
ನೋಡಲು ತುಂಬಾನೇ ಸಣ್ಣದಾಗಿರುವ ಸೊಳ್ಳೆಗಳು (mosquitoes) ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿಯೇ ಪ್ರಪಂಚದಾದ್ಯಂತ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ. ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ತೀರಾ ಹೆಚ್ಚಿರುತ್ತದೆ, ಇದರಿಂದಾಗಿ ಈ ಸಮಯದಲ್ಲಿ ಡೆಂಗ್ಯೂನಂತಹ ಕಾಯಿಲೆಗಳು ಕೂಡ ಹೆಚ್ಚಾಗುತ್ತದೆ. ಹಾಗಾಗಿ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಮನೆಯೊಳಗೆ ಪ್ರವೇಶಿಸುವ ಸೊಳ್ಳೆಗಳನ್ನು ಓಡಿಸಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಇವುಗಳ ಬದಲು ಈ ಕೆಲವು ಸರಳ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೊಳ್ಳೆಗಳು ಮನೆಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.
ಮಳೆ ಬಂದ ನಂತರ, ಛಾವಣಿಗಳು, ಹೂವಿನ ಕುಂಡಗಳು, ಕೂಲರ್‌ಗಳು, ಹಳೆಯ ಟೈರ್‌ಗಳು ಅಥವಾ ಯಾವುದೇ ಇತರ ತೆರೆದ ಪಾತ್ರೆಗಳಲ್ಲಿ ನೀರು ಸಂಗ್ರಹವಾಗಬಹುದು. ಇವುಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಮನೆ ಸುತ್ತ ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಿ.
ಬಾಗಿಲುಗಳನ್ನು ಮುಚ್ಚಿದ್ದರೂ ಸೊಳ್ಳೆಗಳು ಕಿಟಕಿ ಮೂಲಕ ಮನೆಯೊಳಗೆ ಪ್ರವೇಶಿಸುತ್ತವೆ. ಹಾಗಾಗಿ ಕಿಟಕಿಗಳಿಗೆ ಜಾಲರಿ ಪರದೆಗಳನ್ನು ಅಳವಡಿಸಿಕೊಳ್ಳಿ. ಸಂಜೆ ಬಾಗಿಲು ಮತ್ತು ಪರದೆಗಳನ್ನು ಅನಗತ್ಯವಾಗಿ ತೆರೆದಿಡುವುದನ್ನು ತಪ್ಪಿಸಿ.
ಕೂಲರ್‌ಗಳಲ್ಲಿ ದೀರ್ಘಕಾಲದವರೆಗೆ ನೀರು ನಿಂತರೆ ಅಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಮಾಡಬಹುದು. ಆದ್ದರಿಂದ ಕೂಲರ್‌ಗಳನ್ನು ನಿಯಮಿತವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸಿ. ನೀರಿನ ಟ್ಯಾಂಕ್‌ಗಳು ಮತ್ತು ಇತರ ದೊಡ್ಡ ಪಾತ್ರೆಗಳಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದನ್ನು ತಡೆಯಲು ಅವುಗಳನ್ನು ಮುಚ್ಚಿಡಿ ಮತ್ತು ನಿಯಮಿತವಾಗಿ ಅವುಗಳನ್ನು ಸ್ವಚ್ಛಗೊಳಿಸಿ.
ಕತ್ತಲೆ ಮತ್ತು ತೇವಾಂಶವುಳ್ಳ ಸ್ಥಳಗಳಲ್ಲಿ ಸೊಳ್ಳೆಗಳ ಹಾವಳಿ ತೀರಾ ಹೆಚ್ಚಿರುತ್ತದೆ. ಏಕೆಂದರೆ ಈ ಸ್ಥಳ ಅವುಗಳಿಗೆ ಸಂತಾನೋತ್ಪತ್ತಿ ಮಾಡುವ ಸೂಕ್ತ ಸ್ಥಳಗಳಾಗಿವೆ. ಆದ್ದರಿಂದ, ನಿಮ್ಮ ಮನೆಯನ್ನು ಸ್ವಚ್ಛವಾಗಿಡಿ ಮತ್ತು ಕಸದ ತೊಟ್ಟಿಗಳನ್ನು ಮುಚ್ಚಿಡಿ. ಮನೆಯೊಳಗೆ ತೇವಾಂಶ ಇರದಂತೆ ನೋಡಿಕೊಳ್ಳಿ. ಸ್ನಾನಗೃಹಗಳು ಮತ್ತು ಅಡುಗೆಮನೆಗಳಂತಹ ಪ್ರದೇಶಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
ಇದನ್ನೂ ಓದಿ: ಇಂದು ‘ವಿಶ್ವ ಸೊಳ್ಳೆ ದಿನ’; ಸೊಳ್ಳೆಗಳ ವಿಸ್ಮಯಕಾರಿ ಜಗತ್ತು ಮತ್ತು ಆರೋಗ್ಯದ ಮೇಲಿನ ಅಪಾಯ
ಸಸ್ಯಗಳು ಮತ್ತು ದಟ್ಟವಾದ ಪೊದೆಗಳು ತೇವಾಂಶವನ್ನು ಕಾಯ್ದುಕೊಳ್ಳುತ್ತವೆ, ಅಲ್ಲಿ ಸೊಳ್ಳೆಗಳು ಸುಲಭವಾಗಿ ಅಡಗಿಕೊಳ್ಳುತ್ತವೆ. ಹಾಗಾಗಿ ಪೊದೆಗಳನ್ನು ತೆಗೆದುಹಾಕಿ, ಗಿಡಗಳ ಸುತ್ತಲೂ ಸ್ವಚ್ಛವಾಗಿಟ್ಟುಕೊಳ್ಳಿ. ಗಿಡಗಳಿಗೆ ಅತಿಯಾಗಿ ನೀರು ಹಾಕಿದರೆ ಅಥವಾ ಸುತ್ತಮುತ್ತಲಿನ ಪ್ರದೇಶಗಳು ಸ್ವಚ್ಛವಾಗಿಲ್ಲದಿದ್ದರೆ, ಸೊಳ್ಳೆಗಳ ಸಂಖ್ಯೆ ಹೆಚ್ಚಾಗಬಹುದು. ಆದ್ದರಿಂದ, ನಿಯಮಿತವಾಗಿ ಸಸ್ಯಗಳನ್ನು ಕತ್ತರಿಸುವುದು ಮತ್ತು ಸ್ವಚ್ಛಗೊಳಿಸುವುದು ಮುಖ್ಯ.
ಮಲಗುವಾಗ ಸೊಳ್ಳೆ ಪರದೆಯನ್ನು ಬಳಸಿ. ಅಗತ್ಯವಿದ್ದರೆ ಸೊಳ್ಳೆ ನಿವಾರಕವನ್ನು ಬಳಸಿ. ಇದಲ್ಲದೆ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ನಡೆಸಲು ಮನೆ ಅಂಗಳ, ಬಾಲ್ಕನಿಯಲ್ಲಿ ಚೆಂಡು ಹೂವು, ಲ್ಯಾವೆಂಡರ್, ರೋಸ್ಮೆರಿ, ತುಳಸಿಯಂತ ಗಿಡಗಳನ್ನು ಬೆಳೆಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ