Pranayama: ಪ್ರತಿದಿನ ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಕಾರಿ ಈ 3 ಪ್ರಾಣಾಯಾಮ
ಉಸಿರಾಟವು ನಮ್ಮ ಶಕ್ತಿಯ ಪ್ರಮುಖ ಮೂಲವಾಗಿದೆ. ಮತ್ತು ಸರಿಯಾದ ಉಸಿರಾಟದ ತಂತ್ರವು ಅನೇಕ ರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ಪ್ರಾಣಾಯಾಮವು ಉಸಿರಾಟವನ್ನು ನಿಯಂತ್ರಿಸುವ ಮೂಲಕ ನಮ್ಮ ಮನಸ್ಸನ್ನು ಶಾಂತವಾಗಿರಿಸುತ್ತದೆ. ಪ್ರತಿದಿನ ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಕಾರಿಯಾಗುವ ಕೆಲವು ಪ್ರಾಣಾಯಾಮಗಳ ಕುರಿತ ಮಾಹಿತಿ ಇಲ್ಲಿದೆ.
ಇಂದಿನ ವೇಗದ ಜೀವನದಲ್ಲಿ ಒತ್ತಡ ಮತ್ತು ಆತಂಕ ನಮ್ಮ ಜೀವನದ ಒಂದು ಭಾಗವಾಗಿದೆ. ಇದು ಮನಸ್ಸಿನ ಶಾಂತಿಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಮಾತ್ರವಲ್ಲದೆ ಇದು ದೈಹಿಕ ಆರೋಗ್ಯಕ್ಕೂ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಒತ್ತಡದ ಸಮಸ್ಯೆಯನ್ನು ಕಡಿಮೆ ಮಾಡಿ ಮನಸ್ಸನ್ನು ಶಾಂತವಾಗಿರಿಸಲು ಯೋಗಾಸನಗಳನ್ನು ಅಭ್ಯಾಸ ಮಾಡುವುದು ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲೂ ಪ್ರಾಣಾಯಾಮವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿ. ಪ್ರಾಣಾಯಾಮವು ಉಸಿರಾಟದ ನಿಯಂತ್ರಣವಾಗಿದ್ದು, ಇದರಿಂದ ಶಕ್ತಿಯ ಲಯವನ್ನು ನಿಯಂತ್ರಿಸಬಹುದು ಮತ್ತು ಆರೋಗ್ಯಕರ ದೇಹ, ಮನಸ್ಸನ್ನು ಪಡೆಯಬಹುದು. ಪ್ರಾಣಾಯಾಮವು ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯಕರವಾಗಿಡಲು ಮತ್ತು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯದಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯಕವಾಗಿದೆ. ಪ್ರತಿದಿನ ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಬಯಸಿದರೆ ನಿಯಮಿತವಾಗಿ ಈ ಕೆಲವೊಂದು ಪ್ರಾಣಾಯಾಮ ತಂತ್ರಗಳನ್ನು ಅಭ್ಯಾಸ ಮಾಡಿ.
ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಈ ಮೂರು 3 ಉಸಿರಾಟ ತಂತ್ರಗಳನ್ನು ಅಭ್ಯಾಸ ಮಾಡಿ:
ಅನುಲೋಮ ವಿಲೋಮ ಪ್ರಾಣಾಯಾಮ:
ಅನುಲೋಮ ವಿಲೋಮ ಪ್ರಾಣಾಯಾಮವು ಎರಡೂ ಮೂಗಿನ ಹೊಳ್ಳೆಗಳಿಂದ ಅನುಕ್ರಮವಾಗಿ ಉಸಿರಾಡುವ ಮತ್ತು ಉಸಿರನ್ನು ಹೊರ ಹಾಕುವ ಪ್ರಕ್ರಿಯೆಯಾಗಿದೆ. ಪ್ರತಿದಿನವೂ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದರಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಾದ ಒತ್ತಡ, ಖಿನ್ನತೆ ಮತ್ತು ಆತಂಕದ ಕಾಯಿಲೆಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಜೊತೆಗೆ ಹೃದಯ, ಶ್ವಾಸಕೋಶಗಳು ಮತ್ತು ಇತರ ಅಂಗಗಳನ್ನು ಆರೋಗ್ಯಕರವಾಗಿಡುತ್ತದೆ.
ಅನುಲೋಮ ವಿಲೋಮ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ಹೇಗೆ?
ಅನುಲೋಮ ವಿಲೋಮ ಪ್ರಾಣಾಯಾಮವನ್ನು ಅಭ್ಯಾಸ ಮಾಡಲು, ಮೊದಲನೆಯದಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ಎಡಗೈಯಿಂದ ಜ್ಞಾನ ಮುದ್ರೆಯನ್ನು ಮಾಡಿ, ಮೂಗಿನ ಬಲ ಹೊಳ್ಳೆಯನ್ನು ಬಲಗೈಯ ಹೆಬ್ಬೆರಳಿನಿಂದ ಮುಚ್ಚಿ ಎಡ ಮೂಗಿನ ಹೊಳ್ಳೆಯಿಂದ ದೀರ್ಘವಾಗಿ ಉಸಿರನ್ನು ಬಿಡಿ. ಹೀಗೆ ಇನ್ನೊಂದು ಮೂಗಿನ ಹೊಳ್ಳೆಯೊಂದಿಗೆ ಈ ಕ್ರಿಯೆಯನ್ನು ಪುನರಾವರ್ತಿಸಿ.
ಉಜ್ಜಯಿ ಪ್ರಾಣಾಯಾಮ:
ಉಜ್ಜಯಿ ಎಂಬುದು ಸಂಸ್ಕೃತ ಪದವಾಗಿದೆ, ಇದರರ್ಥ ಗೆಲ್ಲುವುದು ಅಥವಾ ಜಯಿಸುವುದು. ಈ ಪ್ರಾಣಾಯಾಮವು ಮನಸ್ಸಿನ ಶಾಂತಿ ಮತ್ತು ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಉಜ್ಜಯಿ ಪ್ರಾಣಾಯಾಮವು ಆಳವಾದ, ನಿಧಾನವಾದ ಮೂಗಿನ ಉಸಿರಾಟದ ಮೂಲಕ ಹೃದಯದ ಬಡಿತವನ್ನು ನಿಧಾನಗೊಳಿಸುತ್ತದೆ. ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ಇದನ್ನೂ ಓದಿ: ಹೃದ್ರೋಗದಿಂದ ದೂರವಿರಬೇಕೆ? ಈ ಪ್ರಾಣಾಯಾಮಗಳನ್ನು ಮಾಡಿ
ಉಜ್ಜಯಿ ಪ್ರಾಣಾಯಾಮವನ್ನು ಮಾಡುವುದು ಹೇಗೆ:
• ಈ ಪ್ರಾಣಾಯಾಮದ ವಿಧಾನವು ತುಂಬಾ ಸರಳವಾಗಿದೆ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಪದ್ಮಾಸನದಂತಹ ಯಾವುದೇ ಧ್ಯಾನ ಭಂಗಿಯಲ್ಲಿ ಕುಳಿತು ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ.
• ನಿಮ್ಮ ಬಾಯಿಯನ್ನು ಸ್ವಲ್ಪ ತೆರೆಯುವ ಮೂಲಕ ನಿಮ್ಮ ಒಸಡುಗಳು ಮತ್ತು ನಾಲಿಗೆಯನ್ನು ವಿಶ್ರಾಂತಿ ಮಾಡಲು ಪ್ರಯತ್ನಿಸಿ.
• ಇದಾದ ನಂತರ, ಬಾಯಿಯ ಮೂಲಕ ಉಸಿರಾಡಿ, ಹಾಗೆಯೇ ಬಾಯಿಯ ಮೂಲಕವೇ ಗಾಳಿಯು ನಿಮ್ಮ ಶ್ವಾಸಕೋಶಕ್ಕೆ ಹೋಗುವುದನ್ನು ಅನುಭವಿಸಲು ಪ್ರಯತ್ನಿಸಿ.
• ಇದಾದ ನಂತರ ಉಸಿರಾಡುವಾಗ, ನಿಮ್ಮ ಗಂಟಲಿನ ಹಿಂಭಾಗದಲ್ಲಿ ಉಸಿರಾಟದ ಪ್ರಕ್ರಿಯೆಯನ್ನು ಅನುಭವಿಸಿ
• ನೀವು ಪ್ರಾಣಾಯಾಮದಲ್ಲಿ ಲೀನರಾದ ತಕ್ಷಣ ನಿಮ್ಮ ಎಲ್ಲಾ ಗಮನಗಳು ಉಸಿರಾಟದ ಚಲನೆಯ ಮೇಲೆ ಇರುತ್ತದೆ. ಆಗ ನಿಮ್ಮ ಉಸಿರಾಟದಿಂದ ಹೊರಬರುವ ಶಬ್ದವನ್ನು ಅನುಭವಿಸಲು ಪ್ರಯತ್ನಿಸಿ ಮತ್ತು ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ.
• 5 ರಿಂದ 10 ನಿಮಿಷಗಳ ಕಾಲ ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು.
ಭ್ರಮರಿ ಪ್ರಾಣಾಯಾಮ:
ಇದು ನರಗಳನ್ನು ಶಾಂತಗೊಳಿಸುವ ಕೆಲಸ ಮಾಡುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರು ಈ ಉಸಿರಾಟದ ತಂತ್ರವನ್ನು ಅಭ್ಯಾಸ ಮಾಡಬೇಕು ಏಕೆಂದರೆ ಇದು ಪ್ರಕ್ಷುಬ್ಧ ಮನಸ್ಸನ್ನು ಶಾಂತಗೊಳಿಸುತ್ತದೆ. ಅಲ್ಲದೆ ಈ ಪ್ರಾಣಾಯಾಮ ಏಕಾಗ್ರತೆ ಮತ್ತು ಸ್ಮರಣಾ ಶಕ್ತಿಯನ್ನು ಸುಧಾರಿಸುತ್ತದೆ.
ಇದನ್ನೂ ಓದಿ: ದೇಹಕ್ಕೆ ಹೊಸ ಚೈತನ್ಯ ತುಂಬುವ ಯೋಗ, ಪ್ರಾಣಾಯಾಮದ ಮಹತ್ವದ ಬಗ್ಗೆ ತಿಳಿಯಿರಿ
ಭ್ರಮರಿ ಪ್ರಾಣಾಯಾಮವನ್ನು ಮಾಡುವುದು ಹೇಗೆ:
• ಈ ಆಸನವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಮಾಡುವುದುದ ಒಳ್ಳೆಯದು. ಈ ಆಸನವನ್ನು ಮಾಡಲು, ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಿ.
• ನಿಮ್ಮ ಎರಡೂ ಕಣ್ಣುಗಳನ್ನು ಮುಚ್ಚಿ ಶಾಂತವಾದ, ಚೆನ್ನಾಗಿ ಗಾಳಿ ಬರುವ ಸ್ಥಳದಲ್ಲಿ ಧ್ಯಾನಸ್ಥ ಸ್ಥಳದಲ್ಲಿ ಕುಳಿತುಕೊಳ್ಳಿ. ಹಾಗೂ ಮುಖದಲ್ಲಿ ಸೌಮ್ಯವಾದ ನಗುವನ್ನು ಇರಿಸಿ.
• ನಿಮ್ಮ ಹೆಬ್ಬೆರಳಿನಿಂದ ಎರಡೂ ಕಿವಿಯ ಮೇಲೆ ಇರಿಸಿ. ಈಗ ಎರಡೂ ಕೈಗಳ ತೋರುಬೆರಳುಗಳನ್ನು ಹಣೆಯ ಮೇಲೆ ಹಾಗೂ ಮಧ್ಯ, ಉಂಗುರು ಹಾಗೂ ಕಾನಿಷ್ಕ ಬೆರಳುಗಳನ್ನು ಕಣ್ಣಿನ ಮೇಲೆ ಇರಿಸಿ.
• ನಿಮ್ಮ ಬಾಯಿಯನ್ನು ಮುಚ್ಚಿ, ಮೂಗಿನ ಮೂಲಕ ಉಸಿರಾಡಿ. ಮತ್ತು ಜೇನು ನೊಣದಂತೆ ಉಸಿರನ್ನು ಹೊರಹಾಕಿ. ಉಸಿರನ್ನು ಬಿಡುವಾಗ ಓಂ ಎಂದು ಉಚ್ಚರಿಸಬಹುದು.
• ಈ ಪ್ರಕ್ರಿಯೆಯನ್ನು 5 ರಿಂದ 10 ಬಾರಿ ಪುನರಾವರ್ತಿಸಿ.
ಪ್ರಾಣಾಯಾಮದ ಪ್ರಯೋಜನಗಳು:
• ಪ್ರಾಣಾಯಾಮವು ನಮ್ಮ ದೇಹದಲ್ಲಿರುವ 80,000 ನರಗಳನ್ನು ಶುದ್ಧಗೊಳಿಸುತ್ತದೆ. ಈ ಶುದ್ಧೀಕರಣವು ನಮ್ಮ ದೇಹದಲ್ಲಿನ ಶಕ್ತಿಯ ಹರಿವನ್ನು ಸಮತೋಲನಗೊಳಿಸುತ್ತದೆ. ಇದರಿಂದ ನಮ್ಮ ಸಂಪೂರ್ಣ ದೇಹವು ಆರೋಗ್ಯಕರವಾಗಿರುತ್ತದೆ. ಪ್ರಾಣಾಯಾಮವನ್ನು ಪ್ರತಿದಿನ ಮಾಡಬೇಕೆಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ ಹೀಗೆ ಮಾಡುವುದರಿಂದ ಒತ್ತಡ ನಿವಾರಣೆಯಾಗಿ ನೆಮ್ಮದಿ ಮತ್ತು ಆರೋಗ್ಯವು ಲಭಿಸುತ್ತದೆ.
• ಪ್ರಾಣಾಯಾಮ ಮಾಡುವುದರಿಂದ ದೇಹದ ಎಲ್ಲಾ ಅಂಗಗಳಿಗೂ ಶುದ್ಧ ಆಮ್ಲಜನಕ ಸಿಗುತ್ತದೆ. ಹಾಗೂ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.
• ಇಂದಿನ ದಿನಗಳಲ್ಲಿ ಎಲ್ಲರೂ ಬಿಡುವಿಲ್ಲದ ಜೀವನ ನಡೆಸುತ್ತಿದ್ದಾರೆ. ಇದರಿಂದ ಪ್ರತಿಯೊಬ್ಬರಲ್ಲೂ ಒತ್ತಡ ಹೆಚ್ಚಾಗುತ್ತಿದೆ. ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಪ್ರಾಣಾಯಾಮ ಮಾಡುವುದರಿಂದ ಒತ್ತಡವನ್ನು ನಿವಾರಿಸಿ ಏಕಾಗ್ರತೆ ಮತ್ತು ಸ್ಮರಣಾಶಕ್ತಿಯನ್ನು ಹೆಚ್ಚಿಸಬಹುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ