ಅನುಸಂಧಾನ | Anusandhana : ಈಗ ಕಾರ್ಟೆಸಿಯನ್ನನ ಘೋಷವಾಕ್ಯ ತನ್ನನ್ನು ತಾನು ಬದಲಿಸಿಕೊಳ್ಳಬೇಕಾಗಿ ಬಂತು: ಬದುಕಿನ ಮೇಲೆ, ಚಿತ್ತಸ್ವಾಸ್ಥ್ಯದ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಳ್ಳುವುದಕ್ಕಾಗಿ ಚಿಮನ್ ತಾನೇ ತನಗಾಗಿ ಕಟ್ಟಿಕೊಂಡ ಪುಸ್ತಕಗಳ ಜಗತ್ತಿನಲ್ಲಿ ಹೆಚ್ಚು ಹೆಚ್ಚು ತನ್ಮಯನಾಗುವಂತಾಯಿತು. ತನಗಿನ್ನೂ ಸಂವೇದನೆಗಳಿವೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ತನ್ನನ್ನೇ ತಾನು ಚಿವುಟಿಕೊಂಡು ನೋಡುವವನ ಹಾಗೆ ಚಿಮನ್ ತಾನಿನ್ನೂ ಬದುಕಿದ್ದೇನೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಓದತೊಡಗಿದ. ಅವನು ಯೋಚಿಸುತ್ತಿದ್ದ ಮತ್ತು ಹಾಗಾಗಿ ಅವನು ಇದ್ದ. ವರ್ಷದಿಂದ ವರ್ಷಕ್ಕೆ ಅವನು ಕುಸಿಯುತ್ತಿದ್ದ ಹಾಗೆಲ್ಲ ಅವನ ಯೋಚಿಸಬಲ್ಲ ಚೈತನ್ಯ ಅವನನ್ನು ಪೊರೆಯುತ್ತಲೇ ಬಂತು; ಅವನು ತನ್ನ ಅತ್ಯದ್ಭುತವಾದ ಬೌದ್ಧಿಕ ಸಾಮರ್ಥ್ಯಕ್ಕೆ, ಸರಿಸುಮಾರು ಫೋಟೋಗ್ರಾಫಿಕ್ ಎನ್ನಬಹುದಾದ ಸ್ಮರಣಶಕ್ತಿಗೆ ಅಂಟಿಕೊಂಡ.
ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)
ಮೊಮ್ಮಗನು ಹೇಳುವ ಅಜ್ಜನ ಕತೆಯಿದು. ಹಾಗೆ ಸಾಂಸಾರಿಕ ಕಥನ. ಇಪ್ಪತ್ತು ಸಾವಿರ ಪುಸ್ತಕಗಳ ಮನೆಯ ಕಥನವಿದು. ಹಾಗಾಗಿ ಸಾಹಿತ್ಯಿಕ. ಚರಿತ್ರೆ, ರಾಜಕೀಯ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಸೇರಿಕೊಂಡು ಬಂದ ಒಂದು ಜೀವನಗಾಥೆಯಿದು. ಯಾವ ರೂಪಕಗಳ ಆಧಾರಪಡೆದು ವಿವರಿಸಬೇಕೊ ತಿಳಿಯದ ಒಂದು ಅದ್ಭುತ ಪುಸ್ತಕವೆಂದು ಮುಂಗಡವಾಗಿಯೇ ಇನ್ನಿಲ್ಲದಂತೆ ಹೊಗಳಿಸಿಕೊಂಡಿರುವ, ಬಹು ನಿರೀಕ್ಷಿತವಾಗಿದ್ದೂ ಹೊರಬರದೇ ಇದ್ದ ಈ ಪುಸ್ತಕದ ಹೆಸರು ದ ಹೌಸ್ ಆಫ್ ಟ್ವೆಂಟಿ ಥೌಸಂಡ್ ಬುಕ್ಸ್. ಸಾಶಾ ಅಬ್ರಾಮಸ್ಕಿ (Sasha Abramsky) ಬರೆದ ಈ ಪುಸ್ತಕದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ.
ಪ್ರವೇಶಿಕೆ-ಒಂದು
ಶುಭವಿದಾಯ
ತನ್ನನ್ನು ಅವನು ಪುಸ್ತಕಗಳದ್ದೇ ಒಂದಂಶವೆಂದು ತಿಳಿದಿದ್ದನೆ, ತಾನೇ ಪುಸ್ತಕಗಳ ಒಂದಂಶವೆಂದುಕೊಂಡಿದ್ದನೆ, ನನಗಂತೂ ತಿಳಿಯದು.
ಒಬ್ಬ ಮೌನಿಗಿಂತ, ಒಬ್ಬ ಸಭ್ಯನಿಗಿಂತ, ಆದಿಯಿಲ್ಲದ ದುಗುಡದಲ್ಲಿರುವ ಒಬ್ಬ ವ್ಯಕ್ತಿಗಿಂತ ದೊಡ್ಡ ಸದ್ದು ಈ ಭೂಮಿಯ ಮೇಲೆ ಇನ್ಯಾವುದೂ ಇರಲಾರದು. ಕರಿಹಲಗೆಯ ಮೇಲೆ ಉಗುರಿನಿಂದ ಗೀಚುವ ಸದ್ದಾಗಲಿ, ಹಲ್ಲಿನ ಆಳಕ್ಕಿಳಿವ ಡ್ರಿಲ್ಲಿಂಗ್ ಮಶಿನಿನ ಕಿರ್ರೆಂಬ ಸದ್ದಾಗಲಿ, ಬೇರೆ ಇನ್ಯಾವುದೇ ಹೋಲಿಕೆಯೂ ಇದಕ್ಕೆ ಇಲ್ಲ. ಯಾವುದೂ ಇಲ್ಲ. ಭಯಂಕರ ಭೀತಿಯಿಂದ ಹುಯಿಲಿಟ್ಟಂತೆ ಇರುತ್ತದೆ ಅದು. ಎಲ್ಲಾ ಸದ್ದುಗಳನ್ನೂ ಗುಳುಂಕರಿಸುವ ಒಂದು ಸ್ಪಷ್ಟ ಬ್ಲ್ಯಾಕ್‌ಹೋಲ್‌ನಂತೆ ಇರುತ್ತದೆ ಅದು. ಅಸಾಮಾನ್ಯವಾದ, ಅಳವಿಗೆ ನಿಲುಕದ, ಆಳ ಪ್ರಪಾತಕ್ಕೆ ನೇರವಾಗಿ ಧುಮುಕುವ ಹಳ್ಳವು ನಿಮ್ಮನ್ನು ಬಿಡದೇ ಸೆಳೆದೊಯ್ಯುವಂತಿರುತ್ತದೆ ಅದು. ಇದು ನಿರಂತರ, ಇದು ನಿರಂತರ ಎಂದು ಈ ಸದ್ದು ಘೋಷಿಸುತ್ತಿರುತ್ತದೆ.
ಮಾರ್ಚ್ 2010ರಂದು ನಾನು ಟೆಲಿಪೋನ್ ಕರೆ ಸ್ವೀಕರಿಸಿ, ರಿಸೀವರ್ ನನ್ನ ಎಡಗಿವಿಗೆ ಇಟ್ಟುಕೊಂಡಾಗ ಕೇಳಿಸಿದ ಸದ್ದು ಇಂಥಾದ್ದು. ಕ್ಯಾಲಿಫೋರ್ನಿಯಾದಲ್ಲಿ, ಮನೆಯಲ್ಲಿದ್ದೆ. ಟೀವಿ ಎದುರಿನ ಸೋಫಾದ ಮೇಲೆ ಮುದುರಿಕೊಂಡು ಕೂತಿದ್ದೆ. ಹೆಂಡತಿ ಮತ್ತು ಮಕ್ಕಳು ಪಕ್ಕದ ಇನ್ನೊಂದು ಕೋಣೆಯಲ್ಲಿದ್ದರು. ಆರು ಸಾವಿರ ಮೈಲಿಯಾಚೆ, ಲಂಡನ್ನಿನಲ್ಲಿ ನನ್ನ ತಂದೆ ಅವರ ತಂದೆಯ ದೇಹದ ಪಕ್ಕ ಕೂತಿದ್ದರು. ಕೆಲವೇ ಕ್ಷಣ ಮುನ್ನ, ನನ್ನ ಅಜ್ಜ, ಚಿಮನ್ ಅಬ್ರಾಮಸ್ಕಿ ಕೊನೆಗೂ ತೀರಿಕೊಂಡಿದ್ದರು. ವಯಸ್ಸಾಗಿದ್ದರಿಂದಲೆ? ಅವರಿಗೆ ತೊಂಭತ್ತಮೂರು ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಸಮಸ್ಯೆ ಉಲ್ಬಣಿಸಿದ್ದರಿಂದಲೆ? ವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಇತ್ತು. ಸುರುಟಿ ಹೋದ, ಕಿವಿ ಕೇಳಿಸದಿದ್ದ, ಮುದುಕ. ಹೆಚ್ಚುಹೆಚ್ಚು ಮನೆಯೊಳಗೇ ಉಳಿಯುವಂತಾಗಿತ್ತು. ನಿಸ್ತೇಜ ಮೊಗದ, ಶಿಥಿಲಗೊಂಡ ಒಣದೇಹದ ವಿಧುರ. ಅಥವಾ ಕೊನೆಗಾಲದಲ್ಲಿ ಸರಣಿಯಾಗಿ ಬರುವ ಭಯಂಕರ ಕಾಯಿಲೆಗಳು, ಸೋಂಕುಗಳು ಸ್ವತಃ ಅಥವಾ ಪರೋಕ್ಷವಾಗಿ ಅವರ ಸಾವಿಗೆ ಕಾರಣವಾಗಿರಬಹುದೆ?
ಇದನ್ನೂ ಓದಿ : Marathi : ಅಭಿಜ್ಞಾನ ; ‘ಸಮರಸವಾಗುವುದು ನನ್ನ ಉದ್ದೇಶವಾಗಿತ್ತೇ ವಿನಾ ಪ್ರತ್ಯೇಕತೆಯನ್ನು ರಕ್ಷಿಸುವುದಾಗಿರಲಿಲ್ಲ ’
ಕೊನೆಗೂ ಏನು ಕಾರಣ ಎನ್ನುವುದು ಮುಖ್ಯವಾಗುವುದಿಲ್ಲ. ಕೊನೆಗೂ ಮುಖ್ಯವಾಗುವುದು ನನ್ನ ಅಜ್ಜಂದಿರಲ್ಲಿ ಕಟ್ಟಕೊನೆಯವನು ತೀರಿಕೊಂಡಿದ್ದ ಎನ್ನುವುದು; ನನ್ನ ಟೀಚರ್, ಆದರ್ಶ, ಗುರು ಮತ್ತು ಪ್ರೀತಿಯ ‘ನೈ’ ಕೊನೆಯದಾಗಿ ಹೊರಟು ಹೋಗಿದ್ದ. ನಾನು ಚಿಕ್ಕವನಿರುವಾಗ ಯಾವಾಗಲೂ ಟೈ ಕಟ್ಟಿಕೊಂಡಿರುತ್ತಿದ್ದ ಅಜ್ಜನ ಟೈ ನೋಡಿ ನಾನದನ್ನು ನೈ ಎನ್ನುತ್ತಿದ್ದೆನಂತೆ, ಅದೇ ಅವನಿಗೆ ನನ್ನ ಪ್ರೀತಿಯ ಅಡ್ಡಹೆಸರಾಯಿತು. ನಾನು ಮಗುವಾಗಿದ್ದಾಗ, ಅವನ ಡೈನಿಂಗ್ ರೂಮಿನ ಸುತ್ತ ತಲೆಯ ಮೇಲೆ ಒಂದರ ಮೇಲೊಂದರಂತೆ ನೀಟಾಗಿ ಜೋಡಿಸಿದ ಬಣ್ಣಬಣ್ಣದ ಪ್ಲಾಸ್ಟಿಕ್ ಕಪ್ಪುಗಳನ್ನು ಇರಿಸಿಕೊಂಡು, ನನ್ನನ್ನು ಖುಶಿಪಡಿಸಲೆಂದೇ ಕುಣಿಯುತ್ತಿದ್ದ ಮುದ್ದಿನ ಅಜ್ಜ ಇನ್ನಿಲ್ಲ. ಶತಮಾನದುದ್ದಕ್ಕೂ ಅವನು ಕೊಂಡ ಅದ್ಭುತವಾದ ಅಪರೂಪದ ನೂರಾರು, ಸಾವಿರಾರು ಪುಸ್ತಕಗಳಿಂದಲೇ ಸದಾ ಸುತ್ತುವರಿದಿರುತ್ತಿದ್ದ ಮನುಷ್ಯ ಕಣ್ಮರೆಯಾಗಿ ಬಿಟ್ಟಿದ್ದ. ಯಾವುದು ಅವನನ್ನು ಅವನನ್ನಾಗಿ ಮಾಡಿತ್ತೋ ಅದೆಲ್ಲವನ್ನೂ ಹೀಗೆ ಅನಾಥವಾಗಿ ಬಿಟ್ಟು ಮೇಣದ ಮೂರ್ತಿಯಂತೆ ತಟಸ್ಥನಾಗಿ ಸಾವಿನ ಸ್ಥಿರಚಿತ್ರದಂತೆ ಮಲಗಿದ್ದ.
ಬಿಕ್ಕಿ ಬಿಕ್ಕಿ ಅಳತೊಡಗಿದೆ. ನಾನೊಂದು ಹತ್ತಿಯ ಬೊಂಬೆಯೋ ಎಂಬಂತೆ ದೇಹ ನಾನು ಬಿಕ್ಕಿದಂತೆಲ್ಲ ಕುಲುಕುತ್ತಿತ್ತು. ನನ್ನದೇ ಒಂದು ಭಾಗ ಇದ್ದಕ್ಕಿದ್ದಂತೆ ಅಷ್ಟೆತ್ತರದಲ್ಲಿ ನಿಂತು ನಾನೇಕೆ ಅಷ್ಟೊಂದು ವಿಚಲಿತನಾದೆ ಎಂಬಂತೆ ನನ್ನನ್ನೇ ಆಶ್ಚರ್ಯದಿಂದ ನೋಡುತ್ತಿತ್ತು. ಕೊನೆಗೂ ಈ ದುಃಖಕ್ಕೆ ತಯಾರಾಗಲು ವಿಧಿ ನನಗೆ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಚಿಮನ್ನನ ಅಂತ್ಯವು ನಿಧಾನವಾಗಿ ಬಂತು, ಅವನ ಕೊನೆಯ ದಿನಗಳು ನೋವು ಮತ್ತು ಹತಾಶೆಯಿಂದ ಕೂಡಿದ್ದವು. ನನ್ನ ಹೆತ್ತವರು ಮತ್ತು ಸಹೋದರರ ಪ್ರತಿಯೊಂದು ಫೋನ್‌ಕಾಲ್ ಕೂಡ ಮೊದಲಿಗೆ ಅಜ್ಜನ ಆರೋಗ್ಯದಲ್ಲಿ ಯಾವುದೇ ಏರುಪೇರಿಲ್ಲದ ಕುರಿತೇ ಹೇಳುತ್ತಿದ್ದವು. ಆ ಕೊನೆಯ ಕೆಲವು ವರ್ಷಗಳಲ್ಲಿ ಅವನು ಅವನದೇ ಕತೆಯ ಉಪಸಂಹಾರವಷ್ಟೇ ಆಗಿ ಉಳಿದಿದ್ದ.
ಇದನ್ನೂ ಓದಿ : Literature: ವೈಶಾಲಿಯಾನ; ಸಾಹಿತ್ಯಕ್ಕೆ ಮನಸ್ಸನ್ನು ಪರಿವರ್ತಿಸುವಂಥ ಅಪರಿಮಿತ ಶಕ್ತಿಯಿದೆ
*
ಹದಿನೇಳನೆಯ ಶತಮಾನದಲ್ಲಿ ಫ್ರೆಂಚ್ ತತ್ವಜ್ಞಾನಿ ರೇನೆ ಡೆಸ್ಕಾರ್ಟೆಸ್ ತನ್ನ ಬಹು ಪ್ರಖ್ಯಾತ ಘೋಷಣೆ ಮಾಡಿದ್ದಾಗಿತ್ತು, “ನಾನು ಯೋಚಿಸುತ್ತೇನೆ, ಹಾಗಾಗಿ ನಾನು ಇದ್ದೇನೆ”. ಚಿಮನ್ನನ ಬದುಕಿನ ಮಟ್ಟಿಗೆ, ಅವನು ಕ್ರಮಬದ್ಧವಾಗಿ ಕಟ್ಟಿದ ಅವನ ಪುಸ್ತಕಮನೆಯ ನೆಲೆಯಲ್ಲಿ ಹೇಳುವುದಾದರೆ, ಇದರ ಉಲ್ಟಾ ಮಾತು ಹೆಚ್ಚು ನಿಜ. ಅವನು ಇದ್ದ, ಹಾಗಾಗಿ ಅವನು ಯೋಚಿಸುತ್ತಿದ್ದ. ಅವನು ಯೋಚಿಸದೇ ಇದ್ದಿದ್ದರೆ, ಓದದೇ ಇದ್ದಿದ್ದರೆ, ತನ್ನ ಸುತ್ತಲಿನ ಜಗತ್ತನ್ನು ಮತ್ತು ಇತಿಹಾಸದಲ್ಲಿ ಎಂದಿನಿಂದ ಈ ಜಗತ್ತು ಹೇಗೆಲ್ಲ ಬೆಳೆಯುತ್ತ ಬಂದಿದೆ ಎನ್ನುವುದನ್ನು ವಿಶ್ಲೇಷಿಸದೇ ಇದ್ದಿದ್ದರೆ ಅವನು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದ. ಏನೂ ಮಾಡದೆ ಕುಳಿತಿರುವುದು ಅವನಿಂದಾಗದ ಮಾತು. ಆದರೆ ಈಗ, ಅವನ ತೊಂಬತ್ತರ ವಯಸ್ಸಿನಲ್ಲಿ, ಪಾರ್ಕಿನ್ಸನ್‌ನಿಂದ ಕುಗ್ಗಿದ ದೇಹದೊಂದಿಗೆ, ಕಿವಿ ಮಂದಗೊಂಡು, ಮನೆಯನ್ನು ಬಿಟ್ಟು ಎಲ್ಲಿಗೂ ಹೊರಹೋಗಲಾರದೆ, ತಾನು ಬಹುವಾಗಿ ಇಷ್ಟಪಡುತ್ತಿದ್ದ ವಾಕ್ ಕೂಡ ಹೋಗಲಾರದ ಸ್ಥಿತಿಯಲ್ಲಿ ಅವನು ವಸ್ತುಶಃ ಖೈದಿಯೇ ಆಗಿದ್ದ, ಅವನ ಮನಸ್ಸು ಸೋಲುತ್ತಿದ್ದ ದೇಹದೊಳಗೆ ಬಂಧಿಯಾಗಿತ್ತು, ಆ ದೇಹ ಅವನದೇ ಪುಸ್ತಕಮನೆಯಿಂದ ಕಳಚಿಕೊಂಡಂತೆ, ದೂರವಾದಂತೆ ಒಂಟಿಗೊಂಡು ನಿಂತಿತ್ತು. ಒಂದೊಂದಾಗಿ ಈ ಜಗತ್ತಿನ ಬಾಗಿಲುಗಳು ಅವನಿಗೆ ಮುಚ್ಚಿಕೊಳ್ಳುತ್ತಿದ್ದವು; ಅದಕ್ಕೆ ಸರಿಯಾಗಿ ಅವನಿಗೂ ಜಗತ್ತಿನೊಂದಿಗೆ ಮತ್ತೊಮ್ಮೆ ಸಂಬಂಧ ಕುದುರಿಸಿಕೊಳ್ಳುವುದು ಕೈಲಾಗದೇ ಹೋಯಿತು. ಅವನ ಮನೆಯ ತಳ ಅಂತಸ್ತಿನ, ಪುಸ್ತಕಗಳು ತುಂಬಿದ್ದ ಒಂದು ಪುಟ್ಟ ಕೋಣೆಗೆ ಅವನ ಜಗತ್ತು ಸೀಮಿತಗೊಂಡಿತು.
ಒಂದು ಕಾಲದಲ್ಲಿ ಲಂಡನ್ನಿನ ಎಡಪಂಥೀಯರ ಬಹುದೊಡ್ಡ ಅಡ್ಡೆಯಾಗಿದ್ದ, ಇಂದಿಗೂ ಇಂಗ್ಲೆಂಡಿನ ಅತ್ಯಂತ ಪ್ರಮುಖ ಖಾಸಗಿ ಲೈಬ್ರರಿಯನ್ನು ಹೊಂದಿರುವ ಮನೆ, ಈಗ ಜನವಸತಿಯಿಲ್ಲದ ಪಾಳುಬಂಗ್ಲೆಯಂತಾಯಿತು. ನಾನು ಚಿಕ್ಕವನಿದ್ದಾಗ ಬೌದ್ಧಿಕ ತೇಜಸ್ಸಿನಿಂದ ಕಂಗೊಳಿಸಿ ಬುದ್ಧಿಜೀವಿಗಳ ಪ್ರಖರ ಚಿಂತನೆಗಳನ್ನು ಹೊರಹೊಮ್ಮಿಸುತ್ತಿದ್ದ ಮನೆ ಈಗ ಸ್ವಲ್ಪ ಹೆದರಿಕೆ ಹುಟ್ಟಿಸುವ, ಪಾಳು ಬಿದ್ದಂಥ ಮನೆಯಾಗಿ ಕಾಣುತ್ತಿತ್ತು. ನಾನು ನನ್ನ ಮಕ್ಕಳನ್ನು ಅದೊಂದು ಕರ್ತವ್ಯ ಎಂಬಂತೆ ಅಲ್ಲಿಗೆ ಕರೆದೊಯ್ಯುತ್ತಿದ್ದೇನೆ ಹೊರತು ಅದೊಂದು ಉಲ್ಲಾಸದ ಭೇಟಿಯಾಗಿರುತ್ತಿರಲಿಲ್ಲ. ಏರುಧ್ವನಿಯ ಹಾವಭಾವದ ಸಂಭಾಷಣೆಗಳೆಲ್ಲವೂ ಕಿವುಡು ಮುದಿತನದ ಸುದೀರ್ಘ ಮೌನವಾಗಿ ಬದಲಾಗಿದ್ದವು; ಸದಾ ಗಡಿಬಿಡಿ, ಸಡಗರದ ತಾಣವಾಗಿದ್ದ ಅಡುಗೆಮನೆ, ಗೌಜಿಗದ್ದಲದ ತಾಣವಾಗಿದ್ದ ಔತಣಗಳು, ರಾತ್ರಿ ಉಳಿದುಕೊಳ್ಳುತ್ತಿದ್ದ ಅತಿಥಿಗಳ ಸಂಭ್ರಮ ಎಲ್ಲವೂ ಪಾರ್ಕಿನ್ಸನ್‌ನ ಸ್ತಬ್ಧ ಚಿತ್ರಕ್ಕೆ ಸದ್ದಿಲ್ಲದೆ ಜಾಗ ಬಿಟ್ಟುಕೊಟ್ಟಿದ್ದವು.
ಈಗ ಕಾರ್ಟೆಸಿಯನ್ನನ ಘೋಷವಾಕ್ಯ ತನ್ನನ್ನು ತಾನು ಬದಲಿಸಿಕೊಳ್ಳಬೇಕಾಗಿ ಬಂತು: ಬದುಕಿನ ಮೇಲೆ, ಚಿತ್ತಸ್ವಾಸ್ಥ್ಯದ ಮೇಲೆ ತನ್ನ ಹಿಡಿತವನ್ನು ಉಳಿಸಿಕೊಳ್ಳುವುದಕ್ಕಾಗಿ ಚಿಮನ್ ತಾನೇ ತನಗಾಗಿ ಕಟ್ಟಿಕೊಂಡ ಪುಸ್ತಕಗಳ ಜಗತ್ತಿನಲ್ಲಿ ಹೆಚ್ಚು ಹೆಚ್ಚು ತನ್ಮಯನಾಗುವಂತಾಯಿತು. ತನಗಿನ್ನೂ ಸಂವೇದನೆಗಳಿವೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ತನ್ನನ್ನೇ ತಾನು ಚಿವುಟಿಕೊಂಡು ನೋಡುವವನ ಹಾಗೆ ಚಿಮನ್ ತಾನಿನ್ನೂ ಬದುಕಿದ್ದೇನೆ ಎಂದು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಓದತೊಡಗಿದ. ಅವನು ಯೋಚಿಸುತ್ತಿದ್ದ ಮತ್ತು ಹಾಗಾಗಿ ಅವನು ಇದ್ದ. ವರ್ಷದಿಂದ ವರ್ಷಕ್ಕೆ ಅವನು ಕುಸಿಯುತ್ತಿದ್ದ ಹಾಗೆಲ್ಲ ಅವನ ಯೋಚಿಸಬಲ್ಲ ಚೈತನ್ಯ ಅವನನ್ನು ಪೊರೆಯುತ್ತಲೇ ಬಂತು; ಅವನು ತನ್ನ ಅತ್ಯದ್ಭುತವಾದ ಬೌದ್ಧಿಕ ಸಾಮರ್ಥ್ಯಕ್ಕೆ, ಸರಿಸುಮಾರು ಫೋಟೋಗ್ರಾಫಿಕ್ ಎನ್ನಬಹುದಾದ ಸ್ಮರಣಶಕ್ತಿಗೆ ಅಂಟಿಕೊಂಡ. ಒಮ್ಮೆ ಒಬ್ಬ ಸಾಮಾಜಿಕ ಕಾರ್ಯಕರ್ತ ಚಿಮನ್ನನ ಸ್ಮೃತಿಯ ಚುರುಕು ಎಷ್ಟಿದೆ ಎಂದು ಪರೀಕ್ಷಿಸುವುದಕ್ಕಾಗಿಯೇ ಈಗಿನ ಪ್ರಧಾನಮಂತ್ರಿ ಯಾರೆಂದು ಗೊತ್ತಿದೆಯೇ ಎಂದು ಕೇಳಿದಾಗ ತಾನು ಕಳೆದ ಇನ್ನೂರು ವರ್ಷಗಳ ಪ್ರತಿಯೊಬ್ಬ ಪ್ರಧಾನಮಂತ್ರಿಯ ಹೆಸರು ಪಟ್ಟಿಮಾಡಬಲ್ಲೆ ಎಂದು ನಡುಗುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದ್ದ. ಆದರೆ ಕಟ್ಟಕೊನೆಗೆ ಆತನ ಸ್ಮರಣಶಕ್ತಿ ಕೂಡ ಅವನನ್ನು ಬಿಟ್ಟು ಹೋಯಿತು. ದೈಹಿಕವಾಗಿ ಛಿದ್ರಗೊಂಡಂತಾಗಿದ್ದವನ ಮನಸ್ಸು ಗೊಂದಲಗೊಂಡಿತು.
ಚಿಮನ್ನನ ಅಂತ್ಯದ ದುಃಖವು ನನ್ನನ್ನು ತಿಂಗಳುಗಟ್ಟಲೆ, ವರ್ಷಗಟ್ಟಲೆ ಕಾಡಿದೆ. ಹೊತ್ತಲ್ಲದ ಹೊತ್ತಲ್ಲಿ, ಕಾಡಬಾರದ ಸ್ಥಳದಲ್ಲಿ ಅದು ನನ್ನ ಜೀವವನ್ನು ಹಿಂಡಿದೆ. ಆದರೆ ಈಗ, ಹ್ಯಾಂಪ್‌ಸ್ಟೆಡ್ ಹೀತ್‌ನ ಅಜ್ಜನ ಮನೆಯಲ್ಲಿ, ಮೆಟ್ಟಿಲು ಹತ್ತಿ ಮೇಲೆ ಹೋಗಲು ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದ ನಂತರದ ದಿನಗಳಲ್ಲಿ ಅಜ್ಜ ಮಲಗುತ್ತಿದ್ದ, ಪುಸ್ತಕಗಳೇ ಕಿಕ್ಕಿರಿದ ಲಿವಿಂಗ್ ರೂಮಿನಲ್ಲಿ, ಅಪ್ಪನ ವಿಷಾದದ ಮಾತುಗಳನ್ನು ಕೇಳುತ್ತಿದ್ದ ಹಾಗೇ ಏನೋ ಬಡಿದಂತಾಯಿತು. ಜೀವನದಿಂದ ಮೃತ್ಯುವನ್ನು ಬೇರ್ಪಡಿಸುವ ಉಕ್ಕಿನ ಬಾಗಿಲಿನ ಅನಿವಾರ್ಯ, ಶಾಶ್ವತ, ನಿಶ್ಚಿತ ಸತ್ಯ ನನ್ನನ್ನು ಚಿಂದಿ ಚಿಂದಿ ಮಾಡುತ್ತಿತ್ತು.
(ಮುಂದಿನ ಅನುಸಂಧಾನ : 10.7.2022)
ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ