
ಫ್ಲಾಟ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರು ತಮ್ಮ ಬಾಲ್ಕನಿಗಳಲ್ಲಿ (balcony) ಬಗೆಬಗೆಯ ಹೂವಿನ ಗಿಡಗಳು, ಟೊಮೆಟೊ ಸೇರಿದಂತೆ ಒಂದಷ್ಟು ತರಕಾರಿಗಳ ಗಿಡಗಳನ್ನು ಬೆಳೆಯುತ್ತಾರೆ. ಆದರೆ ಬಾಲ್ಕನಿಯಲ್ಲಿರುವ ಪುಟ್ಟ ಜಾಗದಲ್ಲಿ ಹಣ್ಣುಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಏನ್ ಗೊತ್ತಾ ಬಾಲ್ಕನಿ ಮತ್ತು ಟೆರೇಸ್‌ನಲ್ಲಿರುವ ಸ್ವಲ್ಪ ಜಾಗದಲ್ಲಿ ಹಣ್ಣುಗಳನ್ನೂ ಬೆಳೆಯಬಹುದು. ಹೌದು ಬಾಲ್ಕನಿಯಲ್ಲಿರುವ ಸಣ್ಣ ಜಾಗ ಮತ್ತು ಉತ್ತಮ ಸೂರ್ಯನ ಬೆಳಕು ಇದ್ದರೆ ಯಾವುದೇ ರಾಸಾಯನಿಕಗಳನ್ನು ಬಳಸದೆ ಫ್ರೆಶ್ ಹಣ್ಣುಗಳನ್ನು ಬೆಳೆಯಬಹುದು. ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಸಹ ನಿಮ್ಮ ಮನೆಯ ಬಾಲ್ಕನಿಯಲ್ಲಿ ಈ ಕೆಲವು ಹಣ್ಣುಗಳನ್ನು ಬೆಳೆಯಿರಿ.
ನಿಂಬೆ ಗಿಡ: ಬಾಲ್ಕನಿ ಮತ್ತು ಟೆರೇಸ್‌ನಲ್ಲಿ ಬಲು ಸುಲಭವಾಗಿ ನಿಂಬೆ ಗಿಡ ಬೆಳೆಸಬಹುದು. ಬೇರುಗಳಿಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲು 12 ರಿಂದ 16 ಇಂಚಿನ ದೊಡ್ಡ ಪಾಟ್‌ಗಳಲ್ಲಿ ನೀವು ನಿಂಬೆ ಗಿಡ ನೆಡಬಹುದು. ತೋಟದ ಮಣ್ಣು, ಕೊಕೊಪೀಟ್ ಮತ್ತು ಸಾವಯವ ಗೊಬ್ಬರವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಹಾಕಿ ಜೊತೆಗೆ ತಿಂಗಳಿಗೊಮ್ಮೆ ವರ್ಮಿಕಾಂಪೋಸ್ಟ್ ಸೇರಿಸಿ.ಈ ಗಿಡಕ್ಕೆ ಪ್ರತಿದಿನ ಕನಿಷ್ಠ 4–6 ಗಂಟೆಗಳ ಸೂರ್ಯನ ಬೆಳಕು ಬೇಕಾಗುತ್ತದೆ. ಬೇಸಿಗೆಯಲ್ಲಿ ಪ್ರತಿ 1–2 ದಿನಗಳಿಗೊಮ್ಮೆ ನೀರು ಹಾಕಿ ಸರಿಯಾಗಿ ಕಾಳಜಿ ವಹಿಸಿದರೆ ಈ ಗಿಡ 6 ರಿಂದ 8 ತಿಂಗಳಲ್ಲಿ ಹಣ್ಣು ಬಿಡಲು ಪ್ರಾರಂಭಿಸುತ್ತದೆ.
ಸ್ಟ್ರಾಬೆರಿ ಗಿಡ: ನಿಮ್ಮ ಬಾಲ್ಕನಿಯನ್ನು ಸುಂದರ ಮತ್ತು ಫಲಪ್ರದವಾಗಿಸಲು ನೀವು ಬಯಸಿದರೆ, ಸ್ಟ್ರಾಬೆರಿ ಗಿಡವನ್ನು ನೆಡಿ. ಪುಟ್ಟ ಪಾಟ್ ಅಥವಾ ಹ್ಯಾಂಗಿಂಗ್ ಪ್ಲಾಂಟರ್‌ನಲ್ಲಿ ಸ್ಟ್ರಾಬೆರಿ ಗಿಡವನ್ನು ಸುಲಭವಾಗಿ ಬೆಳೆಯಬಹುದು. ಮಣ್ಣು ಹಗುರವಾಗಿರಬೇಕು ಮತ್ತು ಮೃದುವಾಗಿರಬೇಕು. ತಿಳಿ ನೆರಳು ಬೀಳುವ ಸ್ಥಳದಲ್ಲಿ ಈ ಗಿಡವನ್ನು ಇರಿಸಿ ಹಾಗೂ ಸೂರ್ಯನ ಪ್ರಕರ ಬೆಳಕು ಬೀಳುವ ಸ್ಥಳದಲ್ಲಿ ಈ ಗಿಡ ಇಡುವುದನ್ನು ತಪ್ಪಿಸಿ, ಸರಿಯಾದ ಆರೈಕೆ ವಹಿಸಿದರೆ 2 ರಿಂದ 3 ತಿಂಗಳಲ್ಲಿ ಈ ಗಿಡ ಹಣ್ಣು ಬಿಡಲು ಪ್ರಾರಂಭಿಸುತ್ತದೆ.
ಪೇರಳೆ ಗಿಡ: ಪೇರಳೆ ಗಿಡ ಬೆಳೆಯಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ ಎಂದು ನೀವು ಭಾವಿಸಬಹುದು, ಆದರೆ ಇತ್ತೀಚಿನ ದಿನಗಳಲ್ಲಿ ನರ್ಸರಿಗಳಲ್ಲಿ ಕುಂಡಗಳಲ್ಲಿ ಸುಲಭವಾಗಿ ಬೆಳೆಯಬಹುದಾದ ಸಾಕಷ್ಟು ಪ್ರಕಾರದ ಪೇರಳೆ ಗಿಡಗಳಿವೆ. ಇಂತಹ ಗಿಡಗಳನ್ನು 20 ರಿಂದ 24 ಇಂಚು ಆಳದ ದೊಡ್ಡ ಪಾಟ್‌ಗಳಲ್ಲಿ ನೆಟ್ಟು, ಬಾಲ್ಕನಿಯಲ್ಲಿ ಆರಮದಾಯಕವಾಗಿ ಬೆಳಯಬಹುದು. ಇದರ ನಿರ್ವಹಣೆಯೂ ಕಡಿಮೆ ಜೊತೆಗೆ ಈ ಸಸ್ಯ ನಿಮ್ಮ ಬಾಲ್ಕನಿಗೆ ಸುಂದರ ಲುಕ್ ಕೂಡ ನೀಡುತ್ತದೆ. ಇದು ಒಂದು ವರ್ಷದೊಳಗೆ ಫಲ ನೀಡಲು ಪ್ರಾರಂಭಿಸಬಹುದು.
ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ ತುಳಸಿಯನ್ನು ಮನೆಯಲ್ಲಿ ನೆಡುವುದು ಏಕೆ ಮುಖ್ಯ ನೋಡಿ
ಪಪ್ಪಾಯಿ: ಕುಬ್ಜ ತಳಿಯ ಪಪ್ಪಾಯಿ ಗಿಡಗಳನ್ನು ನೀವು ಬಾಲ್ಕನಿಯನ್ನು ಸುಲಭವಾಗಿ ಬೆಳೆಯಬಹುದು. 20 ರಿಂದ 24 ಇಂಚಿನ ಪಾಟ್‌ಗಳಲ್ಲಿ ಈ ಪಪ್ಪಾಯಿ ಗಿಡಗಳನ್ನು ನೆಡಿ, ಜೊತೆಗೆ ಇದನ್ನು ಬಾಲ್ಕನಿಯಲ್ಲಿ ಉತ್ತಮ ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇರಿಸಿ. ನಿಯಮಿತವಾಗಿ ನೀರು ಹಾಕಿ ಜೊತೆಗೆ ಸಾವಯವ ಗೊಬ್ಬರವನ್ನು ಹಾಕಿ ಪೋಷಿಸಿ. ಅವು 6-8 ತಿಂಗಳೊಳಗೆ ಫಲ ನೀಡಲು ಪ್ರಾರಂಭಿಸುತ್ತವೆ.
ದಾಳಿಂಬೆ ಗಿಡ: ದಾಳಿಂಬೆ ಸಸ್ಯಗಳು ನಿಮಗೆ ಆರೋಗ್ಯಕರ ಹಣ್ಣುಗಳನ್ನು ಒದಗಿಸುವುದಲ್ಲದೆ, ಅವುಗಳ ಪ್ರಕಾಶಮಾನವಾದ ಕೆಂಪು ಹೂವುಗಳು ನಿಮ್ಮ ಬಾಲ್ಕನಿಯನ್ನು ಸುಂದರವಾದ ಉದ್ಯಾನವನ್ನಾಗಿ ಪರಿವರ್ತಿಸಬಹುದು. ಕುಬ್ಜ ತಳಿಯ ದಾಳಿಂಬೆ ಪ್ರಭೇದಗಳು ಪಾಟ್‌ನಲ್ಲಿ ನೆಡಲು ಉತ್ತಮ ಆಯ್ಕೆಯಾಗಿದೆ. ಅವುಗಳಿಗೆ ಪೂರ್ಣ ಸೂರ್ಯ ಮತ್ತು ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಬೇಕಾಗುತ್ತದೆ.
ಬಾಳೆಗಿಡ: ಕುಬ್ಜ ತಳಿಯ ಬಾಳೆಗಿಡಗಳು ನರ್ಸರಿಗಳಲ್ಲಿ ಸುಲಭವಾಗಿ ಲಭ್ಯವಿದೆ. ದೊಡ್ಡ ಪಾಟ್‌ಗಳಲ್ಲಿಟ್ಟು ಇವುಗಳನ್ನು ಬಾಲ್ಕನಿಯಲ್ಲಿ ಸುಲಭವಾಗಿ ಬೆಳೆಸಬಹುದು. ಅವುಗಳಿಗೆ ಸೂರ್ಯನ ಬೆಳಕು, ತೇವಾಂಶ ಮತ್ತು ಸಾವಯವ ಗೊಬ್ಬರವನ್ನು ಒದಗಿಸಿ. ಈ ರೀತಿ ಉತ್ತಮ ಆರೈಕೆ ವಹಿಸಿದರೆ ಈ ಗಿಡ ಉತ್ತಮ ಫಲ ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ