ಹಿಂದಿ ಭಾಷೆ ದೇವನಾಗರಿ ಲಿಪಿಯಲ್ಲಿದ್ದು ಇದು ವೈಜ್ಞಾನಿಕ ಲಿಪಿಯಾಗಿದೆ. ವಿಶ್ವದ ಭಾಷೆಗಳ ಸಾಂಕೇತಿಕತೆಯ ಕ್ಷಮತೆಯೂ ಈ ದೇವನಾಗರಿಯಲ್ಲಿದೆ ಎನ್ನುವ ಅಭಿಪ್ರಾಯ ವಿದ್ವಾಂಸರದ್ದು. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರಚಲಿತದಲ್ಲಿರುವ ಆಡು ಭಾಷೆಯೇ ಇದಾಗಿದೆ. ಭಾರತದಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಛತ್ತೀಸ್‌ಗಢ, ಬಿಹಾರ, ಹರಿಯಾಣ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಹಿಂದಿ ಮಾತನಾಡುವ ಜನರಿದ್ದಾರೆ. ಭಾರತೀಯ ಸಾಹಿತ್ಯ ಲೋಕಕ್ಕೆ ಹಿಂದಿ ಭಾಷೆಯ ಕೊಡುಗೆ ಅಪಾರವಾಗಿದ್ದು, ಈ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಭಾಷೆಯ ಕೊಡುಗೆಯನ್ನು ಗೌರವಿಸುವ ಸಲುವಾಗಿ ವಿಶ್ವ ಹಿಂದಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನ ವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 1975 ಜನವರಿ 10 ರಂದು ನಾಗಪುರದಲ್ಲಿ ಮೊದಲ ‘ವಿಶ್ವ ಹಿಂದಿ ಸಮ್ಮೇಳನ’ವನ್ನು ಆಚರಿಸಲಾಯಿತು. 2005 ರಲ್ಲಿ ಜೂನ್ 8 ರಂದು ನಡೆದ ವಿಶ್ವ ಹಿಂದಿ ಸಮ್ಮೇಳನದ ಅನುಸರಣಾ ಸಮಿತಿಯ ಸಭೆಯಲ್ಲಿ ಪ್ರತಿ ವರ್ಷ ಜನವರಿ 10 ಅನ್ನು ವಿಶ್ವ ಹಿಂದಿ ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಲಾಯಿತು. 2006 ರ ಜನವರಿ 10 ರಂದು ಮೊದಲ ಬಾರಿಗೆ ವಿಶ್ವ ಹಿಂದಿ ದಿನವನ್ನು ಆಚರಿಸಲಾಯಿತು. ಅಂದಿನಿಂದ ಜಾಗತಿಕ ಮಟ್ಟದಲ್ಲಿ ವಿಶ್ವ ಹಿಂದಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಹಿಂದಿ ಭಾಷೆಯ ಶ್ರೀಮಂತ ಪರಂಪರೆ, ಸಾಹಿತ್ಯದ ಮೇಲೆ ಹಿಂದಿಯ ಪ್ರಭಾವ ಮತ್ತು ಡಿಜಿಟಲ್ ಜಗತ್ತಿನಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆಯನ್ನು ತಿಳಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ ಭಾರತದಲ್ಲಿ ಇಂಗ್ಲೀಷ್ ಜೊತೆಗೆ ಬಳಕೆ ಮಾಡುವ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದಾಗಿದೆ. ವಿಶ್ವ ಹಿಂದಿ ದಿನದಂದು ಭಾಷಣ, ನಾಟಕ, ಸಂಗೀತ ಮತ್ತು ಮುಂತಾದ ಕಲೆಗಳ ಮುಖಾಂತರ ಹಿಂದಿ ಭಾಷೆಯ ಬಗ್ಗೆ ಅರಿವನ್ನು ಮೂಡಿಸಲಾಗುತ್ತದೆ. ಶಾಲಾ ಕಾಲೇಜು ವಿವಿಧ ಸಂಘ ಸಂಸ್ಥೆಗಳು ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಆಲೂಗಡ್ಡೆ ಮೊಳಕೆಯೊಡೆಯದಂತೆ ನೋಡಿಕೊಳ್ಳಿ, ತಾಜಾವಾಗಿ ಶೇಖರಿಸಿಡುವುದು ಹೇಗೆ?
2011 ರ ಭಾಷೆಗಳ ಜನಗಣತಿಯ ಪ್ರಕಾರ, ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆಯಲ್ಲಿ ಹಿಂದಿ ಕೂಡ ಸೇರಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರಾಖಂಡ, ಛತ್ತೀಸ್‌ಗಢ, ಬಿಹಾರ, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸಂವಹನಕ್ಕಾಗಿ ಹಿಂದಿಯನ್ನೇ ಬಳಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುವವರ ಸಂಖ್ಯೆ 2001ರ ಜನಗಣತಿಗೆ ಹೋಲಿಸಿದರೆ ಹೆಚ್ಚಾಗಿದೆ. 2001 ರಲ್ಲಿ, 41.03% ಜನರು ಹಿಂದಿಯನ್ನು ಮಾತೃಭಾಷೆಯಾಗಿ ಮಾತನಾಡುತ್ತಿದ್ದರು. ಅದೇ ಹತ್ತು ವರ್ಷಗಳ ಬಳಿಕ ಅಂದರೆ 2011 ರಲ್ಲಿ ಶೇಕಡಾ 43.63 ರಷ್ಟು ಹಿಂದಿ ಮಾತನಾಡುವ ಜನರಿದ್ದಾರೆ. ಅದಲ್ಲದೇ ವಿಶ್ವದಲ್ಲಿ ಮ್ಯಾಂಡರಿನ್, ಸ್ಪ್ಯಾನಿಷ್ ಮತ್ತು ಇಂಗ್ಲಿಷ್ ನಂತರದಲ್ಲಿ ಹಿಂದಿ ಕೂಡ ವಿಶ್ವದಲ್ಲೇ ಹೆಚ್ಚು ಮಾತನಾಡುವ ನಾಲ್ಕನೇ ಭಾಷೆಯೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ