Indian Air Force Day 2023: 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆ, ಇಂದು ವಿಶ್ವದ 4ನೇ ಪ್ರಬಲ ವಾಯುಸೇನೆ
ಪ್ರತಿವರ್ಷ ಭಾರತೀಯ ವಾಯುಪಡೆಯ ದಿನವನ್ನು ಅಕ್ಟೋಬರ್ 8 ರಂದು ಆಚರಿಸಲಾಗುತ್ತದೆ. ಈ ಬಾರಿ ಭಾರತೀಯ ವಾಯುಪಡೆಯು ತನ್ನ 91ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಭಾರತೀಯ ವಾಯುಸೇನೆ ಯಾವಾಗ ಅಸ್ತಿತ್ವಕ್ಕೆ ಬಂದಿತು? ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ.
ಭಾರತೀಯ ವಾಯುಸೇನೆಯು (Indian Air Force) ಭಾರತೀಯ ಸಶಸ್ತ್ರ ಪಡೆಗಳ ನಿರ್ಣಾಯಕ ಅಂಗವಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ಭಾರತೀಯ ವಾಯುಪಡೆಯ ಹಿಂಡನ್ ಏರ್ ಫೋರ್ಸ್ ಸ್ಟೇಷನ್ ಏಷ್ಯಾದಲ್ಲೇ ಅತಿ ದೊಡ್ಡದಾಗಿದೆ. ಭಾರತೀಯ ವಾಯುಪಡೆಯು ಪ್ರಾರಂಭದಿಂದಲೂ ಅನೇಕ ಯುದ್ಧಗಳಲ್ಲಿ ಭಾಗಿಯಾಗಿದೆ. ಭಾರತವು ಸ್ವಾತಂತ್ರ್ಯ ಪಡೆದ ನಂತರ ಭಾರತೀಯ ವಾಯುಪಡೆಯು ಪ್ರಮುಖ ಐದು ಯುದ್ಧಗಳನ್ನು ನಡೆಸಿದೆ. ಇವುಗಳಲ್ಲಿ ನಾಲ್ಕು ಯುದ್ಧಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದರೆ ಒಂದು ಯುದ್ಧವು ಚೀನಾದ ವಿರುದ್ಧ ನಡೆದಿತ್ತು. ಭಾರತೀಯ ವಾಯುಪಡೆಯು 1948, 1965, 1971 ಮತ್ತು 1999 ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿತ್ತು. 1962 ರಲ್ಲಿ ಚೀನಾದ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿತ್ತು. ಅಲ್ಲದೆ ಆಪರೇಷನ್ ವಿಜಯ್, ಅಪರೇಷನ್ ಮೇಘದೂತ, ಆಪರೇಷನ್ ಕ್ಯಾಕ್ಟಸ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ನಂತಹ ಪ್ರಮುಖ ಕಾರ್ಯಚರಣೆಗಳನ್ನು ಭಾರತೀಯ ವಾಯುಸೇನೆಯು ನಡೆಸಿದೆ. ಇಂದು ಪ್ರಪಂಚದ ನಾಲ್ಕನೇ ಬಲಿಷ್ಠ ವಾಯುಸೇನೆಯಾಗಿ ನಿಂತಿರುವ ಭಾರತೀಯ ವಾಯುಪಡೆಯು ಯಾವಾಗ ಸ್ಥಾಪನೆಯಾಯಿತು? ಅದರ ಹಿಂದಿನ ಇತಿಹಾಸವನ್ನು ತಿಳಿಯೋಣ.
ಭಾರತೀಯ ವಾಯುಪಡೆಯನ್ನು ಯಾವಾಗ ಸ್ಥಾಪಿಸಲಾಯಿತು?
ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 08, 1932 ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸಹಾಯಕ ವಾಯುಪಡೆಯಾಗಿ ಸ್ಥಾಪಿಸಲಾಯಿತು. ಆ ಸಮಯದಲ್ಲಿ ಭಾರತೀಯ ವಾಯುಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ 1950 ರಲ್ಲಿ ಭಾರತದ ಗಣರಾಜ್ಯದ ನಂತರ ಭಾರತದ ವಾಯುಸೇನೆಯ ರಾಯಲ್ ಎಂಬ ಪದವನ್ನು ತೆಗೆದು ಹಾಕಿ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಯಿತು. 1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆಯು ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳೆದು ನಿಂತಿದೆ. 1932 ರಲ್ಲಿ ಭಾರತೀಯ ವಾಯುಸೇನೆಯನ್ನು ಸ್ಥಾಪಿಸಿದ ನೆನಪಿಗಾಗಿ ಮತ್ತು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್ (ಯೋಧರಿಗೆ) ಗೌರವ ಸಲ್ಲಿಸಲು ಪ್ರತಿವರ್ಷ ಅಕ್ಟೋಬರ್ 08 ರಂದು ಭಾರತೀಯ ವಾಯುಪಡೆ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಭಾರತೀಯ ವಾಯುಪಡೆಯು ತನ್ನ 91 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಇದನ್ನೂ ಓದಿ: ಭಾರತೀಯ ವಾಯುಪಡೆ ದಿನ; ಅ. 8ರಂದು 80 ಐಎಎಫ್ ವಿಮಾನಗಳಿಂದ ಚಂಡೀಗಢದಲ್ಲಿ ವೈಭವದ ಪ್ರದರ್ಶನ
ಭಾರತೀಯ ವಾಯುಪಡೆ ದಿನದ ಪ್ರಾಮುಖ್ಯತೆ:
ಭಾರತೀಯ ವಾಯುಪಡೆ ದಿನದ ಸ್ಮರಣಾರ್ಥವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿರುವ ಫೈಟರ್ ಪೈಲೆಟ್ಗಳನ್ನು ಗೌರವಿಸಲಾಗುತ್ತೆ. ಅಲ್ಲದೆ ಈ ದಿನ ಮಿಲಿಟರಿ ಶಕ್ತಿಯ ಪ್ರದರ್ಶನವನ್ನು ಮಾಡುವ ಮೂಲಕ ಹೊರಗಿನ ಪ್ರಂಚಕ್ಕೆ ವಿಶೇಷವಾಗಿ ಭಾರತದ ನೆರೆಹೊರೆಯ ರಾಷ್ಟ್ರಗಳಿಗೆ ಭಾರತೀಯ ಸೇನೆಯ ಶಕ್ತಿಯನ್ನು ಪ್ರದರ್ಶಿಸಲಾಗುತ್ತದೆ. ವಿಶೇಷವಾಗಿ ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುವ ಭಾರತೀಯ ವಾಯುಸೇನೆಯ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ವಿಶೇಷ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.