ವರಮಹಾಲಕ್ಷ್ಮೀ ಪೂಜೆ ಗರ್ಭಿಣಿಯರು ಮಾಡಬಹುದೇ? ಗಜಾನನ ಭಟ್ ಹೇಳುವ ಪ್ರಕಾರ ಯಾರೆಲ್ಲ ಭಾಗಿಯಾಗಬಹುದು
ವರಮಹಾಲಕ್ಷ್ಮೀ ಹಬ್ಬಕ್ಕೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಹಬ್ಬಕ್ಕೆ ಎಲ್ಲಾ ರೀತಿಯಲ್ಲಿಯೂ ತಯಾರಿ ಆರಂಭವಾಗಿರುತ್ತದೆ. ಆದರೆ ಕೆಲವರಿಗೆ ಯಾರು ಈ ಪೂಜೆ ಮಾಡಬೇಕು?, ಹೇಗೆ ಮಾಡಬೇಕು?, ಗರ್ಭಿಣಿಯರು ವರಮಹಾಲಕ್ಷ್ಮೀ ಪೂಜೆ ಮಾಡಬಹುದೇ?, ಕುಮಾರಿಯರ ಪೂಜೆ ಮಾಡಬೇಕೆ?, ವರಮಹಾಲಕ್ಷ್ಮೀ ಹಬ್ಬದ ದಿನ ಉಪವಾಸ ಮಾಡಬೇಕೆ? ಎಂಬಿತ್ಯಾದಿ ಅನುಮಾನವಿರುತ್ತದೆ. ಹಾಗಾಗಿ ಇಂತಹ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶ ಇಟ್ಟುಕೊಂಡು ಟಿವಿ9 ವೇ। ಗಜಾನನ ಭಟ್ ಆರೊಳ್ಳಿ ಅವರೊಂದಿಗೆ ಮಾತನಾಡಿದ್ದು ಅವರು ನೀಡಿರುವ ಮಾಹಿತಿ ಇಲ್ಲಿದೆ.

ವರಮಹಾಲಕ್ಷ್ಮೀ ಪೂಜೆ (Varamahalakshmi Puja) ಎಂದರೆ ಹೆಂಗಳೆಯರಿಗೆ ಬಹಳ ಸಂಭ್ರಮ. ಸಾಮಾನ್ಯವಾಗಿ ಈ ಹಬ್ಬವನ್ನು ಶ್ರಾವಣ ಮಾಸದ ಎರಡನೇ ಶುಕ್ರವಾರ ಅಥವಾ ಹುಣ್ಣಿಮೆ ತಿಥಿಗೆ ಹತ್ತಿರವಿರುವ ಶುಕ್ರವಾದರದಂದು ಆಚರಣೆ ಮಾಡಲಾಗುತ್ತದೆ. ಈ ದಿನ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮೀ, ಮಹಾ ಸರಸ್ವತಿ ಈ ಮೂರು ಸ್ವರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಹಾಗಾಗಿ ಮದುವೆಯಾದ ಹೆಣ್ಣು ಸರ್ವಸಿದ್ಧಿಗಾಗಿ ಈ ದಿನ ಲಕ್ಷ್ಮೀಯನ್ನು ಪೂಜಿಸುವ ಪ್ರತೀತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ದಿನ ಭಕ್ತಿಯಿಂದ ಪೂಜೆ ಮಾಡಿ ಮದುವೆಯಾದ ಹೆಂಗಸರನ್ನು ಮನೆಗೆ ಕರೆದು ಅವರಿಗೆ ಬಾಗಿನ ಕೊಡುವುದರಿಂದ ಶ್ರೇಯಸ್ಸು, ಸೌಭಾಗ್ಯ ಎಲ್ಲವೂ ಸಿಗುತ್ತದೆ. ಮನೋಕಾಮನೆಗಳು ಈಡೇರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ಹೆಣ್ಣು ಮಕ್ಕಳಿಗೆ ಬಹಳ ವಿಶೇಷ. ಆದರೆ ಕೆಲವರಿಗೆ ಈ ದಿನದ ಆಚರಣೆ ಕುರಿತು ಕೆಲವು ಅನುಮಾನ, ಗೊಂದಲಗಳಿರುತ್ತವೆ. ಹಾಗಾಗಿ ಇಂತಹ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶ ಇಟ್ಟುಕೊಂಡು ಟಿವಿ9 ವೇ। ಗಜಾನನ ಭಟ್ ಆರೊಳ್ಳಿ (Gajanana Bhat) ಅವರೊಂದಿಗೆ ಮಾತನಾಡಿದ್ದು ಅವರು ನೀಡಿರುವ ಮಾಹಿತಿ ಇಲ್ಲಿದೆ.
ಗರ್ಭಿಣಿಯರು ವರಮಹಾಲಕ್ಷ್ಮೀ ಪೂಜೆ ಮಾಡಬಹುದೇ?
ಕೆಲವರು ವರಮಹಾಲಕ್ಷ್ಮೀ ಪೂಜೆಯನ್ನು ಗರ್ಭಿಣಿಯರು ಮಾಡಬಾರದು ಎಂದು ಹೇಳುತ್ತಾರೆ. ವೇ। ಗಜಾನನ ಭಟ್ ಆರೊಳ್ಳಿ ಅವರು ಹೇಳಿರುವ ಪ್ರಕಾರ, ಶಾಸ್ತ್ರದಲ್ಲಿ ಗರ್ಭಿಣಿಯರು ಏಳು ತಿಂಗಳು ತುಂಬಿದ ಬಳಿಕ ಈ ಪೂಜೆ ಮಾಡಬಾರದು ಎಂದು ಹೇಳಲಾಗುತ್ತದೆ. ಅದಕ್ಕೆ ಮೊದಲು ಮಾಡುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಅವಳ ಆರೋಗ್ಯ ಚೆನ್ನಾಗಿದ್ದರೆ ಆಕೆ ಪೂಜೆ, ಪುನಸ್ಕಾರಗಳನ್ನು ಮಾಡಬಹುದು. ದೈಹಿಕ ಅನಾರೋಗ್ಯವಿದ್ದಾಗ ಪೂಜೆ ಮಾಡಬೇಕಿಲ್ಲ. ಬದಲಾಗಿ ಸುಮಂಗಲಿಯರನ್ನು ಕರೆದು ಅರಿಶಿನ ಕುಂಕುಮ ಸೇರಿದಂತೆ ಬಾಗಿನ ನೀಡಬಹುದು.
ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಗಂಡ ಬದುಕಿರುವಾಗ ಕರಿಮಣಿ ತೆಗೆದಿಡುವುದಕ್ಕೆ ಅವಕಾಶವಿದೆಯೇ? ಮಾಂಗಲ್ಯ ಬದಲಾವಣೆ ಯಾವಾಗ?
ವರಮಹಾಲಕ್ಷ್ಮೀ ಹಬ್ಬದ ದಿನ ಉಪವಾಸ ಮಾಡಬೇಕೆ?
ಸಾಮಾನ್ಯವಾಗಿ ಕೆಲವವರು ವರಮಹಾಲಕ್ಷ್ಮೀ ಹಬ್ಬದ ದಿನ ಉಪವಾಸ ಮಾಡುತ್ತಾರೆ. ಕೆಲವರು ಮಾಡುವುದಿಲ್ಲ. ಯಾವುದು ಸರಿ ಎಂಬ ಪ್ರಶ್ನೆಗೆ ಗಜಾನನ ಭಟ್ ಅವರು ಉತ್ತರಿಸಿದ್ದು, ಮೊದಲು ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನ ಲಕ್ಷ್ಮೀಗೆ ನೃತ್ಯ, ಗೀತೆ, ಭಜನೆ ಹೀಗೆ ವಿವಿಧ ರೀತಿಯಲ್ಲಿ ಆಕೆಯನ್ನು ನೆನೆದು ಜಾಗರಣೆ ಮಾಡಿ ಮಾರನೇ ದಿನ ಅಂದರೆ ಶುಭ ಶುಕ್ರವಾರದಂದು ವಿಜೃಂಭಣೆಯಿಂದ ಲಕ್ಷ್ಮೀ ಪೂಜೆ ಮಾಡಲಾಗುತ್ತಿತ್ತು. ಆದರೆ ಈಗ ಇದು ಒಂದು ದಿನಕ್ಕೆ ಸೀಮಿತವಾಗಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಹಾಗಾಗಿ ಭಕ್ತರು ತಮ್ಮ ಶಕ್ತಿಯನುಸಾರ ಪೂಜೆ, ಪುನಸ್ಕಾರಗಳನ್ನು ಮಾಡಬಹುದು. ಆಡಂಭರದ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಉಪವಾಸ ಮಾಡಿ ಪೂಜೆ ಮಾಡಬೇಕೆಂದರೆ ಹಾಗೆಯೇ ಮಾಡಬಹುದು ಅಥವಾ ಒಂದು ಹೊತ್ತು ಊಟ ಮಾಡಿಯೂ ಪೂಜೆ ಮಾಡಬಹುದು. ಸಾಧ್ಯವಾದಷ್ಟು ಈರುಳ್ಳಿ, ಬೆಳ್ಳುಳ್ಳಿ ಬಳಸದಂತಹ ಆಹಾರಗಳನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಮಾತ್ರವಲ್ಲ ಇದರಿಂದ ಮನಸ್ಸು ಕೂಡ ಚಂಚಲವಾಗುವುದಿಲ್ಲ.
ಕುಮಾರಿಯರ ಪೂಜೆ ಮಾಡಬೇಕೆ?
ಈ ದಿನ ಕೆಲವರು ಮದುವೆಯಾದವರಿಗೆ ಬಾಗಿನ ನೀಡುತ್ತಾರೆ. ಇನ್ನು ಕೆಲವರು ಸುಹಾಸಿನಿ ಅಥವಾ ಕುಮಾರಿಯರ ಪೂಜೆ ಮಾಡುತ್ತಾರೆ. ಯಾವುದು ಸರಿ? ಎಂಬ ಪ್ರಶ್ನೆಗೆ ಗಜಾನನ ಭಟ್ ಅವರು ಉತ್ತರಿಸಿದ್ದು, ಮದುವೆಯಾಗದ ಹೆಣ್ಣು ಮಕ್ಕಳಿಗೆ ಪೂಜೆ ಮಾಡಬಹುದು ಆದರೆ ವರಮಹಾಲಕ್ಷ್ಮೀ ಹಬ್ಬದ ದಿನ ಸೌಭಾಗ್ಯ ಪ್ರಾಪ್ತಿಯಾಗಲು ಮದುವೆಯಾದ ಸುಮಂಗಲಿಯರನ್ನು ಮನೆಗೆ ಕರೆದು ಅವರಿಗೆ ಬಾಗಿನ ನೀಡಿ ಅವರಿಂದ ಆಶೀರ್ವಾದ ಪಡೆಯುವುದು ಬಹಳ ಒಳ್ಳೆಯದು ಎಂದು ಹೇಳಿದ್ದಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








