನೀರಿನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಪ್ರಯೋಜನಕಾರಿಯಾಗಿದ್ದರೂ, ನಿಮ್ಮ ಆಹಾರದಲ್ಲಿ ಇದನ್ನು ಸೇರಿಸುವ ಮೊದಲು ನಿಮ್ಮ ವೈದ್ಯರ ಬಳಿ ಸಲಹೆ, ಸೂಚನೆಗಳನ್ನು ಕೇಳುವುದನ್ನು ಎಂದಿಗೂ ಮರೆಯಬೇಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ