Rajeev Taranath : ಅಭಿಜ್ಞಾನ ‘ಇಪ್ಪತ್ತೆರಡರ ವಯಸ್ಸಿನಲ್ಲಿ ಸಂಗೀತ? ನೀ ಅಧಿಕಾರಿಯೋ, ಪ್ರೊಫೆಸರೋ ಆಗಬಹುದು

|

Updated on: Dec 25, 2021 | 10:52 AM

Ali Akbar Khan : “The music itself was towering” ಸಂಗೀತ ನಿಂತ ಕೂಡಲೇ ಉಳಿದದ್ದೆಲ್ಲ ಬರೀ ಭ್ರಮೆ, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸಂಗೀತ ಮಾತ್ರ ಸತ್ಯ ಎನಿಸಿಬಿಟ್ಟಿತು. ನಾನು ನನ್ನನ್ನೇ ಮರೆತುಬಿಟ್ಟೆ, ನಾನು ಮಾಡಬೇಕೆಂದುಕೊಂಡದ್ದು, ಆಸೆಪಟ್ಟದ್ದು, ನನ್ನ ಮಧ್ಯಮವರ್ಗದ ಸಣ್ಣಪುಟ್ಟ ಆಸೆಗಳು, ಮಧ್ಯಮವರ್ಗದ ರೊಮ್ಯಾಂಟಿಕ್ ಬಯಕೆಗಳು ಎಲ್ಲವೂ ಮರೆತುಹೋದವು.’ ಪಂ. ರಾಜೀವ ತಾರಾನಾಥ

Rajeev Taranath : ಅಭಿಜ್ಞಾನ ‘ಇಪ್ಪತ್ತೆರಡರ ವಯಸ್ಸಿನಲ್ಲಿ ಸಂಗೀತ? ನೀ ಅಧಿಕಾರಿಯೋ, ಪ್ರೊಫೆಸರೋ ಆಗಬಹುದು
ಪಂ. ರಾಜೀವ ತಾರಾನಾಥ
Follow us on

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ.
ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಶೈಲಜ ಮತ್ತು ಟಿ.ಎಸ್. ವೇಣುಗೋಪಾಲ ಅವರು ಸಂಪಾದಿಸಿದ ‘ವಾದಿ ಸಂವಾದಿ-ಸಂಗೀತವನ್ನು ಕುರಿತು ಪಂಡಿತ್ ರಾಜೀವ್ ತಾರಾನಾಥ ಅವರ ಚಿಂತನೆಗಳು : ರಾಗಮಾಲಾ ಪುಸ್ತಕ ಮಾಲಿಕೆ’ಯಿಂದ.

*

ನನಗೊಬ್ಬ ಗೆಳತಿ ಇದ್ದಳು. ಅವಳಿಗೆ ಸಂಗೀತದ ಬಗ್ಗೆ ಅಷ್ಟೇನೂ ಗೊತ್ತಿರಲಿಲ್ಲ. ನಾನು ಸಿನಿಮಾದ ಹಾಡುಗಳು, ಅದರಲ್ಲೂ ಹೆಚ್ಚಾಗಿ ಸೈಗಲ್ ಹಾಡು “ಬಾಬುಲ ಮೊರಾ,” ಮತ್ತೆ ಕೆಲವು ಗಝಲ್ ಹಾಡುತ್ತಿದ್ದೆ. ನಾನಾಗ ಸಾಕಷ್ಟು ಹೆಸರು ಮಾಡಿದ್ದೆ. ನನಗೆ ತುಂಬಾ ಸಂಗೀತ ಗೊತ್ತು ಎಂದು ಅವಳು ಅಂದುಕೊಂಡಿದ್ದಳು. ನಾನು ದೊಡ್ಡವನಲ್ಲ, ದೊಡ್ಡ ಸಂಗೀತವನ್ನು ನಿನಗೆ ಕೇಳಿಸುತ್ತೇನೆ ಅಂತ ಅವಳಿಗೆ ಅಂದಿದ್ದೆ. ಒಂದು ಸಾರಿ 1953ರ ಸುಮಾರಿಗೆ ಪಂಡಿತ್‌ ರವಿಶಂಕರ್ ಮತ್ತು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಜುಗಲ್‌ಬಂದಿ ಇತ್ತು. ತಬಲಾಕ್ಕೆ ಚತುರ್‌ಲಾಲ್. ಆವತ್ತಿನವರೆಗೆ ನಾನು ನೇರವಾಗಿ ಸರೋದ್ ಕೇಳಿರಲಿಲ್ಲ. ಕೇಳಿದ್ದೆಲ್ಲ ಹಳೆಯ ಆರ್​ಪಿಎಂ ಗ್ರ್ಯಾಮೊಫೋನ್ ತಟ್ಟೆಗಳು. ಇನ್ನು ರೇಡಿಯೋದಲ್ಲಿ ಅಲ್ಪಸ್ವಲ್ಪ ಕೇಳಿದ್ದೆ. ಸರೋದ್ ಕಂಡರೆ ನನಗೆ ಆಗುತ್ತಾ ಇರಲಿಲ್ಲ. ಸರೋದ್​ನಲ್ಲಿ ನಾದ ಸಲೀಸಾಗಿ ಹರಿಯುವುದಿಲ್ಲ. ಅದೊಂದು ಕರ್ಕಶ ವಾದ್ಯ ಎಂದು ನನಗನ್ನಿಸಿತ್ತು. ಹಾಗಾಗಿ ಅವರು ಯಾಕಪ್ಪಾ ಬರ್ತಾ ಇದ್ದಾರೆ ಅಂತ ನನಗೆ ಏನೋ ಒಂದು ತರಹ ಮುಜುಗರ. ನಾನು ನನ್ನ ಗೆಳತಿಗೆ ‘‘ಪಂಡಿತ್ ರವಿಶಂಕರ್ ಬರುತ್ತಿದ್ದಾರೆ. ಅವರ ಜೊತೆಗೆ ಖಾನ್​ಸಾಹೇಬರು ಅಂತ ಬರುತ್ತಿದ್ದಾರೆ. ಅವರು ಸರೋದ್​ ನುಡಿಸುತ್ತಾರೆ. ಅದು ಒಳ್ಳೆ ವಾದ್ಯವಲ್ಲ, ಅದರತ್ತ ಗಮನ ಕೊಡಬೇಡ. ಸಿತಾರ್​ಗೆ ಗಮನಕೊಡು’’ ಎಂದು ಹೇಳಿ ಕರೆದುಕೊಂಡು ಬಂದೆ. ಅಂದು ವೇದಿಕೆಯ ಮೇಲೆ ಪಂಡಿತ್ ರವಿಶಂಕರ್ ಕೃಷ್ಣನ ಹಾಗೆ ಮನಮೋಹಕವಾಗಿ ಕಾಣುತ್ತಿದ್ದರೆ, ಅವರ ಪಕ್ಕದಲ್ಲಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಬೋಳುಮಂಡೆ ಬುದ್ಧನ ಹಾಗೆ ಕಾಣುತ್ತಾ ಇದ್ದರು!

ಕಛೇರಿ ಶುರುವಾಯಿತು. ಪಂಡಿತ್ ರವಿಶಂಕರ್ ಪೂರಿಯಾ ಕಲ್ಯಾಣ್ ಆರಂಭಿಸಿದರು. ಮಾಮೂಲಿನಂತೆ ರವಿಶಂಕರ್‌ ಸೊಗಸಾಗಿ ನುಡಿಸಿದರು. ಆಮೇಲೆ ಅಲಿ ಅಕ್ಬರ್ ಖಾನ್‌ರ ಸರೋದ್ ಶುರುವಾಯಿತು. ಕೇಳುತ್ತಾ ಕೇಳುತ್ತಾ ನಾನು ಪರವಶನಾಗಿಬಿಟ್ಟೆ, ಅವರ ಸರೋದ್ ನಾದ ಆಕಾಶದಲ್ಲಿ ವಿಹರಿಸುತ್ತಿತ್ತು. ಕೇಳುಗರು ಆ ಲೀಲೆಯನ್ನು ನೋಡುತ್ತಿದ್ದರು. ಅದು, ‘ಟವರಿಂಗ್ ಮ್ಯೂಸಿಕ್’. ಸಂಗೀತಕ್ಕೆ ಟವರಿಂಗ್ ಪದ ಬಳಸಬಹುದೋ ಇಲ್ಲವೋ ಗೊತ್ತಿಲ್ಲ. ಆದರೆ “The music itself was towering” ಸಂಗೀತ ನಿಂತ ಕೂಡಲೇ ಉಳಿದದ್ದೆಲ್ಲ ಬರೀ ಭ್ರಮೆ, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಸಂಗೀತ ಮಾತ್ರ ಸತ್ಯ ಎನಿಸಿಬಿಟ್ಟಿತು. ನಾನು ನನ್ನನ್ನೇ ಮರೆತುಬಿಟ್ಟೆ, ನಾನು ಮಾಡಬೇಕೆಂದುಕೊಂಡದ್ದು, ನಾನು ಆಸೆಪಟ್ಟದ್ದು, ನಾನು ಆಗಬೇಕು ಅಂದುಕೊಂಡದ್ದು, ನನ್ನ ಸಣ್ಣಪುಟ್ಟ ಬಯಕೆಗಳು ನನ್ನ ಮಧ್ಯಮವರ್ಗದ ಸಣ್ಣಪುಟ್ಟ ಆಸೆಗಳು, ಮಧ್ಯಮವರ್ಗದ ರೊಮ್ಯಾಂಟಿಕ್ ಬಯಕೆಗಳು ಎಲ್ಲವೂ ಮರೆತುಹೋದವು. ನನ್ನಲ್ಲಿ ಮೂಡಿದ ಒಂದೇ ಒಂದು ಆಸೆಯೆಂದರೆ ಅವರ ಬಳಿ ಹೋಗಿ ಸರೋದ್ ಕಲಿಯಬೇಕು ಎನ್ನುವುದು. ಇಡೀ ಪ್ರಪಂಚ ಬದಲಾಯಿತು. ನಾನಿದ್ದ ಜಗತ್ತು ಮರೆಯಾಯಿತು. ಸಂಬಂಧಗಳು, ಗುರಿ ಎಲ್ಲವೂ ಬದಲಾಯಿತು. ಉಳಿದದ್ದು ಒಂದೇ: ಇವರನ್ನು ಕಾಣಬೇಕು, ಇವರಿಂದ ಕಲಿಯಬೇಕು. ಈ ಮಧ್ಯೆ ಆನರ್ಸ್‌ನಲ್ಲಿ ಮೊದಲಸ್ಥಾನ ಬಂದು, ಕೆಲಸ ಸಿಕ್ಕಿತು.

ವಾದಿ ಸಂವಾದಿ

ಇದಾದಮೇಲೆ ಖಾನ್‌ಸಾಹೇಬರ ನೇರ ಪರಿಚಯಕ್ಕೆ ನಾನು ಒಂದೂವರೆ ವರ್ಷ ಕಾಯಬೇಕಾಯಿತು. ಅವರ ಬಳಿ ಸಂಗೀತಕ್ಕೆ ಸೇರಿಸಲು ನನ್ನ ಕಸಿನ್ ನನ್ನನ್ನು ಕರೆದೊಯ್ದಳು. ನನಗಾಗ ಇಪ್ಪತ್ತೊಂದು ತುಂಬಿ ಇಪ್ಪತ್ತೆರಡು ವರ್ಷ. ಖಾನ್​ಸಾಹೇಬರಿಗೆ ಮೂವತ್ತೆರಡು ವರ್ಷ. ಅವರಲ್ಲಿ ಸಂಗೀತ ಕಲಿಯುವ ಹಂಬಲವನ್ನು ಹೇಳಿಕೊಂಡೆ. ನನ್ನನ್ನು ನೋಡಿ, ‘ಚಿಕ್ಕಮಕ್ಕಳಿರುವಾಗ ಹೇಳಿಕೊಡಲು ಪ್ರಾರಂಭಿಸುತ್ತೇವೆ. ನಿನಗೆಷ್ಟು ವಯಸ್ಸು?’ ಎಂದು ಕೇಳಿದರು. ನಾನು ಹೇಳಿದೆ. ‘ಆದರೆ ನಿನಗೆ ಸಂಗೀತ ಹಾಡು ಎಲ್ಲ ಬರುತ್ತದೆ ಎಂದು ನಿನ್ನಕ್ಕ ಹೇಳುತ್ತಾಳೆ. ಸರಿ, ನಾನು ಹೇಳಿ ಕೊಡುತ್ತೇನೆ’ ಎಂದರು. ನನಗೆ ಒಂದು ಸಣ್ಣ ಸರೋದನ್ನು ಕೊಟ್ಟರು. ‘ನೀನು ಇದನ್ನು ನುಡಿಸು’ ಎಂದು ನನ್ನ ಎಡಗೈನ ಮೂರು ಬೆರಳು ತೋರಿಸಿ ‘ಇದರಲ್ಲಿ ನುಡಿಸಬೇಕು’ ಎಂದರು. ‘ಬೆರಳಿನಲ್ಲಿ ಅಲ್ಲ, ಉಗುರುಗಳಿಂದ’ ಎಂದರು. ಅಲ್ಲಿಯವರೆಗೆ ನನಗದು ತಿಳಿದಿರಲಿಲ್ಲ. ಆಗ ನನಗೆ ಬಲಗೈನಲ್ಲಿ ಜವಾ ಹಿಡಿದು ಮೀಟು ಹಾಕುತ್ತಾರೆ ಎನ್ನುವುದು ಕೂಡ ತಿಳೀದಿರಲಿಲ್ಲ. ಅವರು ನನಗೆ ಜವಾ ಕೊಡಬೇಕೆಂದು ಜೇಬಿನಲ್ಲಿ ಇಟ್ಟುಕೊಂಡಿದ್ದರಂತೆ ಆದರೆ ಮರೆತುಬಿಟ್ಟಿದ್ದರು. ಹಾಗಾಗಿ ನಾನು ಮನೆಗೆ ಬಂದು ಬಲಗೈ ಉಗುರಿನಿಂದಲೇ ಮೀಟು ಹಾಕಿ ಅಭ್ಯಾಸ ಮಾಡಲಾರಂಭೀಸಿದೆ. ಉಗುರಿಗೆ ತುಂಬಾ ನೋವಾಗಿ, ಅದು ಗಾಯ ಆಗಿ ಕೀವಾಗಿಬಿಟ್ಟಿತು. ಇದೆಲ್ಲ ಪ್ರಾರಂಭದಲ್ಲಿ ಹೀಗೇ ಎಂದುಕೊಂಡು ನೋವು ಸಹಿಸಿಕೊಂಡು ನಾನು ಹಾಗೇ ಅಭ್ಯಾಸ ಮಾಡುತ್ತಿದ್ದೆ. ನಂತರ ಅವರ ಮನೆಗೆ ಪಾಠಕ್ಕೆ ಹೋದಾಗ ‘ಕೈಬೆರಳೇಕೆ ಹೀಗಾಗಿದೆ’ ಎಂದು ಕೇಳಿದಾಗ ನಾನು ಅವರಿಗೆ ವಿಷಯ ತಿಳಿಸಿದೆ. ಆಗವರು ‘ನಾನು ನಿನಗೆ ಜವಾ ಕೊಡಲೇ ಇಲ್ಲವೆ? ನಿನಗೆ ಕೊಡಲೆಂದು ಜೇಬಿನಲ್ಲಿ ಇಟ್ಟುಕೊಂಡಿದ್ದೆ. ಮರೆತೇಬಿಟ್ಟೆ ತೆಗೆದುಕೋ’ ಎಂದು ಕೊಟ್ಟರು.

ನಾನು ಬೆಂಗಳೂರಿಗೆ ಹೊರಟವನು, ಅವರ ಆಶೀರ್ವಾದ ಪಡೆಯಲು ಹೋದಾಗ, ‘ಈ ಎಂಟುದಿನ ಅಭ್ಯಾಸ ಮಾಡಿದ ಹಾಗೆ ಮಾಡುತ್ತಾ ಹೋದರೆ ನೀನು ಒಳ್ಳೆಯ ಸಂಗೀತಗಾರನಾಗುತ್ತೀಯ. ಅಷ್ಟು ಮಾತ್ರ ಹೇಳಬಲ್ಲೆ. ಆದರೆ ಯೋಚಿಸು, ನಿನಗೆ ಇಪ್ಪತ್ತೆರಡು ವಯಸ್ಸು. ನೀನ್ಯಾಕೆ ಈಗ ಸಂಗೀತ ಕಲಿಯುತ್ತೀಯಾ? ನಿನಗೆ ಎಷ್ಟೊಂದು ಅವಕಾಶವಿದೆ. ಜೊತೆಗೆ ನೀನು ಬೆಳೆದಿದ್ದೀಯ. ಶೈಕ್ಷಣಿಕವಾಗಿ ತುಂಬಾ ಮುಂದಿದ್ದೀಯ. ನೀನು ಒಳ್ಳೆಯ ಅಧಿಕಾರಿಯಾಗಬಹುದು. ಪ್ರೊಫೆಸರ್ ಆಗಬಹುದು. ಏನೇನೋ ಆಗಬಹುದು ಯೋಚಿಸು. ಆದರೆ ಬರಬೇಕು ಅನ್ನಿಸಿದರೆ ಬಾ’ ಅಂದರು. ನಾನು ಬೆಂಗಳೂರಿಗೆ ಬಂದೆ. ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಮರಳಿ ಹೋಗಿ ಬಾಗಿಲು ಬಡಿದೆ. ‘ಅರೆ ಆಗಯಾ? ಪಾಗಲ್​ ಆದ್ಮಿ ಹೋ. ಅಚ್ಛಾ, ಠೀಕ್ ಹೈ. ಆಜಾವ್, ಶುರು ಮಾಡು’ ಎಂದರು. ಒಂದು ವರ್ಷ ಬಾಂಬೆಯಲ್ಲಿ ಕಲಿಸಿದರು. ‘ಕೆಲಸ ಹುಡುಕಿಕೋ’ ಅಂದರು. ಆರ್ಯನ್ ಪಾತ್ ಪತ್ರಿಕೆಗೆ ಅಸಿಸ್ಟಂಟ್ ಎಡಿಟರ್ ಆಗಿ ಕೆಲಸ ಮಾಡಿದೆ.

ಸೌಜನ್ಯ : ರಾಗಮಾಲಾ ಪುಸ್ತಕ ಮಾಲಿಕೆ, ಮೈಸೂರು. 9900082773

ಇದನ್ನೂ ಓದಿ : Literature : ಅಭಿಜ್ಞಾನ ; ‘ನಿನಗೆ ಕೆಲವರ ನಾಟಕ ಸೇರೋದಿಲ್ಲ, ಆದರೆ ಅದನ್ನು ಆನಂದಿಸೋದನ್ನು ಕಲಿ ಮಾರಾಯಾ’