ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ

ಮನೆ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಪ್ರತಿಯೊಬ್ಬರು ಬಾಲ್ಕನಿ, ಅಂಗಳ ಸೇರಿದಂತೆ ಮನೆ ಸುತ್ತಲೂ ಬಗೆ ಬಗೆಯ ಮರ ಗಿಡಗಳನ್ನು ನೆಡುತ್ತಾರೆ. ಇವುಗಳು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡುವುದೇನೋ ನಿಜ, ಆದರೆ ಇದರಲ್ಲಿರುವ ಕೆಲವು ಮರ ಗಿಡಗಳತ್ತ ಹಾವುಗಳು ಬೇಗನೇ ಆಕರ್ಷಿತವಾಗುತ್ತವೆ. ಇವುಗಳು ಸಹ ನಿಮ್ಮ ಮನೆ ಸುತ್ತ ಪದೇ ಪದೇ ಹಾವುಗಳು ಕಾಣಿಸಿಕೊಳ್ಳಲು ಕಾರಣವಾಗಿರಬಹುದು. ಹಾಗಿದ್ರೆ ಯಾವೆಲ್ಲಾ ಮರಗಿಡಗಳು ಹಾವುಗಳನ್ನು ಆಕರ್ಷಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಬೇಸಿಗೆಯಲ್ಲಿ ಹಾವುಗಳು ಪದೇ ಪದೇ ಮನೆ ಬಳಿ ಕಾಣಿಸಿಕೊಳ್ಳಲು ಈ ಮರ ಗಿಡಗಳೇ ಮುಖ್ಯ ಕಾರಣ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 11, 2026 | 5:41 PM

ಬೇಸಿಗೆಯಲ್ಲಿ ತಂಪು ಜಾಗವನ್ನು ಹುಡುಕುತ್ತಾ ಹಾವುಗಳು (snakes) ಬಿಲದಿಂದ ಹೊರಬರುತ್ತವೆ. ಹೀಗೆ ಸುಳಿದಾಡುತ್ತಾ ಬರುವ ಹಾವುಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುತ್ತವೆ.  ಪೊದೆ,  ಮರ ಗಿಡಗಳ ಬುಡ ಸೇರಿದಂತೆ ತಂಪಾದ ಸ್ಥಳಗಳ ಬಳಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆ ಸುತ್ತ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಸಹ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ಮನೆ ಸುತ್ತಲೂ ಇರುವ ಈ ಕೆಲವೊಂದು ಮರ ಗಿಡಗಳು ಕಾರಣವಂತೆ. ಹೌದು ಕೆಲವು ಸಸ್ಯಗಳ ಬಳಿ ಹಾವುಗಳು ಬೇಗನೇ ಆಕರ್ಷಿತವಾಗುತ್ತದೆ.   ಆದ್ದರಿಂದ ನಿಮ್ಮ ಮನೆಯ ಬಳಿ ಈ ಸಸ್ಯಗಳಿದ್ದರೆ, ಸ್ವಲ್ಪ ಜಾಗರೂಕರಾಗಿರಿ.

ಹಾವುಗಳನ್ನು ಆಕರ್ಷಿಸುವ ಮರ ಗಿಡಗಳಿವು:

ಶ್ರೀಗಂಧ: ಶ್ರೀಗಂಧವು ಅದರ ಪರಿಮಳಯುಕ್ತ ಮರ ಮತ್ತು ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಮರ ಹಾವುಗಳನ್ನು ಸಹ ಆಕರ್ಷಿಸುತ್ತವೆ.  ಬೇಸಿಗೆಯಲ್ಲಿ ಹಾವುಗಳು ಶಾಖದಿಂದ ತಪ್ಪಿಸಿಕೊಳ್ಳಲು ಮರದ ತೇವಾಂಶವುಳ್ಳ ಮತ್ತು ತಂಪು ವಾತಾವರಣವನ್ನು ಹುಡುಕುತ್ತಿರುತ್ತವೆ.  ಶ್ರೀಗಂಧದ ಮರವು ನೈಸರ್ಗಿಕವಾಗಿ ತಂಪಾಗಿರುತ್ತದೆ, ಆದ್ದರಿಂದ ಬೇಸಿಗೆಯ ತಿಂಗಳುಗಳಲ್ಲಿ, ಹಾವುಗಳು ತಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಈ ಮರದ ಬೇರುಗಳು ಅಥವಾ ಕೊಂಬೆಗಳಲ್ಲಿ ವಿಶ್ರಾಂತಿ ಪಡೆಯಲು ಬಯಸುತ್ತವೆ. ನಿಮ್ಮ ಮನೆಗೆ ಬಹಳ ಹತ್ತಿರದಲ್ಲಿ ಶ್ರೀಗಂಧದ ಮರವಿದ್ದರೆ, ಅಲ್ಲಿ ಹಾವುಗಳು ವಾಸಿಸುವ ಸಾಧ್ಯತೆ ಹೆಚ್ಚು.

ಮಲ್ಲಿಗೆ  ಗಿಡ: ಮಲ್ಲಿಗೆ ಗಿಡವು ತನ್ನ ಆಹ್ಲಾದಕರ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಅದರ ಜೊತೆಗೆ ಇವು ಹಾವುಗಳನ್ನು ಸಹ ಆಕರ್ಷಿಸುತ್ತವೆ. ಮಲ್ಲಿಗೆ ಗಿಡಗಳ ಸುತ್ತಲೂ ಸಣ್ಣ ಕೀಟಗಳು ಹೆಚ್ಚಾಗಿರುತ್ತವೆ. ಅವು ಹಾವಿನ ಆಹಾರವಾಗಿದ್ದು, ಆದ್ದರಿಂದ ಮಲ್ಲಿಗೆ ಸಸಿ ಇರುವ ಕಡೆ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತವೆ.

ಬಿದಿರು: ಬಿದಿರಿನ ಮರಗಳು ತುಂಬಾ ಸುಂದರವಾಗಿ ಮತ್ತು ಸೊಗಸಾಗಿ ಕಾಣುತ್ತವೆ, ಆದರೆ ಅವುಗಳು ಹಾವುಗಳಿಗೆ ಆಶ್ರಯ ತಾಣವಾಗಿದೆ.  ಬಿದಿರು ಗಿಡಗಳು ದಡ್ಡವಾಗಿರುತ್ತವೆ, ಅಲ್ಲದೆ ಬಿದಿರಿನ ಎಲೆಗಳ ಕೆಳಗೆ ತೇವಾಂಶ ಹಾಗೆಯೇ ಉಳಿದು ಬಿಡುತ್ತದೆ. ಆದ ಕಾರಣ ಹಾವುಗಳು ಹೆಚ್ಚಾಗಿ ಬಿದಿರು ಗಿಡಗಳ ಬಳಿ ಸುಳಿದಾಡುತ್ತವೆ. ಇದಲ್ಲದೆ ಹಲ್ಲಿಗಳು ಮತ್ತು ಸಣ್ಣ ಜೀವಿಗಳು ಸಹ ಬಿದಿರಿನ ಬಳಿ ವಾಸಿಸುತ್ತವೆ, ಈ ಆಹಾರಗಳನ್ನು ಹುಡುಕುತ್ತಲೂ ಹಾವುಗಳು ಬಿದಿರಿನ ಬಳಿ ಬರುತ್ತವೆ.  ಹಾಗಾಗಿ ಮನೆಯ ಸುತ್ತಲೂ ದಟ್ಟವಾದ ಬಿದಿರಿನ ಗಿಡಗಳಿದ್ದರೆ ಅದನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಅವಶ್ಯಕ.

ಇದನ್ನೂ ಓದಿ: ಹಾಗಲಕಾಯಿ ಕಹಿ ತೆಗೆದು ಹಾಕಲು ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಸಿಟ್ರಸ್‌ ಹಣ್ಣಿನ ಮರಗಳು: ನಿಂಬೆ, ಕಿತ್ತಳೆ ಸೇರಿದಂತೆ  ಸಿಟ್ರಸ್ ನಂತಹ ಮುಳ್ಳಿನ ಮರಗಳು, ಹಾಗೆಯೇ ಚಿಕ್ಕು,  ಮಾವಿನಂತಹ ದಟ್ಟವಾದ ನೆರಳು ನೀಡುವ ಮರಗಳು ಹಾವುಗಳನ್ನು ಆಕರ್ಷಿಸುತ್ತವೆ. ಈ ಮರಗಳ ಮೇಲೆ ಪಕ್ಷಿಗಳು ಗೂಡು ಕಟ್ಟುತ್ತವೆ ಮತ್ತು ಇಲಿಗಳು ನೆಲದ ಮೇಲೆ ಬೀಳುವ ಹಣ್ಣುಗಳನ್ನು ತಿನ್ನಲು ಬರುತ್ತವೆ. ತಮ್ಮ ಈ ಆಹಾರದ ಸಲುವಾಗಿ ಹಾಗೂ ಈ ಮರಗಿಡಗಳ ಸುತ್ತಲಿನ ಪ್ರದೇಶ ತಂಪಾಗಿರುವ ಕಾರಣ ಹಾವುಗಳು ಹೆಚ್ಚಾಗಿ ಈ ಮರಗಿಡಗಳ ಬಳಿ ಕಾಣಿಸಿಕೊಳ್ಳುತ್ತವೆ.

ಸೈಪ್ರೆಸ್: ಸೈಪ್ರೆಸ್ ಒಂದು ಅಲಂಕಾರಿಕ ಸಸ್ಯವಾಗಿದ್ದು, ಇವು ಆಕರ್ಷಕವಾಗಿ ಕಾಣುತ್ತವೆ. ಆದರೆ ಹಾವುಗಳಿಗೆ ಅಡಗಿಕೊಳ್ಳಲು ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತವೆ. ಈ ಸಸ್ಯ ಇದ್ದರೆ ಮನೆ ಬಳಿ ಹಾವುಗಳು ಆಗಾಗ್ಗೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಬಾಳೆ ಗಿಡ: ಬಾಳೆ ಗಿಡಗಳು ಇರುವಲ್ಲಿಯೂ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಗಿಡದ ತೇವಾಂಶ ಮತ್ತು ಈ ಗಿಡದ ಸುತ್ತಲೂ ಇರುವ ತಂಪಾದ ವಾತಾವರಣ ಹಾವುಗಳನ್ನು ಆಕರ್ಷಿಸುತ್ತವೆ. ಆದ್ದರಿಂದ, ನಿಮ್ಮ ಅಂಗಳದಲ್ಲಿ ಬಾಳೆ ಗಿಡಗಳನ್ನು ನೆಡುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us