ಪರಿಮಳಯುಕ್ತ ಈ ಸೋಂಪು ಕಾಳಿನಲ್ಲಿದೆ ಹತ್ತಾರು ಆರೋಗ್ಯ ಪ್ರಯೋಜನಗಳು
ಅಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಮಸಾಲೆ ಪದಾರ್ಥಗಳಲ್ಲಿ ಸೋಂಪು ಕಾಳು ಕೂಡ ಒಂದು. ಅಡುಗೆಯ ರುಚಿ, ಘಮ ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಮೌತ್ ಫ್ರೆಶರ್ ಆಗಿ ಕೆಲಸ ಮಾಡುವ ಈ ಸೋಂಪು ಕಾಳಿನಲ್ಲಿ ಹಲವಾರು ರೋಗವನ್ನು ದೂರ ಮಾಡುವ ಗುಣವಿದೆ. ಮನೆಯಲ್ಲಿ ಸೋಂಪುಗಳಿದ್ದರೆ ಮನೆ ಮದ್ದಾಗಿ ಬಳಸಿ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.
ನೀವೇನಾದರೂ ಹೋಟೆಲ್ ಹೋದರೆ ಟೇಬಲ್ ಮೇಲೆ ಒಂದು ಬಟ್ಟಲಿನಲ್ಲಿ ಇಟ್ಟಿರುವ ಸೋಂಪು ಕಾಳು ನಿಮ್ಮ ಕಣ್ಣಿಗೆ ಬಿದ್ದಿರುತ್ತದೆ. ಊಟ ಅಥವಾ ತಿಂಡಿ ತಿಂದ ಬಳಿಕ ಒಂದು ಚಮಚದಷ್ಟು ಸೋಂಪು ಕಾಳನ್ನು ಬಾಯಿಗೆ ಹಾಕಿಕೊಂಡು ಬರುತ್ತೀರಿ. ಘಮ್ ಎನ್ನುವ ಈ ಸೋಂಪು ಕಾಳುನ್ನು ಎಲ್ಲರೂ ಇಷ್ಟ ಪಡುತ್ತಾರೆ. ಆದರೆ ಈ ಸೋಂಪು ಕಾಳಿನ ಪ್ರಯೋಜನಗಳ ಬಗ್ಗೆ ಅಷ್ಟಾಗಿ ಯಾರಿಗೂ ಕೂಡ ಮಾಹಿತಿಯಿರುವುದಿಲ್ಲ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ವಿಟಮಿನ್ ಸಿ ಅಂಶಗಳು ಹೇರಳವಾಗಿದ್ದು, ಔಷಧಿಯ ಗುಣವನ್ನು ಹೊಂದಿರುವ ಆಹಾರದ ಜೊತೆಗೆ ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ.
* ಸೋಂಪು ಕಾಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಹೊಟ್ಟೆಯ ಮೇಲೆ ಪಟ್ಟು ಹಾಕಿದರೆ ಹೊಟ್ಟೆ ಉಬ್ಬರ ಸಮಸ್ಯೆಯು ದೂರವಾಗುತ್ತದೆ.
* ಊಟದ ನಂತರ ಸ್ವಲ್ಪ ಸೋಂಪು ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.
* ಸೋಂಪು ಕಾಳಿನ ನೀರನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೂದಲು ಉದುರುವ ಸಮಸ್ಯೆಯು ದೂರವಾಗಿ, ಸೊಂಪಾಗಿ ಬೆಳೆಯುತ್ತದೆ.
* ಆಹಾರದಲ್ಲಿ ಸೋಂಪನ್ನು ಬಳಸುವುದರಿಂದ ವಾಕರಿಕೆ, ಅಜೀರ್ಣ, ಮಲಬದ್ಧತೆ ಸಮಸ್ಯೆಯು ದೂರವಾಗುತ್ತದೆ.
* ಸೋಂಪು ಕಾಳಿನ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಮುಟ್ಟಿನ ಸಮಸ್ಯೆಯಿಂದ ಪಾರಾಗಬಹುದು.
* ಸೋಂಪು ಕಾಳನ್ನು ತಿನ್ನುವುದರಿಂದ ಪುರುಷರ ಕಾಮಾಸಕ್ತಿ ಹೆಚ್ಚುವುದು.
* ಸೋಂಪು ಕಾಳಿನ ಕಷಾಯಕ್ಕೆ ಹಾಲು ಬೆರೆಸಿ ಮಕ್ಕಳಿಗೆ ಕುಡಿಸಿದರೆ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
* ಸೋಂಪು ಕಾಳನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಅಗಿಯುವುದರಿಂದ ಬಾಯಿಯಿಂದ ಬರುವ ಕೆಟ್ಟ ವಾಸನೆಯು ನಿಲ್ಲುತ್ತದೆ.
* ಮುಟ್ಟಿನ ಸಮಯದಲ್ಲಿ ಸೋಂಪು ಕಾಳನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಮುಟ್ಟಿನ ಸಮಸ್ಯೆಗಳು ದೂರವಾಗುತ್ತದೆ.
* ಸೋಂಪು ಕಾಳಿನಲ್ಲಿ ಮಾಡಿದ ಟೀ ಕುಡಿಯುವುದರಿಂದ ಕೆಮ್ಮು ಇದ್ದರೆ ಗುಣಮುಖವಾಗುತ್ತದೆ.
ಇದನ್ನೂ ಓದಿ: ಮೊಬೈಲ್ ಬಳಕೆಯನ್ನು ಇತಿಮಿತಿಯಲ್ಲಿರಿಸಿದರೆ ಈ ಆರೋಗ್ಯ ಲಾಭಗಳು ಖಂಡಿತ
* ಪ್ರತಿದಿನ ಸೋಂಪು ಕಾಳನ್ನು ಸೇವನೆ ಮಾಡುವುದರಿಂದ ಎದೆ ಉರಿಯಂತಹ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
* ನಿದ್ರೆಯ ಸಮಸ್ಯೆಯು ಕಾಡುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೋಂಪು ಕಾಳು ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
* ಬಾಣಂತಿಯರು ಸೋಂಪು ಕಾಳಿನ ಚಹಾ ಕುಡಿಯುವುದರಿಂದ ಎದೆ ಹಾಲು ಉತ್ಪತ್ನಿಯಾಗುತ್ತದೆ.
* ಬಿಸಿ ನೀರಿನಲ್ಲಿ ಸೋಂಪು ಕಾಳು ಕುದಿಸಿ, ಹಬೆಯನ್ನು ಮುಖಕ್ಕೆ ತೆಗೆದುಕೊಳ್ಳುವುದರಿಂದ ಚರ್ಮದ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ