
ಪ್ರತಿಯೊಂದು ದೇಶವೂ ಒಂದಲ್ಲಾ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ಈ ವಿಶಿಷ್ಟತೆಯ ಕಾರಣದಿಂದಲೇ ಕೆಲವೊಂದಿಷ್ಟು ದೇಶಗಳನ್ನು ವಿಶಿಷ್ಟ ಅಡ್ಡ ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ ನಮ್ಮ ಭಾರತವನ್ನು ವೈವಿಧ್ಯತೆಯ ದೇಶ, ವಿವಿಧತೆಯಲ್ಲಿ ಏಕತೆಯ ದೇಶ ಎಂದು ಕರೆದರೆ ಫಿನ್‌ಲ್ಯಾಂಡ್ ದೇಶವನ್ನು ಸಂತೋಷದ ದೇಶ, ಜಪಾನ್ ದೇಶವನ್ನು ಸೂರ್ಯ ಉದಯಿಸುವ ನಾಡು ಎಂದು ಕರೆಯಲಾಗುತ್ತದೆ. ಅದೇ ರೀತಿ ಪ್ರವಾಸಿಗರ ನೆಚ್ಚಿನ ದೇಶವಾದ ಥೈಲ್ಯಾಂಡನ್ನು (Thailand) ನಗುವಿನ ನಾಡು ಎಂದು ಕರೆಯಲಾಗುತ್ತದೆ. ಈ ದೇಶವನ್ನು ಲ್ಯಾಂಡ್ ಆಫ್ ಸ್ಮೈಲ್ಸ್ ಎಂದು ಕರೆಯೋದೇಕೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಥೈಲ್ಯಾಂಡ್ ದೇಶದ ಜನ ಯಾವಾಗಲೂ ಯಾವಾಗಲೂ ನಗು ನಗುತ್ತಲೇ ಇರುತ್ತಾರೆ. ಥೈಲ್ಯಾಂಡ್‌ನಲ್ಲಿ, ನಗು ಕೇವಲ ಸಂತೋಷದ ಸಂಕೇತವಲ್ಲ, ಅದು ಗೌರವ, ಸಭ್ಯತೆ, ತಾಳ್ಮೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಮತ್ತು ವಾತ್ಸಲ್ಯವನ್ನು ತೋರಿಸುವ ಒಂದು ಮಾರ್ಗವೂ ಆಗಿದೆ. ನಗುವುದು ಸಂತೋಷದ ವಾತಾವರಣವನ್ನು ಸೃಷ್ಟಿಸುವುದು ಮಾತ್ರವಲ್ಲದೆ ಮತ್ತು ಉತ್ತಮ ಸಂಬಂಧಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಥೈಲ್ಯಾಂಡ್ ಜನರು ನಂಬುತ್ತಾರೆ. ಅದರಲ್ಲೂ ಪ್ರವಾಸಿಗರನ್ನು ನಗು ಮೊಗದಿಂದ ಸ್ವಾಗತಿಸುತ್ತಾರೆ ಮತ್ತು ದಯೆಯಿಂದ ವರ್ತಿಸುತ್ತಾರೆ, ಉತ್ತಮ ಆತಿಥ್ಯವನ್ನೂ ನೀಡುತ್ತಾರೆ. ಈ ಕಾರಣಕ್ಕಾಗಿಯೇ ಥೈಲ್ಯಾಂಡನ್ನು ನಗುವಿನ ದೇಶ ಎಂದು ಕರೆಯುವುದು.
ಬೌದ್ಧ ಬೋಧನೆಗಳಿಂದ ಮಾರ್ಗದರ್ಶಿಸಲ್ಪಟ್ಟ ಇಲ್ಲಿನ ಜನರು ಶಾಂತವಾಗಿರುವುದು, ಸಂಘರ್ಷ, ಜಗಳಗಳನ್ನು ತಪ್ಪಿಸುವುದು ಮತ್ತು ದಯೆಯನ್ನು ಹರಡುವುದರಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಜೊತೆಗೆ ಕಠಿಣ ಸಂದರ್ಭಗಳಲ್ಲಿಯೂ ಸಹ, ಸೌಮ್ಯವಾದ ನಗುವಿನಿಂದ ಪ್ರತಿಕ್ರಿಯಿಸುವುದು ಒಂದು ಸುಂದರವಾದ ಮಾರ್ಗವೆಂದು ಅವರು ಪರಿಗಣಿಸುತ್ತಾರೆ. ಇವರು ಶಾಂತಿಯಿಂದ ಬದುಕುವುದು ಮತ್ತು ಇತರರ ಬಗ್ಗೆ ಸಹಾನುಭೂತಿ ತೋರಿಸುವುದು ಮುಂತಾದ ಬೌದ್ಧ ತತ್ವಗಳನ್ನು ಅನುಸರಿಸುತ್ತಾರೆ. ಇಲ್ಲಿನ ಜನ ಎಲ್ಲರೊಂದಿಗೂ ನಗು ಮೊಗದೊಂದಿಗೆಯೇ ಸಂವಹನ ನಡೆಸುತ್ತಾರೆ.
ಇದನ್ನೂ ಓದಿ: ಹೆಚ್ಚಿನ ಡೆನಿಮ್ ಜೀನ್ಸ್‌ಗಳಲ್ಲಿ ಹಳದಿ ದಾರದ ಸ್ಟಿಚಿಂಗ್ ಏಕೆ ಇರುತ್ತವೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:34 pm, Tue, 4 November 25