World Cotton Day 2024: ಬಾಹ್ಯಾಕಾಶದಲ್ಲೂ ಹತ್ತಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದ ಚೀನಾ, ಇಲ್ಲಿದೆ ಮಾಹಿತಿ

ಹತ್ತಿ ಕೃಷಿಯನ್ನೇ ಬದುಕಿನಾಧಾರವಾಗಿ ಇಟ್ಟುಕೊಂಡವರು ಅಧಿಕ ಜನರಿದ್ದಾರೆ. ಹತ್ತಿ ಉತ್ಪಾದನೆಯನ್ನು ಉತ್ತೇಜಿಸುವುದರೊಂದಿಗೆ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವುದು. ಅದಲ್ಲದೇ, ಹತ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 7 ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ಆಚರಣೆಯೂ ಹುಟ್ಟಿಕೊಂಡದ್ದು ಹೇಗೆ? ಮಹತ್ವವೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Cotton Day 2024: ಬಾಹ್ಯಾಕಾಶದಲ್ಲೂ ಹತ್ತಿ ಬೆಳೆಯುವ ಸಾಹಸಕ್ಕೆ ಕೈ ಹಾಕಿದ್ದ ಚೀನಾ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 07, 2024 | 9:52 AM

ಹತ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗುವ ಸಸ್ಯವಾಗಿದ್ದು, ವೈದ್ಯಕೀಯ ಕ್ಷೇತ್ರ, ಪಶು ಆಹಾರಗಳು, ಖಾದ್ಯ ತೈಲ ಮತ್ತು ಜವಳಿ ಉದ್ಯಮಗಳಲ್ಲಿ ಹೀಗೆ ಇದರ ಬಳಕೆಯೂ ವ್ಯಾಪಕವಾಗಿದೆ. ಈ ಹತ್ತಿಯಿಂದ ತಯಾರಾದ ಯಾವುದೇ ಬಟ್ಟೆಗಳನ್ನು ಧರಿಸಿದರೂ ಹಿತಕರವಾದ ಭಾವವನ್ನು ಉಂಟು ಮಾಡುತ್ತದೆ. ಹತ್ತಿಯನ್ನು ಭಾರತ ಸೇರಿದಂತೆ ಉಷ್ಣವಲಯದ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ವಿಶ್ವದಲ್ಲಿ ಸರಿಸುಮಾರು 75 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 28.67 ಮಿಲಿಯನ್ ನಷ್ಟು ರೈತರು ಹತ್ತಿಯನ್ನೇ ಬೆಳೆಯುತ್ತಾರೆ. ಇದರಿಂದ ಅದೆಷ್ಟೋ ಬಡ ಕುಟುಂಬಗಳು ಇದರಿಂದ ಜೀವನ ನಡೆಸುತ್ತಿದೆ. ಹತ್ತಿ ಬೆಳೆಯನ್ನು ಉತ್ತೇಜಿಸುವ ಸಲುವಾಗಿ ಅಕ್ಟೋಬರ್ 7 ರಂದು ವಿಶ್ವ ಹತ್ತಿ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಹತ್ತಿ ದಿನದ ಇತಿಹಾಸ

ಬೆನಿನ್, ಬುರ್ಕಿನಾ, ಫಾಸೊ, ಚಾಡ್ ಮತ್ತು ಮಾಲಿ ಈ ನಾಲ್ಕು ದೇಶಗಳು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಗೆ ಸಲ್ಲಿಸಿದ ಪ್ರಸ್ತಾವನೆಯ ಮೇರೆಗೆ ವಿಶ್ವ ವ್ಯಾಪರ ಸಂಸ್ಥೆ ಸಚಿವಾಲಯವು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ , ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ , ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯ ಕಾರ್ಯದರ್ಶಿಗಳ ಸಹಯೋಗದೊಂದಿಗೆ ವಿಶ್ವ ಹತ್ತಿ ದಿನದ ಆಚರಣೆಯೊಂದು ಆರಂಭವಾಯಿತು. ಹೀಗಾಗಿ ಹತ್ತಿ ದಿನವನ್ನು ಮೊದಲ ಬಾರಿಗೆ ಅಕ್ಟೋಬರ್ 07, 2019 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಹತ್ತಿಬೆಳೆಯನ್ನು ಉತ್ತೇಜಿಸುವ ಹಾಗೂ ಹತ್ತಿ ಬೆಳೆಗಾರರಿಗೆ ಪ್ರೋತ್ಸಾಹಿಸುವ ಸದುದ್ದೇಶದಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಹತ್ತಿ ದಿನದ ಪ್ರಾಮುಖ್ಯತೆ ಹಾಗೂ ಆಚರಣೆ ಹೇಗೆ?

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹತ್ತಿ ಬೆಳೆಯನ್ನೇ ಅವಲಂಬಿಸಿಕೊಂಡಿದ್ದು, ಭಾರಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಆದರೆ ಇಂದು ಹವಾಮಾನ ಬದಲಾವಣೆ ಮತ್ತು ಇತರ ಸಮಸ್ಯೆಗಳಿಂದ ಅದರ ಉತ್ಪಾದನೆ ಕಡಿಮೆಯಾಗುತ್ತಿದೆ. ಹಲವಾರು ಸವಾಲುಗಳನ್ನು ಕೃಷಿಕರು ಎದುರಿಸುತ್ತಿದ್ದೂ, ಈ ನಿಟ್ಟಿನಲ್ಲಿ ಹತ್ತಿ ಉತ್ಪಾದನೆಗೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ತೋರಿಸಲು, ಹೊಸ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು, ಹಾಗೂ ಹತ್ತಿ ಬೆಳೆಯನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಹತ್ತಿ ಬೆಳೆಗಾರರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕಾರ್ಯಾಗಾರ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಹತ್ತಿಯ ಬಗೆಗಿನ ಆಸಕ್ತಿದಾಯಕ ವಿಷಯಗಳಿವು

  • ಪ್ರಪಂಚದಾದಂತ್ಯ ಬೆಳೆಯುವ ಈ ಹತ್ತಿಯ ನಾಲ್ಕನೇ ಮೂರು ಭಾಗದಷ್ಟು ಬಟ್ಟೆಯನ್ನು ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ. ಲೆವಿಯಂತಹ ಪ್ರಸಿದ್ಧ ಬ್ರಾಂಡ್‌ಗಳನ್ನು ತಯಾರಿಸಲು ಹತ್ತಿಯನ್ನು ಬಳಸಲಾಗುತ್ತದೆ. ಅದಲ್ಲದೇ, ಡೆನಿಮ್ ಬಟ್ಟೆಯನ್ನು ಪ್ರಾಥಮಿಕವಾಗಿ ಹತ್ತಿ ಮತ್ತು ರೇಷ್ಮೆ ಮಾಡಲಾಗಿದೆ.
  • ಹತ್ತಿ ಸಸ್ಯದಲ್ಲಿ ಯಾವುದೇ ತ್ಯಾಜ್ಯವಿಲ್ಲ. ಹತ್ತಿ ಕೃಷಿಯ ಮುಖ್ಯ ಉದ್ದೇಶವೆಂದರೆ ನಾರು. ಹತ್ತಿ ಬೀಜದಿಂದ ಎಣ್ಣೆ ಕೂಡ ತೆಗೆಯಲಾಗುತ್ತದೆ. ಕೊಯ್ದು ಮಾಡಿದ ನಂತರ, ಸಸ್ಯದ ಕಾಂಡಗಳನ್ನು ಮತ್ತೆ ನೆಲಕ್ಕೆ ಉಳುಮೆ ಮಾಡಿ ಮಣ್ಣಿನ ಫಲವತ್ತತೆ ಹೆಚ್ಚಿಸಲಾಗುತ್ತದೆ.
  • ಭೂಮಿಯ ಮೇಲೆ ಮಾತ್ರವಲ್ಲ, ಬಾಹ್ಯಾಕಾಶದಲ್ಲಿಯೂ ಹತ್ತಿ ಬೆಳೆಯಯುವ ಸಾಹಸಕ್ಕೆ ಚೀನ ಕೈ ಹಾಕಿತ್ತು. ಚೀನೀ ಬಾಹ್ಯಾಕಾಶ ನೌಕೆ ಚಾಂಗ್’ಇ 4 ಮೂಲಕ ಹತ್ತಿ ಬೀಜಗಳನ್ನು ಚಂದ್ರನ ದೂರದ ಭಾಗಕ್ಕೆ ಕಳುಹಿಸಲಾಗಿತ್ತು. 2019 ರಲ್ಲಿ ಚಂದ್ರನ ವಾನ್ ಆಕಾಶನೌಕೆಯೊಳಗೆ ಹತ್ತಿ ಬೀಜಗಳು ಕಾರ್ಮನ್ ಕ್ರೇಟರ್‌ನಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸಿದವು. ಆದರೆ ಆ ಸಸ್ಯಗಳು ಶೀಘ್ರದಲ್ಲೇ ಚಂದ್ರನ ಶೀತ ತಾಪಮಾನಕ್ಕೆ ನಾಶವಾದವು ಎನ್ನಲಾಗಿದೆ.
  • ಹತ್ತಿಯಿಂದ ನೋಟುಗಳನ್ನು ತಯಾರಿಸಲಾಗುತ್ತದೆ. ನೋಟುಗಳು ಕಾಗದದಿಂದ ಇದ್ದರೆ, ಒದ್ದೆಯಾದರೆ ಮತ್ತೆ ಬಳಸಲಾಗುವುದಿಲ್ಲ. ಹೀಗಾಗಿ ಯುನೈಟೆಡ್ ಸ್ಟೇಟ್ಸ್, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ನೋಟುಗಳನ್ನು ತಯಾರಿಸಲು ಶೇಕಡಾ 75 ರಷ್ಟು ಹತ್ತಿ ಮತ್ತು ಶೇಕಡಾ 25 ರಷ್ಟು ಲಿನಿನ್ ಮಿಶ್ರಣವನ್ನು ಬಳಸುತ್ತವೆ. ಹತ್ತಿಯ ಜೊತೆಯಲ್ಲಿ, ಗ್ಯಾಟ್ಲಿನ್ ಹಾಗೂ ಅಡೆಸಿವ್ಸ್ ಹೆಸರಿನ ದ್ರಾವಣಗಳನ್ನು ನೋಟುಗಳನ್ನು ತಯಾರಿಸುವಾಗ ಬಳಸುವುದೇ ಹೆಚ್ಚು ಬಾಳಿಕೆ ಬರುವುದಕ್ಕೆ ಮುಖ್ಯ ಕಾರಣವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ