
ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಸೊಳ್ಳೆಗಳ (Mosquitoes) ಕಾಟ ವಿಪರೀತವಿದೆ. ನೋಡಲು ತುಂಬಾನೇ ಸಣ್ಣದಾಗಿರುವ ಸೊಳ್ಳೆಗಳು ಮನುಷ್ಯನಿಗೆ ಕಚ್ಚಿ ಡೆಂಗ್ಯೂ, ಮಲೇರಿಯಾ, ಚಿಕನ್‌ಗುನ್ಯಾದಂತಹ ಮಾರಕ ಕಾಯಿಲೆಗಳನ್ನು ಹರಡುತ್ತವೆ. ಇಂತಹ ಕಾಯಿಲೆಗಳಿಗೆ ತುತ್ತಾಗಿಯೇ ಪ್ರಪಂಚದಾದ್ಯಂತ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ. ಸೊಳ್ಳೆಗಳಿಂದ ಹರಡುವ ಈ ಮಾರಕ ಕಾಯಿಲೆಗಳು ಹಾಗೂ ಸೊಳ್ಳೆಗಳು ಬಾರದಂತೆ ಮುಂಜಾಗ್ರತಾ ಕ್ರಮವನ್ನು ವಹಿಸುವುದೇಗೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ಈ ಜಾಗೃತಿ ದಿನದಂದು ಸೊಳ್ಳೆಗಳೇ ಇಲ್ಲದ ದೇಶವೆಂದು ಖ್ಯಾತಿ ಪಡೆದ ಐಸ್‌ಲ್ಯಾಂಡ್‌ಗೆ ಸೊಳ್ಳೆ ಹೇಗೆ ಪ್ರವೇಶಿಸಿತು ಎಂಬುದನ್ನು ನೋಡೋಣ ಬನ್ನಿ.
ಈ ದಿನದ ಆಚರಣೆಯನ್ನು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ 1930 ರಲ್ಲಿ ಪ್ರಾರಂಭಿಸಿತು. ಇದರ ಹಿನ್ನೆಲೆಯನ್ನು ನೋಡುವುದಾದರೆ 1897 ರ ವೇಳೆಯಲ್ಲಿ ಬ್ರಿಟಿಷ್ ವೈದ್ಯ ರೊನಾಲ್ಡ್ ರಾಸ್ ಸೊಳ್ಳೆಗಳು ಮತ್ತು ಅವುಗಳಿಂದ ಹರಡುವ ಮಾರಕ ಕಾಯಿಲೆಗಳ ಕುರಿತು ಅಧ್ಯಯನವನ್ನು ಮಾಡಲಾರಂಭಿಸಿದರು. ಹಾಗೂ 1897 ರ ಆಗಸ್ಟ್ 20 ರಂದು ಹೆಣ್ಣು ಅನಾಫಿಲಿಸ್ ಸೊಳ್ಳೆ ಕಡಿತದಿಂದ ಮನುಷ್ಯರಿಗೆ ಮಲೇರಿಯಾ ಕಾಯಿಲೆ ಹರಡುತ್ತದೆ ಎಂಬ ಮಹತ್ವದ ಸಂಗತಿಯನ್ನು ಅರು ಕಂಡು ಹಿಡಿದರು. ಅವರ ಈ ಆವಿಷ್ಕಾರವು ಮಲೇರಿಯಾ ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸಲು ಕಾರಣವಾಯಿತು. ಈ ಮಹತ್ವದ ಆವಿಷ್ಕಾರಕ್ಕಾಗಿ ಸರ್ ರೊನಾಲ್ಡ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಸಹ ನೀಡಲಾಯಿತು. ಜೊತೆಗೆ ಸರ್ ರೊನಾಲ್ಡ್ ಮತ್ತು ಅವರ ತಂಡದ ಈ ಮಹತ್ವದ ಸಂಶೋಧನೆಯನ್ನು ಶ್ಲಾಘಿಸಿಲು ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್ ವಿಶ್ವ ಸೊಳ್ಳೆ ದಿನದ ಆಚರಣೆಯನ್ನು ಪ್ರಾರಂಭಿಸಿತು. ಈ ದಿನ ಸೊಳ್ಳೆಗಳಿಂದ ಹರಡುವ ಮಾರಣಾಂತಿಕ ಕಾಯಿಲೆಗಳು ಹಾಗೂ ಅದರ ತಡೆಗಟ್ಟುವಿಕೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಐಸ್ಲ್ಯಾಂಡ್ ತುಂಬಾ ಶೀತ ವಾತಾವರಣದಿಂದ ಕೂಡಿರುವ ಸ್ಥಳವಾಗಿರುವುದರಿಂದ ಇಲ್ಲಿ ಯಾವುದೇ ಸೊಳ್ಳೆಗಳು, ಹಾವುಗಳು ಇಲ್ಲ. ಸೊಳ್ಳೆಮುಕ್ತ ದೇಶವೆಂದು ಬಿರುದು ಪಡೆದಿರುವ ಈ ದೇಶದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಆದ್ರೆ ಆಶ್ಚರ್ಯಕರ ಸಂಗತಿ ಏನು ಗೊತ್ತಾ? ಈ ದೇಶದಲ್ಲೂ ಮೊದಲ ಬಾರಿಗೆ ಸೊಳ್ಳೆಗಳ ಉಪಸ್ಥಿತಿಯನ್ನು ದೃಢಪಡಿಸಲಾಗಿದೆ. 2025 ರ ಆಗಸ್ಟ್ ತಿಂಗಳಲ್ಲಿ ಐಸ್‌ಲ್ಯಾಂಡ್‌ನಲ್ಲಿ ಸೊಳ್ಳೆಯಿರುವುದು ಪತ್ತೆಯಾಗಿದೆ.
ಅಕ್ಟೋಬರ್ 16, 2025 ರಲ್ಲಿ ಐಸ್‌ಲ್ಯಾಂಡ್‌ನ ಬ್ಯೋರ್ನ್ ಹ್ಜಾಲ್ಟಾಸನ್ ರೇಕ್ಜಾವಿಕ್‌ನ ಗ್ರಾಮೀಣ ಪ್ರದೇಶವಾದ ಕ್ಜೋಸ್‌ನಲ್ಲಿರುವ ಉದ್ಯಾನದಲ್ಲಿ ಒಂದಲ್ಲ ಮೂರು ಸೊಳ್ಳೆಗಳು ಪತ್ತೆಯಾದವು. ಇಲ್ಲಿನ ಜಾಲ್ಟಾಸನ್ ಎಂಬವರು ತಮ್ಮ ಮನೆಯ ಉದ್ಯಾನವನದಲ್ಲಿ ನೊಣವೊಂದು ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿದರು. ನಂತರ ಈ ಇದನ್ನು ಸಂಗ್ರಹಿಸಿ ಐಸ್ಲ್ಯಾಂಡ್‌ನ ನೈಸರ್ಗಿಕ ವಿಜ್ಞಾನ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಇಲ್ಲಿ ಕೀಟಶಾಸ್ತ್ರಜ್ಞ ಮ್ಯಾಥಿಯಾಸ್ ಆಲ್ಫ್ರೆಡ್ಸನ್ ಈ ಮೂರನ್ನೂ ಉತ್ತರ ಯುರೋಪಿನಾದ್ಯಂತ ಕಂಡುಬರುವ ಶೀತ-ಸಹಿಷ್ಣು ಸೊಳ್ಳೆ ಪ್ರಭೇದವಾದ ಕುಲಿಸೆಟಾ ಆನ್ಯುಲಾಟಾ ಸೊಳ್ಳೆ ಎಂಬುದನ್ನು ಕಂಡು ಹಿಡಿದಿದ್ದಾರೆ.
ವರದಿಗಳ ಪ್ರಕಾರ, ಕ್ಜೋಸ್‌ನಲ್ಲಿ ಪತ್ತೆಯಾದ ಸೊಳ್ಳೆ ಪ್ರಭೇದಗಳು ಅಸಾಧಾರಣವಾಗಿ ಶೀತ ವಾತಾವರಣಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಐಸ್ಲ್ಯಾಂಡಿಕ್ ವಿಜ್ಞಾನಿಗಳ ಪ್ರಕಾರ, ಕುಲಿಸೆಟಾ ಆನ್ಯುಲಾಟಾ ಸೊಳ್ಳೆಗಳು ನೆಲಮಾಳಿಗೆಗಳು, ಕೊಟ್ಟಿಗೆಗಳು ಮತ್ತು ಇತರ ಹೊರಾಂಗಣ ಕಟ್ಟಡಗಳಂತಹ ಸ್ಥಳಗಳಲ್ಲಿ ಆಶ್ರಯ ಪಡೆಯುವ ಮೂಲಕ ಚಳಿಯ ವಾತಾವರಣದಲ್ಲೂ ಬದುಕಬಲ್ಲದು.
ಇದನ್ನೂ ಓದಿ: ಇಂದು ‘ವಿಶ್ವ ಸೊಳ್ಳೆ ದಿನ’; ಸೊಳ್ಳೆಗಳ ವಿಸ್ಮಯಕಾರಿ ಜಗತ್ತು ಮತ್ತು ಆರೋಗ್ಯದ ಮೇಲಿನ ಅಪಾಯ
ಐಸ್ಲ್ಯಾಂಡ್ನಲ್ಲಿ ಬದಲಾಗುತ್ತಿರುವ ಹವಾಮಾನವು ಸೊಳ್ಳೆಗಳ ಉಪಸ್ಥಿತಿಗೆ ಕಾರಣವಾಗಿದೆ. ಐಸ್‌ಲ್ಯಾಂಡ್‌ನ ಹವಾಮಾನ ಇಲಾಖೆಯು 1980 ರಿಂದ ಗಣನೀಯ ಪ್ರಮಾಣದ ಹವಾಮಾನ ಏರಿಕೆಯಾಗುತ್ತಿದ್ದು, 2025 ರಲ್ಲಿ ಮಾತ್ರ ತಪಮಾನ ತೀರ ಹೆಚ್ಚಿತ್ತು, ರಾಷ್ಟ್ರೀಯ ಸರಾಸರಿ ತಾಪಮಾನವು 5.2°C ತಲುಪಿತ್ತು ಎಂದು ಹೇಳಿದೆ. ಈ ತಾಪಮಾನ ಏರಿಕೆ, ಬದಲಾವಣೆ ಕೂಡ ಸೊಳ್ಳೆ ಕಾಣಿಸಿಕೊಳ್ಳಲು ಒಂದು ಕಾರಣ. ಹವಾಮಾನ ಬದಲಾವಣೆಯೊಂದಿಗೆ ಹಿಮ ಕರಗುವಿಕೆ, ದೀರ್ಘ ಬೇಸಿಗೆ ಮತ್ತು ಹೆಚ್ಚುತ್ತಿರುವ ಮಾನವ ಓಡಾಟ, ಹಡಗು ಮಾರ್ಗಗಳ ಬೆಳವಣಿಗೆ, ಪ್ರವಾಸೋದ್ಯಮ, ಮಿಲಿಟರಿ ಕಾರ್ಯಾಚರಣೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯು ಕೂಡ ಸೊಳ್ಳೆಗಳು ಕಾಣಿಸಿಕೊಳ್ಳಲು ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕುಲಿಸೆಟಾ ಆನ್ಯುಲಾಟಾ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಅಪಾಯಕಾರಿ ರೋಗಗಳನ್ನು ಹರಡುವುದಿಲ್ಲ. ಐಸ್ಲ್ಯಾಂಡ್‌ನಲ್ಲಿ ಹೊಸದಾಗಿ ಪತ್ತೆಯಾದ ಈ ಸೊಳ್ಳೆಗಳು ಕಚ್ಚಬಹುದು ಆದರೆ ಇವು ಅಪಾಯಕಾರಿ ರೋಗಗಳನ್ನು ಹರಡುವುದಿಲ್ಲ. ಇವು ಡೆಂಗ್ಯೂ, ಮಲೇರಿಯಾ ಅಥವಾ ಜಿಕಾದಂತಹ ಕಾಯಿಲೆಗಳನ್ನು ಹರಡುವ ಉಷ್ಣವಲಯದ ಸೊಳ್ಳೆ ಪ್ರಭೇದಗಳಿಗಿಂತ ಬಹಳ ಭಿನ್ನವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ