ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಯುವಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ದೇಶದ ಜನಸಂಖ್ಯೆಯ ಬಹುಪಾಲು ಯುವಕರಾಗಿದ್ದರೆ, ಆ ದೇಶದ ಅಭಿವೃದ್ಧಿಯು ಅತ್ಯಂತ ವೇಗವಾಗಿರುತ್ತದೆ. ಇಂದು ಭಾರತದ ಅಭಿವೃದ್ಧಿಗೆ ಇಲ್ಲಿನ ಯುವಕರು ಪ್ರಮುಖ ಕಾರಣ ಎಂದು ಹೇಳಬಹುದು. ಇಂದಿನ ಯುವಕರೇ ನಾಳಿನ ನಾಯಕರು. ಹಾಗಾಗಿ ಯುವಕರು ತಮ್ಮ ಸುತ್ತಮುತ್ತಲಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಜ್ಞಾನವನ್ನು ಹೊಂದಿರಬೇಕು. ಇದಲ್ಲದೇ, ಯುವಕರು ಮುಂದೆ ಸಾಗಲು ಉತ್ತಮ ಅವಕಾಶ ನೀಡಬೇಕು. ಅವರ ಅತ್ಯುತ್ತಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹಿಸಿದರೆ ದೇಶವು ಪ್ರಗತಿಯತ್ತ ಸಾಗುತ್ತದೆ. ಯುವಕರು ಮಾಡುವ ಅತ್ಯುತ್ತಮ ಕೆಲಸ, ಅವರ ಆವಿಷ್ಕಾರಗಳು ದೇಶ ವಿದೇಶವನ್ನು ತಲುಪಬೇಕು ಎಂಬ ಉದ್ದೇಶದಿಂದ ಹಾಗೂ ಸಮಾಜವನ್ನು ಸುಸ್ಥಿರ ಅಭಿವೃದ್ಧಿಯತ್ತ ಸಾಗಲು ಯುವಕರ ಪಾತ್ರ ಎಷ್ಟು ಮುಖ್ಯ ಎಂದು ಸಾರಲು ಪ್ರತಿ ವರ್ಷ ಆಗಸ್ಟ್ 12 ರಂದು ಅಂತರಾಷ್ಟ್ರೀಯ ಯುವದಿನವನ್ನು ಆಚರಿಸಲಾಗುತ್ತದೆ.
17 ಡಿಸೆಂಬರ್ 1999 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಗಸ್ಟ್ 12ರಂದು ಅಂತರಾಷ್ಟ್ರೀಯ ಯುವದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1998ರಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ನೀಡಿದ ಸಲಹೆಗಳನ್ನು ಅನುಸರಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿರ್ಧಾರದ ನಂತರ 12 ಆಗಸ್ಟ್ 2000ರಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಯುವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಯುವದಿನವನ್ನು ಆಚರಿಸುವ ಉದ್ದೇಶವು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳಲ್ಲಿ ಯುವಕರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು, ಯುವಕರಿಗೆ ‘ಅವರ ಪ್ರಾಮುಖ್ಯತೆಯನ್ನು ತಿಳಿಸುವುದು, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಯುವಕರನ್ನು ಪ್ರೋತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಆನೆ ದಿನ ಯಾವಾಗ? ಈ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಪ್ರತಿವರ್ಷ ಅಂತರಾಷ್ಟ್ರೀಯ ಯುವ ದಿನವನ್ನು ಆಚರಿಸಲು ಮೊದಲು ಥೀಮ್ ಬಿಡುಗಡೆ ಮಾಡಲಾಗುತ್ತದೆ. ಆ ವಿಷಯದ ಆಧಾರದ ಮೇಲೆ ವಿಶ್ವಸಂಸ್ಥೆಯು ಯುವಕರಿಗೆ ಭಾಗವಹಿಸಲು ಅವಕಾಶ ನೀಡುವ ಕಾರ್ಯಕ್ರಮವನ್ನು ನಡೆಸುತ್ತದೆ. ಈ ದಿನದಂದು ದೇಶ ಮತ್ತು ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಭಾಗವಹಿಸುತ್ತವೆ. ಯುವಜನರನ್ನು ಮುಖ್ಯವಾಹಿನಿಯೊಂದಿಗೆ ಹೇಗೆ ಸಂಪರ್ಕಿಸುವುದು ಮತ್ತು ಸಮಾಜ ಮತ್ತು ರಾಷ್ಟ್ರವನ್ನು ನಿರ್ಮಿಸುವಲ್ಲಿ ಅವರ ಸಕಾರಾತ್ಮಕ ಶಕ್ತಿಯನ್ನು ಬಳಸುವುದು ಹೇಗೆ ಎಂಬುದರ ಚರ್ಚೆಯನ್ನು ನಡೆಸಲಾಗುತ್ತದೆ. ಇಲ್ಲಿ ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು ಮುಖ್ಯವಾಗಿ ಚರ್ಚೆಯ ವಿಷಯವಾಗಿದ್ದು, ಕ್ರೀಡೆ, ಸಂಗೀತ, ನೃತ್ಯ, ಬರವಣಿಗೆ ಮುಂತಾದ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ಯುವಕರನ್ನು ಪ್ರೋತ್ಸಾಹಿಸಿ ಗೌರವಿಸಲಾಗುತ್ತದೆ. ಇದು ಅವರಿಗೆ ಇನ್ನೂ ಹೆಚ್ಚು ಸಾಧಿಸಲು ಹುಮ್ಮಸ್ಸು ನೀಡುತ್ತದೆ ಮತ್ತು ಅವರನ್ನು ನೋಡಿದವರು ಅವರಿಂದ ಸ್ಪೂರ್ತಿ ಪಡೆದು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾರೆ.
ಈ ವರ್ಷದ ಥೀಮ್ ಈ ಹಿಂದಿನ ವರ್ಷಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಪ್ರಸ್ತುತ ನಮ್ಮ ಪ್ರಪಂಚವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಪರಿಸರ ಸಂಬಂಧಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಪರಿಸರ ಸಂರಕ್ಷಣೆಯಲ್ಲಿ ಯುವಜನತೆ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲು ಈ ವರ್ಷದ ಥೀಮ್ ಯುವಕರಿಗಾಗಿ ಹಸಿರು ಕೌಶಲ್ಯಗಳು: ಸುಸ್ಥಿರ ಪ್ರಪಂಚದ ಕಡೆಗೆ” (Green Skill for Youth: Towards A Sustainable World)
ಈ ವರ್ಷದ ಥೀಮ್ ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಕಾರಾತ್ಮಕ ರೀತಿಯಲ್ಲಿ ತೆಗೆದುಹಾಕುವುದಲ್ಲದೆ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: