
ದೇವಕಿ ಹಾಗೂ ವಸುದೇವನಿಗೆ ಹುಟ್ಟಿದ ಎಂಟನೇ ಮಗು ಶ್ರೀಕೃಷ್ಣ. ಮಥುರೆಯ ಕಾರಾಗೃಹ ಇತ ಹುಟ್ಟಿದ ದಿನ ಶ್ರಾವಣ ಮಾಸದ ಕೃಷ್ಣಪಕ್ಷದ ಅಷ್ಟಮಿ ತಿಥಿ. ಆ ದಿನವನ್ನೇ ನಾವಿಂದು ಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಣೆ ಮಾಡುತ್ತೇವೆ. ಆದರೆ ಈ ಬಾರಿ ಒಂದು ತಿಂಗಳ ಅಂತರದಲ್ಲಿ ಎರಡು ಸಲ ಕೃಷ್ಣಜನ್ಮಾಷ್ಟಮಿ ಬಂದಿದೆ. ಇದು ಜನರಿಗೆ ಹಲವು ರೀತಿಯಲ್ಲಿ ಗೊಂದಲ ಮೂಡಿಸಿದೆ. ಹಾಗಾದರೆ ನಿಜವಾಗಿಯೂ ಕೃಷ್ಣ ಜನ್ಮಾಷ್ಟಮಿ (Krishna Janmashtami) ಯಾವಾಗ? ಯಾಕೆ ಎರಡು ಬಾರಿ ಬಂದಿದೆ? ಯಾವಾಗ ಆಚರಣೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ. ಇದಕ್ಕೆ ಪೂರಕವಾಗಿ ಆರ್ ಜೆ ಸೌಜನ್ಯ (rjsowjanya) ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು ಮನ್ನಾರ್ ಕೃಷ್ಣ ಜಯಂತಿ ಮತ್ತು ತೋಳಪ್ಪರ್ ಕೃಷ್ಣ ಜಯಂತಿಯ ವ್ಯತಾಸವನ್ನು ಮತ್ತು ಗೋಕುಲಾಷ್ಟಮಿಯ ಕುರಿತಾದ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧ ಪಟ್ಟ ಮತ್ತಷ್ಟು ಮಾಹಿತಿ ಇಲ್ಲಿದೆ.
ಶ್ರೀಕೃಷ್ಣ ಹುಟ್ಟಿದ್ದು ಮಥುರೆಯ ಕಾರಾಗೃಹದಲ್ಲಿ ಈಗ ಅದೇ ಜಾಗದಲ್ಲಿ ಕೇಶವನ ದೇವಾಲಯವಿದೆ. ಇಲ್ಲಿ ಮೊದಲ ದೇವಸ್ಥಾನದ ನಿರ್ಮಾಣ ಮಾಡಿದ್ದು ಕೃಷ್ಣನ ಮರಿಮೊಮ್ಮಗನಾದ ವಜ್ರನಾಭ. ಬಳಿಕ ಇದು ಸಾಕಷ್ಟು ದಾಳಿಗೆ ಒಳಗಾಗಿ ಈ ದೇವಸ್ಥಾನದ ಕಟ್ಟಡದ ವಿನ್ಯಾಸ ಬದಲಾಗಿದೆ. ಇನ್ನು ಶ್ರೀ ಕೃಷ್ಣನ ಬಾಲ್ಯಕ್ಕೆ ಸಾಕ್ಷಿಯಾದ ವೃಂದಾವನದಲ್ಲಿ ಈಗ ಸುಮಾರು 5 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳು ಕೃಷ್ಣ ಹಾಗೂ ರಾಧೆಗೆ ಅರ್ಪಿತವಾಗಿದೆ. ಹೀಗೆ ವಿಷ್ಣುವಿನ ಏಳನೇ ಅವತಾರವಾದ ಕೃಷ್ಣನ ಹುಟ್ಟಿದ ದಿನವನ್ನು ಆಚರಿಸುವುದೇ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ. ಕೃಷ್ಣ ಹುಟ್ಟಿದ ಮತ್ತು ಬೆಳೆದಂತಹ ಸ್ಥಳಗಳಲ್ಲಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಕೃಷ್ಣ ಹುಟ್ಟಿದ ದಿನ ಅಷ್ಟಮಿ ತಿಥಿ ರೋಹಿಣಿ ನಕ್ಷತ್ರ, ಹಾಗಾಗಿ ಈ ತಿಥಿ ಮತ್ತು ನಕ್ಷತ್ರ ಎರಡು ವಿಶೇಷವಾಗಿದೆ. ಆದರೆ ಈ ಎರಡು ಒಂದೇ ದಿನ ಬರುವುದು ಬಹಳ ಅಪರೂಪ. ಹೀಗೆ ಬಂದ ದಿನ ಬಹಳ ವಿಶೇಷ. ಕೆಲವರು ಅಷ್ಟಮಿ ತಿಥಿಯನ್ನು ಆಚರಣೆ ಮಾಡಿದ್ರೆ ಇನ್ನು ಕೆಲವರು ರೋಹಿಣಿ ನಕ್ಷತ್ರದ ಅನುಸಾರ ಕೃಷ್ಣ ಜಯಂತಿಯನ್ನು ಆಚರಣೆ ಮಾಡುತ್ತಾರೆ. ಈ ಎರಡು ಆಚರಣೆಗೆ ಪ್ರತ್ಯೇಕ ಹೆಸರು ಕೂಡ ಇದೆ. ಮನ್ನಾರ್ ಕೃಷ್ಣ ಜಯಂತಿಯನ್ನು ಆಚರಣೆ ಮಾಡುವವರು ಅಷ್ಟಮಿ ತಿಥಿಗೆ ಪ್ರಾಧಾನ್ಯತೆ ನೀಡುತ್ತಾರೆ. ಇನ್ನು ತೋಳಪ್ಪರ್ ಕೃಷ್ಣ ಜಯಂತಿ ರೋಹಿಣಿ ನಕ್ಷತ್ರಕ್ಕೆ ಪ್ರಾಧಾನ್ಯತೆ ಕೊಡಲಾಗುತ್ತದೆ. ಮನ್ನಾರ್ ಕೃಷ್ಣ ಜಯಂತಿಯನ್ನು ಆ. 16 ರಂದು ಆಚರಣೆ ಮಾಡಿದರೆ, ತೋಳಪ್ಪರ್ ಕೃಷ್ಣ ಜಯಂತಿಯನ್ನು ಸೆ. 15ರಂದು ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿಯೇ ಅತೀ ವಿಜೃಂಭಣೆಯಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತದೆ ಅದರಲ್ಲಿಯೂ ಉಡುಪಿ ಕೃಷ್ಣಮಠದಲ್ಲಿ ಈ ಆಚರಣೆ ಬಲು ವಿಶೇಷ. ಈ ಬಾರಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೌರಮಾನ ಪದ್ದತಿ ಪ್ರಕಾರ ಸೆ. 14 ಕ್ಕೆ ಕೃಷ್ಣ ಜನ್ಮಾಷ್ಟಮಿಯನ್ನು ಮತ್ತು ಸೆ. 15 ಕ್ಕೆ ವಿಟ್ಲಪಿಂಡಿಯನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: Krishna Janmashtami 2025: ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಡಕೆ ಹೊಡೆಯುವುದು ಯಾಕೆ? ಇದೇ ನೋಡಿ ಕಾರಣ
ಭವಿಷ್ಯೋತ್ತರ ಪುರಾಣದಲ್ಲಿ ಕೃಷ್ಣ ದೇವರೇ ಹೇಳಿದ ಮಾತು ಸೂರ್ಯ ಸಿಂಹ ಮಾಸದಲ್ಲಿ ಅವತರಿಸಿದ್ದು. ಅಷ್ಟಮಿ ತಿಥಿ ರಾತ್ರಿ ರೋಹಿಣಿ ನಕ್ಷತ್ರ ಬರುವುದು ಸಿಂಹ ಮಾಸದಲ್ಲಿ ಅಂದ್ರೆ ತುಳುವಿನ ಸೋಣ ತಿಂಗಳಲ್ಲಿ. ಹಾಗಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸೌರಮಾನ ಪದ್ದತಿ ಪ್ರಕಾರ ಸೆ.14 ಕ್ಕೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ