ನೀವು ದಪ್ಪಗಾಗಿ ಕಾಣ್ಬಾರ್ದಾ? ಹಾಗಿದ್ರೆ ಈ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ
ಕೆಲವೊಂದು ಬಟ್ಟೆಗಳನ್ನು ಧರಿಸಿದಾಗ ತೀರಾ ತೆಳ್ಳಗೆ ಕಾಣುವಂತೆ, ಕೆಲವೊಂದು ಬಟ್ಟೆಗಳನ್ನು ಧರಿಸಿದಾಗ ತೀರಾ ದಪ್ಪಗಾಗಿ ಕಾಣುತ್ತೇವೆ. ನಿಮಗೂ ಕೂಡಾ ಈ ಅನುಭವ ಆಗಿರ್ಬೋದು ಅಲ್ವಾ. ಹೀಗಿರುವಾಗ ನಾವು ಧರಿಸುವ ಬಟ್ಟೆಯ ಬಣ್ಣಗಳ ಆಯ್ಕೆಯಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಹೌದು ಕೆಲವೊಂದು ಬಣ್ಣದ ಬಟ್ಟೆಗಳು ನಾವು ತೆಳ್ಳಗಿದ್ದರೂ, ದಪ್ಪಗೆ ಕಾಣುವಂತೆ ಮಾಡುತ್ತವೆ. ಹಾಗಿದ್ರೆ ಯಾವ ಬಣ್ಣದ ಬಟ್ಟೆ ನಮ್ಮನ್ನು ದಪ್ಪಗೆ ಕಾಣುವಂತೆ ಮಾಡುತ್ತದೆ ಎಂದು ತಿಳಿಯಿರಿ.

ನಮಗೆ ಹೊಂದಿಕೊಳ್ಳುವ ಬಟ್ಟೆಯನ್ನು (Dress) ಆಯ್ಕೆ ಮಾಡುವುದು ಕೂಡಾ ಒಂದು ಕಲೆ. ಅದೇ ರೀತಿ ಬಣ್ಣಗಳ ಆಯ್ಕೆಯೂ ಕೂಡಾ ತುಂಬಾನೇ ಮುಖ್ಯವಾಗಿರುತ್ತವೆ. ಈ ಬಣ್ಣಗಳು ನಮ್ಮ ಅಂದವನ್ನು ಹೆಚ್ಚಿಸುವಲ್ಲಿ ಮಾತ್ರವಲ್ಲದೆ ತೆಳ್ಳಗೆ, ದಪ್ಪಗೆ ಕಾಣುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೌದು ನಾವು ಫಿಟ್ ಆಗಿದ್ರೂ ಕೂಡಾ ಕೆಲವೊಂದು ಬಟ್ಟೆಗಳನ್ನು ಧರಿಸಿದಾಗ ತುಂಬಾ ದಪ್ಪಗೆ ಕಾಣುತ್ತೇವೆ. ಹಾಗಾಗಿ ಬಟ್ಟೆಗಳ ಬಣ್ಣದ (Dress Colors) ಆಯ್ಕೆಯಲ್ಲಿ ಜಾಗರೂಕರಾಗಿರಬೇಕು. ಹೀಗಿರುವಾಗ ದಪ್ಪಗಾಗಿ ಕಾಣಬಾರದೆಂದರೆ ಯಾವ ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಬೇಕು ಎಂಬುದನ್ನು ನೋಡಿ.
ದಪ್ಪಗಾಗಿ ಕಾಣಬಾರದೆಂದರೆ ಈ ಬಟ್ಟೆಗಳನ್ನು ಧರಿಸಬೇಡಿ:
ಬಿಳಿ ಬಣ್ಣ: ಬಿಳಿ ಬಣ್ಣವು ಸ್ವಚ್ಛ ಮತ್ತು ಶಾಂತಿಯುತವಾಗಿ ಕಾಣುವುದರಿಂದ ಜನರು ಹೆಚ್ಚಾಗಿ ಈ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಆದ್ರೆ ಈ ಬಿಳಿ ಬಣ್ಣ ನಮ್ಮನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಹೀಗಿರುವಾಗ ನಿಮ್ಮ ದೇಹಕಾರ ಉತ್ತಮವಾಗಿ ಕಾಣುವಂತೆ ಮಾಡಲು ಬಯಸಿದರೆ ಬಿಳಿ ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಿ. ಹಾಗೂ ಇದರ ಬದಲಾಗಿ ತಿಳಿ ನೀಲಿ ಅಥವಾ ತಿಳಿ ಬೂದು ಬಣ್ಣದ ಬಟ್ಟೆ ಆರಿಸಿ.
ತಿಳಿ ನೇರಳೆ ಬಣ್ಣ: ತಿಳಿ ನೇರಳೆ ಬಣ್ಣವು ಸುಂದರವಾದ ಬಣ್ಣವಾಗಿದ್ದು, ಸಾಮಾನ್ಯವಾಗಿ ಮಹಿಳೆಯರು ಈ ಬಣ್ಣವನ್ನು ಸಖತ್ ಇಷ್ಟಪಡುತ್ತಾರೆ. ಆದರೆ ವಿಚಾರ ಏನಪ್ಪಾ ಅಂದ್ರೆ ಈ ಬಣ್ಣ ಸುಂದರವಾಗಿ ಕಂಡರೂ ಇದು ನೀವು ದಪ್ಪಗಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ ಈ ಬಣ್ಣದ ಬಟ್ಟೆಯ ಬದಲು, ತಿಳಿ ಗುಲಾಬಿ ಅಥವಾ ಹಳದಿ ಬಣ್ಣವನ್ನು ಆರಿಸಿ, ಅದು ನಿಮ್ಮನ್ನು ಹೆಚ್ಚು ಫಿಟ್ ಆಗಿ ಕಾಣುವಂತೆ ಮಾಡುತ್ತದೆ.
ಮುತ್ತಿನ ಬಣ್ಣ: ಮುತ್ತಿನಂತಹ ಹೊಳೆಯುವ ಬಣ್ಣಗಳ ಬಟ್ಟೆ ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತದೆ. ಆದರೆ ಅದನ್ನು ಧರಿಸಿದಾಗ ನೀವು ತುಂಬಾನೇ ದಪ್ಪವಾಗಿ ಕಾಣುತ್ತೀರಿ. ಆದ್ದರಿಂದ ಈ ಬಣ್ಣದ ಬದಲಿಗೆ, ತಿಳಿ ನೀಲಿ ಅಥವಾ ತಿಳಿ ಹಸಿರು ಬಣ್ಣವನ್ನು ಆರಿಸಿ, ಅದು ನಿಮ್ಮನ್ನು ಹೆಚ್ಚು ಫಿಟ್ ಆಗಿ ಕಾಣುವಂತೆ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಬಣ್ಣಕ್ಕೆ ಹೊಂದಿಕೆಯಾಗುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಈ ರೀತಿಯ ಬಟ್ಟೆ ಧರಿಸುವುದು ಬೆಸ್ಟ್
ಕಂದು ಬಣ್ಣ: ನೀವು ಯಾವುದೇ ರೀತಿಯ ಉಡುಗೆ ಧರಿಸಿದರೂ, ನೀವು ಸ್ಲಿಮ್ ಆಗಿ ಕಾಣಲು ಬಯಸಿದರೆ, ನೀವು ಕಂದು ಬಣ್ಣದಿಂದ ಸಾಧ್ಯವಾದಷ್ಟು ದೂರವಿರಬೇಕು. ಕಂದು ಬಣ್ಣವನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಕೆಲವರು ಹೆಚ್ಚಾಗಿ ಕಂದು ಬಣ್ಣದ ಬಟ್ಟೆಗಳನ್ನೇ ಧರಿಸಲು ಇಷ್ಟಪಡುತ್ತಾರೆ. ಆದರೆ ಈ ಬಣ್ಣದ ಬಟ್ಟೆಗಳು ನಿಮ್ಮನ್ನು ದಪ್ಪಗಾಗಿ ಕಾಣುವಂತೆ ಮಾಡುತ್ತದೆ. ಆದ್ದರಿಂದ ಈ ಬಣ್ಣದ ಬಟ್ಟೆ ಬದಲಿಗೆ, ತಿಳಿ ಕಂದು ಅಥವಾ ತಿಳಿ ಕಪ್ಪು ಬಣ್ಣವನ್ನು ಆರಿಸಿ, ಅದು ನಿಮ್ಮನ್ನು ಹೆಚ್ಚು ಫಿಟ್ ಆಗಿ ಕಾಣುವಂತೆ ಮಾಡುತ್ತದೆ.
ಕಿತ್ತಳೆ ಬಣ್ಣ: ಕಿತ್ತಳೆ ಬಣ್ಣವು ತುಂಬಾ ಶಕ್ತಿಯುತವಾದ ಬಣ್ಣವಾಗಿದ್ದು, ಇದು ನಮಗೆ ಶಕ್ತಿ, ಸಂತೋಷ ಮತ್ತು ಆತ್ಮವಿಶ್ವಾಸದ ಭಾವನೆಗಳನ್ನು ನೀಡುತ್ತದೆ. ಆದಾಗ್ಯೂ, ಈ ಬಣ್ಣ ಬಟ್ಟೆಯ ವಿಷಯದಲ್ಲಿ,ಅನೇಕ ದೇಹಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಈ ಬಣ್ಣದ ಬಟ್ಟೆಗಳು ನಿಮ್ಮನ್ನು ದಪ್ಪವಾಗಿ ಕಾಣುವಂತೆಯೂ ಮಾಡುತ್ತದೆ. ಆದ್ದರಿಂದ ಸ್ಲಿಮ್ ಆಗಿ ಕಾಣಬೇಕೆಂದರೆ ಈ ಬಣ್ಣದ ಬಟ್ಟೆ ಧರಿಸಬೇಡಿ. ಇದರ ಬದಲು, ತಿಳಿ ಕಿತ್ತಳೆ ಅಥವಾ ತಿಳಿ ಹಳದಿ ಬಣ್ಣವನ್ನು ಆರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








