
ದೈತ್ಯಾಕಾರದ ಆನೆಗಳು (elephants) ತುಂಬಾನೇ ಬುದ್ಧಿವಂತ ಪ್ರಾಣಿ. ಮನುಷ್ಯರಂತೆಯೇ ಇವುಗಳು ತಮ್ಮ ಕುಟುಂಬದೊಂದಿಗೆ ಒಟ್ಟಾಗಿ ಬದುಕುವ ಭಾವನಾತ್ಮಕ ಜೀವಿಗಳು. ಸೂಕ್ಷ್ಮ ಸ್ವಭಾವವನ್ನು ಹೊಂದಿರುವ ಆನೆಗಳನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ ಅಲ್ವಾ. ಜೊತೆಗೆ ಈ ಮುಗ್ಧ ಮನಸ್ಸಿನ ಪ್ರಾಣಿಯೆಂದರೆ ಹಲವರಿಗೆ ಸಿಕ್ಕಾಪಟ್ಟೆ ಇಷ್ಟ. ನಿಮಗೂ ಕೂಡಾ ಆನೆ ಅಂದ್ರೆ ಇಷ್ಟನಾ? ಹಾಗಿದ್ರೆ ದೈತ್ಯಾಕಾರವನ್ನು ಹೊಂದಿರುವ ಈ ಪ್ರಾಣಿಯ ಕಿವಿಗಳು ಕೂಡಾ ಏಕೆ ದೊಡ್ಡದಾಗಿರುತ್ತವೆ? (Why are elephants’ ears big) ಇದರ ಹಿಂದೆ ಏನಾದ್ರೂ ಕಾರಣವಿದೆಯೇ ಎಂಬುದರ ಕುತೂಹಲಕಾರಿ ಮಾಹಿತಿಯನ್ನು ತಿಳಿಯಿರಿ.
ಆನೆಗಳು ತಮ್ಮ ಕಿವಿಗಳನ್ನು ಅಲ್ಲಾಡಿಸುತ್ತಾ ನಿಂತಿರುವುದನ್ನು ನೀವು ನೋಡಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಆನೆಗಳಿಗೆ ಇಷ್ಟು ದೊಡ್ಡ ಕಿವಿ ಏಕೆ ಇದೆ ಎಂಬುದನ್ನು ಯೋಚಿಸಿದ್ದೀರಾ? ಸಾಮಾನ್ಯವಾಗಿ ಆನೆಗಳ ಕಿವಿಗಳು ದೊಡ್ಡದಾಗಿ ಅಗಲವಾಗಿರುತ್ತವೆ. ಅದರಲ್ಲೂ ಆಫ್ರಿಕನ್ ಆನೆಗಳ ಕಿವಿಗಳು 6.6 ಅಡಿ ಉದ್ದ ಮತ್ತು 4 ಅಡಿ ಅಗಲವಿದೆ. ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ ಆಕಾರ ಮತ್ತು ಗಾತ್ರದಲ್ಲಿ ಒಂದಷ್ಟು ಬದಲಾವಣೆಗಳಿರುತ್ತವೆ. ಆನೆಗಳ ಹೀಗೆ ಆನೆಗಳಿಗೆ ದೊಡ್ಡ ಕಿವಿ ಇರುವುದ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆಯಂತೆ. ಅದೇನೆಂದರೆ ಆನೆ ಈ ದೊಡ್ಡ ದೊಡ್ಡ ಕಿವಿಗಳ ಮೂಲಕವೇ ತನ್ನ ದೇಹದ ಉಷ್ಣತೆ ಹೆಚ್ಚಾಗಂತೆ ಕಾಪಾಡಿಕೊಳ್ಳುತ್ತವೆಯಂತೆ. ಆನೆಯು ತನ್ನ ದೈತ್ಯಾಕಾರದ ದೇಹದ ಶಾಖವನ್ನು ತನ್ನ ಕಿವಿಗಳ ಮೂಲಕ ಬಿಡುಗಡೆ ಮಾಡುತ್ತದೆ. ಶಾಖ ಮಾತ್ರವಲ್ಲ, ಆನೆಯ ಕಿವಿಗಳು ಅದರ ದೇಹದ ರಕ್ತ ಪರಿಚಲನೆಯನ್ನು ಸಹ ನಿಯಂತ್ರಿಸುತ್ತವೆ. ಆಫ್ರಿಕಾದಲ್ಲಿ ತೀವ್ರವಾದ ಶಾಖದಿಂದಾಗಿ, ಅಲ್ಲಿನ ಆನೆಗಳ ಕಿವಿಗಳು ತುಂಬಾ ದೊಡ್ಡದಾಗಿರುತ್ತವೆ. ಹೀಗೆ ಇವುಗಳ ಕಿವಿಗಳು ದೇಹದ ಉಷ್ಣತೆಯನ್ನು ನಿಯಂತ್ರಿಸಲು ನಿರ್ಣಾಯಕವಾಗಿದೆ.
ಆನೆಯ ಕಿವಿಗಳ ಪ್ರಮುಖ ಕಾರ್ಯಗಳಲ್ಲಿ ಥರ್ಮೋರ್ಗ್ಯುಲೇಷನ್ ಒಂದು . ಅವುಗಳ ಕಿವಿಗಳ ದೊಡ್ಡ ಮೇಲ್ಮೈ ವಿಸ್ತೀರ್ಣವು ದೇಹದ ಹೆಚ್ಚುವರಿ ಶಾಖವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಕಿವಿಗಳಲ್ಲಿರುವ ರಕ್ತನಾಳಗಳು ದೇಹದಿಂದ ಬೆಚ್ಚಗಿನ ರಕ್ತವನ್ನು ಒಯ್ಯುತ್ತವೆ ಮತ್ತು ಅದು ಕಿವಿಗಳ ಮೂಲಕ ಹರಿಯುವಾಗ, ಶಾಖವು ಸುತ್ತಮುತ್ತಲಿನ ತಂಪಾದ ಗಾಳಿಯಲ್ಲಿ ಹರಡುತ್ತದೆ. ಈ ಪ್ರಕ್ರಿಯೆಯು ಬಿಸಿ ವಾತಾವರಣದಲ್ಲಿ, ವಿಶೇಷವಾಗಿ ಆಫ್ರಿಕಾದಲ್ಲಿ, ತಾಪಮಾನವು ವಿಪರೀತವಾಗಿರುವ ಪ್ರದೇಶಗಳಲ್ಲಿ ಆನೆಗಳನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೀಗೆ ಕಿವಿಗಳನ್ನು ಬಡಿಯುವ ಮೂಲಕ ಅಥವಾ ಹಿಡಿದಿಟ್ಟುಕೊಳ್ಳುವ ಮೂಲಕ, ಆನೆಗಳು ಗಾಳಿಯ ಹರಿವನ್ನು ಹೆಚ್ಚಿಸುತ್ತವೆ ಮತ್ತು ತಂಪಾಗಿಸುವಿಕೆಯನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ: ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ? ಇದರ ಹಿಂದಿದೆ ವೈಜ್ಞಾನಿಕ ಕಾರಣ
ಇದಲ್ಲದೆ ಆನೆಗಳ ದೊಡ್ಡ ಕಿವಿಗಳು ಅವುಗಳಿಗೆ ಕಡಿಮೆ ಆವರ್ತನದ ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಹಾಯ ಮಾಡುತ್ತವೆ. ಅಂದ್ರೆ ಆನೆಗಳು ತಮ್ಮ ಕಿವಿಗಳ ಚಲನೆಯ ಮೂಲಕ ಶಬ್ದದ ಮೂಲವನ್ನು ನಿಖರವಾಗಿ ಗುರುತಿಸುತ್ತವೆ.. ಇದು ಅವುಗಳಿಗೆ ಮೈಲುಗಳಷ್ಟು ದೂರ ಸಂವಹನ ನಡೆಸಲು, ಚಲನೆಗಳನ್ನು ಸಂಘಟಿಸಲು ಅಥವಾ ಅಪಾಯವನ್ನು ಗಮನಿಸಲು ಸಹಾಯ ಮಾಡುತ್ತದೆ. ಅಲ್ಲದೆ ಸೂಕ್ಷ್ಮವಾದ ಕಿವಿಯು ಹವಾಮಾನ ಬದಲಾವಣೆಗಳು ಮತ್ತು ಧ್ವನಿ ತರಂಗಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಮತ್ತು ಹಿಂಡಿನೊಳಗಿನ ಸಂವಹನ ನಡೆಸುವಲ್ಲಿ ಕಿವಿಗಳು ಪ್ರಮುಖ ಪಾತ್ರ ವಹಿಸುತ್ತವೆ ಹಾಗೂ ಹಿಂಡಿನೊಳಗೆ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಆನೆಗಳ ಕಿವಿಗಳ ಮೇಲೆ ಅತ್ಯಂತ ಸೂಕ್ಷ್ಮ ಚರ್ಮವಿದ್ದು, ಇದು ಅವುಗಳ ಪರಿಸರದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ