
ಹಲ್ಲುಗಳನ್ನು ಶುಚಿಯಾಗಿ, ಆರೋಗ್ಯಯುತವಾಗಿಡುವಲ್ಲಿ, ಬಾಯಿಯ ದುರ್ವಾಸನೆಯನ್ನು ತೆಗೆದು ಹಾಕುವಲ್ಲಿ ಟೂತ್‌ಪೇಸ್ಟ್‌ಗಳು (toothpaste) ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಈ ಟೂತ್‌ಪೇಸ್ಟನ್ನು ಹಲ್ಲುಜ್ಜಲು ಮಾತ್ರವಲ್ಲದೆ ಇತರ ಅನೇಕ ದೈನಂದಿನ ಕೆಲಸಗಳಿಗೂ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ಟೂತ್‌ಪೇಸ್ಟ್‌ನಲ್ಲಿ ಮೆಂಥಾಲ್ ಮತ್ತು ಅಡಿಗೆ ಸೋಡಾದಂತಹ ಪದಾರ್ಥಗಳಿದ್ದು, ಇವು ಕಲೆಗಳನ್ನು ತೆಗೆದುಹಾಕಲು ಮತ್ತು ದುರ್ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ. ಈ ಕೆಲವೊಂದು ವಸ್ತುಗಳ ಕಲೆಗಳನ್ನು ಈಸಿಯಾಗಿ ತೊಡೆದುಹಾಕಲು ನೀವು ಟೂತ್‌ಪೇಸ್ಟನ್ನು ಬಳಸಬಹುದು. ಹಾಗಿದ್ರೆ ಯಾವೆಲ್ಲಾ ವಸ್ತುಗಳನ್ನು ಕ್ಲೀನ್ ಮಾಡಲು ಟೂತ್‌ಪೇಸ್ಟನ್ನು ಬಳಸಬಹುದು ಎಂಬುದನ್ನು ತಿಳಿಯಿರಿ.
ಶೂಗಳನ್ನು ಸ್ವಚ್ಛಗೊಳಿಸಲು ಸಹಕಾರಿ: ಹಲ್ಲುಗಳನ್ನು ಮಾತ್ರವಲ್ಲ ಟೂತ್‌ಪೇಸ್ಟ್ ಶೂಗಳನ್ನು ಸಹ ಹೊಳೆಯುವಂತೆ ಮಾಡುತ್ತದೆ. ನಿಮ್ಮ ಶೂ ಅಥವಾ ಸ್ನೀಕರ್‌ಗಳ ಮೇಲೆ ಕಲೆಗಳಾಗಿದ್ದರೆ, ಬ್ರಷ್‌ಗೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ ಶೂಗಳನ್ನು ಚೆನ್ನಾಗಿ ಉಜ್ಜಿ. ಈ ಹ್ಯಾಕ್ ಶೂಗಳನ್ನು ಹೊಸತರಂತೆ ಕಾಣುವಂತೆ ಮಾಡುತ್ತದೆ.
ಮೊಬೈಲ್ ಕವರ್, ಚಾರ್ಜರ್ ವೈರ್‌ಗಳನ್ನು ಸ್ವಚ್ಛಗೊಳಿಸುತ್ತದೆ: ಈ ಚಾರ್ಜರ್ ವೈರ್‌ಗಳು ಮತ್ತು ಮೊಬೈಲ್ ಕವರ್‌ಗಳನ್ನು ಎಷ್ಟೇ ಜೋಪಾನವಾಗಿ ಇಟ್ಟುಕೊಂಡರು ಸಹ ಅವುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಮೊಂಡುತನದ ಕಲೆಗಳನ್ನು ತೆಗೆಯುವುದೇ ಒಂದು ದೊಡ್ಡ ಸಾಹಸ. ಹೀಗಿರುವಾಗ ಟೂತ್‌ಪೇಸ್ಟ್‌ನಿಂದ ಈ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು. ಹೌದು ಮೊದಲಿಗೆ ಮೊಬೈಲ್ ಕವರ್‌ಗೆ ಟೂತ್‌ಪೇಸ್ಟ್ ಹಚ್ಚಿ, ಸ್ವಲ್ಪ ಹೊತ್ತು ಹಾಗೆಯೇ ಬಿಟ್ಟು ನಂತರ ವೃತ್ತಾಕಾರದಲ್ಲಿ ಉಜ್ಜಿ, ಸ್ವಚ್ಛನೀರಿನಿಂದ ತೊಳೆಯಿರಿ.
ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಲು ಸಹಕಾರಿ: ನೀವು ಬೆಳ್ಳಿ ಪಾತ್ರೆ, ಆಭರಣಗಳನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಬಳಸಬಹುದು. ಇದಕ್ಕಾಗಿ ಮೊದಲು ಬೆಳ್ಳಿ ಪಾತ್ರೆಗೆ ಟೂತ್‌ಪೇಸ್ಟ್ ಹಚ್ಚಿ ಅದನ್ನು ಮೃದುವಾದ ಬಟ್ಟೆ ಅಥವಾ ಹಳೆಯ ಬ್ರಷ್‌ನಿಂದ ಸ್ಕ್ರಬ್ ಮಾಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಬೆಳ್ಳಿ ಪಾತ್ರೆ ಹೊಸದರಂತೆ ಕಾಣುವಂತೆ ಮಾಡುತ್ತದೆ.
ಸಿಂಕ್ ಮತ್ತು ನಲ್ಲಿಯ ಕಲೆಗಳನ್ನು ತೆಗೆದುಹಾಕುತ್ತದೆ: ಸ್ಟೀಲ್ ಸಿಂಕ್‌ಗಳು ಮತ್ತು ನಲ್ಲಿಗಳು ತುಕ್ಕು ಹಿಡಿಯುವ ಸಾಧ್ಯತೆ ತುಂಬಾನೇ ಹೆಚ್ಚು. ಈ ಕಲೆಗಳನ್ನು ತೆಗೆದು ಹಾಕಲು ಟೂತ್‌ಪೇಸ್ಟ್ ತುಂಬಾನೇ ಸಹಕಾರಿ. ನೀವು ಸಿಂಕ್ ಮತ್ತು ನಲ್ಲಿಗೆ ಟೂತ್‌ಪೇಸ್ಟ್ ಹಚ್ಚಿ ಸ್ವಲ್ವ ಸಮಯದ ಬಳಿಕ ಒದ್ದೆ ಬಟ್ಟೆಯಿಂದ ಅದನ್ನು ಸ್ವಚ್ಛಗೊಳಿಸಿ, ಇದು ಸಿಂಕ್‌ನಲ್ಲಿ ಅಂಟಿಕೊಂಡ ಕಲೆಗಳನ್ನು ಪರಿಣಾಮಕಾರಿಯಾಗಿ ತೊಡೆದುಹಾಕಲು ಸಹಕಾರಿ. ಅಲ್ಲದೆ ಕನ್ನಡಿಗಳಲ್ಲಿ ಅಂಟಿಕೊಂಡ ಕಲೆಗಳನ್ನು ಸಹ ನಿವಾರಿಸುತ್ತದೆ.
ಇದನ್ನೂ ಓದಿ: ಅಡುಗೆ ಮನೆಯ ಸಿಂಕ್ ಡ್ರೈನ್‌ನಿಂದ ಬರುವ ಕೆಟ್ಟ ವಾಸನೆಯನ್ನು ತೊಡೆದು ಹಾಕಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಬಟ್ಟೆಗಳ ಕಲೆಗಳನ್ನು ತೆಗೆದುಹಾಕುತ್ತದೆ: ಬಟ್ಟೆಗಳಲ್ಲಿ ಅಂಟಿಕೊಳ್ಳುವ ಆಹಾರ ಅಥವಾ ಎಣ್ಣೆಯ ಕಲೆ, ಪೆನ್ನಿನ ಶಾಯಿಯ ಕಲೆಯನ್ನು ತೆಗೆದು ಹಾಕಲು ಟೂತ್‌ಪೇಸ್ಟನ್ನು ಬಳಸಬಹುದು. ಇದಕ್ಕಾಗಿ ಕಲೆಯ ಮೇಲೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ ಮತ್ತು ಬ್ರಷ್‌ನಿಂದ ನಿಧಾನವಾಗಿ ಉಜ್ಜಿಕೊಳ್ಳಿ. ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಇದಲ್ಲದೆ ಪೀಠೋಪಕರಣಗಳನ್ನು ಸಹ ಟೂತ್‌ಪೇಸ್ಟ್ ಸಹಾಯದಿಂದ ಸ್ವಚ್ಛಗೊಳಿಸಬಹುದು.
ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ: ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸಲು ಸಹ ಟೂತ್‌ಪೇಸ್ಟ್ ಪರಿಣಾಮಕಾರಿಯಾಗಿದೆ. ತುಕ್ಕು ಹಿಡಿದ ಲೋಹದ ವಸ್ತುಗಳಿಗೆ ಸ್ವಲ್ಪ ಪ್ರಮಾಣದ ಟೂತ್‌ಪೇಸ್ಟ್ ಹಚ್ಚಿ ಮತ್ತು ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಕ್ರಮೇಣ ತುಕ್ಕು ತೆಗೆದು ಅದರ ಹೊಳಪನ್ನು ಪುನಃಸ್ಥಾಪಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ