Varamahalakshmi Vrata 2025: ವರಮಹಾಲಕ್ಷ್ಮಿ ವ್ರತಾಚರಣೆಯನ್ನು ವಿಧವೆಯರು ಮಾಡಬಹುದೇ? ಈ ಬಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಏನು ಹೇಳ್ತಾರೆ?
ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಈಗಾಗಲೇ ಸುಮಂಗಲಿಯವರು ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ವ್ರತಾಚರಣೆಯನ್ನು ವಿಧವೆಯರು ಮಾಡಬಹುದೇ? ಗಂಡನನ್ನು ಕಳೆದುಕೊಂಡ ಸ್ತ್ರೀಯರು ಪೂಜೆಯಲ್ಲಿ ಭಾಗಿಯಾಗಬಹುದೇ? ಈ ಬಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ ಏನ್ ಹೇಳ್ತಾರೆ? ಇಲ್ಲಿದೆ ಮಾಹಿತಿ.

ಸಂಪತ್ತಿನ ಅಧಿದೇವತೆಯಾದ ವರಮಹಾಲಕ್ಷ್ಮಿ ವ್ರತಕ್ಕೆ (Varamahalakshmi Vrata) ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಲಕ್ಷ್ಮಿದೇವಿಯ ಅಲಂಕಾರ, ಪೂಜೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಪ್ರಸಾದ ನೀಡುವುದು ಹೀಗೆ ಸುಮಂಗಲಿಯರು ವ್ರತದ ಸಕಲ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ರವಾರ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು, ಈ ಬಾರಿ ಆಗಸ್ಟ್ 8 ರಂದು ಆಚರಿಸಲಾಗುತ್ತಿದೆ. ಆದರೆ ವಿಧವೆಯರು ವ್ರತಾಚರಣೆ ಮಾಡಬಹುದೇ ಇಂತಹ ಪ್ರಶ್ನೆಯೊಂದು ಎಲ್ಲರ ಮನಸ್ಸಿನಲ್ಲಿ ಇದೆ. ಕೆಲವರು ವಿಧವಾ ಸ್ತೀಯರು ವ್ರತಾಚರಣೆ ಮಾಡುವುದು ತಪ್ಪು ಎಂದರೆ, ಇನ್ನು ಕೆಲವರು ದೇವರನ್ನು ಪೂಜಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ. ಆದರೆ ಪತಿಯನ್ನು ಕಳೆದುಕೊಂಡ ಸ್ತ್ರಿಯರು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬಹುದೇ? ಎನ್ನುವ ಬಗ್ಗೆ ಕಶೆಕೋಡಿ ಸೂರ್ಯನಾರಾಯಣ ಭಟ್ (Kashekodi Suryanarayana Bhat) ಅವರು ಟಿವಿ 9 ಕನ್ನಡದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಿಂದಿನ ಕಾಲದ ಆಚಾರ ವಿಚಾರವನ್ನು ಇವತ್ತಿಗೂ ಪಾಲಿಸಿಕೊಂಡು ಹೋಗುವ ಮನಸ್ಥಿತಿ ಯಾರಿಗೂ ಇಲ್ಲ. ಅಭಿವೃದ್ಧಿಯಾಗುತ್ತಿದ್ದಂತೆ ತಾವು ಪಾಲಿಸಿಕೊಂಡು ಬರುವ ಆಚಾರ ವಿಚಾರಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಅದೆಷ್ಟೋ ಬದಲಾವಣೆಗಳು ಆಗಿವೆ, ಅದು ಸ್ವೀಕಾರಾರ್ಹ. ಹೀಗಾಗಿ ವಿಧವಾ ಸ್ತ್ರೀಯರು ದೈವತಾ ಕಾರ್ಯಗಳಲ್ಲಿ ತೊಡಗಬಾರದು ಎನ್ನುವುದು ಎಲ್ಲಿಯೂ ಇಲ್ಲ. ಒಂದು ಕಾಲಘಟ್ಟದಲ್ಲಿ ವಿಧವೆಯರನ್ನು ಎಲ್ಲದರಿಂದಲೂ ದೂರವಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಧವೆಯವರನ್ನು ಕೆಳಮಟ್ಟದಲ್ಲಿ ಕಾಣುವ ಮನಸ್ಥಿತಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ ವಿಧವಾ ಸ್ತ್ರಿಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳುವುದು ತಪ್ಪಲ್ಲ ಎಂದು ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.
ಇದನ್ನೂ ಓದಿ: Varamahalakshmi Vrata 2025: ವರಮಹಾಲಕ್ಷ್ಮಿ ವ್ರತದಂದು ಮಾಡಲೇಬಾರದ ತಪ್ಪುಗಳು ಇವೆ ನೋಡಿ
ಶ್ರಾವಣ ಮಾಸದ ಕೊನೆಯ ಶುಕ್ರವಾರದ ದಿನ ವರಮಹಾಲಕ್ಷ್ಮಿ ಪೂಜೆ ಮಾಡುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಲಕ್ಷ್ಮಿ ಪೂಜೆ ಮಾಡುವವರಿಗೆ ಅಷ್ಟ ಐಶ್ವರ್ಯವನ್ನು ಲಕ್ಷ್ಮಿ ಅನುಗ್ರಹಿಸುತ್ತಾಳೆ. ಹೀಗಾಗಿ ಹುಡುಗಿಯರು, ಮಕ್ಕಳು, ಸುಮಂಗಲಿಯರು ಹಾಗೂ ವಿಧವಾ ಸ್ತ್ರೀಯರು ಈ ಪೂಜೆಯನ್ನು ಮಾಡಬಹುದು. ಇನ್ನು ಪ್ರತಿಯೊಬ್ಬ ಸ್ತ್ರೀಯರು ಹುಟ್ಟಿದಾಗಿನಿಂದ ಅರಶಿನ, ಕುಂಕುಮ, ಹೂವಿನ ಅಧಿಕಾರವನ್ನು ಪಡೆದುಕೊಂಡಿದ್ದಾಳೆ. ಹೀಗಾಗಿ ವಿಧವೆಯರು ಈ ವ್ರತದಲ್ಲಿ ಭಾಗಿಯಾಗುವುದು, ಅರಶಿನ ಕುಂಕುಮ ಸ್ವೀಕರಿಸುವುದು ತಪ್ಪಲ್ಲ. ಪ್ರತಿಯೊಬ್ಬ ಪೂಜೆಯ ಹಿಂದೆ ಇರುವುದು ಶ್ರದ್ಧಾ ಭಕ್ತಿ ಮಾತ್ರ. ಹೀಗಾಗಿ ಗಂಡನನ್ನು ಕಳೆದುಕೊಂಡ ಮಹಿಳೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿದ್ರೆ ದೇವರು ಬೇಡ ಹೇಳುವುದಿಲ್ಲ. ದೇವರು ಎಲ್ಲಾ ರೀತಿಯಲ್ಲಿ ಒಳ್ಳೆಯದನ್ನೇ ಅನುಗ್ರಹ ಮಾಡುತ್ತಾನೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








