Poetry: ಅವಿತಕವಿತೆ; ಸೂರ್ಯ ಸುಟ್ಟು ಉಳಿದ ಪಾಡುಗಳ ಹಾಡಾಗಿಸಲು ಚಂದಿರನ ಕರೆತರಬೇಕಿದೆ

Poem : ‘ಇನ್ನೇನು ಎಲ್ಲ ಮುಗಿದು ಹೋಯಿತು ಅನ್ನುವಾಗಲೆ ಬೀಜವೊಂದು ಮೂಗರಳಿಸಿ ಎರಡೆಲೆ ಬಿಡುತ್ತದೆ. ಕವಿತೆ ಹೀಗೆಯೇ. ದುರಿತಕಾಲದ ಗೆಳೆಯ, ದುಮ್ಮಾನವೊಂದನ್ನು ತಡವಿಕೊಂಡೆ ಸಂತೈಸುತ್ತದೆ. ಮೌನಕ್ಕೆ ಮೂಗು ತಾಕಿಸಿ ಮಾತಾಗಿಸಿ ಮತ್ತೆ ಮಾತು ಮರೆಸಿ ಮೌನ ಮೆರವಣಿಗೆ ಸಾಗುತ್ತದೆ.’ ಲಿಂಗರಾಜ ಸೊಟ್ಟಪ್ಪನವರ

Poetry: ಅವಿತಕವಿತೆ; ಸೂರ್ಯ ಸುಟ್ಟು ಉಳಿದ ಪಾಡುಗಳ ಹಾಡಾಗಿಸಲು ಚಂದಿರನ ಕರೆತರಬೇಕಿದೆ
Edited By:

Updated on: Feb 12, 2022 | 5:02 PM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’ (AvithaKavithe) ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ; ಕವಿ, ಕಥೆಗಾರ, ಅನುವಾದಕ ಲಿಂಗರಾಜ ಸೊಂಟಪ್ಪನವರ (Lingaraj Sontappanavar) ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕೂಡಲದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಮಾರ್ಗಿ ಇವರ ಪ್ರಕಟಿತ ಕಥಾಸಂಕಲನ. ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ವಿಜಯ ಕರ್ನಾಟಕ ಯುಗಾದಿ ಕಥಾ ಪ್ರಶಸ್ತಿ, ಪ್ರಜಾವಾಣಿ ದೀಪಾವಳಿ ಕಥಾ ಪ್ರಶಸ್ತಿ, ಕಣವಿ ಕಾವ್ಯ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಡಾ. ನಿರ್ಮಲ್ ವರ್ಮಾ ಅವರ ಕೃತಿ ‘ಹರ್ ಬಾರೀಶ್ ಮೇ’- ‘ಪ್ರತಿ ಮಳೆಯಲೂ’ ಕನ್ನಡ ಅನುವಾದಕ್ಕೆ ಫೆಲೋಷಿಪ್ ಪಡೆದಿದ್ದಾರೆ. ಲಿಂಗರಾಜ ಅವರ ಕವನಗಳು ನಿಮ್ಮ ಓದಿಗೆ.

*

ಲಿಂಗರಾಜರ ಕವಿತೆಗಳನ್ನು ಓದುತ್ತಿದ್ದರೆ ಕಾವ್ಯದ ಬೆಚ್ಚನೆಯ ಹೊಸಬಗೆಯ ಓದು ಎದೆಯೊಳಗಿಳಿದಂತೆ ಭಾಸವಾಗುತ್ತದೆ.ಅಪರೂಪದ ರೂಪಕ ಸಂಕೇತಗಳ ರಚನೆಯಲ್ಲಿ ತೊಡಗಿರುವ ಈ ಕವಿ ಏಕಾಕಿಯ ಧ್ಯಾನಶೀಲತೆಯ ಜೀವನಚಿತ್ರಗಳನ್ನು ಅವೀರ್ಭಾವಿಸಿಕೊಂಡು ಜೀವ ನೋವುಗಳನ್ನು ಕಾವ್ಯದಲ್ಲಿ ಜಲವುಕ್ಕಿಸುವ ರೀತಿ ಅನನ್ಯವಾಗಿದೆ. ಎಲ್ಲೋ ಕೇಳುತ್ತಲೆ ಇರುವ ಏಕನಾದ ಮೀಟಿದರೆ ಇಡಿ ಲೋಕ ಕೇಳುವ ಹಾಗೆ ಆದಿ ಅನಾದಿ ಕಾಲದ ಶಬ್ದ ನಿಶಬ್ದದ ಹಾಗೆ ತಣ್ಣನೆ ಗಾಳಿ ಬೀಸಿ ಮುಟ್ಟಿದರೂ ಮುಟ್ಟದೆ ಹೋದಂತೆ ಈ ಕವಿತೆಗಳು ಮನತುಂಬ ಆವರಿಸಿಕೊಳ್ಳುತ್ತವೆ. ಹೀಗೆ ತಲ್ಲಣಿಸುವ ಕವಿತೆಗಳು ಯಾವುದೊ ಗುಂಗಿನಲ್ಲಿ ಗಾಯದ ನೆನಪುಗಳನ್ನು ಉಳಿಸಿ ಹೋದಂತೆ ಕಂಡೂ ಕಾಣದಂತೆ ನಮ್ಮೊಳಗೆ ಕುರುಹುವನ್ನುಂಟು ಮಾಡುತ್ತವೆ. ಪ್ರಕೃತಿ ಜೀವಸಂಕುಲವನ್ನು ಪೊರೆವ ಹಾಗೆ ಕಾವ್ಯ ಕೂಡ ಮನುಷ್ಯನ ತಲ್ಲಣಗಳನ್ನು ಪೊರೆದ ಹಾಗೆ. ಕನ್ನಡ ಕಾವ್ಯವನ್ನು ಅನಂತಗೊಳಿಸುವಲ್ಲಿ ಮಹತ್ವಾಕಾಂಕ್ಷೆ ತೋರುವ ಈ ಕವಿಗೆ ಜೀವಕಾವ್ಯವಾಗಿ ಉಳಿವ ಹಂಬಲವಿದೆ.

ಸುಬ್ಬು ಹೊಲೆಯಾರ್, ಕವಿ

ಆಪ್ತತೆ ಮತ್ತು ಸಂಕ್ಷಿಪ್ತತೆಯ ಮುಖ್ಯ ಲಕ್ಷಣವಾಗಿಸಿಕೊಂಡಿರುವ ಲಿಂಗರಾಜರ ಕವಿತೆಗಳ ಹಿಂದೆ ಉರಿವ ಮನಸ್ಸೊಂದರ ಝಳ ಓದಿಗೆ ತಾಗದೆ ಇರದು. ಪ್ರೀತಿ ಪ್ರೇಮದ ಚಮತ್ಕಾರಿಕೆ ನೀಗಿಸಿಕೊಂಡ ಮಾಗಿದ ಒಂದು ಚಿಂತನೆ, ಯಾತನೆಯ ಆಳವಾದ ಕೊಳ, ಬದುಕು ಹಸನಾಗುವ ಆಶಯಗಳು ಈ ಕವಿತೆಯ ಹೊಟ್ಟೆಯೊಳಗಿವೆ. ಬದ್ಧತೆಯನ್ನು ಕಟ್ಟಿಕೊಂಡು ಜೀವಪರ ಕಾವ್ಯ, ಖಿನ್ನಗೊಂಡ ತಳಮಳದ ಬದುಕಿನ ತೆರೆಗಳು ಇಲ್ಲಿವೆ.

ಸತೀಶ ಕುಲಕರ್ಣಿ, ನಾಟಕಕಾರ

*

ದೇವರೇ
ಮತ್ತೆ ಮತ್ತೆ ಮೊರೆಯಿಡುತಿದ್ದೇನೆ
ದಯಾಮಯನೇ ಕ್ಷಮಿಸು
ಮತ್ತೆ ಮತ್ತೆ ಕ್ಷಮಿಸುತ್ತಾನೆ
ಅವನು ಮತ್ತೆ ಮತ್ತೆ ಪಾಪಕ್ಕೆ ಹಚ್ಚುತ್ತಾನೆ
ಬಹುಷಃ ಅವನು ಪಾಪಿಷ್ಟ ಇಲ್ಲದಿರೆ
ಕೊಳಕು ತುಂಬಿದ ತುಟಿ ನಾಲಿಗೆ
ಆಡುವ ಅಪದ್ಧಗಳು ಪ್ರಾರ್ಥನೆ ಎನಿಸಿಕೊಳ್ಳುತ್ತಿದ್ದವು
ಹೇಗೆ ಹೇಸಿ ತುಟಿ ಸವರಿ ಆಡುವ
ನಾಲಿಗೆ ಪದಗಳು ಹೇಗೆ ತಾನೆ ಶಕ್ತಿ ಮಂತ್ರಗಳಾದಾವು

ಏಸು ಕಾಲವಾಯಿತು
ಪಾಪ ಎಂಬುದು ಪ್ರಜ್ಞೆಯ ತಾಕಲಿಲ್ಲ
ಪಾಪಿ ಪಾವನಿ ಪಾಮರ ಎಲ್ಲರೂ ನಿನ್ನ ಪ್ರಾರ್ಥಿಸುತ್ತಾರೆ
ಕ್ಷಮೆ ಎನ್ನುವದನ್ನು ಹೇಗೆ ಕಣ್ಣು ಮುಚ್ಚಿ ಹಂಚುವೆಯಲ್ಲ
ಒಂದು ಪ್ರಾರ್ಥನೆಗೆ

ಒಂದು ಪ್ರಾರ್ಥನೆಯಿಂದ
ಜೀವ ಉಳಿಯುತ್ತದೆ
ಒಂದು ಪ್ರಾರ್ಥನೆಯಿಂದ ಪಾಪವೂ ಉಳಿಯುತ್ತದೆ

ಪಾಪ ಇಷ್ಟು ಪಾಚಿಗಟ್ಟಿದ ಮೇಲೂ
ಪ್ರಾರ್ಥನೆಯನ್ನು ಪ್ರಾರ್ಥನೆ ಎನ್ನುವದಾದರೂ ಹೇಗೆ
ದೇವರಿದ್ದ ಮೇಲೂ
ಪಾಪ ಮತ್ತೆ ಮತ್ತೆ ತಳೆಯುತ್ತಿದ್ದರೆ
ದೇವರನ್ನು ದೇವರೆನ್ನುವದಾದರೂ ಏಕೆ

ದೇವರೆ
ಪ್ರಾರ್ಥನೆಯ ಮೇಲಿನ ನಿನ್ನ ಮೋಹ
ಸಾಕು ಮಾಡು ಮಾರಾಯ
ಯಾರೂ ಪ್ರಾರ್ಥಿಸದಿದ್ದರೂ ನೀನು ಬದುಕುತ್ತಿಯ
ಬಹುಷಃ
ಪ್ರಾರ್ಥನೆಗಾಗಿ ಬದುಕಿರುವವನು ನೀನೊಬ್ಬನೆ ಇರಬೇಕು
*

ಗೋಡೆಗೆ
ಗೋಡೆಗೆ ಎಷ್ಟೊಂದು ಮಾತು ಹೇಳಿದೆ
ಗೋಡೆ ಎಷ್ಟೆಲ್ಲ ಕೇಳಿತು
ಮೌನ ಸಹಿಸಿದಂತೆ ಮಾತನ್ನೂ ಸಹಿಸಿತು
ಮಾತು ಸಹಿಸದ ಯಾರನ್ನೆಲ್ಲ ಮರೆಗೆ ಸರಿಸಿತು

ಸಹಿಸಲಿಲ್ಲವೆಂದು ಯಾರು ಯಾರನ್ನು ದೂರ ಮಾಡಿದ್ದೇನೊ
ಅವರನ್ನೆಲ್ಲ ಮತ್ತೆ ಮಾತಿಗೆಳೆದೆ
ಗೋಡೆಯ ಸಹನೆ ಸಾಧ್ಯವಾಯಿತು ಹೇಗೆ

ಕುಹಕ ಕುಚೇಷ್ಟೆ
ಕುಟೀಲ ಕುರೂಪ ಕಠೋರ
ಎಷ್ಟು ಮಾತಾಡಿದೆ
ಗೋಡೆ ಎಂದಾದರೂ ಬಿರಿಯಬಹುದು
ಒಂದು ಆತಂಕ ಇದ್ದೆ ಇತ್ತು

ಬೆಸೆಯಲೆಷ್ಟು ಬದುಕು ಬವಣೆ ತೆತ್ತಿವೆ
ಬಿರಿತರೆಷ್ಟು ಜೀವ ತೇವ ಬಾಯಿ ಆರಿವೆ

ಇಷ್ಟು ಆಲಿಸಿದ ಗೋಡೆ
ಎಂದಾದರೂ ಒಂದು ಆಡಬಹುದು
ಅದಕ್ಕಾಗಿ ಕಾಯುತ್ತೇನೆ

ಆಡುವ ಅಪದ್ಧಗಳನ್ನೆಲ್ಲ ಆಲಿಸುವ ಗೋಡೆಗೆ
ನಾನು ಆಭಾರಿ
ಗೋಡೆ ಒಂದು ಆಡಿದರೂ ನಾನು ಮುಕ್ತ
ಅದರ ಮಾತನ್ನೂ ಮನುಷ್ಯ ಕೇಳಬೇಕಲ್ಲವೆ

ನನ್ನ ಮೌನವೇನಾದರೂ ಭಾರವಾಗಿರಬಹುದ
ಅದಕ್ಕಾಗಿ
ನಾನು ಮಾತುಗಳನ್ನು ದಾಟಿಸುತ್ತಲೆ ಇದ್ದೇನೆ
ಗೋಡೆಗೆ
ಆಚೆಯ ಕಿವಿಗಳಿಗೆ

 

*

 

ಕೈಬರಹದೊಂದಿಗೆ ಲಿಂಗರಾಜ

ಕಣ್ಣೆದುರೆ ಕಣ್ಣಳತೆಯಲಿ ಆಡಿಕೊಂಡಿದ್ದ ಪಿಳ್ಳೆಯನ್ನು ಯಾವ ಮಾಯೆಯಿಂದಲೋ ಹದ್ದು ಕುಕ್ಕಿ ಎತ್ತಿಕೊಂಡು ಹೋಗುತ್ತದೆ. ಇದೋ ಈಗ ಮಾತಾಡಿಸಿ ಬಂದವರ ಸಾವಿನ ಸುದ್ದಿ ಕೇಳಬೇಕಾಗುತ್ತದೆ. ಏಳು ಜನ್ಮದ ಕನಸು ಬಿತ್ತಿದವಳು ಅರ್ದ ದಾರಿಯಲೆ ಬಿಟ್ಟು ನಡೆದು ಹೋಗುತ್ತಾಳೆ. ಎಂಥವರೂ ಎಷ್ಟು ನಿಸ್ಸಹಾಯಕರಾಗಿಬಿಡುತ್ತೇವೆ. ಇನ್ನೇನು ಎಲ್ಲ ಮುಗಿದು ಹೋಯಿತು ಅನ್ನುವಾಗಲೆ ಬೀಜವೊಂದು ಮೂಗರಳಿಸಿ ಎರಡೆಲೆ ಬಿಡುತ್ತದೆ. ಕವಿತೆ ಹೀಗೆಯೇ. ದುರಿತಕಾಲದ ಗೆಳೆಯ. ದುಮ್ಮಾನವೊಂದನ್ನು ತಡವಿಕೊಂಡೆ ಸಂತೈಸುತ್ತದೆ. ಮೌನಕ್ಕೆ ಮೂಗು ತಾಕಿಸಿ ಮಾತಾಗಿಸಿ ಮತ್ತೆ ಮಾತು ಮರೆಸಿ ಮೌನ ಮೆರವಣಿಗೆ ಸಾಗುತ್ತದೆ. ಇಂTದ್ದೊಂದು ಜಾದೂ ಪದದಿಂದ ಪದಕ್ಕೆ ನೆಗೆಯುತ್ತಲೆ ಇರುತ್ತದೆ. ಒಂದು ದಕ್ಕದ ಪದದ ಹುಡುಕಾಟ ಹೀಗೂ ಇರುತ್ತದೆ. ಸೂರ್ಯ ಸುಟ್ಟು ಉಳಿದ ಪಾಡುಗಳ ಹಾಡಾಗಿಸಲು ಚಂದಿರನ ಕರೆತರಬೇಕಿದೆ. ಕವಿತೆಗೆ ಅಂಥದ್ದೊಂದು ಹಂಬಲವಿರಬೇಕಾಗುತ್ತದೆ.

*

ಸೆರಗು ಪತಾಕೆಯಾದ ಕನಸು

ಅವೇಷ್ಟು ಲಿಂಗ ಹೂತು ಹೋದವು
ಪುಣ್ಯ ಕೂಪದಲಿ
ಒಂದೂ ಮೊಳೆತು ಮಗುವಾಗದೆ

ಮತ್ತೆ ಹುಟ್ಟಿ ಬಂದವು
ಕೀವು ತುಂಬಿದ ವ್ರಣಗಳು

ಗಂಧ ಪೂಸಿಕೊಂಡವರೊಡನಾಟ
ಮಟು ತೊರೆಯಲಿಲ್ಲ ತೊಡೆ
ಚೌಕಸಿಯ ಮಾತಿಲ್ಲ ತುಣುಕು ರೊಟ್ಟಿಗೆ
ಬಿಕರಿಯಾಯಿತು ಬೆದೆ
ಮತ್ತದೆ
ಮತ್ಸ್ಯಗಂಧಿಯ ಹಾಡು ನಿನ್ನದು

ಏನು ಮಾಡಲಿ
ಹಾಡ ಹಗಲಲ್ಲಿ ಸೂರ್ಯ ಮುಳಗುವ ಹೊತ್ತಲ್ಲಿ
ಬಯಕೆಗಳ ಬೆಚ್ಚಿ ಬೀಳಿಸಿದೆ
ಜಾತಿ ಕೇಳಲಿಲ್ಲ ಕುಲ ಬೇಕೆನಿಸಲಿಲ್ಲ
ಬೀಸು ಗಾಳಿಗೆ ಪಟವಾಯಿತು ಸೆರಗು

ಹೇಳು
ಒಂದಾದರೂ ಉಳಿದವೆ ಹೆಜ್ಜೆ ಗುರುತು
ಊರಿದ ಪಾದಗಳಲಿ ಭವಿಷ್ಯ ನುಡಿವ ಗೆರೆಯೆಲ್ಲಿದ್ದವು
ಗೊತ್ತಿಲ್ಲ ನಿನಗೆ
ತಣ್ಣೀರಿಗೆ ತಣಿಯುವದಲ್ಲ
ಒಳಗೋಡೆಗಳ ನಡುವಿನ ಬೇಗೆ

ಗರ್ಭದೊಳಗೆ ಹಿಂಡು ಸೂರ್ಯರ
ಹಿಡಿದಿಟ್ಟು
ತಣ್ಣಗೆ ಉರಿಯುತ್ತಿರುವೆ
ಈ ಹೀನ ಕತ್ತಲು ಬೆಳಗುವ ಕನಸೂ ಬೀಳಲಾರವು
ಗೊತ್ತು
ನಿನ್ನ ರಾತ್ರಿಗಳು ಸಣ್ಣವು

ಕಾಲಜ್ಞಾನ ಅರಿಯಬೇಕಿತ್ತು
ನೀನು
ಶಾಸ್ತ್ರ ತಳಿಗುಣ ತಿಳಿಯಬೇಕಿತ್ತು
ಇನ್ನಾದರೂ ಅಷ್ಟು ಮಾಡು
ಸರ್ವಧರ್ಮ ಸಂಜಾತ ಹುಟ್ಟಿ ಬರಲಿ
ಹಾದಿ ಬದಿಯಲ್ಲೊಂದು ಧರ್ಮ ತಲೆ ಎತ್ತಲಿ
ಮೇಲೆ
ನಿನ್ನ ಸೆರಗು ಪತಾಕೆಯಾಗಿ ಹಾರುವದನು ಕಾಣಬೇಕಿದೆ ನಾನು

*

ಲಿಂಗರಾಜ ಅವರ ಪ್ರಕಟಿತ ಕೃತಿ

*

ಬೇರು ಬಗೆವ ಆಟ

ಮೆತ್ತನೆ ಜಾಗೆಯಲಿ ಬಗೆ ಬಗೆವ
ಕೌತುಕ
ಮಿದುವ ಮಥಿಮಥಿಸಿ
ದಕ್ಕಿದ್ದೇನು ಹುಸಿ!

ಕದವಿಕ್ಕಿದ ತೊಡೆ ನುಣುಪು
ಜಾರಿ
ತೋರಿದಷ್ಟೆ ಬೆಳಕು ಬೆರಗು
ಸವರಿದಷ್ಟೆ ಸವಿ

ಕಾಗೆ ಕಕ್ಕಿದವು
ಹೇಸಿ
ಅವೆ ಒಣ ಕೂತುಹಲಗಳು.. ಒಂದಷ್ಟು ಹಸಿ

ಸಿಕ್ಕುವದಿಲ್ಲ ಸರ್ಪ
ಯಾವ ಹುತ್ತವಗೆದರೂ
ಬದುಕಿನ ಬೇರಿಗೆ ಗೆದ್ದಲು ಹಿಡಿವ ಜಾಗೆ
ಇಲ್ಲಿ
ಕಟ್ಟದಿರಿ ಮಂದಿರ ಮಸಿದಿ
ಮಧು ಬಟ್ಟಲು ಚೂರಾದ ನೆನಪುಗಳಿವೆ
ಮೀನು ಮೊಸಳೆ ಹರಿದಾಡಿದ ರೂಹುಗಳಿವೆ

*

ಎಡಕ್ಕೆ ತಿರುಗಿ

ಹೀಗೆ ಹೋಗಿ
ನೇರ ಸಾಗಿ.. ಅವರು ಸಿಗಬಹುದು

ಭೇಟಿಯಾಗುತ್ತವೆ ನಾಯಿ
ಬೊಗುಳುತ್ತವೆ ಸುಮ್ಮನೆ.. ಸಾಗುತ್ತಿರಿ
ಬೆಕ್ಕು ಅಟ್ಟಿಸಿಕೊಂಡು ಓಡುತ್ತವೆ
ಸಿಕ್ಕುವದಿಲ್ಲ ಬೆಕ್ಕು.. ಗೊತ್ತು ಬೆಕ್ಕಿನ ಟಕ್ಕು

ಬೆದರಿ ಹೌಹಾರಿ ಕುಂಬಿ ಮೇಲೆ ಕೂತು
ಕೊಕ್ಕಾಡಿ ನಗುತ್ತವೆ ಕೋಳಿ
ಹಚ್ಚಿಕೊಳ್ಳಬೇಡಿ
ಹಾಗೆ ತಿರುಗಿ ಅತ್ತ ಮುಖಮಾಡಿ
ಲಲನೆಯರು ಎದಿರಾಗಬಹುದು
ಅವರೂ ಸುಮ್ಮನೆ ನಗುತ್ತಾರೆ.. ನಗುವೆ ಸುಖವೆಂದು
ಅರ್ಥ ಹುಡುಕಿ ಹೋಗದಿರಿ
ಪೆದ್ದು ನೀವು
ಹೀಗೆ ಮಾಡಿಯೆ ದಾರಿ ತಪ್ಪಿದ್ದಿರಿ
ತಿರುವಿಗೆಲ್ಲ ಅರ್ಥ ಕೇಳುತ್ತೀರಿ

ಹೋಗಲಿ ಬಿಡಿ
ಅಲ್ನೋಡಿ.. ಆ ಏರಿ ಹತ್ತಿ
ನಿಟ್ಟುಸಿರು ಇಲ್ಲೆ ಬಿಡಿ
ಏರಬಹುದಾದ ಎತ್ತರವಿಷ್ಟು
ನೀವು.. ಒಂದು ಕೆಲಸ ಮಾಡಿ

ಈಗ ಇಳಿಯಿರಿ.. ಹ್ಞಾಂ! ಇಳಿಜಾರು
ಬಲು ಹುಷಾರು
ತುಟಿ ಪಿಟಿಕ್ ಎಂದೀರಿ?
ಅಲ್ಲಿ ಹುಲಿ ಇದೆ
ಜೋಕೆ! ಬೋನಿಗೆ ಬಿದ್ದಿದೆ, ಮತ್ತೆ ನೀವು
ಸರಳು ಕಾಣುತ್ತಿಲ್ಲವಷ್ಟೇ

ಸರಿ ಸರಿ ಮುಂದೆ ಸಾಗಿ
ಮತ್ತೊಂದು ತಿರುವು ತೆಗೆದುಕೊಳ್ಳಿ
ಇಲ್ನೋಡಿ..
ಹುಡುಗರು ಪೆಕಪೆಕ ನಗುತ್ತ ನಿಂತಿದ್ದಾರೆ
ಹ್ಞೂ.. ರಸ್ತೆಯೆ ತಿರುವು ಮುರುವು
ದಿಕ್ಕು ತೋಚುತ್ತಿಲ್ಲ
ರಸ್ತೆಗೂ ನಗುವಿಗೂ ಮತ್ತೆ ನಿಮಗು
ನೀವೂ ನಕ್ಕು ಬಿಡಿ

ಇನ್ನೇನು.. ಕೊನೆಗೆ ಹೀಗೆ ಮಾಡಿ
ಒಂಚೂರು ವಿಚಾರಿಸಿ ನಿಮ್ಮನ್ನೆ
ಮೊದಲಿದ್ದಲ್ಲಿಗೆ ಬಂದು ನಿಂತಿರಬಹುದು
ನೀವು
ಯಾತಕ್ಕೂ ಒಮ್ಮೆ ನೆಲ ಮೂಸಿ ನೋಡಿ
ತೋರುವ ದಾರಿ ಇಷ್ಟೆ
ಇರುವ ದಾರಿ ಇದ್ದೆ ಇರುತ್ತೆ
ಬೇಕೆನಿಸಿದರೆ ಒಂದು ರೈಟ್ ಟರ್ನ್ ತೆಗೆದುಕೊಳ್ಳಿ
ಮನುಷ್ಯರು ಸಿಗಬಹುದು 

*

Published On - 10:04 am, Sun, 6 February 22