
ಮನುಷ್ಯನಂತೆಯೇ ಸಕಲ ಜೀವರಾಶಿಗಳಿಗೂ ಭೂಮಿಯ ಮೇಲೆ ಬದುಕುವ ಸ್ವಾತಂತ್ರ್ಯವಿದೆ. ವಿಪರ್ಯಾಸ ಏನೆಂದರೆ ಇಂದು ಮನುಷ್ಯನ ಸ್ವಾರ್ಥದ ಕಾರಣದಿಂದಾಗಿ ಅದೆಷ್ಟೋ ಜಾತಿಯ ಪ್ರಾಣಿ, ಪಕ್ಷಿಗಳು, ಮರಗಿಡಗಳು ಅಳಿದುಹೋಗಿದೆ. ಇನ್ನೂ ಅದೆಷ್ಟೋ ಜೀವಿಗಳು ಅಳಿವಿನಂಚಿನಲ್ಲಿವೆ. ಹೌದು ಒಂದೆಡೆ ಆಧುನೀಕರಣ, ನಗರೀಕರಣ ಅಂತೆಲ್ಲಾ ಜಗತ್ತು ಅಭಿವೃದ್ಧಿ ಹೊಂದುತ್ತಿದ್ದರೆ ಇನ್ನೊಂದೆಡೆ ಕಾಡುಗಳ ನಾಶ, ಅಕ್ರಮ ಬೇಟೆ ಇತ್ಯಾದಿ ಕಾರಣಗಳಿಂದ ಅರಣ್ಯ, ವನ್ಯಜೀವಿಗಳು ವಿನಾಶದ ಅಂಚಿಗೆ ತಲುಪಿವೆ. ವಿಶ್ವಸಂಸ್ಥೆಯ ಪ್ರಕಾರ, ಹೆಚ್ಚುತ್ತಿರುವ ಪರಿಸರ ಸವಾಲುಗಳಿಂದಾಗಿ ಒಂದು ದಶಲಕ್ಷಕ್ಕೂ ಹೆಚ್ಚು ವನ್ಯಜೀವಿ ಪ್ರಭೇದಗಳು ಅಳಿವಿನ ಅಪಾಯದಲ್ಲಿವೆ. ಈ ನಿಟ್ಟಿನಲ್ಲಿ ವನ್ಯ ಜೀವಿಗಳು, ಅರಣ್ಯ ಸಂಪತ್ತಿನ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು (World Wildlife Day) ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಸಂಪೂರ್ಣ ಮಾಹಿತಿ ಇಲ್ಲಿದೆ.
ವನ್ಯಜೀವಿಗಳು ಮತ್ತು ಸಸ್ಯ ಸಂಪತ್ತಿನ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 20, 2013 ರಂದು ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ತಾರೀಕನ್ನು ವಿಶ್ವ ವನ್ಯಜೀವಿ ದಿನವನ್ನಾಗಿ ಅಳವಡಿಸಿಕೊಳ್ಳುವುದಾಗಿ ಘೋಷಿಸಿತು. ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳ ರಕ್ಷಣೆಗಾಗಿ 1973 ರಲ್ಲಿ CITES ಸಮಾವೇಶಕ್ಕೆ ಸಹಿ ಹಾಕಲಾಯಿತು. ಇದರ ನೆನಪಿಗಾಗಿ ಮಾರ್ಚ್ 03 ರಂದು ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಮೊದಲ ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3, 2014 ರಂದು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವನ್ಯಜೀವಿಗಳನ್ನು ಸಂರಕ್ಷಿಸುವ ಮತ್ತು ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ವನ್ಯಜೀವಿ ದಿನವನ್ನು ಆಚರಿಸುವ ಪ್ರಾಥಮಿಕ ಉದ್ದೇಶವೆಂದರೆ ವಿಶ್ವಾದ್ಯಂತ ವನ್ಯಜೀವಿಗಳು ಮತ್ತು ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.
ಇದನ್ನೂ ಓದಿ: ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ