Journalist : ಶೆಲ್ಫಿಗೇರುವ ಮುನ್ನ; ‘ಪತ್ರಿಕೋದ್ಯಮ ಪ್ರವೇಶ’ ಸಿಬಂತಿ ಪದ್ಮನಾಭರ ಕೃತಿ ನಾಳೆಯಿಂದ ಓದಿಗೆ

Books on Journalism : ‘ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಕೃತಿಗಳು ಬಂದಿರುವುದು ಕಡಿಮೆ. ಅದರಲ್ಲೂ ಪತ್ರಿಕೋದ್ಯಮ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಗಳು ತುಂಬಾ ವಿರಳ. ಆ ಕೊರತೆಯನ್ನು ಪದ್ಮನಾಭ ಅವರು ತುಂಬಿದ್ದಾರೆ.’ ಡಾ. ಸತೀಶ್ ಕುಮಾರ್ ಅಂಡಿಂಜೆ

Journalist : ಶೆಲ್ಫಿಗೇರುವ ಮುನ್ನ; ‘ಪತ್ರಿಕೋದ್ಯಮ ಪ್ರವೇಶ’ ಸಿಬಂತಿ ಪದ್ಮನಾಭರ ಕೃತಿ ನಾಳೆಯಿಂದ ಓದಿಗೆ
ಲೇಖಕ ಡಾ. ಸಿಬಂತಿ ಪದ್ಮನಾಭ ಕೆ.ವಿ
ಶ್ರೀದೇವಿ ಕಳಸದ | Shridevi Kalasad

|

Jan 21, 2022 | 2:34 PM

New Book : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಸಹೃದಯರಿಬ್ಬರ ಅಭಿಪ್ರಾಯಗಳೂ ಇಲ್ಲಿವೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com 

*

ಕೃತಿ : ಪತ್ರಿಕೋದ್ಯಮ ಪ್ರವೇಶ (ಮಾಧ್ಯಮ ಅಧ್ಯಯನ ಪ್ರವೇಶಿಕೆ – 1)

ಲೇಖಕರು : ಡಾ. ಸಿಬಂತಿ ಪದ್ಮನಾಭ ಕೆ. ವಿ.

ಪುಟಗಳು : 160 

ಬೆಲೆ : ರೂ. 120 

ಪ್ರಕಾಶನ : ವಸಂತ ಪ್ರಕಾಶನ, ಬೆಂಗಳೂರು

*

ಹೊಸ ತಲೆಮಾರಿನ ಪತ್ರಿಕೋದ್ಯಮ ಮೇಷ್ಟ್ರುಗಳ ಪೈಕಿ ಅತ್ಯಂತ ಭರವಸೆ ಹುಟ್ಟಿಸಿರುವ ಬರಹಗಾರ, ಮಾತುಗಾರ, ಅಧ್ಯಾಪಕ – ಸಿಬಂತಿ ಪದ್ಮನಾಭ. ದಕ್ಷಿಣ ಕನ್ನಡ ಮೂಲದ ಸಿಬಂತಿ ತುಮಕೂರು ವಿವಿಯಲ್ಲಿ ಪತ್ರಿಕೋದ್ಯಮ ಆರಂಭವಾದಾಗಿನಿಂದಲೂ ಅದರ ಕರ್ಣಧಾರತ್ವ ವಹಿಸಿದವರು. ಪತ್ರಿಕಾವೃತ್ತಿಯ ಆಳಅಗಲಗಳನ್ನು ಸ್ವತಃ ಅರಿತಿರುವ ಅವರು ಪಾಠಮಾಡುವುದಷ್ಟೇ ಅಲ್ಲ ಸಮಕಾಲೀನ ವಿಚಾರಗಳ ಬಗ್ಗೆ ಆಗಾಗ ಬರೆಯುತ್ತಾರೆ. ಯಾರೂ ಗಮನಿಸದ ವಿಷಯಗಳನ್ನು ಎತ್ತಿ ಹೇಳುತ್ತಾರೆ. ಇಂದಿನ ಹಲವು ಮಾಧ್ಯಮಗಳನ್ನು ಸಕಾರಾತ್ಮಕವಾಗಿ ಬಳಸುತ್ತ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ‘ಪತ್ರಿಕೋದ್ಯಮ ಪ್ರವೇಶ’- ಮಾಧ್ಯಮರಂಗ ಪ್ರವೇಶಿಸಲು ಉತ್ಸುಕರಾಗಿರುವವರಿಗೆ ಮೊದಲ ಪಾಠ. ಹೊಸ ರಾಷ್ಟ್ರೀಯ ಶಿಕ್ಷಣನೀತಿ ಜಾರಿಗೊಂಡಿರುವ ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಪ್ರವೇಶ ಬಯಸುವವರಿಗೆ ಇಂಥದೊಂದು ಪುಸ್ತಕ ತುರ್ತಾಗಿ ಬೇಕಾಗಿತ್ತು. ಈ ನಿರ್ವಾತವನ್ನು ತುಂಬಿದ್ದಕ್ಕೆ ಸಿಬಂತಿಯವರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಿಗೂ ಅಗತ್ಯವಾದ ಪಠ್ಯಗಳನ್ನು ಕನ್ನಡದಲ್ಲಿ ರಚಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ.

ಪ್ರೊ. ನಿರಂಜನ ವಾನಳ್ಳಿ, ಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ

ನಾಡಿನ ವಿವಿಧ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಿರುವ ಹವ್ಯಾಸಿ ಬರಹಗಾರರೂ ಆಗಿರುವ ಡಾ. ಸಿಬಂತಿ ಪದ್ಮನಾಭ ಅವರು ಪತ್ರಿಕೋದ್ಯಮ ಶಿಕ್ಷಕ ಹೇಗಿರಬೇಕೆಂದು ತೋರಿಸಿಕೊಟ್ಟವರು. ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಈಗಾಗಲೇ ಕೆಲವು ಕೃತಿಗಳನ್ನು ಪ್ರಕಟಿಸಿರುವ ಅವರು ಮುಂದೆ ಪತ್ರಿಕೋದ್ಯಮ ಪಠ್ಯಕ್ರಮಕ್ಕನುಗುಣವಾಗಿ ಇನ್ನಷ್ಟು ಕೃತಿಗಳನ್ನು ಪ್ರಕಟಿಸುವ ಗುರಿ ಹೊಂದಿದ್ದಾರೆ. ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಕೃತಿಗಳು ಬಂದಿರುವುದು ಕಡಿಮೆ. ಅದರಲ್ಲೂ ಪತ್ರಿಕೋದ್ಯಮ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕೃತಿಗಳು ತುಂಬಾ ವಿರಳ. ಆ ಕೊರತೆಯನ್ನು ಪದ್ಮನಾಭ ಅವರು ತುಂಬಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬಂದು, ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆಯಲಿ ಎಂಬ ಆಶಯದೊಂದಿಗೆ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರುತ್ತೇನೆ.

ಡಾ. ಸತೀಶ್ ಕುಮಾರ್ ಅಂಡಿಂಜೆ, ಅಧ್ಯಕ್ಷರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ

*

ಪತ್ರಿಕೋದ್ಯಮಕ್ಕೆ ಹಳದಿ ಬಣ್ಣ ಮೆತ್ತಿಕೊಂಡದ್ದು ಎಲ್ಲಿ?

1833ರ ಸೆಪ್ಟೆಂಬರ್ 3ರಂದು ನ್ಯೂಯಾರ್ಕಿನ ಬೀದಿಗಳಲ್ಲಿ ಹೊಸಬಗೆಯ ಪತ್ರಿಕೆಯೊಂದು ಕಾಣಿಸಿಕೊಂಡು ಬಿಸಿಬಿಸಿ ದೋಸೆಯಂತೆ ಖರ್ಚಾಗತೊಡಗಿತು. ಮಾನವಾಸಕ್ತಿಯ ವರದಿಗಳು ಹಾಗೂ ಅಪರಾಧ ವಾರ್ತೆಗಳಿಂದ ತುಂಬಿದ್ದ ಈ ಪತ್ರಿಕೆಯನ್ನು ಜನ ಮಗಿಬಿದ್ದು ಕೊಂಡುಕೊಳ್ಳತೊಡಗಿದರು. ಅದು ಬೆಂಜಮಿನ್ ಡೇ ಎಂಬ ಯುವ ಮುದ್ರಕನೊಬ್ಬ ಹೊರತಂದ ‘ದಿ ನ್ಯೂಯಾರ್ಕ್ ಸನ್’ ಪತ್ರಿಕೆ. ನಾಲ್ಕು ಪುಟಗಳ ಈ ಪುಟಾಣಿ ಪತ್ರಿಕೆಯ ಬೆಲೆ ಕೇವಲ ಒಂದು ಪೆನ್ನಿ ಆಗಿದ್ದುದೇ ಅದರ ಜನಪ್ರಿಯತೆಗೆ ಪ್ರಮುಖ ಕಾರಣ. ರಸವತ್ತಾದ ಸುದ್ದಿಗಳನ್ನು ಪೋಣಿಸಿ ಕಡಿಮೆ ಬೆಲೆಗೆ ಮಾರುವ ಬೆಂಜಮಿನ್ ಡೇ ಪ್ರಯೋಗ ಪತ್ರಿಕೋದ್ಯಮದಲ್ಲೇ ಹೊಸದೊಂದು ಸಂಚಲನ ಸೃಷ್ಟಿಸಿತು. ನೋಡನೋಡುತ್ತಿದ್ದಂತೆ ‘ಸನ್’ ಪ್ರಸರಣೆ ಅಭೂತಪೂರ್ವವಾಗಿ ಬೆಳೆಯಿತು; ಅಮೇರಿಕ-ಇಂಗ್ಲೆಂಡ್‌ಗಳಲ್ಲಿ ಅತಿಹೆಚ್ಚು ಪ್ರಸರಣೆ ಹಾಗೂ ಗೌರವ ಹೊಂದಿದ್ದ ‘ಕೊರಿಯರ್ ಅಂಡ್ ಎನ್‌ಕ್ವಯರರ್’ ಹಾಗೂ ‘ದಿ ಟೈಮ್ಸ್ ಆಫ್ ಲಂಡನ್’ ಪತ್ರಿಕೆಗಳನ್ನೂ ಹಿಂದಿಕ್ಕಿಬಿಟ್ಟಿತು. ‘ದಿ ಟೈಮ್ಸ್ ಆಫ್ ಲಂಡನ್’ನ ಆಗಿನ ಪ್ರಸರಣೆ 10,000ದಷ್ಟಿದ್ದರೆ ‘ಸನ್’ ಪ್ರಸರಣೆ 15,000ಕ್ಕಿಂತಲೂ ಹೆಚ್ಚಿತ್ತು.

ಡೇಯ ಜನಪ್ರಿಯ ‘ಪೆನ್ನಿ ಪ್ರೆಸ್’ ಮಾದರಿಯ ಜಾಡುಹಿಡಿದು ಇನ್ನಷ್ಟು ಪತ್ರಿಕೆಗಳು ಬಂದವು. ಜೇಮ್ಸ್ ಬೆನೆಟ್ ಎಂಬಾತ 1835ರಲ್ಲಿ ‘ನ್ಯೂಯಾರ್ಕ್ ಹೆರಾಲ್ಡ್’ ಎಂಬ ಪೆನ್ನಿ ಪತ್ರಿಕೆ ಆರಂಭಿಸಿ ಇನ್ನಷ್ಟು ಹೊಸ ಪ್ರಯೋಗಗಳನ್ನು ಬಳಕೆಗೆ ತಂದ. ಅಲ್ಲಿಯವರೆಗೆ ಪತ್ರಿಕೆಗಳು ಸರ್ಕಾರಿ ದಾಖಲೆಗಳಲ್ಲಿದ್ದ ಮಾಹಿತಿಯನ್ನಷ್ಟೇ ಸುದ್ದಿಯಾಗಿ ಪ್ರಕಟಿಸುತ್ತಿದ್ದವು. ಬೆನೆಟ್ ಸಂದರ್ಶನ ಹಾಗೂ ಪ್ರತ್ಯಕ್ಷ ವೀಕ್ಷಣೆಯ ಆಧಾರದಲ್ಲಿ ಸುದ್ದಿಗಳನ್ನು ಪ್ರಕಟಿಸುವ ಹೊಸ ಸಂಪ್ರದಾಯ ಆರಂಭಿಸಿದ. ಸ್ಥಳೀಯ ವಾರ್ತೆಗಳನ್ನು, ಅಧಿಕಾರಿಗಳ ಭ್ರಷ್ಟಾಚಾರದ ವಿವರಗಳನ್ನು ಹೆಚ್ಚಾಗಿ ಪ್ರಕಟಿಸುತ್ತಿದ್ದ. ಅವನ ಪತ್ರಿಕೆಗೆ ಸಾಕಷ್ಟು ಜಾಹೀರಾತುಗಳು ದೊರೆಯುತ್ತಿದ್ದರಿಂದ ರಾಜಕೀಯವಾಗಿಯೂ ಸ್ವತಂತ್ರವಾಗಿರುವುದು ಸಾಧ್ಯವಾಗಿತ್ತು.

Acchigoo Modhalu excerpt from Patrikodyama Pravesh Dr Sibanthi Padmanabha KV Published by Vasantha Prakashana

ಬೆಂಜಾಮಿನ್ ಡೇ ಮತ್ತು ‘ದಿ ಸನ್’ ಪತ್ರಿಕೆ

ಪೆನ್ನಿ ಪ್ರೆಸ್ ಮಾದರಿಯು ಪತ್ರಿಕೋದ್ಯಮ ವಿಸ್ತಾರವಾಗಿ ಬೆಳೆಯುವುದಕ್ಕೆ ಕಾರಣವಾಯಿತು. ಪತ್ರಿಕೋದ್ಯಮಿಗಳೂ ಶ್ರೀಮಂತರಾದರು. ಸ್ಟೀಮ್ ಚಾಲಿತ ಮುದ್ರಣ ಯಂತ್ರ ಹಾಗೂ ಸಿಲಿಂಡರ್ ಪ್ರೆಸ್‌ಗಳ ಆವಿಷ್ಕಾರವೂ ಪತ್ರಿಕೋದ್ಯಮದ ಬೆಳವಣಿಗೆ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಗುಟೆನ್‌ಬರ್ಗ್ ಮಾದರಿಯ ಮುದ್ರಣಯಂತ್ರ ಗಂಟೆಗೆ ಕೇವಲ 125 ಪತ್ರಿಕೆಗಳನ್ನು ಮುದ್ರಿಸಿದರೆ, ಹೊಸ ಮುದ್ರಣ ಯಂತ್ರ 18,000 ಪ್ರತಿಗಳನ್ನು ಮುದ್ರಿಸುತ್ತಿತ್ತು.

ಸುದ್ದಿಸಂಗ್ರಹವೆಂಬ ಸಾಹಸ : ಸಂವಹನ ತಂತ್ರಜ್ಞಾನ ಬಾಲ್ಯಾವಸ್ಥೆಯಲ್ಲಿದ್ದ ಪತ್ರಿಕೋದ್ಯಮದ ಆರಂಭಿಕ ವರ್ಷಗಳಲ್ಲಿ ಸುದ್ದಿಸಂಗ್ರಹ ಒಂದು ದುರ್ದಮ್ಯ ಕೆಲಸವೇ ಆಗಿತ್ತು. ಹಡಗುಗಳ ಮೂಲಕ ಯುರೋಪಿಯನ್ ಸುದ್ದಿಗಳು ತಲುಪುವುದಕ್ಕೆ ಪತ್ರಿಕಾ ಸಂಪಾದಕರು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಕಾಯಬೇಕಿತ್ತು. ಸುದ್ದಿಸಂಗ್ರಹವನ್ನು ಅಭಿವೃದ್ಧಿಪಡಿಸಲು ಸಂಪಾದಕರು ವರದಿಗಾರರನ್ನು ನೇಮಿಸಿಕೊಳ್ಳುವ ಪರಿಪಾಠ ಆರಂಭಿಸಿದರು. 1792ರ ವೇಳೆಗೆ ಲಂಡನ್‌ನ ‘ಲಾಯ್ಡ್ಸ್ ಲಿಸ್ಟ್’ ಎಂಬ ಪತ್ರಿಕೆ 28 ವಿವಿಧ ಬಂದರುಗಳಲ್ಲಿ 32 ವರದಿಗಾರರನ್ನು ನೇಮಿಸಿತ್ತು.

ಅಮೇರಿಕದಲ್ಲಿ ಪತ್ರಿಕಾ ಸಂಪಾದಕರು ಡಾಕ್‌ಗೇ ತೆರಳಿ ಹಡಗುಗಳಲ್ಲಿ ಬರುವ ಸುದ್ದಿಗಳನ್ನು ಸಂಗ್ರಹಿಸುತ್ತಿದ್ದರು. ದೋಣಿಗಳಲ್ಲಿ ಹೋಗಿ ಉಳಿದವರಿಗಿಂತ ಮೊದಲೇ ಸುದ್ದಿ ಸಂಗ್ರಹಿಸಿಕೊಂಡುಬರುವ ಪ್ರವೃತ್ತಿ ಆಮೇಲೆ ಆರಂಭವಾಯಿತು. ಸುದ್ದಿಸಂಗ್ರಹ ತಂತ್ರಗಳು ಲಂಡನ್‌ನಲ್ಲಿ ಇನ್ನೂ ಅಭಿವೃದ್ಧಿಯಾಗಿದ್ದವು. 18ನೇ ಶತಮಾನದ ಕೊನೆಯಲ್ಲಿ ವರದಿಗಾರರಿಗೆ ಪಾರ್ಲಿಮೆಂಟ್ ಪ್ರವೇಶಕ್ಕೆ ಅವಕಾಶ ದೊರೆತದ್ದು ಒಂದು ಮಹತ್ವದ ಬೆಳವಣಿಗೆಯಾದರೂ ಅವರು ಏನನ್ನೂ ಟಿಪ್ಪಣಿ ಮಾಡಿಕೊಳ್ಳಲು ಅನುಮತಿಯಿರಲಿಲ್ಲ. 1783ರಲ್ಲಿ ಅದಕ್ಕೂ ಅನುಮತಿ ದೊರೆಯಿತು. ಆಗ ಶೀಘ್ರಲಿಪಿಯ ಕೌಶಲ ಬೆಳೆಸಿಕೊಳ್ಳುವುದು ಪತ್ರಕರ್ತರಿಗೆ ಅನಿವಾರ್ಯವಾಯಿತು. 1807ರಲ್ಲಿ ‘ದಿ ಟೈಮ್ಸ್ ಆಫ್ ಲಂಡನ್’ ಪತ್ರಿಕೆ ಹೆನ್ರಿ ರಾಬಿನ್‌ಸನ್ ಎಂಬಾತನನ್ನು ನೆಪೋಲಿಯನ್ ಯುದ್ಧಗಳ ಸಾಕ್ಷಾತ್ ವರದಿಗಾಗಿ ಕಳುಹಿಸಿಕೊಟ್ಟಿತು. ಇದಕ್ಕೂ ಮುನ್ನ ಪತ್ರಕರ್ತ ಜೇಮ್ಸ್ ಪರ‍್ರಿ ಫ್ರೆಂಚ್ ಕ್ರಾಂತಿಯ ಖುದ್ದು ವರದಿಗಾರಿಕೆಗಾಗಿ ತೆರಳಿದ್ದಿದೆ. ಅಮೇರಿಕದಲ್ಲಿ ಪೆನ್ನಿ ಪತ್ರಿಕೆಗಳಿಗೆ ಪೊಲೀಸರೇ ಪ್ರಮುಖ ಸುದ್ದಿಮೂಲವಾಗಿದ್ದರು. ಈ ಪತ್ರಿಕೆಗಳು ಪ್ರಸರಣೆಯಲ್ಲಿ ಬೆಳೆದಾಗ ವರದಿಗಾರರನ್ನು ನೇಮಿಸಿಕೊಳ್ಳಲೇಬೇಕಾಯಿತು. ವರದಿಗಾರರ ಸಂಖ್ಯೆ ಬೆಳೆದಾಗ ಒಬ್ಬನೇ ವ್ಯಕ್ತಿಯ ಅಭಿಪ್ರಾಯವನ್ನು ಬಿಂಬಿಸುವ ಪತ್ರಿಕೆಗಳ ಪ್ರವೃತ್ತಿ ತಾನಾಗಿಯೇ ಮರೆಯಾಗತೊಡಗಿತು. ವ್ಯಕ್ತಿನಿಷ್ಠ ವರದಿಗಳ ಜಾಗದಲ್ಲಿ ವಸ್ತುನಿಷ್ಠ ಸುದ್ದಿಗಳು ಕಾಣಿಸಿಕೊಂಡವು.

ಟೆಲಿಗ್ರಾಫ್‌ನ ಆವಿಷ್ಕಾರ (1837) ಸುದ್ದಿಸಂಗ್ರಹದ ವೃತ್ತಿಗೆ ಮಹತ್ವದ ತಿರುವು ನೀಡಿತು. ಪತ್ರಿಕೆಗಳು ಟೆಲಿಗ್ರಾಫ್ ಕಂಪನಿಗಳ ಪ್ರಮುಖ ಗ್ರಾಹಕರಾದವು. ಅಸೋಸಿಯೇಟೆಡ್ ಪ್ರೆಸ್ (ಎಪಿ)ಯಂತಹ ಸುದ್ದಿಸಂಸ್ಥೆಗಳು ತಲೆಯೆತ್ತಿದವು. ನ್ಯೂಯಾರ್ಕಿನ ಪತ್ರಿಕೆಗಳೆಲ್ಲ ಒಟ್ಟಾಗಿ 1846ರಲ್ಲಿ ಸಹಕಾರಿ ತತ್ವದಲ್ಲಿ ಆರಂಭಿಸಿದ ಸುದ್ದಿಸಂಸ್ಥೆ ಎಪಿ.

1861ರಿಂದ 1865ರವರೆಗೆ ನಡೆದ ಅಮೇರಿಕದ ಆಂತರಿಕ ಕದನ (ಸಿವಿಲ್ ವಾರ್) ವರದಿಗಾರಿಕೆ ಪ್ರಬುದ್ಧವಾಗಿ ಬೆಳೆಯುವುದಕ್ಕೆ ಕಾರಣವಾಯಿತು. ಈ ಅವಧಿಯಲ್ಲಿ ಅಮೇರಿಕದಲ್ಲಿ ಪತ್ರಿಕೋದ್ಯಮವೂ ಅಭೂತಪೂರ್ವ ಬೆಳವಣಿಗೆ ಸಾಧಿಸಿತು. ತಾಜಾ ಮತ್ತು ಮಹತ್ವದ ಸುದ್ದಿಗಳನ್ನು ಆರಂಭದಲ್ಲೇ ಹೇಳಿಬಿಡುವ ಅವಶ್ಯಕತೆಯನ್ನು ಮನಗಂಡ ಪತ್ರಕರ್ತರು ವರದಿಗಾರಿಕೆಯ ಸಾಂಪ್ರದಾಯಿಕ ಕಥನ ಶೈಲಿಯನ್ನು ಬಿಟ್ಟು ಇಂದು ನಾವು ಕಾಣುವ ‘ತಲೆಕೆಳಗಾದ ತ್ರಿಭುಜಾಕೃತಿ’ ಶೈಲಿಯ ((Inverted Pyramid Style) ವರದಿಗಾರಿಕೆಯನ್ನು ನೆಚ್ಚಿಕೊಂಡರು. 1904ರಲ್ಲಿ ಮಿಸೌರಿ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವಿಭಾಗ ಆರಂಭವಾಗುವುದರೊಂದಿಗೆ ಪತ್ರಿಕೋದ್ಯಮ ಒಂದು ಅಧ್ಯಯನದ ವಿಷಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಿತು. 1923 ರಲ್ಲಿ ಅಮೇರಿಕ ಪತ್ರಿಕಾ ಸಂಪಾದಕರ ಸಂಘವು ಪತ್ರಿಕೋದ್ಯಮಕ್ಕೊಂದು ನೀತಿಸಂಹಿತೆ ರಚಿಸುವ ಪ್ರಯತ್ನ ಮಾಡಿತು. “ವರದಿಗಳು ಅಭಿಪ್ರಾಯ ಅಥವಾ ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು” ಎಂಬುದು ಅದರ ಪ್ರಮುಖ ಅಂಶಗಳಲ್ಲೊಂದಾಗಿತ್ತು.

ಪೀತ ಪತ್ರಿಕೋದ್ಯಮ : ಪತ್ರಿಕೋದ್ಯಮದ ಆರಂಭದ ದಿನಗಳಲ್ಲೂ ಪತ್ರಿಕೆಗಳಲ್ಲಿ ಅಪರಾಧ, ಹಿಂಸೆ, ಲೈಂಗಿಕತೆಗಳ ವೈಭವೀಕರಣ ಇತ್ತು. ಪೆನ್ನಿ ಪ್ರೆಸ್ ಕಾಲದಲ್ಲಿ ಅದು ಇನ್ನೂ ಹೆಚ್ಚಾಯಿತು. ಈ ಪ್ರವೃತ್ತಿಯನ್ನು ಇನ್ನಷ್ಟು ಬೆಳೆಸಿ ಬಳಸಿಕೊಂಡವನು ಜೋಸೆಫ್ ಪುಲಿಟ್ಜರ್. ಒಬ್ಬ ಧೀಮಂತ ಪತ್ರಕರ್ತನಾಗಿಯೇ ಪ್ರವರ್ಧಮಾನಕ್ಕೆ ಬಂದ ಪುಲಿಟ್ಜರ್ ಅತಿಯಾದ ಸ್ಪರ್ಧೆಗೆ ಬಿದ್ದು ಪತ್ರಿಕೋದ್ಯಮದ ಕೆಟ್ಟ ಆಯಾಮವೊಂದರ ಉಗಮಕ್ಕೂ ಕಾರಣನಾದ.

Acchigoo Modhalu excerpt from Patrikodyama Pravesh Dr Sibanthi Padmanabha KV Published by Vasantha Prakashana

ಸೇಂಟ್ ಲೂಯಿಸ್ ಪೋಸ್ಟ್​ ಡಿಸ್ಪ್ಯಾಚ್​

ರಾಜಕೀಯದಲ್ಲಿ ಸಕ್ರಿಯನಾಗಿದ್ದ ಪುಲಿಟ್ಜರ್ ಎರಡು ಪತ್ರಿಕೆಗಳನ್ನು ಜತೆಯಾಗಿಸಿ 1878ರಲ್ಲಿ ‘ಸೈಂಟ್ ಲೂಯಿಸ್ ಪೋಸ್ಟ್-ಡಿಸ್‌ಪ್ಯಾಚ್’ ಎಂಬ ಪತ್ರಿಕೆ ಆರಂಭಿಸಿದ. ಹಲವಾರು ಹಗರಣಗಳನ್ನು ಬೆಳಕಿಗೆ ತರುತ್ತಾ ಜನಸಾಮಾನ್ಯರ ಧ್ವನಿಯಾಗಿ ಆ ಪತ್ರಿಕೆ ಬಹುಬೇಗನೆ ಪ್ರಸಿದ್ಧಿಯಾಯಿತು. ಶ್ರೀಮಂತನಾಗಿ ಬೆಳೆದ ಪುಲಿಟ್ಜರ್ 1883ರಲ್ಲಿ ‘ನ್ಯೂಯಾರ್ಕ್ ವರ್ಲ್ಡ್’ ಎಂಬ ಪತ್ರಿಕೆಯ ಮಾಲೀಕತ್ವವನ್ನು ವಹಿಸಿಕೊಂಡ. ನಷ್ಟದಲ್ಲಿದ್ದ ಆ ಪತ್ರಿಕೆಯನ್ನು ಮೇಲೆತ್ತುವುದಕ್ಕಾಗಿ ಆತ ಮಾನವಾಸಕ್ತಿ ವರದಿಗಳು ಹಾಗೂ ವೈಭವೀಕೃತ ಸುದ್ದಿಗಳನ್ನು ಪ್ರಕಟಿಸತೊಡಗಿದ. ಈ ನಡುವೆ ವಿಲಿಯಂ ರ‍್ಯಾಂಡಾಲ್ಫ್ ಹರ್ಸ್ಟ್ ಎಂಬಾತ ‘ನ್ಯೂಯಾರ್ಕ್ ಜರ್ನಲ್’ ಎಂಬ ಪತ್ರಿಕೆಯನ್ನು ಆರಂಭಿಸಿ ಪುಲಿಟ್ಜರ್‌ನೊಂದಿಗೆ ನೇರ ಸ್ಪರ್ಧೆಗೆ ಧುಮುಕಿದ. ತಮ್ಮ ಪತ್ರಿಕೆಗಳ ಪ್ರಸರಣೆ ಹೆಚ್ಚಿಸುವುದಕ್ಕಾಗಿ ಇಬ್ಬರೂ ನಾನಾ ತಂತ್ರಗಳಿಗೆ ಮೊರೆಹೊಕ್ಕರು. ದರಸಮರ ಆರಂಭಿಸಿದರು. ಎರಡೂ ಪತ್ರಿಕೆಗಳು ದರ ಇಳಿಸಿಕೊಂಡು ಪೆನ್ನಿ ಪತ್ರಿಕೆಗಳಾದವು. ಪರಸ್ಪರರ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಹೆಚ್ಚಿನ ಸಂಬಳದ ಆಮಿಷ ತೋರಿಸಿ ತಮ್ಮ ಪತ್ರಿಕೆಗಳಿಗೆ ಸೆಳೆದುಕೊಂಡರು. ಹಿಂಸೆ, ಲೈಂಗಿಕತೆಗಳೇ ಪತ್ರಿಕೆಗಳಲ್ಲಿ ವಿಜೃಂಭಿಸಿದವು. ದೊಡ್ಡದೊಡ್ಡ ಶೀರ್ಷಿಕೆಗಳು ರಾರಾಜಿಸಿದವು. ಎರಡೂ ಪತ್ರಿಕೆಗಳು ಪ್ರಸರಣೆಯಲ್ಲಿ ಲಕ್ಷದ ಗಡಿ ದಾಟಿದವು. ಹೀಗೆ ಪತ್ರಿಕೋದ್ಯಮದ ಇತಿಹಾಸದಲ್ಲೊಂದು ಅನಪೇಕ್ಷಿತ ಅಧ್ಯಾಯ ತೆರೆದುಕೊಂಡಿತು.

ಇಂತಹ ಕೆಟ್ಟ ಚಾಳಿಗೆ ‘ಪೀತ ಪತ್ರಿಕೋದ್ಯಮ’ ಎಂಬ ಹೆಸರು ಹೇಗೆ ಬಂತೆಂಬ ಪ್ರಶ್ನೆ ಕಾಡದಿರದು. ಅದೊಂದು ಸ್ವಾರಸ್ಯಕರ ಸಂಗತಿ. ಪುಲಿಟ್ಜರ್‌ನ ‘ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆಯಲ್ಲಿ ‘ಹೋಗನ್ಸ್ ಅಲೇ’ ಎಂಬ ಕಾಮಿಕ್ಸ್ ಪ್ರಕಟವಾಗುತ್ತಿತ್ತು. ಅದನ್ನು ರಚಿಸುತ್ತಿದ್ದವನು ರಿಚರ್ಡ್ ಔಟ್‌ಕಾಲ್ಟ್ ಎಂಬ ವ್ಯಂಗ್ಯಚಿತ್ರಕಾರ. ಈ ಕಾಮಿಕ್ಸ್​ನ ಪ್ರಮುಖ ಆಕರ್ಷಣೆ ಮಿಕ್ಕಿ ದುಗನ್ ಎಂಬ ಬೋಳುತಲೆಯ ಮಗುವಿನ ಪಾತ್ರ. ಇಡೀ ಪತ್ರಿಕೆ ಕಪ್ಪು-ಬಿಳುಪು ಬಣ್ಣದಲ್ಲಿ ಪ್ರಕಟವಾಗುತ್ತಿದ್ದರೆ ಇದೊಂದು ಚಿತ್ರ ಮಾತ್ರ ಹಳದಿ ಬಣ್ಣ ಹೊಂದಿರುತ್ತಿತ್ತು. ಹೀಗಾಗಿ ಮಿಕ್ಕಿ ದುಗನ್ ಪಾತ್ರ ‘ಯೆಲ್ಲೋ ಕಿಡ್’ ಎಂದೇ ಜನಪ್ರಿಯವಾಯಿತು. ಆಗಿನ್ನೂ ಪುಲಿಟ್ಜರ್- ಹರ್ಸ್ಟ್ ಪೈಪೋಟಿ ತಾರಕಕ್ಕೇರಿತ್ತು. ಹರ್ಸ್ಟ್ ಹೆಚ್ಚು ಸಂಬಳದ ಆಸೆ ತೋರಿಸಿ ಪುಲಿಟ್ಜರ್‌ನ ವ್ಯಂಗ್ಯಚಿತ್ರಕಾರನನ್ನು ತನ್ನ ಪತ್ರಿಕೆಗೆ ಸೆಳೆದುಕೊಂಡ. ರಿಚರ್ಡ್ ಜೊತೆಗೆ ಯೆಲ್ಲೋ ಕಿಡ್ ಕೂಡ ‘ನ್ಯೂಯಾರ್ಕ್ ಜರ್ನಲ್’ಗೆ ಸ್ಥಳಾಂತರವಾಯಿತು.

ಆದರೆ ರಿಚರ್ಡ್​ಗೆ ಯೆಲ್ಲೋ ಕಿಡ್ ಮೇಲೆ ಕೃತಿಸ್ವಾಮ್ಯ ಹೊಂದುವುದು ಸಾಧ್ಯವಾಗಲಿಲ್ಲ. ಪುಲಿಟ್ಜರ್, ಜಾರ್ಜ್ ಲುಕ್ಸ್ ಎಂಬ ಇನ್ನೊಬ್ಬ ವ್ಯಂಗ್ಯಚಿತ್ರಕಾರನನ್ನು ನೇಮಿಸಿಕೊಂಡು ಅದೇ ಕಾಮಿಕ್ಸನ್ನು ತನ್ನ ಪತ್ರಿಕೆಯಲ್ಲೂ ಪ್ರಕಟಿಸತೊಡಗಿದ. ಅಂದರೆ ಏಕಕಾಲಕ್ಕೆ ಎರಡೂ ಪತ್ರಿಕೆಗಳಲ್ಲಿ ಯೆಲ್ಲೋ ಕಿಡ್ ಪ್ರಕಟವಾಗುತ್ತಿತ್ತು. ಇದರಿಂದಾಗಿ ಜನರು ಈ ಪತ್ರಿಕೆಗಳನ್ನು “ಯೆಲ್ಲೋ ಕಿಡ್ ಪೇರ‍್ಸ್” ಎಂದು ಕರೆಯಲಾರಂಭಿಸಿದರು. ಕ್ರಮೇಣ ಈ ರೀತಿ ಅತಿಯಾದ ಸ್ಪರ್ಧೆಗೆ ಬೀಳುವ, ಹಸಿಹಸಿ ವೈಭವೀಕೃತ ವರದಿಗಾರಿಕೆ ಮಾಡುವ ಪತ್ರಿಕೆಗಳನ್ನು ‘ಯೆಲ್ಲೋ ಪೇರ್ಸ್​’ ಎಂದು, ಇಂತಹ ಪ್ರವೃತ್ತಿಗೆ ‘ಯೆಲ್ಲೋ ಜರ್ನಲಿಸಂ’ ಅಥವಾ ಪೀತ ಪತ್ರಿಕೋದ್ಯಮ ಎಂದು ಕರೆಯುವ ಪರಿಪಾಠ ಆರಂಭವಾಯಿತು. ಪೀತ ಪತ್ರಿಕೋದ್ಯಮಕ್ಕೂ ಹಳದಿ ಬಣ್ಣಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂದು ಅಚ್ಚರಿಪಡಬಹುದಾದರೂ ಇದೊಂದು ವಿಚಿತ್ರ ಸತ್ಯವಂತೂ ಹೌದು!

ಖರೀದಿಗೆ ಸಂಪರ್ಕಿಸಿ : 9449525854

*

Acchigoo Modhalu excerpt from Patrikodyama Pravesh Dr Sibanthi Padmanabha KV Published by Vasantha Prakashana

ಪದ್ಮನಾಭರ ಪ್ರಕಟಿತ ಕೃತಿಗಳು

ಡಾ. ಸಿಬಂತಿ ಪದ್ಮನಾಭ ಕೆ.ವಿ : ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮದ ಇವರು ವೃತ್ತಿಯಿಂದ ಪತ್ರಿಕೋದ್ಯಮ ಬೋಧಕರು, ಪ್ರವೃತ್ತಿಯಿಂದ ಲೇಖಕರು, ಯಕ್ಷಗಾನ ಕಲಾವಿದರು. ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ-ಇಂಗ್ಲಿಷ್ ಸಾಹಿತ್ಯ-ಮನಃಶಾಸ್ತ್ರದೊಂದಿಗೆ ಬಿ.ಎ. ವ್ಯಾಸಂಗ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ‘ವಿಜಯ್ ಟೈಮ್ಸ್’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲಿ ಐದು ವರ್ಷ ಪತ್ರಕರ್ತರಾಗಿ ಸೇವೆ. 2010ರಿಂದ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಗಳಲ್ಲಿ ಅಧ್ಯಾಪನ. ‘ಜಾನಪದ ರಂಗಭೂಮಿಯ ಮೂಲಕ ಅಭಿವೃದ್ಧಿ ಸಂವಹನ: ಯಕ್ಷಗಾನದ ಒಂದು ಅಧ್ಯಯನ’ ವಿಷಯದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ.

‘ಪೊರೆ ಕಳಚಿದ ಮೇಲೆ’ (ಕವನ ಸಂಕಲನ), ‘ತುಮಕೂರು ಜಿಲ್ಲೆಯ ಪತ್ರಿಕೋದ್ಯಮ’ (ಸಂಶೋಧನೆ), ‘ಮಾಧ್ಯಮಶೋಧ’ (ಅಂಕಣ ಬರೆಹ), ‘ನುಡಿರಂಜನ’ (ಸಂಪಾದಿತ), ‘ಡಿಜಿಟಲ್ ಮಾಯೆಯೊಳಗೆ ಮಾಧ್ಯಮಲೋಕ’ ಪ್ರಕಟಿತ ಕೃತಿಗಳು. ನಾಡಿನ ಹಲವು ಕನ್ನಡ, ಇಂಗ್ಲಿಷ್ ಪತ್ರಿಕೆಗಳಲ್ಲಿ ನೂರಾರು ಲೇಖನಗಳು, ಅಂಕಣಗಳು, ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಸಂಶೋಧನ ಪ್ರಬಂಧಗಳು ಪ್ರಕಟಗೊಂಡಿವೆ.

ಇದನ್ನೂ ಓದಿ : Journalism : ‘ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಆ ಮುತ್ತುಗಳಿಗಾಗಿ

ಇದನ್ನೂ ಓದಿ : New Book : ಶೆಲ್ಫಿಗೇರುವ ಮುನ್ನ ; ಉದ್ಯಮಿ ಹೇಮಾ ಹಟ್ಟಂಗಡಿ ‘ಗೂಡಿನಿಂದ ಬಾನಿಗೆ’ ಹಾರಿದ್ದನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದಾರೆ ಸಂಯುಕ್ತಾ ಪುಲಿಗಲ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada