ಯಾವಾಗ್ಲೂ ಮೂಗಿನ ಮೇಲೆ ಸಿಟ್ಟಾ? ಹೀಗೆ ಮಾಡಿದರೆ ಕೋಪವೆಲ್ಲ ಕ್ಷಣದಲ್ಲಿ ಮಾಯವಾಗುತ್ತೆ ನೋಡಿ
ಕೋಪ ಎನ್ನುವಂತಹದ್ದು ಎಷ್ಟು ಅಪಾಯಕಾರಿ ಎಂದ್ರೆ ಅದು ಒಂದು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಹೌದು ಕೆಲವರು ಕೋಪದಲ್ಲಿ ಏನೇನೋ ಮಾತಾಡಿ, ಒಳ್ಳೆಯ ಸಂಬಂಧವನ್ನೇ ಹಾಳು ಮಾಡಿಕೊಳ್ಳುತ್ತಾರೆ. ನಿಮಗೂ ಕೂಡಾ ಹೀಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಾ? ಸಣ್ಣ ಸಣ್ಣ ವಿಷಯಕ್ಕೂ ಎಲ್ಲರ ಮೇಲೂ ಕೋಪ ಮಾಡಿಕೊಳ್ಳುತ್ತೀರಾ? ಹೀಗೆ ಕೋಪ ಮಾಡಿಕೊಳ್ಳುವುದು ಅಷ್ಟೊಂದು ಒಳ್ಳೆಯದಲ್ಲ, ಹಾಗಾಗಿ ಈ ಕೆಲವೊಂದು ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಕೋಪವನ್ನು ಕಂಟ್ರೋಲ್ ಮಾಡಿ.

ಕೋಪದಲ್ಲಿ ಕೊಯ್ದ ಮೂಗು ಮತ್ತೆ ಬರುವುದಿಲ್ಲ ಎಂಬ ಗಾದೆ ಮಾತೊಂದಿದೆ. ಆ ಮಾತಿನಂತೆ ನಾವು ಕೋಪದಲ್ಲಿರುವಾಗ ಮಾಡುವ ಎಡವಟ್ಟುಗಳು ಮತ್ತೆ ಸರಿಯಾಗುವುದಿಲ್ಲ. ಇದಕ್ಕಾಗಿಯೇ ಅತಿಯಾಗಿ ಕೋಪ (Anger) ಮಾಡಿಕೊಳ್ಳಬಾರದು ಎಂದು ಹೇಳೋದು. ಹೀಗಿದ್ದರೂ ಕೂಡಾ ಅನೇಕರು ಸಣ್ಣ ವಿಷ್ಯಕ್ಕೂ ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ. ಕೋಪದಲ್ಲಿ ರೇಗಾಡಿಬಿಡುತ್ತಾರೆ. ಈ ಕೋಪ ಎನ್ನುವಂತಹದ್ದು ಎಷ್ಟು ಅಪಾಯಕಾರಿ ಅಂದ್ರೆ ಇದ್ರಿಂದ ನೆಮ್ಮದಿ ಹಾಳಾಗುವುದರ ಜೊತೆಗೆ ಸಂಬಂಧವೇ ಒಡೆದು ಹೋಗುತ್ತದೆ. ಕೋಪ ತಾಪದಿಂದ ಸಂಬಂಧಗಳು ಹಾಳಾಗಿರುವಂತಹ ಅದೆಷ್ಟೋ ಉದಾಹರಣೆಗಳನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ನೀವು ಕೂಡಾ ಇದೇ ರೀತಿ ಎಲ್ಲರ ಮೇಲೂ ಸಿಟ್ಟು ಮಾಡಿಕೊಳ್ಳುತ್ತೀರಾ? ಈ ಕೋಪವನ್ನು ಹೇಗಪ್ಪಾ ಕಂಟ್ರೋಲ್ ಮಾಡೋದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಹಾಗಿದ್ರೆ ಈ ಸರಳ ಸಲಹೆಗಳನ್ನು (Anger Control Tips) ಪಾಲಿಸಿ, ಕೋಪವನ್ನು ಕಂಟ್ರೋಲ್ ಮಾಡಿ.
ಕೋಪವನ್ನು ಕಂಟ್ರೋಲ್ ಮಾಡಲು ಹೀಗೆ ಮಾಡಿ:
ಆಳವಾದ ಉಸಿರನ್ನು ತೆಗೆದುಕೊಳ್ಳಿ: ಕೋಪವನ್ನು ನಿಯಂತ್ರಿಸಲು ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಆಳವಾದ ಉಸಿರನ್ನು ತೆಗೆದುಕೊಳ್ಳುವುದು. ನಾವು ಕೋಪಗೊಂಡಾಗ, ನಮ್ಮ ಉಸಿರಾಟವು ವೇಗವಾಗಿರುತ್ತದೆ. ಇದು ದೇಹದಲ್ಲಿ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಇದರಿಂದ ಕೋಪವು ಮತ್ತಷ್ಟು ಹೆಚ್ಚಾಗಬಹುದು. ಹಾಗಾಗಿ ನೀವು ಕೋಪಗೊಂಡಾಗ ನೀವು ನಿಮ್ಮ ಮೂಗಿನ ಮೂಲಕ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ ಮತ್ತು ಬಾಯಿಯ ಮೂಲಕ ನಿಧಾನಕ್ಕೆ ಉಸಿರನ್ನು ಬಿಡಿ. ಹೀಗೆ ಮಾಡುವುದರಿಂದ ಮೆದುಳಿಗೆ ಆಮ್ಲಜನಕ ದೊರೆಯುತ್ತದೆ ಮತ್ತು ಇದು ತಕ್ಷಣಕ್ಕೆ ಕೋಪವನ್ನು ಕಡಿಮೆ ಮಾಡುತ್ತದೆ.
ತಣ್ಣೀರು ಕುಡಿಯಿರಿ: ಸಿಟ್ಟನ್ನು ನಿಯಂತ್ರಿಸಲು ಮತ್ತೊಂದು ಪರಿಣಾಮಕಾರಿ ಮಾರ್ಗವೆಂದರೆ ತಣ್ಣೀರು ಕುಡಿಯುವುದು. ಕೋಪ ಬಂದಾಗ ಒಂದು ಲೋಟ ತಣ್ಣೀರು ಕುಡಿಯಿರಿ. ತಣ್ಣೀರು ದೇಹದ ಉಷ್ಣತೆ ಮತ್ತು ಮನಸ್ಸನ್ನು ತಂಪಾಗಿಸುತ್ತದೆ ಜೊತೆಗೆ ಕೋಪವನ್ನು ತಣ್ಣಗಾಗಿಸುತ್ತದೆ.
ಮೌನವಾಗಿರಿ: ಕೋಪ ಬಂದಾಗ ಕೆಲವರು ಸಿಟ್ಟಿನಲ್ಲಿ ಏನೇನೋ ಮಾತನಾಡಿ ಬಿಡುತ್ತಾರೆ. ಹೀಗೆ ಮಾಡಿದರೆ ಸಂಬಂಧ ಹಾಳಾಗುತ್ತದೆ. ಹಾಗಾಗಿ ಕೋಪದಲ್ಲಿ ತಪ್ಪು ತಪ್ಪು ಮಾತನಾಡುವುದಕ್ಕಿಂತ ತುಂಬಾ ಕೋಪಗೊಂಡಾಗ ಮೌನವಾಗಿರುವುದು ಉತ್ತಮ. ಹೀಗೆ ಕೋಪಗೊಂಡಾಗಲೆಲ್ಲಾ ಮೌನವಾಗಿರಿ. ಮೌನ ಮನಸ್ಸನ್ನು ಶಾಂತಗೊಳಿಸುತ್ತದೆ.
ಸ್ಥಳ ಬದಲಾಯಿಸಿ: ನೀವು ತುಂಬಾ ಕೋಪಗೊಂಡಿದ್ದರೆ, ಮೊದಲು ಆ ಸ್ಥಳದಿಂದ ಎದ್ದು ಹೋಗಿ. ಏಕೆಂದರೆ ಅಲ್ಲೇ ಇದ್ದರೆ ಕೋಪ ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಅಲ್ಲಿಂದ ಎದ್ದು ನಡೆಯಿರಿ. ಸ್ಥಳ ಬದಲಾಯಿಸುವುದರಿಂದ ಮನಸ್ಸು ಶಾಂತವಾಗುತ್ತದೆ. ಮತ್ತು ಈ ಮೂಲಕ ನಿಮ್ಮ ಕೋಪ ತಣ್ಣಗಾಗುತ್ತದೆ.
ಇದನ್ನೂ ಓದಿ: ಹಸಿವಾದಾಗ ನಿಮ್ಗೂ ಸಿಕ್ಕಾಪಟ್ಟೆ ಕೋಪ ಬರುತ್ತಾ? ಇದಕ್ಕೆ ಕಾರಣ ಏನ್ ಗೊತ್ತಾ?
ಮೊಬೈಲ್ ನೋಡಿ: ಮೊಬೈಲ್ ನೋಡುವ ಮೂಲಕವೂ ನೀವು ಕೋಪವನ್ನು ನಿಯಂತ್ರಿಸಬಹುದು. ಕೋಪವನ್ನು ಶಮನಗೊಳಿಸಲು ಮೊಬೈಲ್‌ನಲ್ಲಿ ತಮಾಷೆಯ ವಿಡಿಯೋಗಳನ್ನು ನೋಡಿ. ಇದು ಕೋಪವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ.
ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸಿ: ಕೋಪವನ್ನು ನಿಯಂತ್ರಿಸಲು ಉತ್ತಮ ಮಾರ್ಗವೆಂದರೆ ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳುವುದು. ಈ ಸಮಯದಲ್ಲಿ, ಸಂಗೀತವನ್ನು ಕೇಳುವುದು ತುಂಬಾ ಉತ್ತಮ ಮಾರ್ಗವಾಗಿದೆ, ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ