ನಿಮ್ಮ ದಿನ ಚೆನ್ನಾಗಿರಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಗೊತ್ತಾ?
ದಿನ ಚೆನ್ನಾಗಿ ಆರಂಭವಾದರೆ ಆ ಇಡೀ ದಿನ ಚೆನ್ನಾಗಿ, ಸಕಾರಾತ್ಮಕವಾಗಿರುತ್ತವೆ. ಅದೇ ಬೆಳಗ್ಗೆ ಎದ್ದಾಗಲೇ ಜಡತ್ವ ಇದ್ದರೆ ಆ ಸಂಪೂರ್ಣ ದಿನವೇ ಹಾಳಾಗುತ್ತದೆ. ಇದಕ್ಕಾಗಿ ಒಳ್ಳೆಯ ರೀತಿಯಲ್ಲಿ ದಿನವನ್ನು ಆರಂಭಿಸುವುದು ತುಂಬಾನೇ ಮುಖ್ಯವಾಗಿದೆ. ಹಾಗಿದ್ರೆ ದಿನವಿಡೀ ಹ್ಯಾಪಿಯಾಗಿ ಇರಲು, ಪಾಸಿಟಿವ್ ಆಗಿರಲು ಎದ್ದ ತಕ್ಷಣ ಏನು ಮಾಡಬೇಕು, ಏನು ಮಾಡಬೇಕು ಎಂಬುದನ್ನು ಮೊದಲು ತಿಳಿಯಿರಿ.

ದಿನದ ಆರಂಭ ಚೆನ್ನಾಗಿದ್ದರೆ, ಆ ಸಂಪೂರ್ಣ ದಿನವೇ ಚೆನ್ನಾಗಿರುತ್ತದೆ. ಹಾಗಾಗಿ ದಿನವನ್ನು ಸಕಾರಾತ್ಮಕವಾಗಿ (Positivity) ಆರಂಭಿಸುವುದರ ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣ ನೀವು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ದೀರ್ಘಕಾಲದವರೆಗೆ ಫಿಟ್ ಆಗಿ ಮತ್ತು ಆರೋಗ್ಯವಾಗಿರಲು, ನಿಮ್ಮ ಬೆಳಗಿನ ದಿನಚರಿ ಅತ್ಯುತ್ತಮವಾಗಿರಬೇಕು. ಪ್ರತಿ ಬೆಳಗ್ಗೆಯೂ ಹೊಸತನದ ಆರಂಭವಾಗಿರುವುದರಿಂದ ನೀವು ನಿಮ್ಮ ದಿನವನ್ನು ಒಳ್ಳೆಯ ವಿಷಯಗಳೊಂದಿಗೆ ಪ್ರಾರಂಭಿಸಿದರೆ, ಇಡೀ ದಿನ ಚೆನ್ನಾಗಿ ಸಾಗುತ್ತದೆ ಮತ್ತು ನೀವು ದಿನವಿಡೀ ಸಕಾರಾತ್ಮಕವಾಗಿ, ಹ್ಯಾಪಿಯಾಗಿ ಇರುತ್ತೀರಿ. ಹಾಗಿದ್ರೆ ದಿನ ಪೂರ್ತಿ ಖುಷಿ ಖುಷಿಯಾಗಿ ಸಾಗಲು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ಮೊದಲು ತಿಳಿಯಿರಿ.
ಬೆಳಿಗ್ಗೆ ಎದ್ದ ನಂತರ ಒಬ್ಬರು ಏನು ಮಾಡಬೇಕು?
ಉಗುರು ಬೆಚ್ಚಗಿನ ನೀರು ಕುಡಿಯಿರಿ: ನಿಮ್ಮ ದಿನವನ್ನು ಉಗುರು ಬೆಚ್ಚಗಿನ ನೀರಿನಿಂದ ಪ್ರಾರಂಭಿಸಬೇಕು. ಫಿಟ್ ಮತ್ತು ಆರೋಗ್ಯವಾಗಿರಲು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಹೊಟ್ಟೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ. ಬೆಳಿಗ್ಗೆ ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.
ವಾರ್ಮ್‌ಅಪ್ ಮಾಡಿ: ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ, ಸ್ವಲ್ಪ ಹೊತ್ತು ಸೋಮಾರಿತನ, ಜಡತ್ವ ಎನ್ನುವಂತಹದ್ದು ಇದ್ದೇ ಇರುತ್ತದೆ. ಇದನ್ನು ಹೋಗಲಾಡಿಸಲು ನೀವು ಬೆಳಗ್ಗೆ ಎದ್ದ ತಕ್ಷಣ ದೇಹವನ್ನು ವಾರ್ಮ್‌ಅಪ್ ಮಾಡಿ. ಇದು ನಿಮ್ಮ ಸೋಮಾರಿತನ ಮತ್ತು ಆಯಾಸವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ನಿಮ್ಮ ಸೋಮಾರಿತನ ಮತ್ತು ಆಯಾಸವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಇದು ನಿಮ್ಮ ಸ್ನಾಯುಗಳನ್ನು ಸಹ ಸಡಿಲಗೊಳಿಸುತ್ತದೆ. ಮತ್ತು ಇದು ನೀವು ದಿನವಿಡೀ ಚೈತನ್ಯಶೀಲರಾಗಿರಲು ಸಹಾಯ ಮಾಡುತ್ತದೆ. ವಾರ್ಮ್ಅಪ್ ಮಾಡಿದ ಬಳಿಕ ಯೋಗ, ವ್ಯಾಯಾಮವನ್ನು ಕೂಡ ಮಾಡಬಹುದು.
ಧ್ಯಾನ ಮಾಡಿ: ಇಂದಿನ ಕಾರ್ಯನಿರತ ಜೀವನದಲ್ಲಿ ಮನಶಾಂತಿಯನ್ನು ಕಂಡುಕೊಳ್ಳಲು, ನಿಮ್ಮ ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ. ಇದು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ ಮತ್ತು ಇದು ನಿಮ್ಮ ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ. ಬೆಳಿಗ್ಗೆ 20 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನೀವು ದಿನವಿಡೀ ಒತ್ತಡದಿಂದ ದೂರವಿರಬಹುದು. ಧ್ಯಾನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಹೀಗೆ ಪ್ರತಿನಿತ್ಯ ಬೆಳಗ್ಗೆ ಧ್ಯಾನ ಮಾಡುವ ಮೂಲಕ ನೀವು ಹ್ಯಾಪಿಯಾಗಿ ಇರಬಹುದು.
ಬೆಳಿಗ್ಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ: ಬೆಳಿಗ್ಗೆ ಎದ್ದ ನಂತರ, ಸ್ವಲ್ಪ ಸಮಯ ಬಿಸಿಲಿನಲ್ಲಿ ಕಳೆಯಿರಿ. ಇದು ದೇಹದ ವಿಟಮಿನ್ ಡಿ ಕೊರತೆಯನ್ನು ನೀಗಿಸುತ್ತದೆ. ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ಸಕಾರಾತ್ಮಕತೆ ಲಭಿಸುತ್ತದೆ. ಇದು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಅಲ್ಲದೆ ಬೆಳಗ್ಗೆ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಬೆಳಗಿನ ಸೂರ್ಯನ ಬೆಳಕು ಚರ್ಮಕ್ಕೂ ಪ್ರಯೋಜನಕಾರಿ.
ಪುಸ್ತಕ ಓದಿ: ಬೆಳಿಗ್ಗೆ ಎದ್ದ ನಂತರ, ನೀವು ಖಂಡಿತವಾಗಿಯೂ ಏನನ್ನಾದರೂ ಓದಬೇಕು. ನೀವು ನೆಚ್ಚಿನ ಪುಸ್ತಕವನ್ನು ಓದಬಹುದು. ನೀವು ಬಯಸಿದರೆ, ನೀವು ನಿಯತಕಾಲಿಕೆಯನ್ನು ಓದಬಹುದು. ಪತ್ರಿಕೆ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿಮಗೆ ಸಕಾರಾತ್ಮಕ ಭಾವನೆಯನ್ನು ನೀಡುತ್ತದೆ ಮತ್ತು ನಿಮ್ಮ ದಿನವನ್ನು ಉತ್ತಮಗೊಳಿಸುತ್ತದೆ.
ಇದನ್ನೂ ಓದಿ: ಮಹಿಳೆಯರೇ… ಮನೆ ಕೆಲಸ ಮುಗಿಸಿ ಆಫೀಸ್‌ಗೆ ಸಮಯಕ್ಕೆ ಸರಿಯಾಗಿ ಹೋಗಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ
ಬೆಳಿಗ್ಗೆ ಎದ್ದ ತಕ್ಷಣ ಏನು ಮಾಡಬಾರದು?
- ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಮತ್ತು ಇತರ ಕೆಫೀನ್ ಹೊಂದಿರುವ ಪಾನೀಯಗಳನ್ನು ಸೇವಿಸಬಾರದು.
- ಬೆಳಿಗ್ಗೆ ಎದ್ದ ತಕ್ಷಣ ಮನಸ್ಸಿಗೆ ಒತ್ತಡ ನೀಡುವ ಚಟುವಟಿಕೆಗಳನ್ನು ಮಾಡಬಾರದು.
- ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಯನ್ನು ನೋಡದಿರಿ.
- ಎದ್ದ ನಂತರ ನೀವು ಸುಖಾಸುಮ್ಮನೆ ಕೋಪ ಮಾಡಿಕೊಳ್ಳುವುದನ್ನು ಸಹ ತಪ್ಪಿಸಬೇಕು. ಏಕೆಂದರೆ ಈ ಅಭ್ಯಾಗಳಿಂದ ನಿಮ್ಮ ಇಡೀ ದಿನ ಹಾಳಾಗುತ್ತದೆ. ಹಾಗಾಗಿ ನಿಮ್ಮ ದಿನವನ್ನು ಸಕಾರಾತ್ಮಕತೆಯಿಂದ ಆರಂಭಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








