ಬೆಳಗ್ಗೆ ಎದ್ದ ತಕ್ಷಣ ನೀವು ಮಾಡುವ ಈ ತಪ್ಪುಗಳು ಆರೋಗ್ಯದ ಪರಿಣಾಮ ಬೀರಬಹುದು ಎಚ್ಚರ
ನಮ್ಮ ಇಡೀ ದಿನ ಹೇಗಿರುತ್ತದೆ ಎಂಬುದು ನಿಗದಿಯಾಗುವುದೇ ನಮ್ಮ ಬೆಳಗ್ಗಿನ ಅಭ್ಯಾಸಗಳಿಂದ. ನಾವು ಸಕಾರಾತ್ಮಕವಾಗಿ ದಿನವನ್ನು ಆರಂಭಿಸಿದರೆ ಆ ಸಂಪೂರ್ಣ ದಿನವೇ ಚೆನ್ನಾಗಿರುತ್ತದೆ. ಜಡತ್ವದಿಂದ ದಿನವನ್ನು ಆರಂಭಿಸಿದರೆ ಆ ದಿನವೇ ಹಾಳಾಗುತ್ತದೆ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಮಾಡುವ ಈ ಒಂದಷ್ಟು ತಪ್ಪುಗಳು ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಅಪ್ಪಿತಪ್ಪಿಯೂ ಬೆಳಗಿನ ದಿನಚರಿಯಲ್ಲಿ ಈ ಕೆಲಸಗಳನ್ನು ಮಾಡದಿರಿ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಳಗಿನ ಸಮಯವು ದಿನದ ಪ್ರಮುಖ ಭಾಗವಾಗಿದ್ದು, ಬೆಳಗ್ಗೆ ಎದ್ದ ತಕ್ಷಣ ಮಾಡುವ ಕೆಲಸಗಳ (morning routine) ಮೇಲೆ ನಮ್ಮ ಇಡೀ ದಿನ ನಿಂತಿರುತ್ತದೆ. ಸಕಾರಾತ್ಮಕವಾಗಿ ದಿನವನ್ನು ಆರಂಭಿಸಿದರೆ ಆ ಸಂಪೂರ್ಣ ದಿನ ನೀವು ಉಲ್ಲಾಸಭರಿತರಾಗಿ ಲವಲವಿಕೆಯಿಂದ ಇರುತ್ತದೆ. ಅದೇ ರೀತಿ ಜಡತ್ವದಿಂದ ಕೂಡಿದ್ದರೆ, ಇಡೀ ದಿನ ನಕಾರಾತ್ಮಕತೆ, ಕಿರಿಕಿರಿಯಿಂದ ಕೂಡಿರುತ್ತದೆ. ಜೊತೆಗೆ ಬೆಳಗ್ಗೆ ಎದ್ದ ತಕ್ಷಣವೇ ಮಾಡುವಂತಹ ಕೆಲವೊಂದು ಕೆಲಸಗಳು ನಮ್ಮ ಸಂಪೂರ್ಣ ದಿನದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವುದರ ಜೊತೆಗೆ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ತಪ್ಪಿಯೂ ಬೆಳಗ್ಗೆ ಎದ್ದ ತಕ್ಷಣ ಈ ಕೆಲವೊಂದಿಷ್ಟು ತಪ್ಪುಗಳನ್ನು ಮಾಡದಿರಿ.
ಬೆಳಿಗ್ಗೆ ಎದ್ದ ತಕ್ಷಣ ಅಪ್ಪಿತಪ್ಪಿಯೂ ಈ ಐದು ಕೆಲಸಗಳನ್ನು ಮಾಡಬೇಡಿ:
ಎಚ್ಚರಗೊಂಡ ಬಳಿಕವೂ ಹಾಸಿಗೆಯಲ್ಲಿಯೇ ಕಾಲ ಕಳೆಯುವುದು: ಕೆಲವರು ಬೆಳಗ್ಗೆ ಎಚ್ಚರಗೊಂಡರೂ, ಎದ್ದು ಬೆಳಗಿನ ದಿನಚರಿಗಳನ್ನು ಮುಗಿಸುವ ಬದಲು ಹಾಸಿಗೆಯಲ್ಲಿಯೇ ಹೊರಳಾಡುತ್ತಿರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ. ಏಕೆಂದರೆ ಇದು ಆಲಸ್ಯವನ್ನು ಹೆಚ್ಚಿಸುತ್ತದೆ, ದಿನವಿಡೀ ಆಯಾಸಕ್ಕೆ ಕಾರಣವಾಗುತ್ತದೆ. ಇದು ಸ್ನಾಯುಗಳ ಬಿಗಿತಕ್ಕೂ ಕಾರಣವಾಗಬಹುದು. ಆದ್ದರಿಂದ, ನೀವು ಹಾಸಿಗೆಯಿಂದ ಎದ್ದು ಎದ್ದ ನಂತರ ಸ್ವಲ್ಪ ವ್ಯಾಯಾಮ ಅಥವಾ ಸ್ಟ್ರೆಚಿಂಗ್ ಮಾಡಬೇಕು.
ಎದ್ದ ತಕ್ಷಣ ಮೊಬೈಲ್ ನೋಡುವುದು: ಅನೇಕ ಜನರು ಬೆಳಗ್ಗೆ ಎದ್ದ ಕೂಡಲೇ ಮೊಬೈಲ್ ಫೋನ್‌ಗಳನ್ನೇ ಪರಿಶೀಲಿಸುತ್ತಾರೆ. ಖಂಡಿತವಾಗಿಯೂ ಈ ಅಭ್ಯಾಸ ಒಳ್ಳೆಯದಲ್ಲ. ಈ ಸಮಯದಲ್ಲಿ ನೀವು ಫೋನ್‌ನಿಂದ ದೂರವಿದಷ್ಟು ಒಳ್ಳೆಯದು. ಏಕೆಂದರೆ ಇದು ನಕಾರಾತ್ಮಕತೆಯನ್ನು ಹೆಚ್ಚಿಸುವುದ ಜೊತೆಗೆ ಫೋನ್ ಪರದೆಯ ನೀಲಿ ಬೆಳಕು ನಿಮ್ಮ ಕಣ್ಣುಗಳಿಗೆ ಹಾನಿ ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಮೊಬೈಲ್ ಫೋನ್ ನೋಡುವ ಬದಲು ಧ್ಯಾನ ಅಥವಾ ಯೋಗಾಭ್ಯಾಸ ಮಾಡಿ.
ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿಯುವುದು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಟೀ ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು. ಏನನ್ನೂ ತಿನ್ನದೆ ಕೆಫೀನ್ ಸೇವಿಸುವುದರಿಂದ ಹೊಟ್ಟೆಯ ಆಮ್ಲೀಯತೆ ಹೆಚ್ಚಾಗುತ್ತದೆ ಮತ್ತು ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಟೀ ಕಾಫಿ ಬದಲಾಗಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯಬಹುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ.
ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಲು ಈ ಒಂದು ಕೆಲಸ ಮಾಡಿ ಸಾಕು
ನೀರು ಕುಡಿಯದೆ ದಿನವನ್ನು ಪ್ರಾರಂಭಿಸುವುದು: ಬೆಳಿಗ್ಗೆ ಎದ್ದ ನಂತರ ನಿರ್ಜಲೀಕರಣಗೊಂಡ ನಿಮ್ಮ ದೇಹಕ್ಕೆ ಜಲಸಂಚಯನವನ್ನು ಒದಗಿಸುವುದು ಬಹಳ ಮುಖ್ಯ. ಸಾಕಷ್ಟು ನೀರು ಕುಡಿಯದಿದ್ದರೆ ಆಯಾಸ, ತಲೆನೋವು, ಜೀರ್ಣಕ್ರಿಯೆಯ ತೊಂದರೆಯಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.
ಹೆವಿ ಬ್ರೇಕ್‌ಫಾಸ್ಟ್: ಬೆಳಗ್ಗೆ ಎದ್ದ ತಕ್ಷಣ ಭಾರೀ ಉಪಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರಬಹುದು ಮತ್ತು ಅಜೀರ್ಣದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಬೆಳಗ್ಗೆ ಹಣ್ಣು, ಓಟ್ ಮೀಲ್ ಅಥವಾ ಮೊಳಕೆ ಕಾಳುಗಳಂತಹ ಹಗುರವಾದ ಮತ್ತು ಪೌಷ್ಟಿಕ ಉಪಹಾರ ಸೇವಿಸಿ. ಇದು ನಿಮ್ಮನ್ನು ಚೈತನ್ಯಶೀಲವಾಗಿರಿಸುತ್ತದೆ ಮತ್ತು ಇದು ನೀವು ದಿನವಿಡೀ ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








