World Pulses Day 2026: ದ್ವಿದಳ ಧಾನ್ಯಗಳ ಸೇವನೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ

ದ್ವಿದಳ ಧಾನ್ಯಗಳನ್ನು ಪ್ರೋಟೀನ್‌ನ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ಇವುಗಳ ಅಗತ್ಯ ಪ್ರಮಾಣದ ಸೇವನೆಯಿಂದ ದೇಹಕ್ಕೆ ಪ್ರೋಟೀನ್ ಪಡೆಯಬಹುದು. ಹೀಗೆ ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಹೇಗೆ ಪ್ರಾರಂಭವಾಯಿತು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

World Pulses Day 2026:  ದ್ವಿದಳ ಧಾನ್ಯಗಳ ಸೇವನೆ ನಮ್ಮ ಆರೋಗ್ಯ ವೃದ್ಧಿಗೆ ಸಹಕಾರಿ
ವಿಶ್ವ ದ್ವಿದಳ ಧಾನ್ಯ ದಿನ
Image Credit source: vecteezy

Updated on: Feb 10, 2026 | 10:11 AM

ಕಡಲೆ, ತೊಗರಿ, ಉದ್ದಿನ ಬೇಳೆ, ಅವರೆ, ಸೋಯಾಬೀನ್‌, ರಾಜ್ಮಾ, ಹುರುಳಿ, ಬಟಾಣಿ ಇವೆಲ್ಲವೂ ದ್ವಿದಳ ಧಾನ್ಯಗಳಾಗಿದ್ದು (Pulses), ಹೆಚ್ಚಿನ ಅಡುಗೆಗಳಲ್ಲಿ ಈ ಎಲ್ಲಾ ಧಾನ್ಯಗಳನ್ನು ಬಳಸಲಾಗುತ್ತದೆ. ದ್ವಿದಳ ಧಾನ್ಯಗಳು ಕೇವಲ ಕಾಳುಗಳಲ್ಲ,  ಪೌಷ್ಟಿಕಾಂಶದ ನಿಧಿಯೂ ಹೌದು.  ಇವುಗಳಲ್ಲಿ ಅಮೈನೋ ಆಮ್ಲ, ಪ್ರೋಟೀನ್‌, ಕಬ್ಬಿಣ, ಪೋಲಿಕ್‌ ಆಮ್ಲ ಇತ್ಯಾದಿ ಪೋಷಕಾಂಶಗಳಿದ್ದು, ಇವು ಹೃದಯ ಮತ್ತು ಸಂಪೂರ್ಣ ದೇಹಾರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಹಾಗಾಗಿ ದ್ವಿದಳ ಧಾನ್ಯಗಳ ಪೌಷ್ಟಿಕಾಂಶ ಮೌಲ್ಯಗಳು ಮತ್ತು ಅವುಗಳ ಸೇವನೆಯಿಂದ ಲಭಿಸುವ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಪ್ರತಿವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ದ್ವಿದಳ ಧಾನ್ಯ ದಿನದ ಇತಿಹಾಸವೇನು?

ದ್ವಿದಳ ಧಾನ್ಯಗಳ ಮಹತ್ವವನ್ನು ಎತ್ತಿ ತೋರಿಸಲು ಮತ್ತು ಜನರಿಗೆ ಅವುಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು, 2016 ನೇ ವರ್ಷವನ್ನು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷವೆಂದು ಘೋಷಿಸಲಾಯಿತು. ಇದರ ನಂತರ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವೆಂದು ಗೊತ್ತುಪಡಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ, ಫೆಬ್ರವರಿ 10 ಅನ್ನು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಏಕೆ ಆಚರಿಸಲಾಗುತ್ತದೆ ?

ಆಧುನಿಕತೆಯ ಓಟದಲ್ಲಿ, ತ್ವರಿತ ಆಹಾರದ ವ್ಯಾಪಕತೆಯು ನಮ್ಮ ಆಹಾರಕ್ರಮದಲ್ಲಿ ದ್ವಿದಳ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡುತ್ತಿದೆ. ಇದು ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ನೀಡದೆ ವಂಚಿತಗೊಳಿಸುತ್ತದೆ, ಇದು ಜನರ, ವಿಶೇಷವಾಗಿ ಮಕ್ಕಳು ಮತ್ತು ಯುವಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಾನವನ ಆರೋಗ್ಯ ಮತ್ತು ಆಹಾರ ಸುರಕ್ಷತೆಗಾಗಿ ದ್ವಿದಳ ಧಾನ್ಯಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ತಮ್ಮ ಆಹಾರಕ್ರಮದಲ್ಲಿ ಅವುಗಳನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸಲು ಅಂತರರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಟೆಡ್ಡಿ ಡೇ ವ್ಯಾಲೆಂಟೈನ್‌ ವೀಕ್‌ಭಾಗವಾಗಿದ್ದು ಹೇಗೆ? ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ

 ದ್ವಿದಳ ಧಾನ್ಯಗಳು ನಮ್ಮ ಆರೋಗ್ಯದ ನಿಧಿ:

ದ್ವಿದಳ ಧಾನ್ಯಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅವು ಕಡಿಮೆ ಕೊಬ್ಬು ಮತ್ತ ಫೈಬರ್‌ನಲ್ಲಿ ಸಮೃದ್ಧವಾಗಿವೆ, ಗ್ಲುಟನ್-ಮುಕ್ತವಾಗಿವೆ. ಅವುಗಳಲ್ಲಿ ಕಡಿಮೆ ಸೋಡಿಯಂ ಅಂಶವಿದ್ದು, ಇದು ಹೃದಯ ರೋಗಿಗಳು ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಸೂಕ್ತವಾದ ಸೂಪರ್‌ಫುಡ್ ಆಗಿದೆ. ಅಲದೆ ದ್ವಿದಳ ಧಾನ್ಯಗಳು ಖನಿಜಗಳು, ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್‌ ಮತ್ತು ನಾರಿನಾಂಶ ಹೆಚ್ಚಿದ್ದು, ಇದು ದೇಹಕ್ಕೆ ಶಕ್ತಿ ನೀಡುವುದರೊಂದಿಗೆ ಸ್ನಾಯುಗಳನ್ನು ನಿರ್ಮಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಜೊತೆಗೆ ದ್ವಿದಳ ಧಾನ್ಯಗಳು ದೇಹಕ್ಕೆ ಕಬ್ಬಿಣಾಂಶವನ್ನು ಪೂರೈಸುತ್ತವೆ, ಶಕ್ತಿಯನ್ನು ಉತ್ಪಾದಿಸಲು ಮತ್ತು ಚಯಾಪಚಯಕ್ರಿಯೆಯನ್ನು ಉತ್ತೇಜಿಸಲೂ ಸಹಾಯ ಮಾಡುತ್ತದೆ.

ವಿಶ್ವ ದ್ವಿದಳ ಧಾನ್ಯಗಳ ದಿನದ ಮಹತ್ವವೇನು?

  • ವಿಶ್ವ ದ್ವಿದಳ ಧಾನ್ಯಗಳ ದಿನದ ಪ್ರಮುಖ ಉದ್ದೇಶವೆಂದರೆ ಜಾಗತಿಕವಾಗಿ ಅಪೌಷ್ಟಿಕತೆ ಮತ್ತು ಹಸಿವನ್ನು ಕಡಿಮೆ ಮಾಡಲು ದ್ವಿದಳ ಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವುದು.
  • ಹೆಚ್ಚುವರಿಯಾಗಿ, ಸುಸ್ಥಿರ ಕೃಷಿಯನ್ನು ಪ್ರೋತ್ಸಾಹಿಸಲು ಮತ್ತು ದ್ವಿದಳ ಧಾನ್ಯಗಳ ಪರಿಸರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವು ಸಹಾಯ ಮಾಡುತ್ತದೆ.
  • ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ