ಹೆಚ್ಚು ವರ್ಷ ಬದುಕಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಆದರೆ ಈ ನಮ್ಮ ಜೀವನಶೈಲಿಯು ಅಷ್ಟು ವರ್ಷ ನಮ್ಮನ್ನು ಬದುಕಲು ಬಿಡುವುದಿಲ್ಲ. ಆದರೆ ಕೆಲವು ನಿಯಮಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಕಷ್ಟವೂ ಅಲ್ಲ. ಜಪಾನಿನಲ್ಲಿ ಜೀವಿತಾವಧಿ ಬರೋಬ್ಬರಿ 84.91 ವರ್ಷ, ಇದು 2021ಕ್ಕಿಂತ 0.14ರಷ್ಟು ಹೆಚ್ಚಾಗಿದೆ. 2021ರಲ್ಲಿ ಜಪಾನ್ನಲ್ಲಿ ಜೀವಿತಾವಧಿ( Life Expectancy) 84.79 ವರ್ಷಗಳಿತ್ತು. 2020ರಲ್ಲಿ 84.67ರಷ್ಟಿತ್ತು ಇದು 2019ಕ್ಕಿಂತ 0.14ರಷ್ಟು ಹೆಚ್ಚಾಗಿದೆ.
ಇತ್ತೀಚೆಗೆ ಜಿ7 ದೇಶಗಳ ಜೀವಿತಾವಧಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಜಪಾನ್ನಲ್ಲಿ ಜೀವಿತಾವಧಿ ಪ್ರಮಾಣ ಹೆಚ್ಚಿದೆ. ಪ್ರತಿ ವರ್ಷವು ಜಪಾನ್ನ ಜೀವಿತಾವಧಿ ವರ್ಷ ಹೆಚ್ಚಳವಾಗುತ್ತಿದೆ.
ಕೆಂಪು ಮಾಂಸದ ಕಡಿಮೆ ಸೇವನೆ, ನಿರ್ದಿಷ್ಟವಾಗಿ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಮೀನಿನ ಹೆಚ್ಚಿನ ಸೇವನೆಯು ನಿರ್ದಿಷ್ಟವಾಗಿ ಎನ್-3 ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು, ಸೋಯಾಬೀನ್ ಗಳಂತಹ ಆಹಾರಗಳು ಮತ್ತು ಗ್ರೀನ್ ಟೀಯಂತಹ ಸಕ್ಕರೆಯಿಲ್ಲದ ಪಾನೀಯಗಳು ಇದಕ್ಕೆ ಕಾರಣ ಎಂದು ಹೇಳಬಹುದು.
ಉತ್ತಮ ಆರೋಗ್ಯ ರಕ್ಷಣೆ ಮತ್ತು ಉತ್ತಮ ಆಹಾರದ ಹೊರತಾಗಿ, ಜಪಾನೀಯರು ನಿರ್ದಿಷ್ಟವಾಗಿ ಎರಡು ವಂಶವಾಹಿಗಳಿಂದಾಗಿ ಆನುವಂಶಿಕ ಪ್ರಯೋಜನವನ್ನು ಹೊಂದಿದ್ದಾರೆ. ಡಿಎನ್‌ಎ 5178 ಮತ್ತು ಎನ್‌ಡಿ 2-237ಮೆಟ್ ಜೆನೋಟೈಪ್ ಅನ್ನು ಹೊಂದಿರುತ್ತಾರೆ. ಪ್ರತಿಯೊಬ್ಬ ಜಪಾನಿ ವ್ಯಕ್ತಿಯು ಈ ವಂಶವಾಹಿನಿ ಪ್ರಕಾರವನ್ನು ಹೊಂದಿರುವುದಿಲ್ಲ. ಆದರೆ ಇದು ಹೆಚ್ಚಾಗಿ ದೀರ್ಘಜೀವಿತಾವಧಿ ಹೊಂದಿರುವವರಲ್ಲಿ ಸಾಮಾನ್ಯವಾಗಿದೆ.
ಹಾಗೆಯೇ ಜಪಾನ್ನಲ್ಲಿ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್, ಒಬೆಸಿಟಿ ಸೇರಿದಂತೆ ಇತರೆ ಕಾಯಿಲೆಗಳಿಂದ ಸಾವನ್ನಪ್ಪುವವರ ಸಂಖ್ಯೆಯೂ ಕಡಿಮೆ ಇದೆ. ಜಪಾನಿಯರು ಕೆಂಪು ಮಾಂಸವನ್ನು ಕಡಿಮೆ ತಿನ್ನುತ್ತಾರೆ. ಮೀನುಗಳನ್ನು ಹೆಚ್ಚು ತಿನ್ನುತ್ತಾರೆ. ಗ್ರೀನ್ ಟೀ ಕುಡಿಯುತ್ತಾರೆ. ಸಿಹಿ ಇಲ್ಲದ ಪಾನೀಯವನ್ನು ಕುಡಿಯುತ್ತಾರೆ. ಸೋಯಾಬೀನ್ ರೀತಿಯ ಆಹಾರ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಹಾಗಾದರೆ ಜಪಾನೀಯರ ಜೀವನಶೈಲಿ ಹೇಗಿದೆ ಎಂಬುದನ್ನು ನೋಡೋಣ..
ನಿತ್ಯ ಒಂದೇ ಸಮಯಕ್ಕೆ ಆಹಾರ ತೆಗೆದುಕೊಳ್ಳುತ್ತಾರೆ
ನಿತ್ಯ ಒಂದೇ ಸಮಯಕ್ಕೆ ಆಹಾರ ತೆಗೆದುಕೊಳ್ಳುತ್ತಾರೆ, ಸಾಧ್ಯವಾದಷ್ಟು ನೆಲದ ಮೇಲೆ ಕುಳಿತು ಊಟ ಮಾಡುತ್ತಾರೆ. ತಿನ್ನುವುದು ತುಂಬಾ ನಿಧಾನ. ಅನ್ನ, ಮೀನು, ಮಿಶೋ, ಬೇಳೆ ಕಾಳುಗಳು, ಹಸಿ ತರಕಾರಿಗಳು, ಸೋಯಾ ರೀತಿಯ ಪದಾರ್ಥ ಬಳಕೆ ಮಾಡುತ್ತಾರೆ.
ಗ್ರೀನ್ ಟೀ ಕುಡಿಯುತ್ತಾರೆ
ಜೀರ್ಣಕ್ರಿಯೆಯನ್ನು ಸರಾಗವಾಗಿ ಮಾಡಲು ನಿತ್ಯ ಗ್ರೀನ್ ಟೀ ಕುಡಿಯುತ್ತಾರೆ, ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ, ಜೀರ್ಣಕ್ರಿಯೆ ಉತ್ತಮವಾಗುತ್ತದೆ, ಶಕ್ತಿ ದೊರೆಯುತ್ತದೆ, ಚೈತನ್ಯ ಉಂಟು ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚರ್ಮ ಕಾಂತಿಯುಕ್ತವಾಗಿರುತ್ತದೆ.
ವೃದ್ಧರ ಆರೈಕೆ
ವಯಸ್ಸಾದ ಮೇಲೆ ವೃದ್ಧರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ, ಜತೆಗೆ ಇರಿಸಿಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ವಯಸ್ಸಾದವರು ಕೂಡ ಮೊಮ್ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ರೋಗಗಳು ಕಡಿಮೆ, ಮನಸ್ಸು ಕೂಡ ಯಾವುದೇ ಚಿಂತೆಯಿಲ್ಲದ ಶಾಂತವಾಗಿರುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ವರ್ಷ ಬದುಕುತ್ತಾರೆ.
ಶೇ.80ರಷ್ಟು ಹೊಟ್ಟೆ ತುಂಬುವವರೆಗೆ ಮಾತ್ರ ತಿನ್ನುತ್ತಾರೆ
ಜಪಾನಿಯರು ಹೊಟ್ಟೆತುಂಬಾ ಊಟ ಮಾಡುವುದಿಲ್ಲ, ಶೇ.80ರಷ್ಟು ಹೊಟ್ಟೆ ತುಂಬುವವರೆಗೆ ಅಥವಾ ಅದಕ್ಕಿಂತ ಕಡಿಮೆ ಊಟ ಮಾಡುತ್ತಾರೆ. ಊಟ ಮಾಡುವುದನ್ನು ನಿಲ್ಲಿಸಲು ಜಪಾನೀಯರು ಅಲಾರಾಂ ಇರಿಸಿಕೊಂಡಿರುತ್ತಾರೆ.
ಕಾರುಗಳನ್ನು ಬಿಟ್ಟು ನಡೆದುಕೊಂಡೇ ಪ್ರಯಾಣ
ಎಷ್ಟೇ ಶ್ರೀಮಂತನಾಗಿರಲಿ ಕಾರುಗಳನ್ನು ಪ್ರಯಾಣಿಸುವುದನ್ನು ಬಿಟ್ಟು ನಡೆದುಕೊಂಡೇ ಪ್ರಯಾನಿಸುತ್ತಾರೆ. ಲಿಫ್ಟ್ ಬಳಸದೆ ಮೆಟ್ಟಿಲುಗಳನ್ನು ಹತ್ತಿ ಹೋಗುವುದು.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:24 pm, Sat, 21 May 22