ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವ ಮಾತಿನಂತೆ ಬೆಳೆಯುವ ಹಂತದಲ್ಲಿಯೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯೂ ಶಿಕ್ಷಕರದ್ದು. ತಂದೆ ತಾಯಿಯ ನಂತರ ಮಕ್ಕಳ ಜೀವನದಲ್ಲಿ ಬಹಳಷ್ಟು ಪಾತ್ರವಹಿಸುವವರೇ ಈ ಶಿಕ್ಷಕರು. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಶಿಕ್ಷಕರಿಗೆ ಗೌರವ ಸಲ್ಲಿಸಲುವ ಸಲುವಾಗಿ ನಮ್ಮ ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 05 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ರಾಧಕೃಷ್ಣನ ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಆಗಿದ್ದವರು. 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಅವರು 1962 ರಲ್ಲಿ ಭಾರತದ ಎರಡನೇಯ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಭಾರತದ ಅಧ್ಯಕ್ಷರಾದಾಗ, ಅವರ ಕೆಲವು ವಿದ್ಯಾರ್ಥಿಗಳು ಅವರ ಜನ್ಮದಿನವನ್ನು ಆಚರಿಸಲು ಬಯಸಿದರು. ಅವರು “ನನ್ನ ಜನ್ಮದಿನವನ್ನು ಆಚರಿಸಲು ಬದಲಾಗಿ 5 ಸೆಪ್ಟೆಂಬರ್ ಅನ್ನು ಶಿಕ್ಷಕರ ದಿನವಾಗಿ ಆಚರಿಸಿದರೆ ಅದು ನನಗೆ ಹೆಮ್ಮೆಯಾಗುತ್ತದೆ” ಎಂದು ಉತ್ತರಿಸಿದ್ದರು. ಹೀಗಾಗಿ ಸೆಪ್ಟೆಂಬರ್ 5 , 1962 ರಲ್ಲಿ ಮೊದಲ ಬಾರಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಹಾಗೂ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರವು ಬಹುದೊಡ್ಡದಿದೆ. ಈ ಶಿಕ್ಷಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ದಿನವು ಮಹತ್ವದ್ದಾಗಿದೆ. ಶಾಲಾ ಕಾಲೇಜುಗಳಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಶಿಕ್ಷಕರ ದಿನಾಚರಣೆಯ ಸಲುವಾಗಿ ರಾಷ್ಟ್ರಪತಿಗಳಿಂದ ಪ್ರತಿಭಾನ್ವಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಕೈಯಾರೆ ಈ ಗ್ರೀಟಿಂಗ್ ಕಾರ್ಡ್ ಮಾಡಿ ಶಿಕ್ಷಕರಿಗೆ ಶುಭಾಶಯ ತಿಳಿಸಿ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ