
ಒಂದೆಡೆ ಜಗತ್ತು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಾ ಹೋಗುತ್ತಿದ್ದರೆ, ಇನ್ನೊಂದೆಡೆ ಮನುಷ್ಯನ ಸ್ವಾರ್ಥಕ್ಕೆ ಕಾಡುಗಳು ನಾಶವಾಗುತ್ತಿದ್ದೆ, ಪ್ರಾಣಿ-ಪಕ್ಷಿ ಸಂಕುಲಗಳು ವಿನಾಶದತ್ತ ತಲುಪುತ್ತಿದೆ. ಹೌದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಗುಬ್ಬಚ್ಚಿಯಂತಹ ಅದೆಷ್ಟೋ ಪುಟ್ಟ ಪಕ್ಷಿಗಳಾಗಿರಬಹುದು, ಪ್ರಾಣಿಗಳು ಅಳಿವಿನಂಚಿನತ್ತ ಸಾಗಿವೆ. ಮೊದಲೆಲ್ಲಾ ಕಣ್ಣಿಗೆ ಕಾಣಿಸುತ್ತಿದ್ದ ಜೀವಿಗಳು ಇಂದು ಕಣ್ಮರೆಯಾಗುತ್ತಿವೆ. ಹೀಗೆ ಮುಂದುವರೆಯುತ್ತಾ ಹೋದರೆ ಮುಂದೊಂದು ದಿನ ವನ್ಯ ಜೀವಿಗಳನ್ನು ಬರೀ ಫೋಟೋಗಳಲ್ಲಿ ನೋಡುವ ಕಾಲ ಬಂದರೂ ಅಚ್ಚರಿಯಿಲ್ಲ. ಈ ನಿಟ್ಟಿನಲ್ಲಿ ವನ್ಯ ಜೀವಿಗಳು, ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು? ಈ ದಿನದ ಆಚರಣೆಯ ಉದ್ದೇಶವೇನು? ಈ ಎಲ್ಲದರ ಬಗ್ಗೆ ತಿಳಿಯೋಣ ಬನ್ನಿ.
ವನ್ಯಜೀವಿಗಳು ಮತ್ತು ಸಸ್ಯ ಸಂಪತ್ತಿನ ಕಳಪೆ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 20, 2013 ರಂದು ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ತಾರೀಕನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಮೊದಲ ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3, 2014 ರಂದು ಆಚರಿಸಲಾಯಿತು.
ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ರಕ್ಷಣೆಗಾಗಿ 1973 ರಲ್ಲಿ CITES ಸಮಾವೇಶಕ್ಕೆ ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿವರ್ಷ ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಒಂದೆಡೆ ಆಧುನೀಕರಣ, ನಗರೀಕರಣದಿಂದಾಗಿ ಮನುಷ್ಯ ಅಭಿವೃದ್ಧಿ ಹೊಂದುತ್ತಾ ಹೋಗುತ್ತಿದ್ದರೆ, ಇನ್ನೊಂದೆಡೆ ಮನುಷ್ಯನ ಸ್ವಾರ್ಥದಿಂದ ಸಸ್ಯ ಸಂಪತ್ತು, ವನ್ಯ ಜೀವಿಗಳು ಅಳಿವಿನಂಚಿನತ್ತ ಸಾಗಿವೆ. ಈ ನಿಟ್ಟಿನಲ್ಲಿ ವಿಶ್ವ ವನ್ಯಜೀವಿ ದಿನದ ಉದ್ದೇಶವು ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ಪ್ರಪಂಚದಾದ್ಯಂತದ ಜನರಲ್ಲಿ ಜಾಗೃತಿ ಮೂಡಿಸಲು, ಪ್ರಾಣಿಗಳ ಆವಾಸಸ್ಥಾನ ನಾಶ ಮತ್ತು ಅಕ್ರಮ ವನ್ಯಜೀವಿ ವ್ಯಾಪಾರವನ್ನು ತಡೆಯಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಕಾಲ್ಬೆರಳುಗಳ ಆಕಾರವೇ ವ್ಯಕ್ತಿತ್ವ ರಿವೀಲ್ ಮಾಡುತ್ತೆ
ವಿಶ್ವ ವನ್ಯಜೀವಿ ದಿನದ ಉದ್ದೇಶವು ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ರಕ್ಷಣೆಯ ಬಗ್ಗೆ ಪ್ರಪಂಚದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಅಷ್ಟೇ ಅಲ್ಲದೆ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಸ್ಯ ಮತ್ತು ಪ್ರಾಣಿಗಳು ಕೂಡಾ ಮಹತ್ತರ ಪಾತ್ರವನ್ನು ವಹಿಸುತ್ತದೆ. ಈ ಎಲ್ಲದರ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ವಿಶ್ವ ವನ್ಯಜೀವಿ ದಿನವನ್ನು ಆಚರಣೆ ಮಾಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ