ಮೊಬೈಲ್ ಬಳಕೆಯನ್ನು ಇತಿಮಿತಿಯಲ್ಲಿರಿಸಿದರೆ ಈ ಆರೋಗ್ಯ ಲಾಭಗಳು ಖಂಡಿತ
ಆಧುನಿಕತೆ ಗೆ ಒಗ್ಗಿಕೊಂಡಿರುವ ನಾವುಗಳು ತಂತ್ರಜ್ಞಾನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ಪ್ರತಿಯೊಂದು ಕೆಲಸಕ್ಕೂ ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳು ಬೇಕೇ ಬೇಕು. ದುಬಾರಿ ಬೆಲೆ ಲ್ಯಾಪ್ ಟಾಪ್ ಎಲ್ಲರ ಬಳಿಯಿಲ್ಲದೇ ಹೋದರೂ ಬಹುತೇಕರ ಜೇಬಲ್ಲಿ ಸ್ಮಾರ್ಟ್ ಫೋನ್ ಗಳು ಇದ್ದೆ ಇರುತ್ತವೆ. ಆದರೆ ಅತಿಯಾದ ಬಳಕೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುತ್ತವೆ. ಈ ಸ್ಮಾರ್ಟ್ ಫೋನ್ ಗಳ ಬಳಕೆಯು ಇತಿಮಿತಿಯಲ್ಲಿದ್ದರೆ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು.
ನಾವಿಂದು ಸ್ಮಾರ್ಟ್ ಯುಗದಲ್ಲಿದ್ದೇವೆ. ಹೀಗಾಗಿ ನಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇಲ್ಲದೆ ಹೋದರೆ ಹೇಗೆ ಅಲ್ಲವೇ. ಹುಟ್ಟಿದ ಮಕ್ಕಳಿಗೂ ಕೂಡ ತಂದೆ ತಾಯಂದಿರು ಮೊಬೈಲ್ ಫೋನ್ ಗಳನ್ನು ಕೊಡಿಸುತ್ತಾರೆ. ಹೀಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಹೇಗೆ ಆಪರೇಟ್ ಮಾಡುವುದು ಎನ್ನುವ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರುತ್ತಾರೆ. ಅತಿಯಾಗಿ ಮೊಬೈಲ್ ಫೋನ್ ಬಳಕೆ ಮಾಡುವುದರಿಂದ ಅಡ್ಡ ಪರಿಣಾಮಗಳು ಇದ್ದರೂ ಬಳಕೆ ಮಾಡುವವರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ಆದರೆ ಈ ಸ್ಮಾರ್ಟ್ ಫೋನ್ ಬಳಕೆಯನ್ನು ಕಡಿಮೆ ಮಾಡುವುದರಿಂದರಿಂದ ಹಲವಾರು ಪ್ರಯೋಜನಗಳು ಇವೆ.
* ಏಕಾಗ್ರತೆಯು ಹೆಚ್ಚಾಗುತ್ತದೆ : ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿರುವವರಿಗೆ ಒಂದೇ ಕೆಲಸದಲ್ಲಿ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಸಾಧನಗಳ ಅತಿಯಾದ ಬಳಕೆಯು ಗಮನ ಮತ್ತು ಉತ್ಪಾದಕತೆಯನ್ನು ಕುಂಠಿತಗೊಳಿಸುತ್ತದೆ. ಸ್ಮಾರ್ಟ್ ಫೋನ್ ಬಳಕೆಯನ್ನು ಕಡಿಮೆ ಮಾಡುವುದರಿಂದ ಏಕಾಗ್ರತೆಯ ಮಟ್ಟವು ಹೆಚ್ಚಾಗಿ ಒಂದೇ ಕೆಲಸದಲ್ಲಿ ಗಮನ ಹರಿಸಲು ಸಾಧ್ಯವಾಗುತ್ತದೆ.
* ದೈಹಿಕ ಆರೋಗ್ಯವು ಸುಧಾರಿಸುತ್ತದೆ : ಸ್ಮಾರ್ಟ್ ಫೋನ್ ಗಳ ಬಳಕೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲು ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಹುದು. ಅದಲ್ಲದೇ ಮೊಬೈಲ್ ಬಳಕೆ ಕಡಿಮೆ ಮಾಡಿ, ಬಿಡುವಿನ ಸಮಯದಲ್ಲಿ ದೈಹಿಕ ಚಟುವಟಿಕೆಗಳತ್ತ ಗಮನ ಹರಿಸುವುದು ಉತ್ತಮ. ಕ್ರೀಡೆ, ವಾಕಿಂಗ್ ಸೇರಿದಂತೆ ಇನ್ನಿತ್ತರ ಉತ್ತಮ ಆರೋಗ್ಯ ಶೈಲಿ ರೂಢಿಸಿಕೊಂಡರೆ ದೈಹಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.
* ಒತ್ತಡವನ್ನು ಕಡಿಮೆ ಮಾಡುತ್ತದೆ : ಬೆಳಗ್ಗೆಯಿಂದ ರಾತ್ರಿಯ ಮಲಗುವವರೆಗೂ ಈ ಮೊಬೈಲ್ ಬಳಕೆಯನ್ನು ಮಾಡುವುದರಿಂದ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತೀರಿ. ಇದರ ಬಳಕೆಯನ್ನು ಕಡಿಮೆ ಮಾಡಿದ್ದಂತೆ ಒತ್ತಡ ಪ್ರಮಾಣವು ಕಡಿಮೆಯಾಗಿ, ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯಕವಾಗುತ್ತದೆ. ಅದಲ್ಲದೇ ಮೊಬೈಲ್ ಬಳಕೆ ಇತಿ ಮಿತಿಯಲ್ಲಿದ್ದರೆ ವೈಯುಕ್ತಿಕ ಬೆಳವಣಿಗೆಗೂ ಸಹಕಾರಿಯಾಗಿದೆ.
* ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯಲು ಸಾಧ್ಯ : ಮನೋರಂಜನೆಗಾಗಿ ಮೊಬೈಲ್ ಅಥವಾ ಲ್ಯಾಪ್ ಟಾಪ್ ಗಳ ಬಳಸುವುದರಿಂದ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಲು ಸಮಯವಿರುವುದಿಲ್ಲ. ಅದೇ ಸಾಮಾಜಿಕ ಸಂಪರ್ಕ ಸಾಧನಗಳಿಂದ ದೂರ ಉಳಿದಾಗ ಸಮಯವು ದೊರೆಯುತ್ತದೆ. ಈ ಅಮೂಲ್ಯ ಸಮಯವನ್ನು ಪ್ರೀತಿ ಪಾತ್ರರಿಗೆ ಮೀಸಲಿಡಬಹುದು.
ಇದನ್ನೂ ಓದಿ: ಬಾಳೆಹಣ್ಣು ಹಾಳಾಗದಂತೆ ಇಡುವುದು ಕಷ್ಟವೇನಲ್ಲ, ಈ ವಿಧಾನ ಟ್ರೈ ಮಾಡಿ ನೋಡಿ
* ಸಮಯ ನಿರ್ವಹಣೆ : ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದರಿಂದ ಸಮಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಸೃಜನಶೀಲತೆಯನ್ನು ಬಳಸಿಕೊಂಡು ಸರಿಯಾಗಿ ಸಮಯವನ್ನು ಬಳಸಿಕೊಂಡರೆ ನಿಮ್ಮೊಳಗಿನ ಪ್ರತಿಭೆಯು ಹೊರಬಹುದು. ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯ.
* ಉತ್ತಮ ಮನಸ್ಥಿತಿಗೆ ಸಹಾಯಕ : ಅತಿಯಾಗಿ ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ, ಇಷ್ಟಪಡುವ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಮೊಬೈಲ್ ಬಳಕೆ ಕಡಿಮೆ ಮಾಡುವುದರಿಂದ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಸ್ಥಿತಿಯು ಸುಧಾರಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ