
ಆಳ ಸಾಗರದಲ್ಲಿ ಲೆಕ್ಕವಿಲ್ಲದಷ್ಟು ಸಮುದ್ರ ಜೀವಿಗಳಿವೆ. ಅವುಗಳಲ್ಲಿ ಜೆಲ್ಲಿ ಮೀನುಗಳು (Jellyfish) ಕೂಡ ಒಂದು. ಮೆದುಳು ಮತ್ತು ಹೃದಯವೇ ಇಲ್ಲದ ಈ ವಿಶಿಷ್ಟ ಜೀವಿಗಳ ದೇಹವು ಶೇಕಡಾ 95 ರಷ್ಟು ನೀರಿನಿಂದ ಕೂಡಿದೆ. ಮೆದುಳು ಇಲ್ಲದಿದ್ದರೂ, ಅವುಗಳಿಗೆ ಅಪಾಯವನ್ನು ಗ್ರಹಿಸಲು ಮತ್ತು ಬೇಟೆಯಾಡಲು ಅನುವು ಮಾಡಿಕೊಡುವ ವಿಶೇಷ ನರಮಂಡಲವಿದೆ. ಅವು ಕತ್ತಲೆಯಲ್ಲಿಯೂ ಹೊಳೆಯುತ್ತವೆ. ಈ ಮೃದುವಾದ, ಪಾರದರ್ಶಕ, ಜೆಲ್ಲಿ ತರಹದ ರಚನೆಯನ್ನು ಹೊಂದಿರುವ ಜೆಲ್ಲಿ ಮೀನುಗಳು ಮೆದುಳು ಅಥವಾ ಮೂಳೆಗಳಿಲ್ಲದಿದ್ದರೂ ಅವು ಸಮುದ್ರ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೆಲ್ಲಿ ಮೀನುಗಳು ಸಮುದ್ರ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಯಾವ ರೀತಿ ಕೊಡುಗೆ ನೀಡುತ್ತವೆ ಎಂಬ ಪೂರ್ಣ ವಿವರ ಇಲ್ಲಿದೆ.
ಜೆಲ್ಲಿ ಫಿಶ್‌ಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿನ ಸಮುದ್ರದಲ್ಲಿ ವಾಸಿಸುತ್ತವೆ. ಆದರೆ ಹವಾಮಾನವು ಬದಲಾಗುತ್ತಿದ್ದಂತೆ ಇವುಗಳು ದಕ್ಷಿಣದಿಂದ ಉತ್ತರ ಗೋಳಾರ್ಧದ ಕಡೆಗೆ ವಲಸೆ ಹೋಗುತ್ತವೆ. ದಕ್ಷಿಣ ಗೋಳಾರ್ಧದಲ್ಲಿ ನವೆಂಬರ್ ತಿಂಗಳಲ್ಲಿ ವಸಂತಕಾಲ ಆರಂಭವಾಗುತ್ತದೆ. ಈ ಸಮಯದಲ್ಲಾಗುವ ಹವಮಾನ ಬದಲಾವಣೆಯ ಕಾರಣದಿಂದಾಗಿ ಜೆಲ್ಲಿ ಫಿಶ್‌ಗಳ ಸಮೂಹ ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ. ಈ ಕಾರಣದಿಂದಾಗಿ ನವೆಂಬರ್ 2014 ರಿಂದ ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು. ಜೆಲ್ಲಿ ಮೀನುಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ ಜರ್ಮನ್ ಜೀವಶಾಸ್ತ್ರಜ್ಞ ಡಾ. ಅರ್ನ್ಸ್ಟ್ ಹೆಕೆಲ್ ಅವರ ಜನ್ಮದಿನವಾದ ನವೆಂಬರ್ 3 ರಂದು ಜೆಲ್ಲಿ ಮೀನು ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ.
ಹೃದಯ ಮತ್ತು ಮೆದುಳು ಇಲ್ಲದಿದ್ದರೂ ಜೆಲ್ಲಿ ಮೀನುಗಳು ಸಮುದ್ರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ವಿಶೇಷವಾಗಿ ಈ ಮೀನುಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಅಂದರೆ ಈ ಮೀನುಗಳು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ಸಮುದ್ರದ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಈ ಮೂಲಕ ಇವು ಸಮುದ್ರದ ಪರಿಸರ ವ್ಯವಸ್ಥೆಯನ್ನು ಕಾಪಾಡಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: ಸಂಪೂರ್ಣ ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತೇ?
ಜೆಲ್ಲಿ ಮೀನುಗಳು ಮೃದುವಾದ, ಅರೆಪಾರದರ್ಶಕ, ಜೆಲ್ ತರಹದ ದೇಹವನ್ನು ಹೊಂದಿದ್ದು, ಅವುಗಳ ದೇಹವು ಸರಿಸುಮಾರು 95 ಪ್ರತಿಶತ ನೀರಿನಿಂದ ಕೂಡಿದೆ. ಅವು ತುಂಬಾ ಹಗುರವಾಗಿರುತ್ತವೆ ಮತ್ತು ಸಮುದ್ರದ ಅಲೆಗಳ ಮೇಲೆ ಸುಲಭವಾಗಿ ತೇಲುತ್ತವೆ. ಜೆಲ್ಲಿ ಮೀನುಗಳ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಅವುಗಳಿಗೆ ಹೃದಯ, ಮೆದುಳು ಅಥವಾ ಮೂಳೆಗಳಿಲ್ಲ. ದೇಹವು ತುಂಬಾ ಸರಳವಾಗಿದ್ದು, ನೀರು ನೇರವಾಗಿ ಅವುಗಳ ಅಂಗಾಂಶಗಳ ಮೂಲಕ ಹರಿಯುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಈ ನೀರಿನ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸಾಗಿಸಲಾಗುತ್ತದೆ, ಈ ಪ್ರಕ್ರಿಯೆಯನ್ನು ಪ್ರಸರಣ ಎಂದು ಕರೆಯಲಾಗುತ್ತದೆ, ಇದು ಅವು ಹೃದಯ ಅಥವಾ ರಕ್ತನಾಳಗಳಿಲ್ಲದೆ ಬದುಕಲು ಅನುವು ಮಾಡಿಕೊಡುತ್ತದೆ. ಜೆಲ್ಲಿ ಮೀನುಗಳು ಒಂದೇ ದ್ವಾರವನ್ನು ಹೊಂದಿದ್ದು, ಅದರ ಮೂಲಕವೇ ಆಹಾರ ಸೇವಿಸುತ್ತವೆ ಮತ್ತು ತ್ಯಾಜ್ಯವನ್ನು ಹೊರ ಹಾಕುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ