
ಕಲೆಗಳು (Art) ನಮ್ಮ ಸಂಸ್ಕೃತಿಯ ಜೀವಂತಿಕೆಯಾಗಿದ್ದು, ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ಕಲೆಗಳು ಜನಜೀವನದೊಂದಿಗೆ ಬೆರೆತು ಹೋಗಿವೆ. ಅಲ್ಲದೆ ಕಲೆಗಳು ಮಾನವನ ಭಾವನೆ, ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಪ್ರಮುಖ ಮಾಧ್ಯಮವೂ ಹೌದು. ಈ ಜಗತ್ತಿನಾದ್ಯಂತ ಅನೇಕಾರು ಕಲಾ ಪ್ರಕಾರಗಳಿವೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳು ಕ್ಷೀಣಿಸುತ್ತಾ ಬರುತ್ತಿದೆ. ಹಾಗಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಕಲೆಯ ಮಹತ್ವವನ್ನು ಉತ್ತೇಜಿಸಲು, ಕಲೆ ಹಾಗೂ ಕಲಾವಿದರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಏಪ್ರಿಲ್ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನ್ು ತಿಳೀಯೋಣ ಬನ್ನಿ.
ಅಂತರಾಷ್ಟ್ರೀಯ ಕಲಾ ಸಂಘದ ಸಾಮಾನ್ಯ ಸಭೆಯಲ್ಲಿ ವಿಶ್ವ ಕಲಾ ದಿನವನ್ನು ಆಚರಿಸುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು. ಮೊದಲ ಬಾರಿಗೆ 2012 ರಲ್ಲಿ ವಿಶ್ವ ಕಲಾದಿನವನ್ನು ಆಚರಿಸಲಾಯಿತು. ವಿವಿಧ ಕಲಾ ವರ್ಗಗಳಿಂದ ಸುಮಾರು 150 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ವಿಭಾಗಗಳ ಕಲೆಗಾರರ ಭಾವನೆಗಳಿಗೆ ಗೌರವ ಸಲ್ಲಿಸಲಾಯಿತು ಮತ್ತು ಅವರ ಕೆಲಸಕ್ಕೆ ಪ್ರೋತ್ಸಾಹ ನೀಡಲಾಯಿತು.
ಮಹಾನ್ ಇಟಾಲಿಯನ್ ವರ್ಣಚಿತ್ರಕಾರ ಲಿಯೊನಾರ್ಡೊ ಡಾ ವಿನ್ಸಿ ಅವರ ಜನ್ಮ ದಿನದ ಸವಿ ನೆನಪಿಗಾಗಿ ಏಪ್ರಿಲ್ 15 ರಂದು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತದೆ. ಲಿಯೊನಾರ್ಡೊ ಡಾ ವಿನ್ಸಿ ಒಬ್ಬ ಪ್ರಸಿದ್ಧ ಇಟಾಲಿಯನ್ ವರ್ಣಚಿತ್ರಕಾರ, ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ನುರಿತ ಮೆಕ್ಯಾನಿಕ್, ಎಂಜಿನಿಯರ್ ಮತ್ತು ವಿಜ್ಞಾನಿಯಾಗಿದ್ದರು. ಅವರು ತಮ್ಮ ಕಲೆಯಲ್ಲಿನ ಪ್ರಾವೀಣ್ಯತೆಯಿಂದಲೇ ಪ್ರಪಂಚದಾದ್ಯಂತ ಖ್ಯಾತಿಯನ್ನು ಪಡೆದವರು. ಇಂತಹ ಮಹಾನ್ ಕಲಾವಿದನ ಜನ್ಮ ದಿನದ ಸವಿ ನೆನಪಿಗಾಗಿ 2012 ರಲ್ಲಿ ವಿಶ್ವ ಕಲಾ ದಿನವನ್ನು ಆಚರಣೆಯನ್ನು ಪ್ರಾರಂಭಿಸಲಾಯಿತು. ವಿಶ್ವ ಕಲಾ ದಿನದ ಅಧಿಕೃತ ಆಚರಣೆಯನ್ನು 2015 ರಲ್ಲಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಸಲಾಯಿತು. ನಂತರ 2019 ರಲ್ಲಿ ಯುನೆಸ್ಕೋ ಅಧಿಕೃತವಾಗಿ ವಿಶ್ವ ಕಲಾದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ಏಪ್ರಿಲ್ 15 ರಂದು ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವುದೇಕೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ