Varamahalakshmi Vrata 2025: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಈ ರೀತಿ ಸರಳವಾಗಿ ಕೂರಿಸಿ ಆರಾಧಿಸಿ
ವರಮಹಾಲಕ್ಷ್ಮಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವು ಎಲ್ಲರ ಮನೆ ಮನಗಳಲ್ಲಿ ಮನೆ ಮಾಡುತ್ತದೆ. ಹೆಂಗಳೆಯರು, ಸುಮಂಗಲಿಯರು ಈಗಾಗಲೇ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಲು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಸ್ಟ್ 8 ರಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬದಂದು ನಿಮ್ಮ ಮನೆಯಲ್ಲಿ ಆಡಂಬರವಿಲ್ಲದೇ ಸರಳವಾಗಿ ಲಕ್ಷ್ಮಿಯನ್ನು ಈ ರೀತಿ ಕೂರಿಸಬಹುದು.

ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಆರಾಧಿಸುವ ದಿನವೇ ವರಮಹಾಲಕ್ಷ್ಮಿ ವ್ರತ (Varamahalakshmi Vrata). ಈ ದಿನ ವಿಶೇಷವಾಗಿ ಮುತ್ತೈದೆಯರು ಈ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಬ್ಬ ಎಂದಮೇಲೆ ಆಡಂಬರವೂ ಇದ್ದೆ ಇರುತ್ತದೆ. ಆದರೆ ಕೆಲವರು ಅದ್ದೂರಿಯಾಗಿ ಈ ಹಬ್ಬ ಮಾಡಲು ಇಷ್ಟಪಡುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬೇಕೆಂದುಕೊಂಡಿದ್ದರೆ ಈ ಸರಳ ವಿಧಾನದ ಮೂಲಕ ಲಕ್ಷ್ಮಿಯನ್ನು ಕೂರಿಸಿ ಆರಾಧಿಸಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು. ಹಾಗಾದ್ರೆ ಲಕ್ಷ್ಮಿಯನ್ನು ಕೂರಿಸುವ ಸರಳ ವಿಧಾನದ (simple method) ಕುರಿತಾದ ಮಾಹಿತಿ ಇಲ್ಲಿದೆ.
ಲಕ್ಷ್ಮಿ ದೇವಿಯನ್ನು ಕೂರಿಸುವ ಸರಳ ವಿಧಾನ
- ಕಲಶ ತಯಾರಿಸಿಕೊಳ್ಳಿ: ಸರಳವಾಗಿ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಬೇಕೆಂದುಕೊಂಡಿದ್ದರೆ ಕಲಶ ಅತ್ಯಗತ್ಯ. ಹೀಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬೆಳ್ಳಿ ಅಥವಾ ತ್ರಾಮದ ಕಲಶವನ್ನು ಖರೀದಿಸಿ. ಮೊದಲಿಗೆ ಒಂದು ತಾಮ್ರದ ಅಥವಾ ಬೆಳ್ಳಿಯ ಕಲಶವನ್ನು ತೆಗೆದುಕೊಂಡು, ಅದಕ್ಕೆ ಅರಿಶಿನ, ಕುಂಕುಮ ಹಚ್ಚಿಕೊಳ್ಳಿ.
- ಕಲಶದಲ್ಲಿ ಈ ವಸ್ತುಗಳನ್ನು ತುಂಬಿಸಿ : ಕಲಶವನ್ನು ಯಾವುದೇ ಕಾರಣಕ್ಕೂ ಖಾಲಿ ಇಡಬಾರದು. ಹೀಗಾಗಿ ಕಲಶಕ್ಕೆ ನೀರು ಇಲ್ಲವಾದರೆ ಅಕ್ಕಿಯನ್ನು ತುಂಬಿಸಿಕೊಳ್ಳಿ. ಅಕ್ಕಿ ಸಮೃದ್ಧಿಯ ಸೂಚಕವಾಗಿದ್ದು, ಹೆಚ್ಚಿನವರು ಅಕ್ಕಿಯನ್ನೇ ಬಳಸುತ್ತಾರೆ.
- ಕಲಶದ ಮೇಲೆ ಮಾವಿನ ಎಲೆಗಳಿರಲಿ: ಯಾವುದೇ ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆಗಳಿಂದ ತೋರಣಗಳನ್ನು ಕಟ್ಟುತ್ತಾರೆ. ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಎನ್ನಲಾಗಿದೆ. ಹೀಗಾಗಿ ಐದು ಮಾವಿನ ಎಲೆಗಳನ್ನು ತೆಗೆದುಕೊಂಡು ಕಲಶದ ಮೇಲ್ಭಾಗದಲ್ಲಿ ಇರಿಸಿ.
ವಿಡಿಯೋ ಇಲ್ಲಿದೆ
View this post on Instagram
- ತೆಂಗಿನ ಕಾಯಿ ಇರಿಸಿ: ಕಲಶದ ಮೇಲ್ಭಾಗದಲ್ಲಿ ತೆಂಗಿನಕಾಯಿ ಇರಿಸಿಕೊಳ್ಳಿ, ಅರಶಿನ ಹಾಗೂ ಕುಂಕುಮವನ್ನು ಬಳಸಿ ತೆಂಗಿನಕಾಯಿಯ ಮೇಲೆ ಲಕ್ಷ್ಮಿದೇವಿಯ ಮುಖವನ್ನು ಬಿಡಿಸಬಹುದು.
- ವಸ್ತ್ರಾಲಂಕಾರ ಮಾಡಿ: ಕಲಶಕ್ಕೆ ನೆರಿಗೆ ಬರುವಂತೆ ಸೀರೆ ಉಡಿಸಿ. ಮಾಂಗಲ್ಯ ಸೇರಿದಂತೆ ಆಭರಣಗಳು ಬಳೆಗಳಿಂದ ಸುಂದರವಾಗಿ ಅಲಂಕರಿಸಿಕೊಳ್ಳಿ.
- ಹೂವುಗಳ ಅಲಂಕಾರ : ಯಾವುದೇ ಹಬ್ಬ ಹರಿದಿನಗಳಿರಲಿ ಹೂವುಗಳಿಲ್ಲದೇ ಹಬ್ಬಗಳು ಅಪೂರ್ಣ. ಹೀಗಾಗಿ ಲಕ್ಷ್ಮಿಯನ್ನು ಹೂವುಗಳಿಂದ ಅಲಂಕರಿಸಿಕೊಳ್ಳಿ. ದೇವಿಯ ಕೂರಿಸುವ ಮರದ ಕುರ್ಚಿಯ ಸುತ್ತಲೂ ಹೂವಿನ ಅಲಂಕಾರವಿರಲಿ.
ಇದನ್ನೂ ಓದಿ: Varamahalakshmi Vrata 2025: ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ
- ದೀಪ ಹಚ್ಚಿ ನೈವೇದ್ಯವಿಟ್ಟು ದೇವಿಯನ್ನು ಪೂಜಿಸಿ : ಈ ಮೇಲಿನ ಕೆಲಸವೆಲ್ಲಾ ಆದ ಬಳಿಕ ಕಲಶದ ಬಳಿ ದೀಪ ಹಚ್ಚಿ. ಅಕ್ಷತೆಯನ್ನು ದೇವಿಗೆ ಹಾಕಿ. ಹಣ್ಣು, ಹೂವು, ಸಿಹಿತಿಂಡಿಗಳನ್ನು ದೇವಿಗೆ ನೈವೇದ್ಯವಾಗಿಟ್ಟು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Wed, 6 August 25








