Varamahalakshmi Festival 2025: ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಗಳನ್ನೇ ಕೊಡುವುದೇಕೆ
ಶ್ರಾವಣ ಮಾಸದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬವೂ ಒಂದು. ಈ ಹಬ್ಬವನ್ನು ಮುತ್ತೈದೆಯರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಮನೆಗಳಲ್ಲಿ ಲಕ್ಷ್ಮಿಯನ್ನು ಅಲಂಕರಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಜೊತೆಗೆ ಕೈಗಳಿಗೆ ಹಸಿರು ಗಾಜಿನ ಬಳೆಯನ್ನು ತೊಟ್ಟು ಸಂಭ್ರಮಿಸುತ್ತಾರೆ ಹಾಗೂ ಪ್ರತಿಯೊಬ್ಬರೂ ಬಾಗಿನ ಕೊಡುವಾಗ ಹಸಿರು ಬಳೆಯನ್ನು ಕೊಡುತ್ತಾರೆ. ಹೀಗೆ ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರಿಗೆ ಹಸಿರು ಬಣ್ಣದ ಬಳೆಯನ್ನೇ ಕೊಡುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ಬಂದೇ ಬಿಡ್ತು. ಹೆಂಗಳೆಯರ ನೆಚ್ಚಿನ ಹಬ್ಬವಾಗ ಈ ವರ ಮಹಾಲಕ್ಷ್ಮಿ ಹಬ್ಬವನ್ನು ನಾಡಿನೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಕುಟುಂಬದಲ್ಲಿ ಸುಖ, ಸಮೃದ್ಧಿ, ನೆಮ್ಮದಿ, ಸಂಪತ್ತು ನೆಲೆಸಲೆಂದು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯನ್ನು ಈ ದಿನ ಮುತ್ತೈದೆಯರು ಪೂಜಿಸುತ್ತಾರೆ. ಹೌದು ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ ಬಹಳ ಶ್ರದ್ಧಾಪೂರ್ವಕವಾಗಿ ವ್ರತಾಚರಣೆಯನ್ನು ಮಾಡುತ್ತಾರೆ. ಜೊತೆಗೆ ಈ ದಿನ ಸುಮಂಗಲಿಯರು ಸೀರೆಯುಟ್ಟು, ಕೈಗಳಿಗೆ ಹಸಿರು ಗಾಜಿನ ಬಳೆ (green bangles) ತೊಟ್ಟು ಮಹಾಲಕ್ಷ್ಮಿಯಂತೆ ಸಿಂಗಾರಗೊಳ್ಳುತ್ತಾರೆ. ಅಷ್ಟು ಮಾತ್ರವಲ್ಲ ಮನೆಗೆ ಬರುವ ಮುತ್ತೈದೆಯರಿಗೂ ಅರಶಿನ ಕುಂಕುಮದ ಜೊತೆಗೆ ಹಸಿರು ಬಣ್ಣದ ಗಾಜಿನ ಬಳೆಯನ್ನು ಕೊಡುತ್ತಾರೆ. ಈ ಹಬ್ಬದ ದಿನ ಹೆಚ್ಚಾಗಿ ಹಸಿರು ಬಳೆಯನ್ನೇ ಕೊಡುವುದೇಕೆ ಗೊತ್ತಾ? ಈ ಸಂಪ್ರದಾಯದ ಹಿಂದಿನ ಕಾರಣವನ್ನು ತಿಳಿಯಿರಿ.
ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರು ಹಸಿರು ಬಳೆಗಳನ್ನು ತೊಡುವುದೇಕೆ:
ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಮುತ್ತೈದೆಯರು ತಮ್ಮ ಕೈಗಳಿಗೆ ಹೆಚ್ಚಾಗಿ ಹಸಿರು ಬಣ್ಣದ ಗಾಜಿನ ಬಳೆಯನ್ನು ತೊಡುತ್ತಾರೆ. ಅಷ್ಟೇ ಅಲ್ಲದೆ ದೇವಸ್ಥಾನಗಳಿಗೆ, ಮನೆ ಮನೆಗಳಿಗೆ ಬರುವ ಮುತ್ತೈದೆಯರಿಗೆ ಅರಶಿನ ಕುಂಕುಮದ ಜೊತೆಗೆ ಹಸಿರು ಗಾಜಿನ ಬಳೆಯನ್ನೇ ಕೊಡುತ್ತಾರೆ.
ಹಸಿರು ಬಣ್ಣವು ಸಮೃದ್ಧಿ, ಹೊಸ ಆರಂಭ, ಸೌಂದರ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಸೂಚಿಸುವಂತೆ ಹಸಿರು ಗಾಜಿನ ಬಳೆಗಳು ಅದೃಷ್ಟ, ಸಮೃದ್ಧಿ, ಹೊಸ ಆರಂಭ ಮತ್ತು ಸಕಾರಾತ್ಮಕತೆಯ ಸಂಕೇತವಾಗಿದೆ. ಅಲ್ಲದೆ ಹಸಿರು ಬಳೆಗಳನ್ನು ಧರಿಸುವುದರಿಂದ ಶಿವ ಪಾರ್ವತಿಯ ಆಶಿರ್ವಾದವೂ ಲಭಿಸುತ್ತದೆ ಎಂದು ನಂಬಲಾಗಿದೆ. ಇದೇ ಕಾರಣಕ್ಕಾಗಿ ವಿವಾಹಿತ ಮಹಿಳೆಯರು ಹೆಚ್ಚಾಗಿ ಹಸಿರು ಗಾಜಿನ ಬಳೆಯನ್ನೇ ತೊಡುವುದು. ಸೌಭಾಗ್ಯದ ಸಂಕೇತವೆಂದು ಮುತ್ತೈದೆಯರು ಭೀಮನ ಅಮವಾಸ್ಯೆ, ವರಮಹಾಲಕ್ಷ್ಮಿ ಹಬ್ಬದಂದು ಕೈತುಂಬಾ ಹಸಿರು ಬಳೆ ತೊಡುತ್ತಾರೆ. ಮುಖ್ಯವಾಗಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು ಹಸಿರು ಗಾಜಿನ ಬಳೆಯನ್ನು ತೊಡುತ್ತಾರೆ.
ಇನ್ನೂ ಈ ಹಬ್ಬದ ದಿನ ಮನೆಗೆ ಬರುವಂತಹ ಮುತ್ತೈದೆಯರಿಗೆ ಅರಶಿನ ಕುಂಕುಮ, ಬಾಗಿನದ ಜೊತೆ ಹಸಿರು ಬಣ್ಣದ ಬಳೆಯನ್ನೂ ಕೊಡಲಾಗುತ್ತದೆ. ಹೀಗೆ ಹಸಿರು ಬಳೆಯನ್ನೇ ಕೊಡುವುದರ ಹಿಂದಿನ ಕಾರಣವೇನೆಂದರೆ, ಮೊದಲೇ ಹೇಳಿದ ಹಾಗೆ ಹಸಿರು ಬಣ್ಣ ಸಮೃದ್ಧಿ, ಸಕಾರಾತ್ಮಕತೆಯ ಸಂಕೇತ. ಹಾಗಾಗಿ ಜೀವನದಲ್ಲಿ ಯಾವಾಗಲೂ ಸಮೃದ್ಧಿ ಮತ್ತು ಸಕಾರಾತ್ಮಕತೆ ತುಂಬಿರಲಿ ಎಂಬ ಆಶಯದಿಂದ ಹಸಿರು ಗಾಜಿನ ಬಳೆಯನ್ನು ಕೊಡುತ್ತಾರೆ.
ಇದನ್ನೂ ಓದಿ: ಮನೆಯಲ್ಲಿ ವರಮಹಾಲಕ್ಷ್ಮಿಯನ್ನು ಈ ರೀತಿ ಸರಳವಾಗಿ ಕೂರಿಸಿ ಆರಾಧಿಸಿ
ಶ್ರಾವಣದಲ್ಲಿ ಹಸಿರು ಬಳೆ ಧರಿಸುವ ಸಂಪ್ರದಾಯ:
ಶ್ರಾವಣ ಮಾಸದಲ್ಲಿ ಹಸಿರು ಬಣ್ಣದ ಬಳೆಯನ್ನು ಧರಿಸುವ ಸಂಪ್ರದಾಯವೂ ಇದೆ. ಶ್ರಾವಣ ಮಾಸ ಹಾಗೂ ಹಸಿರು ಬಣ್ಣ ಶಿವನಿಗೆ ಪ್ರಿಯವಾದದ್ದು ಎಂಬ ನಂಬಿಕೆಯಿದೆ. ಈ ಕಾರಣಕ್ಕಾಗಿ ಹಸಿರು ಬಳೆ ಧರಿಸುತ್ತಾರೆ. ಅಲ್ಲದೆ ಶ್ರಾವಣ ಮಾಸದಲ್ಲಿ ಪ್ರಕೃತಿ ಹಚ್ಚ ಹಸಿರಿನಿಂದ ತುಂಬಿರುತ್ತದೆ ಮತ್ತು ಈ ಮಾಸವನ್ನು ಹೊಸತನದ ಆರಂಭವೆಂದು ಕರೆಯಲಾಗುತ್ತದೆ. ಪ್ರಕೃತಿ ಹಚ್ಚ ಹಸಿರಾಗಿ ಕಾಣುವ ಈ ಸಮಯದಲ್ಲಿ ಹಸಿರು ಬಳೆ ಧರಿಸಿದರೆ, ನಮ್ಮ ಜೀವನದಲ್ಲಿಯೂ ಸಮೃದ್ಧಿ, ಸಂತೋಷ ಬರುತ್ತದೆ ಎಂದು ಹಸಿರು ಗಾಜಿನ ಬಳೆ ತೊಡುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








