Ugadi 2024 : ಯುಗಾದಿ ಹಬ್ಬಕ್ಕೆ ಸ್ಪೆಷಲ್ ಗೋಧಿ ಹಿಟ್ಟಿನ ಲಡ್ಡು ಮಾಡುವುದು ಹೇಗೆ? ಇಲ್ಲಿದೆ ಸಿಂಪಲ್ ರೆಸಿಪಿ
ಇಂದು ಹಿಂದೂಗಳ ಪಾಲಿಗೆ ಹೊಸ ವರ್ಷ ಅಂದರೆ ಯುಗಾದಿ ಹಬ್ಬ. ಈ ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಬಗೆಬಗೆಯ ಅಡುಗೆಯ ತಯಾರಿಯಲ್ಲಿ ಮಹಿಳೆಯರು ಬ್ಯುಸಿಯಾಗುತ್ತಾರೆ. ಹೊಸ ವರ್ಷಕ್ಕೆ ಬಾಯನ್ನು ಸಿಹಿಯಾಗಿಸಲು ಸುಲಭವಾಗಿ ಗೋಧಿ ಹಿಟ್ಟಿನ ಲಡ್ಡನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಮಾಡಿ ಸವಿಯಬಹುದು. ಈ ಸರಳ ರೆಸಿಪಿ ಮಾಡುವ ವಿಧಾನ ಇಲ್ಲಿದೆ.

ಹಿಂದೂಗಳ ಪಾಲಿನ ಹೊಸ ವರ್ಷದ ಮೊದಲ ದಿನವಾದ ಯುಗಾದಿ ಹಬ್ಬ ಸಂಭ್ರಮವು ದೇಶದೆಲ್ಲೆಡೆ ಮನೆ ಮಾಡಿದೆ. ಈ ಯುಗಾದಿ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ವಿವಿಧೆಡೆ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದ್ದು, ಆಚರಣೆಯಲ್ಲಿ ಭಿನ್ನತೆಯಿದ್ದರೂ ಮಹತ್ವವು ಒಂದೇ ಆಗಿದೆ. ಯುಗಾದಿ ಹಬ್ಬ ಎಂದ ಮೇಲೆ ಹಬ್ಬದಡುಗೆ ಮಾಮೂಲಿ. ವಿವಿಧ ಬಗೆಯ ಸಿಹಿತಿಂಡಿಗಳು ಹಾಗೂ ಪಾಯಸವನ್ನು ಮಾಡಿ ಮನೆ ಮಂದಿಯೆಲ್ಲರೂ ಸವಿದು ಸಂಭ್ರಮಿಸುತ್ತಾರೆ.
ಗೋಧಿ ಹಿಟ್ಟಿನ ಲಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು:
* ಅರ್ಧ ಕಪ್ ತುಪ್ಪ
* ಒಂದು ಕಪ್ ಕಡಲೆ ಹಿಟ್ಟು
* ಒಂದು ಕಪ್ ಗೋಧಿ ಹಿಟ್ಟು
* ಒಂದು ಕಪ್ ಸಕ್ಕರೆ ಪುಡಿ
* ಗೋಡಂಬಿ
* ಏಲಕ್ಕಿ ಪುಡಿ
ಇದನ್ನೂ ಓದಿ: ಇಂದು ಹಿಂದೂ ಧರ್ಮಕ್ಕೆ ಹೊಸ ವರ್ಷದ ಆರಂಭ, ಪ್ರಕೃತಿಯ ನೈಜತೆಗೆ ಯುಗಾದಿ ಸಾಕ್ಷಿ
ಗೋಧಿ ಹಿಟ್ಟಿನ ಲಡ್ಡು ಮಾಡುವ ವಿಧಾನ:
* ಮೊದಲಿಗೆ ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಒಂದು ಕಪ್ ಕಡಲೆ ಹಿಟ್ಟು ಹಾಗೂ ಒಂದು ಕಪ್ ಗೋಧಿ ಹಿಟ್ಟು ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಿರಿ.
* ಈ ಮಿಶ್ರಣವು ಕಂದು ಬಣ್ಣ ಬರುವ ತನಕ ಹುರಿದು, ಬೇರೆ ಪಾತ್ರೆಗೆ ವರ್ಗಾಯಿಸಿ ತಣ್ಣಗಾಗಲು ಬಿಡಿ.
* ಆ ಬಳಿಕ ತಣ್ಣಗಾದ ಈ ಮಿಶ್ರಣಕ್ಕೆ ಒಂದು ಕಪ್ ಪುಡಿ ಸಕ್ಕರೆ, ತುಪ್ಪದಲ್ಲಿ ಹುರಿದಿಟ್ಟುಕೊಂಡ ಗೋಡಂಬಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ಕಲಸಿ ಮಿಶ್ರಣದಲ್ಲಿ ಉಂಡೆಗಳನ್ನು ಕಟ್ಟಿದರೆ ರುಚಿಕರವಾದ ಗೋಧಿ ಹಿಟ್ಟಿನ ಲಡ್ಡು ಸವಿಯಲು ಸಿದ್ಧವಾಗಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




