World Environment Day 2026: ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ಸುಸ್ಥಿರ ಭವಿಷ್ಯದ ದೃಷ್ಟಿಯಿಂದ, ಪರಿಸರವನ್ನು ಉಳಿಸಬೇಕು ಗಿಡ-ಮರಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಹಾಗೂ ಭೂಮಿಯನ್ನು ರಕ್ಷಿಸಲು ಜನರನ್ನು ಪ್ರೇರೇಪಿಸಲು ಈ ಜಾಗೃತಿ ಅಭಿಯಾನ ದಿನವನ್ನು ಆಚರಿಸಲಾಗುತ್ತದೆ. ಪ್ರಕೃತಿ ಮಾತೆಯ ರಕ್ಷಣೆಗಾಗಿ ಮೀಸಲಿರುವ ಈ ದಿನವನ್ನು ಜೂನ್‌ 5 ರಂದೇ ಏಕೆ ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

World Environment Day 2026: ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ
ವಿಶ್ವ ಪರಿಸರ ದಿನ
Image Credit source: Pinterest

Updated on: Jun 05, 2026 | 9:24 AM

ಪರಿಸರವು (Environment) ಸಕಲ ಜೀವ ಸಂಕುಲಗಳ ಬದುಕಿನ ಅಡಿಪಾಯ. ಪ್ರಸ್ತುತ, ಈ ಪರಿಸರವೇ ಅನೇಕ ಗಂಭೀರ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ಹವಾಮಾನ ಬದಲಾವಣೆ, ಕೈಗಾರಿಕೀಕರಣ, ಇಂಧನಗಳ ಅತಿಯಾದ ಬಳಕೆ ಮತ್ತು ಅರಣ್ಯನಾಶವು ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಪರಿಣಾಮವಾಗಿ, ಜಾಗತಿಕ ತಾಪಮಾನವು ಏರುತ್ತಿದೆ. ಹವಾಮಾನ ಬದಲಾವಣೆಯು ಪ್ರಪಂಚದ ಅನೇಕ ಭಾಗಗಳಲ್ಲಿ ಪ್ರವಾಹಗಳು, ಬರಗಳು, ಚಂಡಮಾರುತಗಳು, ಕಾಡ್ಗಿಚ್ಚು, ತೀವ್ರವಾದ ಶಾಖ ಸೇರಿದಂತೆ ಪ್ರಕೃತಿ ವಿಕೋಪಗಳಿಗೆ ಕಾರಣವಾಗುತ್ತಿದೆ.  ನಗರೀಕರ, ಅಭಿವೃದ್ಧಿ, ಅರಣ್ಯನಾಶ, ಪ್ಲಾಸ್ಟಿಕ್‌ನ ಅತಿಯಾದ ಬಳಕೆ ಒಟ್ಟಾರೆಯಾಗಿ ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಹಾಗಾಗಿ ಪರಿಸರವನ್ನು ಉಳಿಸಬೇಕು ಗಿಡ-ಮರಗಳನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ 05 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪರಿಸರ ದಿನದ ಇತಿಹಾಸವೇನು?

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ. ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು  1972 ರಲ್ಲಿ ಪ್ರಾರಂಭಿಸಿತು. 1972 ರಲ್ಲಿ, ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರದ ಕುರಿತಾದ ಸ್ಟಾಕ್‌ಹೋಮ್ ಸಮ್ಮೇಳನವನ್ನು ಆಯೋಜಿಸಲಾಯಿತು. ಈ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 5 ಅನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ಘೋಷಿಸಿತು. ಈ ದಿನವನ್ನು ಮೊದಲ ಬಾರಿಗೆ 1973 ರಲ್ಲಿ ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಜೂನ್‌ 05 ರಂದೇ ಏಕೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ?

1972 ರಲ್ಲಿ ಈ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸ್ಟಾಕ್‌ಹೋಮ್ ಸಮ್ಮೇಳನ ಎಂದು ಕರೆಯಲ್ಪಡುವ ಪರಿಸರ ಸಂರಕ್ಷಣೆಯ ಕುರಿತಾದ ಮೊದಲ ಜಾಗತಿಕ ಶೃಂಗಸಭೆಯನ್ನು ಆಯೋಜಿಸಿದ್ದರಿಂದ ಜೂನ್ 5 ರಂದು ವಿಶ್ವ ಪರಿಸರ ದಿನವೆಂದು ಆಯ್ಕೆ ಮಾಡಲಾಯಿತು. ಅನೇಕ ದೇಶಗಳು ಈ ಸಮ್ಮೇಳನದಲ್ಲಿ ಭಾಗವಹಿಸಿ ಪರಿಸರ ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಿದವು. ಇದರ ನಂತರ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಅನ್ನು ಸ್ಥಾಪಿಸಲಾಯಿತು ಮತ್ತು ಜೂನ್ 5 ಅನ್ನು ವಿಶ್ವ ಪರಿಸರ ದಿನವೆಂದು ಘೋಷಿಸಲಾಯಿತು.

ಇದನ್ನೂ ಓದಿ: ಸೈಕಲ್‌ ಸವಾರಿ ಪರಿಸರ, ನಮ್ಮ ಆರೋಗ್ಯ ಎರಡಕ್ಕೂ ಒಳ್ಳೆಯದು

ವಿಶ್ವ ಪರಿಸರ ದಿನದ ಮಹತ್ವವೇನು?

  • ಹೆಚ್ಚುತ್ತಿರುವ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ, ಅರಣ್ಯನಾಶ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿರುವುದರಿಂದ ಪರಿಸರವನ್ನು ರಕ್ಷಿಸುವುದು ಎಷ್ಟು ಮುಖ್ಯವೆಂದು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
  • ಹವಾಮಾನ ಬದಲಾವಣೆ, ಮಾಲಿನ್ಯ, ಜೀವವೈವಿಧ್ಯತೆಯ ನಷ್ಟ ಮತ್ತು ಅನೇಕ ಪರಿಸರ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಪರಿಸರ ದಿನವು ಒಂದು ವಿಶೇಷ ಸಂದರ್ಭವಾಗಿದೆ.
  • ಈ ದಿನವು ಪರಿಸರವನ್ನು ಉಳಿಸಲು ಜನರನ್ನು ಪ್ರೇರೇಪಿಸುತ್ತದೆ.
  • ಈ ವಿಶೇಷ ದಿನದಂದು, ಪ್ರಪಂಚದಾದ್ಯಂತದ ಜನರು ಒಗ್ಗೂಡಿ ಪರಿಸರವನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

ವಿಶ್ವ ಪರಿಸರ ದಿನದಂದು ಜನ ಸಾಮಾನ್ಯರು ಏನು ಮಾಡಬಹುದು?

  • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ.
  • ಸಾಧ್ಯವಾದಷ್ಟು ಗಿಡ-ಮರಗಳನ್ನು ನೆಡಿ.
  • ನೀರು ಮತ್ತು ಶಕ್ತಿಯನ್ನು ಅನಗತ್ಯವಾಗಿ ವ್ಯರ್ಥ ಮಾಡುವುದನ್ನು ತಪ್ಪಿಸಿ.
  • ತ್ಯಾಜ್ಯವನ್ನು ಬೇರ್ಪಡಿಸುವ ಮೂಲಕ ಮರುಬಳಕೆಯನ್ನು ಪ್ರೋತ್ಸಾಹಿಸಿ.
  • ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಭಿಯಾನಗಳಲ್ಲಿ ಭಾಗವಹಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us