National Safe Motherhood Day 2026: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುವುದೇಕೆ ಗೊತ್ತಾ?
ನವಜಾತ ಶಿಶುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡುವಂತೆ ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಮಹಿಳೆಯರಿಗೆ ಅಗತ್ಯ ಆರೈಕೆ ಮಾಡಬೇಕು, ತಾಯಂದಿರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು, ಅವರಿಗೆ ಅಗತ್ಯ ಮಾನಸಿಕ ಬೆಂಬವನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಏಪ್ರಿಲ್ 11 ರಂದು ರಾಷ್ಟ್ರೀಯ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ತಾಯ್ತನ (Motherhood) ಎನ್ನುವಂತಹದ್ದು ಸುಂದರ ಅನುಭೂತಿಯಾಗಿದ್ದು, ಎಲ್ಲಾ ಹೆಣ್ಣಿಗೂ ತಾನು ಸಹ ಗರ್ಭಿಣಿಯಾಗಬೇಕು, ಮಗುವನ್ನು ಪಡೆಯಬೇಕು, ಮಗುವನ್ನು ಚೆನ್ನಾಗಿ ಆರೈಕೆ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಮಗವನ್ನು ಹೆತ್ತರೂ ಸಹ ತಮ್ಮನ್ನು ತಾವು ಹೇಗೆ ಆರೈಕೆ ಮಾಡಬೇಕು ಎನ್ನುವ ಕೊರತೆ ಕೆಲವು ಮಹಿಳೆಯರಿಗೆ ಇರುತ್ತದೆ. ಅಲ್ಲದೆ ಕೆಲವು ಮನೆಗಳಲ್ಲಿ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಗರ್ಭಿಣಿಯಾಗಿರುವಾಗ ಹಾಗೂ ಪ್ರಸವದ ಬಳಿಕ ಎಲ್ಲಾ ತಾಯಂದಿರಲ್ಲಿ ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ತಾಯಂದಿರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯಗತ್ಯ. ಆದರೆ ಈ ಆರೈಕೆಯ ಕೊರತೆಯಿಂದಾಗಿ ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ಆರೋಗ್ಯ ಸಮಸ್ಯೆಗಳಿಂದ ಮಹಿಳೆಯರು ಮರಣ ಹೊಂದುತ್ತಿದ್ದಾರೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ, ಹೆರಿಗೆಯ ಸಮಯದಲ್ಲಿ ಮತ್ತು ಪ್ರಸವದ ನಂತರದ ತಾಯಂದಿರಿಗೆ ನೀಡಬೇಕಾದ ಅಗತ್ಯ ಆರೈಕೆಯ ಬಗ್ಗೆ ಅರಿವು ಮೂಡಿಸಲು ಹಾಗೂ ತಾಯಿ ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದ ಇತಿಹಾಸವೇನು?
ರಾಷ್ಟ್ರೀಯ ಮಾತೃತ್ವ ದಿನದ ಆಚರಣೆ ‘ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾದ’ ಪ್ರಯತ್ನದ ಫಲವಾಗಿದೆ. ಭಾರತ ಸರ್ಕಾರವು ವೈಟ್ ರಿಬ್ಬನ್ ಅಲೈಯನ್ಸ್ ಇಂಡಿಯಾದ ಪ್ರಸ್ತಾವನೆಯ ಮೇರೆಗೆ 2003 ರಲ್ಲಿ ಏಪ್ರಿಲ್ 11 ರಂದು ರಾಷ್ಟ್ರೀಯ ಸುರಕ್ಷಿತ ಮಾತೃತ್ವದ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಏಪ್ರಿಲ್ 13 ಮಹಾತ್ಮ ಗಾಂಧೀಜಿಯ ಪತ್ನಿ ಕಸ್ತೂರ್‌ಬಾ ಗಾಂಧಿಯವರ ಜನ್ಮ ದಿನವಾಗಿರುವುದರಿಂದ, ಅವರ ಜನ್ಮ ದಿನದ ಸ್ಮರಣಾರ್ಥವಾಗಿ ಇದೇ ದಿನವನ್ನು ಆಯ್ಕೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಗರ್ಭಧಾರಣೆ, ಹೆರಿಗೆ ಮತ್ತು ಹೆರಿಗೆಯ ನಂತರದ ತಾಯಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ಏಪ್ರಿಲ್ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನದ ಮಹತ್ವವೇನು?
- ರಾಷ್ಟ್ರೀಯ ಸುರಕ್ಷಿತ ತಾಯ್ತನ ದಿನವು ಭಾರತದಲ್ಲಿ ಗರ್ಭಿಣಿ ಮಹಿಳೆಯರು, ತಾಯಂದಿರು ಎದುರಿಸುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ.
- ನವಜಾತ ಶಿಶುವಿನೊಂದಿದೆ ತಾಯಂದಿರ ಆರೋಗ್ಯವನ್ನು ಉತ್ತೇಜಿಸುವ, ಗರ್ಭಿಣಿಯರಿಗೆ ಸಕಾಲಿಕ ಆರೋಗ್ಯ ಸೇವೆಗಳನ್ನು ಒದಗಿಸುವ, ಅವರ ಕುಟುಂಬಗಳಿಗೆ ಸುರಕ್ಷಿತ ಗರ್ಭಧಾರಣೆಯ ಬಗ್ಗೆ ಶಿಕ್ಷಣ ನೀಡುವ ಹಾಗೂ ಭಾರತದಲ್ಲಿ ತಾಯಂದಿರು ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಮುಖ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
- ಮಹಿಳೆಯರಿಗೆ ತಮ್ಮ ಮಾತೃತ್ವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ತಾಯಂದಿರಿಗಾಗಿ ಇರುವ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು ಈ ದಿನದ ಉದ್ದೇಶವಾಗಿದೆ.
- ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವು ತಾಯಿಯ ಆರೋಗ್ಯವನ್ನು ಉತ್ತೇಜಿಸುವ, ತಾಯಿ ಹಾಗೂ ನವಜಾತ ಶಿಶುವಿನ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಭಾರತದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಮುಖ ಆಚರಣೆಯಾಗಿದೆ.
- ಈ ದಿನ ತಾಯಿಯ ಆರೋಗ್ಯದ ಬಗ್ಗೆ ಮಹಿಳೆಯರಿಗೆ ಶಿಕ್ಷಣ ನೀಡಲು ವಿವಿಧ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




