valentine’s day : ಪ್ರೀತಿಗೆ ಮನಸೋತವನೇ ನಿಜವಾದ ಪ್ರೇಮಿ
valentine's day : ಆಳವಾದ ಪ್ರೀತಿಗೆ ಮನಸೋಲದಿರುವವರು ಕಮ್ಮಿ. ಪ್ರಶಾಂತತೆಯೇ ನಿಜವಾದ ಪ್ರೀತಿ. ಈ ಪ್ರೀತಿ ನಮ್ಮನ್ನು ಕಾಪಾಡುತ್ತದೆ. ನಮ್ಮನ್ನು ಎತ್ತಿ ಆಡಿಸುತ್ತದೆ. ಈ ಪ್ರೀತಿಯು ಅಮ್ಮನ ಕೈತುತ್ತನ್ನು ನೆನಪಿಸಿ ಅವಳ ಗಾಢವಾದ ಪ್ರೇಮವನ್ನು ಮೆಲುಕು ಹಾಕುತ್ತದೆ. ಸಮುದ್ರದ ದಂಡೆಯು ತಲೆಯಿದ್ದ ಹಾಗೆ. ನಮ್ಮ ಯೋಚನಾ ಲಹರಿಯೇ ಈ ಬೃಹತ್ ಅಲೆಗಳು. ಸಾಗರ ನಡುವಿನ ಭಾಗವೇ ಹೃದಯ. ಈ ಸಾಗರದಲ್ಲಿ ಒಂದು ವಿಶಿಷ್ಟ ಅನುಭವವಿದೆ.
ಪಯಣದ ಹಾದಿಯಲ್ಲಿ ನಾವೆಲ್ಲರೂ ಪ್ರೀತಿಗೆ ಸೋತವರೇ. ಪ್ರೀತಿಗೆ ಅದರದ್ದೇ ಆದ ಸುವಾಸನೆ, ಬಣ್ಣ ಹಾಗೂ ಆಕಾರಗಳಿಲ್ಲ. ಪ್ರತಿ ವರ್ಷ ಪ್ರೇಮಿಗಳ ದಿನದಂದು ನೂರಾರು ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ, ಪತ್ರ ಬರೆಯುತ್ತಾರೆ. ಇನ್ನೂ ಕೆಲವರು ಮುಗಿದು ಹೋದ ಪ್ರೇಮ ಕಥನವನ್ನು ಚಿಂತಿಸಿ ದುಃಖಿಸುತ್ತಾರೆ. ಇವುಗಳ ನಡುವೆ, ಪ್ರೀತಿ ಎಂಬುದು ಒಂದು ಪಯಣ. ಈ ಪಯಣದಲ್ಲಿ ನಾವೆಲ್ಲ ಪಯಣಿಗರು. ಹೃದಯಕ್ಕೆ ಪ್ರೀತಿಯಾದಾಗ ಮನದಲ್ಲಿ ಚಿತ್ರ ವಿಚಿತ್ರ ಭಾವನೆಗಳು ಹರಿದಾಡುತ್ತವೆ. ನಮ್ಮ ಜೀವನ ಶೈಲಿಗೆ ತಕ್ಕಂತೆ ನಾವು ನಮ್ಮ ಸಂಗಾತಿಗಳನ್ನು ಹುಡುಕುತ್ತೇವೆ. ಸಿಕ್ಕಾಗ ಆನಂದಿಸುತ್ತೇವೆ. ಸಿಗದೇ ಇದ್ದಾಗ ಹುಚ್ಚರಾಗುತ್ತೇವೆ. ಪ್ರೇಮಕ್ಕೆ ಇಂತಹುದೇ ಎಂಬ ಸಮಯವಿಲ್ಲ. ಅದು ಘಟಿಸಿ ಹೋದಾಗ ನಮಗದರ ಅರಿವಾಗುತ್ತದೆ. ಅದರ ಮೂಲ ಹುಡುಕುವುದು ಇಂದಿಗೂ ಅಸಾಧ್ಯದ ಮಾತು. ನಿಜವಾದ ಪ್ರೀತಿ ಹುಟ್ಟಿದಾಗ ಮನದ ದುಗುಡಗಳು, ಚಿತ್ರ ವಿಚಿತ್ರ ಭಾವನೆಗಳೆಲ್ಲ ಶಾಂತವಾಗುತ್ತವೆ. ಸಮುದ್ರದ ಅಲೆಗಳು ಶಾಂತವಾದ ಹಾಗೆ ಭಾಸವಾಗುತ್ತದೆ. ಇಂತಹ ಪ್ರೀತಿಗೆ ಯಾವುದೇ ಮೋಸ, ವಂಚನೆಗಳಿಲ್ಲ. ಸಮುದ್ರದ ನಡುವಣ ಹೋದ ಹಾಗೆ ಅಲೆಗಳ ಉಬ್ಬರ, ಅವುಗಳ ಸದ್ದು ಇರುವುದಿಲ್ಲ. ಅದೇ ತರಹ, ಆಳವಾದ ಪ್ರೀತಿಗೆ ಯಾವುದೇ ರೀತಿಯ ಆಲೋಚನೆಗಳಿರುವುದಿಲ್ಲ. ಸಮುದ್ರದ ದಂಡೆಯಲ್ಲಿ ನಿಂತು ನೋಡಿದಾಗ, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುವುದಷ್ಟೇ ಕಾಣುತ್ತದೆ. ಅದೇ, ಸಾಗರದ ನಡುವೆ ಪ್ರಶಾಂತ ವಾತಾವರಣವಿರುತ್ತದೆ.
ಆಳವಾದ ಪ್ರೀತಿಗೆ ಮನಸೋಲದಿರುವವರು ಕಮ್ಮಿ. ಪ್ರಶಾಂತತೆಯೇ ನಿಜವಾದ ಪ್ರೀತಿ. ಈ ಪ್ರೀತಿ ನಮ್ಮನ್ನು ಕಾಪಾಡುತ್ತದೆ. ನಮ್ಮನ್ನು ಎತ್ತಿ ಆಡಿಸುತ್ತದೆ. ಈ ಪ್ರೀತಿಯು ಅಮ್ಮನ ಕೈತುತ್ತನ್ನು ನೆನಪಿಸಿ ಅವಳ ಗಾಢವಾದ ಪ್ರೇಮವನ್ನು ಮೆಲುಕು ಹಾಕುತ್ತದೆ. ಸಮುದ್ರದ ದಂಡೆಯು ತಲೆಯಿದ್ದ ಹಾಗೆ. ನಮ್ಮ ಯೋಚನಾ ಲಹರಿಯೇ ಈ ಬೃಹತ್ ಅಲೆಗಳು. ಸಾಗರ ನಡುವಿನ ಭಾಗವೇ ಹೃದಯ. ಈ ಸಾಗರದಲ್ಲಿ ಒಂದು ವಿಶಿಷ್ಟ ಅನುಭವವಿದೆ.
ಪ್ರೀತಿಯಲ್ಲಿ ಬಿದ್ದವರು ಮೇಲೇಳುವುದು ಕಷ್ಟ. ಅದೇ, ಪ್ರೀತಿಗೆ ಮನಸೋತವರು ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ. ಜೀವನದುದ್ದಕ್ಕೂ ಅಮ್ಮನ ಪ್ರೀತಿಗೆ ಸರಿಸಾಟಿಯಾಗಿ ನಿಲ್ಲುವವರು ವಿರಳ. ಅದೇ ಅಮ್ಮನ ಪ್ರೀತಿಯನ್ನೇ ನೆನಪಿಸುವವರು ಇನ್ನೂ ಕಮ್ಮಿ. ನಿಜವಾದ ಪ್ರೀತಿ ನಮ್ಮನ್ನು ಬದಲಾಯಿಸುತ್ತದೆ. ನಮ್ಮನ್ನು ಪ್ರೇರೇಪಿಸುತ್ತದೆ. ಪ್ರೀತಿ ಒಂದು ಅನುಭವ. ಜೀವನದ ಪಯಣ. ಆ ಪ್ರೀತಿಗೆ ಮನಸೋತವನೇ ನಿಜವಾದ ಪ್ರೇಮಿ. ಈ ಪ್ರೇಮಿಗಳ ದಿನದಂದು, ಪ್ರೀತಿಗೆ ಮನಸೋಲೋಣ. ಸಾಗರದಾಳಕ್ಕಿಳಿದು ಪ್ರೀತಿಸೋಣ ಎಂಬುದೇ ಈ ಪ್ರೀತಿಯ ಸಾರಂಶ.
ವಿನಯ ಕುಮಾರ ಪಾಟೀಲ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ.