Sahitya Akademi Translation Award: ಗುರುಲಿಂಗ ಕಾಪಸೆ ಅನುವಾದಿಸಿದ ‘ಒಂದು ಪುಟದ ಕಥೆ’ಯ ಆಯ್ದ ಭಾಗ
V.S Khandekar and Guruling Kapase : ಗಂಡ ತೀರಿಕೊಂಡ ಮೇಲೆ ಕೇಶಮುಂಡನೆ ಏಕೆ ಮಾಡಬೇಕು? ಅಸ್ಪೃಶ್ಯ ಎನ್ನಿಸಿದ ಮನುಷ್ಯನನ್ನು ಏಕೆ ಮುಟ್ಟಬಾರದು? ಬ್ರಾಹ್ಮಣನು ಮರಾಠರ ಮನೆಯಲ್ಲಿ ಏಕೆ ಊಟಮಾಡಬಾರದು? ಇಂಥ ಪ್ರಶ್ನೆಗಳು ಯೌವನದ ಕಾಲದಲ್ಲಿ ನನ್ನನ್ನು ಒಂದೇ ಸವನೆ ಪೀಡಿಸುತ್ತಿದ್ದವು.
ವಿ. ಸ. ಖಾಂಡೇಕರ್ | V. S Khandekar : ನನ್ನ ಚಿಕ್ಕಂದಿನಲ್ಲಿ ಸಾಂಗಲಿಯಲ್ಲಿಯ ಮನರಂಜನೆಯ ಸಾಧನ ಬಹಳ ಸೀಮಿತವಾಗಿತ್ತು. ನಾಟಕ, ಕಾದಂಬರಿ ಸಣ್ಣಮಕ್ಕಳು ಓದಬಾರದು ಎಂದು ಎಲ್ಲ ಹಿರಿಯರು ಹೇಳುತ್ತಿದ್ದರು. ಬ್ರಿಟಿಷ್ ರಾಜಸತ್ತೆಯ ಮೂಲಕ ಮತ್ತು ಅವರೊಂದಿಗೆ ಪ್ರಾರಂಭವಾದ ದೇಶದ ಮುಂದಾಳುಗಳ ಜಗಳದ ಮೂಲಕ ರಾಜಕಾರಣ ವಿಷಯದಲ್ಲಿ ಕುತೂಹಲ ಮತ್ತು ಭಯ-ಇತ್ಯಾದಿ ಭಾವನೆ ಜನರ ಮನಸ್ಸಿನಲ್ಲಿ ನಿರ್ಮಾಣವಾಗಿದ್ದವು. ಕೇಸರಿ, ಜ್ಞಾನಪ್ರಕಾಶ, ಕಾಳ, ಇಂದುಪ್ರಕಾಶ ಇತ್ಯಾದಿ ವರ್ತಮಾನ ಪತ್ರಗಳು ಆ ಕಾರಣದಿಂದ ಓದಲ್ಪಡುತ್ತಿದ್ದವು. ಆದರೆ ಸ್ವತಃ ವರ್ತಮಾನ ಪತ್ರ ಕೊಂಡುಕೊಳ್ಳುವುದು ಮತ್ತು ಪ್ರತಿನಿತ್ಯ ಮುಂಜಾನೆ ತಪ್ಪದೇ ಓದುವುದು ಈ ರೂಢಿ ಹೆಚ್ಚಾಗಿ ಆಗಿರಲಿಲ್ಲ. ನನ್ನಂಥವನಿಗೆ ವರ್ತಮಾನ ಪತ್ರ ಕಷ್ಟದಿಂದಲೇ ದೊರೆಯುವುದು. ಇಂಗ್ಲಿಷ ಶಾಲೆಯ ಲೈಬ್ರರಿಯಲ್ಲಿ ಹರಿಭಾವು ಅವರ ‘ಕರಮಣೂಕ’ ‘ಬಾಲಬೋಧ’ ‘ಆನಂದ’ ಇಂಥ ಕೆಲವು ನಿಯತಕಾಲಿಕೆಗಳು ಬರುತ್ತಿದ್ದವು. ಹರಿಭಾವು ಅವರ ಅಪೂರ್ವವೆನಿಸುವ ‘ಕಾಲಕೂಟ’ ಕಾದಂಬರಿಯ ಮೊದಲನೆಯ ಪ್ರಕರಣ ಇಂಥ ಶಾಲೆಗೆ ಬರುತ್ತಿರುವ ಮನರಂಜನೆಯಲ್ಲಿಯ ವಿಷಯ ಓದಿದ್ದು ನನಗೆ ನೆನಪಾಗುತ್ತದೆ.
‘ಬಾಲಬೋಧ’ ಮಾಸಿಕದ ಸಂಪಾದಕರು ವಿನಾಯಕ ಕೋಂಡದೇವ ಓಕ ಆಗಿದ್ದರು. ಪ್ರತಿಯೊಂದು ಸಂಚಿಕೆಯ ಮೊದಲಲ್ಲಿ ಯಾರಾದರೂ ಒಬ್ಬ ದೊಡ್ಡ ಕರ್ತೃತ್ವಶಾಲಿ ವ್ಯಕ್ತಿಯ ಚರಿತ್ರವನ್ನು ಒಂದೆರಡು ಪುಟಗಳಲ್ಲಿ ಕೊಡುತ್ತಿದ್ದರು. ‘ಬಾಲಬೋಧ’ ಮಾಸಿಕವು ನನ್ನ ಲಲಿತ ವಾಙ್ಮಯ ಓದುವ ಹಸಿವನ್ನು ಹಿಂಗಿಸುತ್ತಿರಲಿಲ್ಲ. ಆದರೆ ಅದರ ಪ್ರತಿಯೊಂದು ಸಂಚಿಕೆಯಲ್ಲಿಯ ಚರಿತ್ರೆಯನ್ನು ನಾನು ತಪ್ಪದೆ ಓದುತ್ತಿದ್ದೆ. ಆ ಚರಿತ್ರೆ ವಾಚನದಿಂದ ಕ್ಷಣಹೊತ್ತು ನನ್ನಲ್ಲಿ ಸ್ಫುರಣ ಬಂದಂತೆ ಆಗುತ್ತಿತ್ತು. ನಾನೂ ಕೂಡ ಈ ವ್ಯಕ್ತಿಗಳಂತೆ ಏನಾದರೂ ಪರಾಕ್ರಮ ಮಾಡಿ ತೋರಿಸಬೇಕು ಎಂದೆನಿಸುತ್ತಿತ್ತು.
ಆ ಕಾಲದ ಸುಧಾರಿಸಿದವರ ಮನರಂಜನೆಯ ಸಾಧನಗಳಲ್ಲಿ ನಾಟಕಕ್ಕೆ ಅಗ್ರಸ್ಥಾನವಿತ್ತು. ಪಾಟಣಕರ ಕಂಪನಿಯ ‘ಸತ್ಯವಿಜಯ’ ಇರಬಹುದು, ಕಿರ್ಲೋಸ್ಕರ ಮಂಡಳಿಯ ‘ಶಾರದಾ’ ಇರಬಹುದು ಅಥವಾ ಮಹಾರಾಷ್ಟ್ರ ನಾಟಕ ಮಂಡಳಿಯ ‘ಭಾವು ಬಂದಕಿ’ ಇರಬಹುದು. ನಾಟಕದಲ್ಲಿ ಮುದ್ದಾಮ ದಟ್ಟಣೆ ಆಗುವುದು. ಸಾಂಗಲಿಯಂಥ ಒಂದು ಸಂಸ್ಥಾನದ ರಾಜಧಾನಿಯ ಸ್ಥಳದಲ್ಲಿ ಲೈಬ್ರರಿ ಇತ್ತು. ಓದುವುದರ ವಿಶೇಷ ರುಚಿಯುಳ್ಳ ಜನರು ಸುರಕ್ಷಿತರಲ್ಲಿ ಕೂಡ ಬಹಳ ಕಡಿಮೆ ಇದ್ದರು. ಲೈಬ್ರರಿಗೆ ಹೋಗುವುದು, ವರ್ತಮಾನ ಪತ್ರ ತಿರುವಿ ಹಾಕಲು, ಮಾಸಪತ್ರಿಕೆ ನೋಡುವುದಕ್ಕಾಗಿ, ಹೀಗೆ ಸಾಮಾನ್ಯ ರೂಢಿ ಇತ್ತು. ಆದರೆ ಲೈಬ್ರರಿಯಲ್ಲಿಯ ಇಂಗ್ಲಿಷ್-ಮರಾಠಿ ಪುಸ್ತಕಗಳ ಒಳ್ಳೆಯ ಸಂಗ್ರಹ ಇದ್ದಾಗಲೂ ಪುಸ್ತಕ ಪ್ರಿಯ ಮನುಷ್ಯರ ಸಂಖ್ಯೆ ಆ ದೃಷ್ಟಿಯಿಂದ ಬಹಳ ಅಲ್ಪವಾಗಿತ್ತು. ಸುಧಾರಿಸಿದವರಲ್ಲಿ ಬಹಳಷ್ಟು ಮಹಿಳೆಯರ ಶಿಕ್ಷಣ ‘ರಠಈಕ’ ಮುಂದೆ ಹೋಗಿರಲಿಲ್ಲ. ಬಹಳ ಬಹಳವೆಂದರೆ ಮರಾಠಿ ಎರಡು-ಮೂರು ಇಯತ್ತೆ ಸರ್ವಸಾಮಾನ್ಯ ಸ್ತ್ರೀಶಿಕ್ಷಣದ ಪರಿಸೀಮೆ ಅಷ್ಟೆ. ಆ ಕಾರಣದಿಂದ ನಾಟಕ-ಕಾದಂಬರಿ ಇವುಗಳ ದೊಡ್ಡ ಗಿರಾಕಿಗಳ ಅಸ್ತಿತ್ವದಲ್ಲಿಯೇ ಬಂದಿರಲಿಲ್ಲ. ‘ಮಿಥ್ಯ ಹೆಚ್ಚಿದರೆ ವಿನೋದ, ಎಂದು ರಾಮದಾಸರು ಹೇಳಿದ್ದಾರೆ. ಭೂಮಿಯ ಮೇಲೆ ಪೋಕರಿ ಹುಡುಗರಿಗೆ ಕಾದಂಬರಿ ಹಿಡಿಸುತ್ತದೆ ಎಂದು ಅಂದಿನ ಹಿರಿಯರ ತಿಳಿವಳಿಕೆಯಾಗಿತ್ತು.
ಇದನ್ನೂ ಓದಿ : Award : ಹಿರಿಯ ಲೇಖಕ ಡಾ. ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ
ಹರಿಭಾವು ಆಪಟೆಯಂಥ ತೇಜಸ್ವಿ ನಕ್ಷತ್ರ ಮರಾಠಿ ಕ್ಷಿತಿಜದ ಮೇಲೆ ಯಾವಾಗಲೋ ಉದಯಿಸಿತ್ತು. ತನ್ನ ಪೂರ್ಣ ಪ್ರಕಾಶದಿಂದ ಹೊಳೆಯುತ್ತಿತ್ತು. ಆದರೆ ಅವರ ಕಾದಂಬರಿಗಳು ವಕೀಲರು ಡಾಕ್ಟರರು ಮಾಸ್ತರರು ಮುಂತಾದವರ ಮನೆಯಲ್ಲಿ ಕೂಡ ಕಾಣುವುದು ಕಷ್ಟದಾಯಕವಾಗಿತ್ತು. ಹರಿಭಾವು ಸಾಮಾಜಿಕ ಸುಧಾರಣೆಯ ಪುರಸ್ಕಾರ ಕರ್ತೃಗಳು. ಆದ್ದರಿಂದ ಕಿರಿಯರು ಮನಸಾ ಹೊಂದಿಕೊಂಡಿರುವುದು ಆಗಿನ ಸಮಾಜಕ್ಕೆ ಅವರ ಪ್ರತಿಭೆಯ ಆಕರ್ಷಣೆ ದೊಡ್ಡ ಪ್ರಮಾಣದಲ್ಲಿ ಆಗಲಿಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ. ಹರಿಭಾವು ಆ ವೇಳೆಯಲ್ಲಿ ಹೆಚ್ಚೂ ಕಡಿಮೆ ಪ್ರೌಢ ಓದುಗರಲ್ಲಿ ಲೋಕಪ್ರಿಯರಾಗಿದ್ದರು. ಅದು ಮುಖ್ಯವಾಗಿ ಅವರ ‘ಉಷಃ ಕಾಲ’ ‘ಕೋಟೆ ಬಂದಿತು ಆದರೆ ಸಿಂಹ ಹೋಯಿತು.’ ಇತ್ಯಾದಿ ಐತಿಹಾಸಿಕ ಕಾದಂಬರಿಗಳ ಮೂಲಕ, ಅವರ ಐತಿಹಾಸಿಕ ಕಾದಂಬರಿಗಳಿಂದ ದೇಶಭಕ್ತಿಯ ವಿದ್ಯುತ್ ಲಕಲಕ ಹೊಳೆಯುತ್ತಿತ್ತು. ಅದು ಸಮಾಜಕ್ಕೆ ಹತ್ತಿರದ್ದೆನಿಸಿತು. ಪರಕೀಯ ಬ್ರಿಟಿಷ್ ಆಳಿಕೆಯಿಂದ ನಡೆದಿರುವ ಮತ್ತು ದಿನದಿನಕ್ಕೆ ಅಧಿಕ ಉಗ್ರವಾಗುತ್ತಿರುವ ಸಂಘರ್ಷಕ್ಕೆ ಪೋಷಕವಾದ ವಾತಾವರಣ ಆ ಕಾದಂಬರಿಗಳಲ್ಲಿ ಇತ್ತು. ಆದ್ದರಿಂದ ಜನರ ಮನಸ್ಸಿಗೆ ಅವು ಹತ್ತಿರದವಾಗಿ ಕಂಡವು. ಸಾಮಾಜ ಸುಧಾರಣೆಯ ವಿಷಯ ತೀರ ಬೇರೆಯದೇ ಆಗಿತ್ತು. ಸುಧಾರಕ ಅಂದರೆ ಯಾವನೋ ಭ್ರಷ್ಟಮನುಷ್ಯ ಸಾಹೇಬರ ಅಂಧಾನುಕರಣ ಮಾಡುವವರ ಒಂದು ಭ್ರಮೆ. ಈ ತಿಳಿವಳಿಕೆ ಜನತೆಯ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತುಕೊಂಡಿತು. ನಮ್ಮ ಸಂಸ್ಕೃತಿ ಉತ್ತಮವಾದದು, ನಮ್ಮ ಇತಿಹಾಸ ಉಜ್ವಲವಾದುದು. ರಾಮಾಯಣ, ಮಹಾಭಾರತದ ಕಾಲದಿಂದ ಶನಿಮಹಾತ್ಮೆ ಮತ್ತು ಸತ್ಯನಾರಾಯಣ ಕಥಾವರೆಗೆ ಆಗುವ ಧರ್ಮದ ದರ್ಶನವೇ ನಿಜವಾದ ಹಿಂದೂ ಧರ್ಮ. ಪರಂಪರಾಗತವಾದ ರೂಢಿಯಲ್ಲಿ ಬಹಳಷ್ಟು ಸುಧಾರಣೆ ಮಾಡಲಿಕ್ಕೆ ಯಾವುದೇ ಕಾರಣವಿಲ್ಲ. ಈ ಪ್ರಕಾರದ ಆ ಕಾಲದ ಸಾಮಾಜಿಕ ಮನಸ್ಸಿನ ಕಲ್ಪನೆ ಇತ್ತು. ಈ ಮನಸ್ಸು ಸಾಮಾಜಿಕ ಸುಧಾರಣೆಯ ಪುರಸ್ಕಾರ ಮಾಡುವ ಕಾದಂಬರಿಕಾರರನ್ನು ಸಂತೋಷದಿಂದ ಹೇಗೆ ಸ್ವಾಗತ ಮಾಡಬಲ್ಲದು.!
ಆದರೆ ಹರಿಭಾವು ಅವರ ಐತಿಹಾಸಿಕ ಕಾದಂಬರಿಗಳು ಕೂಡ ನನಗೆ ಓದಲಿಕ್ಕೆ ದೊರತವು. ಅವು ಯಾವುದೇ ಸುಶಿಕ್ಷತರ ಮನೆಯಲ್ಲಿ ಇರಲಿಲ್ಲ. ಅಥವಾ ಹಿರಿಯರು ಅಥವಾ ಶಿಕ್ಷಕರು ಇವರು ಈ ಕಾದಂಬರಿಗಳನ್ನು ಓದಬೇಕು. ಹೀಗೆ ಹೇಳುವುದರಿಂದಲೂ ಅಲ್ಲ. ಯಾರದೋ ಮನೆಗೆ, ಯಾತಕ್ಕಾಗಿಯೋ ನಾನು ಹೋದರೆ ಅದು ಮದುವೆಯ ಸಮಾರಂಭವಿರಬಹುದು, ಸತ್ಯನಾರಾಯಣ ಕಥೆ ಇರಬಹುದು, ಚಿತ್ರಮಾಸದಲ್ಲಿಯ ಅರಿಷಿಣ, ಕುಂಕುಮ ಕಾರ್ಯಕ್ರಮ ಇರಬಹುದು ಅಥವಾ ಯಾವುದೇ ಬಗೆಯ ಆಟ ಇರಬಹುದು, ನನ್ನ ದೃಷ್ಟಿ ಪುಸ್ತಕ ಮತ್ತು ವರ್ತಮಾನ ಪತ್ರ ಇವುಗಳ ಶೋಧದಲ್ಲಿರುತ್ತದೆ. ಏನಾದರೂ ಇಂಥ ವಸ್ತು ಮಾಡಿನಲ್ಲಿ ಇಟ್ಟಿದ್ದರೆ ಅದನ್ನು ತೆಗೆದು ಓದಲು ತೊಡಗುತ್ತಿದ್ದೆ. ‘ಕೋಟೆ ಬಂದಿತು ಆದರೆ ಸಿಂಹ ಹೋಯಿತು’ ಈ ಪುಸ್ತಕದ ನೆನಪಾದರೆ ಮಾವಿನ ಮರದ ನೆರಳು ಕಂಡಂತಾಗುತ್ತಿತ್ತು. ಪ್ರೀತಿಯ ಬೇಳೆಯ ಕೋಸಂಬರಿ ಇದು, ಮುದ್ದಾಮ ಎದ್ದು ನಿಲ್ಲುತ್ತಿತ್ತು. ಇದಕ್ಕೆ ಕಾರಣ ಇನ್ನೊಂದು ಮತ್ತೊಂದು ಏನೂ ಇಲ್ಲ. ಒಬ್ಬ ಗೆಳೆಯನ ಮನೆಗೆ ಚಿತ್ರ ಮಾಸದ ಅರಿಷಿಣ-ಕುಂಕುಮದ ದಿವಸ ಹೋಗಿದ್ದೆ. ಅಲ್ಲಿ ನನಗೆ ಈ ಕಾದಂಬರಿ ಕಂಡಿತು. ಅದರ ಪ್ರಥಮ ಪ್ರಕರಣ ನಾನು ಓದಿದೆ ಮತ್ತು ನಾನು ಮೂರುನೂರ ವರ್ಷಗಳ ಪೂರ್ವದ ಕಾಲದಲ್ಲಿ ಮುಳುಗಿಬಿಟ್ಟೆ.
ಪಾನೀಯ ಕುಡಿದಂತಾಯಿತು, ಕೋಸಂಬರಿ ತಿಂದಂತಾಯಿತು. ಆ ಎಲ್ಲ ಕ್ರಿಯೆಯು ಒಂದು ಯಂತ್ರದಂತೆ ನನ್ನ ಶರೀರದಿಂದ ನಡೆಯಿತು, ಸುಂಟರಗಾಳಿಯಲ್ಲಿ ಒಂದು ಎಲೆ ಗಿರಕಿಹೊಡೆದಂತೆ ಕಮಲಕುಮಾರಿ, ದೇವಲದೇವಿ, ಉದಯಭಾನು, ಜಗತಸಿಂಹ ಮತ್ತು ತಾನಾಜಿ ಇವರ ಗರಡಿಯಲ್ಲಿ ಆ ದಿವಸ ನಾನು ಸಿಕ್ಕುಹಾಕಿಕೊಂಡೆ. ‘ರೂಪನಗರಿಯ ರಾಜಕನ್ಯಾ’ ಅದೆ ತಾನೆ ಕಪಾಟದಿಂದ ಹೊರಬಂದಿತ್ತು. ಆದರೆ ಚಳಿಗಾಲದ ದಿನಗಳಲ್ಲಿಯ ಮರಳುಗಾಡಿನ ಮೇಲೆ ಬೀಸುವ ಗಾಳಿ ನನ್ನನ್ನು ಸ್ಪರ್ಶಿಸತೊಡಗಿತು. ಮೊದಲೇ ದಿನಗಳು ಸಣ್ಣವು. ಅದರಲ್ಲಿ ಗಡಿಬಿಡಿ ಇದೆ. ಬಿಸಿಲು ಮೆಲ್ಲ ಮೆಲ್ಲನೆ ನಿಸ್ತೇಜ ಹಳದಿಯಾಗುತ್ತ ನಡೆದಿದೆ. ಒಂದು ಗುಡಿಸಲಿನ ಬಾಗಿಲಲ್ಲಿ ಕುಳಿತು ಗೋಡೆಯಲ್ಲಿ ಒತ್ತಿ ಹೋಗುತ್ತಿರುವ ದುರ್ಗಾದಾಸನ ಧೀರೋದಾತ್ತ ಮನಸ್ಸಿನ ಬೆಳಕಿನಲ್ಲಿ ನನ್ನ ಮನಸ್ಸು ಉಜ್ವಲವಾಗುತ್ತ ಹೊರಡುತ್ತದೆ. ಇದು ಒಂದುಕ್ಷಣ ಭಾಸವಾಗುತ್ತದೆ. ನನ್ನ ಕೈಯಲ್ಲಿ ಬಂದ ಆ ರೂಪನಗರದ ರಾಜಕನ್ಯೆಯ ಸ್ಥಿತಿ ಬಹಳಷ್ಟು ಕೆಟ್ಟದ್ದಾಗಿರುತ್ತದೆ. ಮೈಮೇಲೆ ಕಲೆಗಳಿರುವ ಭಿಕ್ಷುಕಳಂತೆ ಅವಳ ಚಿತ್ರ ಅನೇಕ ಕಡೆಯಲ್ಲಿ ಹರಿದಿತ್ತು. ಮಧ್ಯದ ಅನೇಕ ಪುಟಗಳು ಕಳೆದಿದ್ದವು. ಆ ಹರಿದು ಹೋದ ಪುಟಗಳ ಬಗ್ಗೆ ನನಗೆ ಎಷ್ಟು ಚಡಪಡಿಕೆಯಾಯಿತು, ಅದೂ ನನಗೆ ನೆನಪಾಗುತ್ತದೆ. ಬಹುಶಃ ಈ ಪುಸ್ತಕವನ್ನು ರದ್ದಿ ಎಂದು ಮನೆಯಲ್ಲಿ ಯಾರೋ ಇಟ್ಟಿರಬೇಕು.
ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೇ ವಲಂ: ‘ವ್ಯವಹಾರಕ್ಕೂ ಧರ್ಮಕ್ಕೂ ತಳಕು ಹಾಕಬಾರದು’ ಗುರುಲಿಂಗ ಕಾಪಸೆ
ಆಗ ಮನೆ ಮನೆಗಳಲ್ಲಿ ಎರಡನೆಯ ಪ್ರಕಾರದ ಒಂದು ಓದುವಿಕೆಯಿತ್ತು. ಅದೆಂದರೆ ಪುರಾಣ ಪುಣ್ಯ ಕತೆಗಳದ್ದು. ಅನೇಕ ಮನೆಗಳಲ್ಲಿ ರಾತ್ರಿ ಮಲಗುವ ಮುಂಚೆ ‘ಹರಿವಿಜಯ’ ‘ರಾಮವಿಜಯ’ ‘ಪಾಂಡವ ಪ್ರತಾಪ’ ಇಂಥ ಗ್ರಂಥಗಳು ಓದಲ್ಪಡುತ್ತಿದ್ದವು. ದೈನಂದಿನ ಸಂಸಾರದ ಜಂಜಾಟದಿಂದ ಕುಟುಂಬದಲ್ಲಿಯ ಹೆಣ್ಣುಮಕ್ಕಳ-ಪುರುಷರ ಮನಸ್ಸು ಈ ನಿಮಿತ್ಯದಿಂದ ಒಂದಿಷ್ಟು ಹೊರಬರುತ್ತಿತ್ತು. ತಮ್ಮ ದುಃಖದ ಮನಸ್ಸಿಗಿಂತ ನೂರುಪಟ್ಟು ಹೆಚ್ಚಾಗಿರುವ ಪೌರಾಣಿಕ ಕಥೆಗಳಲ್ಲಿಯ ದುಃಖದ ಕಡೆಗೆ ಒಂದು ಗಳಿಗೆ, ಎರಡುಗಳಿಗೆ ಮನುಷ್ಯ ನೋಡಿದರೆ ತಮಗೆ ತಿಳಿಯದಂತೆ ಜೀವನದ ತೂಕ ಅವರಿಗೆ ತಿಳಿಯುವುದು. ‘ಎದ್ದನು ಗೋಪಾಲನು, ಹೊರಟನು ಗೋವಿನ ಕಡೆಗೆ’ ಈ ಭೂಪಾಳಿ ಕೇಳಿ ಎಚ್ಚರಗೊಳ್ಳುವ ಮತ್ತು ‘ರಾಮವಿಜಯ’ದ ವಾಚನದಿಂದ ನಿದ್ದೆ ಹೋಗುವ ಆ ಕಾಲದ ಜೀವನ ತನಗೆ ತಿಳಿಯದಂತೆ ಮನಶ್ಶಾಂತಿಯ ಒಂದು ಮಾರ್ಗವೇ ಆಗಿ ಅವಲಂಬಿತವಾಗಿತ್ತು ಎಂಬುದರಲ್ಲಿ ಸಂದೇಹವಿಲ್ಲ.
ಮನೆಯಲ್ಲಿಯ ಈ ಧಾರ್ಮಿಕ ವತಾವರಣ ಹೊರಗಿನ ಸಾಮಾಜಿಕ ಜೀವನದಲ್ಲಿಯೂ ಮತ್ತೆ ಮತ್ತೆ ಪ್ರತಿಬಿಂಬಿತವಾದದ್ದು ಕಂಡು ಬರುತ್ತದೆ. ಗಣಪತಿಯ ದೇವಾಲಯದ ನೆರೆಯವರಾಗಿ ನಾವು ಸದಾ ವಾಸವಾಗಿದ್ದೆವು. ಅದರಿಂದ ಅತ್ಯಂತ ಚಿಕ್ಕವಯಸ್ಸಿನಿಂದಲೇ ಗಣಪತಿ ಮತ್ತು ಹತ್ತಿರದ ದೇವತಾ ಇವುಗಳ ಮೆರವಣಿಗೆ ರೂಢಿಯು ನನ್ನ ಕಣ್ಣುಗಳಿಗಾಯಿತು. ಐದಾರು ವರ್ಷದ ಹುಡುಗನಿಗೆ ಮೆರವಣಿಗೆಯು ಸರ್ಕಸ್ಸಿನಂತೆ ಮನೋರಂಜಕವಾಗಿ ಕಾಣುವುದು ಸಹಜವಾಗಿದೆ. ಅದರ ಧಾರ್ಮಿಕ ಅರ್ಥ ತಿಳಿಯಲು ಮುಖ್ಯವಾದದ್ದೆಂದರೆ ಒಂದಿಷ್ಟು ದೊಡ್ಡವರಾಗಬೇಕಾಗುತ್ತದೆ. ಆದರೆ ಗಣಪತಿಯ ದೇವರ ಮೂಲಕ ಆನೆ, ಕುದುರೆ, ಒಂಟೆ ಮತ್ತು ವಿವಿಧ ಪ್ರಕಾರದ ವಾದ್ಯ ಇವು ನನಗೆ ಚಿಕ್ಕಂದಿನಿಂದ ಪರಿಚಿತವಾದವು. ಧಾರ್ಮಿಕ ವಾತಾವರಣದ ಸಂಬಂಧವಿರುವ ಉತ್ಸವಪ್ರಿಯತೆ ನಾನು ನೋಡಿದೆ. ಗಣಪತಿಯಂತೆ ಊರಲ್ಲಿ ಇತರ ಅನೇಕ ಲೋಕಪ್ರಿಯ ದೇವತೆಗಳಿದ್ದವು. ರಾಮ, ದತ್ತ, ಬಾಲಾಜಿ, ಮುರಲೀಧರ, ಮಾರುತಿ ಇತ್ಯಾದಿ. ಈ ಎಲ್ಲ ದೇವಾಲಯಗಳಲ್ಲಿ ಬೇರೆ ಬೇರೆ ಸಮಯಗಳಲ್ಲಿ ಉತ್ಸವ ನಡೆಯುತ್ತಿತ್ತು. ಭಾವಿಕರ ಗದ್ದಲ ಇರುತ್ತಿತ್ತು. ಆ ಗದ್ದಲದಲ್ಲಿ ಹೋಗುವುದು ಒಂದು ಆನಂದದ ಅನುಭವ ಆಗಿತ್ತು.
ಮನೆ-ಮನೆಯಲ್ಲಿ ಮುಂಜಾವು ಸಂಜೆ ಸಣ್ಣ-ಸಣ್ಣ ವಿಷಯಗಳಲ್ಲಿ ಕ್ಷುದ್ರ ಮನೋವೃತ್ತಿ ಪ್ರಕಟಿಸುವ ಮನುಷ್ಯ ಎರಡು ಗಳಿಗೆ ಏನೇ ಇರಲಿ, ತನ್ನ ಸಣ್ಣತನವನ್ನು ಮರೆತು ದೈನಂದಿನ ಜಮಾ ಖರ್ಚಿನ ಎಲ್ಲ ಚಿಂತೆಯನ್ನು ಬದಿಗೆ ಸರಿಸಿ ದೇವಾಲಯದ ಸಭಾ ಮಂಟಪದಲ್ಲಿ ಕೂಡಿ ಕೊಂಡಿರುತ್ತಾನೆ ಮತ್ತು ರಾಮಜನ್ಮದ ಸ್ತೋತ್ರ ಮಾಡುತ್ತಿರುತ್ತಾನೆ. ಮಾರುತಿಯ ಆರತಿ ಪದ ಹಾಡುತ್ತಿರುತ್ತಾನೆ. ಇಂಥ ವಾತಾವರಣದಲ್ಲಿ ಅವನು ಏಕರೂಪವಾಗುವುದು ಈ ವಿಷಯದಲ್ಲಿ ಯಾವುದೋ ಒಂದು ನಿಶ್ಚಿತವಾದ ಅರ್ಥವಿರುತ್ತದೆ. ಹಾಗೆಂದು ನನಗೆ ಅನಿಸುತ್ತದೆ. ಏನಿಲ್ಲೆಂದರೂ ದೈನಂದಿನ ಜೀವನವು ಸಾಮಾನ್ಯ ಮನುಷ್ಯನ ದೃಷ್ಟಿಯಿಂದ ಒಂದು ಬಲೆಯಾಗಿರುತ್ತದೆ. ಆ ಬಲೆಯಲ್ಲಿಯ ಪಕ್ಷಿಗೆ ಹಸಿರು ಹಸಿರಾದ ಬೇಳೆ ತಿನ್ನಲು ದೊರೆಯುತ್ತದೆ. ಕ್ವಚಿತ್ತಾಗಿ ದಾಳಿಂಬರ ಕಾಳುಗಳೂ ದೊರೆಯುತ್ತವೆ. ಆದರೂ ಅದರ ಪಕ್ಕಗಳ ಫಡ ಫಡ ನಡೆದೇ ಇರುತ್ತದೆ. ಅದು ಒಂದುವರೆ ಫೂಟ ಉದ್ದ, ಒಂದು ಪೂಟು ಅಗಲ. ಒಂದು ಪೂಟ ಎತ್ತರಯಿರುವ ಹಳದಿ ಕಾರಾಗೃಹದಲ್ಲಿ ರೆಕ್ಕೆ ಬಡಿಯುತ್ತಿರುತ್ತದೆ. ಗಿಡದ ಮೇಲೆ ಹೋಗಿ ಕುಳಿತುಕೊಳ್ಳಬೇಕು. ಒಂದು ಹಣ್ಣನ್ನು ಕಚ್ಚೋಣ. ನೀಲಾಕಾಶದ ಧ್ಯಾನ ಮಾಡೋಣ ಮತ್ತು ಸ್ವಚ್ಛಂದವಾಗಿ ಹಾರಾಡೋಣ. ಇದೆಲ್ಲ ಅದರ ಅಂತರಂಗದ ಇಚ್ಛೆ, ಇದನ್ನು ಮನಸ್ಸಿನಲ್ಲಿಯೇ ಹತ್ತಿಕ್ಕಿಕೊಂಡಿರುತ್ತದೆ. ಸಾಮಾನ್ಯ ಮನುಷ್ಯನಿಗೆ ಕೂಡ ತನ್ನ ಬಲಿಯಿಂದ ತಾತ್ಪೂರ್ತಿಕ ಬಿಡುವು ದೊರೆಯಬೇಕಾಗಿತ್ತು. ಪ್ರಾಚೀನ ಪರಂಪರೆಯಿಂದ ಬಂದ ಧಾರ್ಮಿಕ ಆಚರಣೆಯಿಂದ ಸ್ವಲ್ಪಿಲ್ಲಾ ಸ್ವಲ್ಪ ದೊರೆಯುತ್ತದೆ.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಎಸ್. ಗಂಗಾಧರಯ್ಯ ಅನುವಾದಿಸಿದ ಇವಾನ್ ಬುನಿನ್ ಕಾದಂಬರಿಯ ಆಯ್ದ ಭಾಗ
‘ಧರ್ಮವು ಅಫೂ ಆಗಿದೆ’ ಎಂದು ಮಾರ್ಕ್ಸ್ ಹೇಳಿದ್ದಾನೆ. ಇದು ಒಂದು ಅರ್ಧಸತ್ಯವಾಗಿದೆ. ವರ್ಗೀಯ ಮತ್ತು ಐತಿಹಾಸಿಕ ಈ ಎರಡೂ ದೃಷ್ಟಿಯಿಂದ ಮಾರ್ಕ್ಸ್ ಪರವಾಗಿ ಹೇಳಲ್ಪಡುತ್ತದೆ. ಆದರೆ ವ್ಯಕ್ತಿಗೆ ಈಶ್ವರನಿಂದ ಬಂದ ತನ್ನ ಹೆಸರಿನ ಅರಿವು ಮಾಡಿಕೊಡುವ ಧರ್ಮದ ಶಕ್ತಿಯನ್ನು ಅಮಾನ್ಯ ಮಾಡುವುದು ಹಟಮಾರಿತನವೆನಿಸುತ್ತದೆ. ಐಹಿಕ ಭೋಗಸಂಪನ್ನ ಜೀವನವನ್ನು ಜೀವನದ ಸಾಧ್ಯವೆಂದು ಮನ್ನಿಸಿ, ತೀವ್ರವಾಗಿ ಸಾಗಿರುವ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿಯ ತರುಣರ ಮನಶ್ಶಾಂತಿಗಾಗಿ ಎಲ್.ಎಸ್.ಡಿ. ಹೆರಾಯಿನ್, ಮಾರಿಜುವಾನಾ ಇತ್ಯಾದಿ ಮಾದಕ ಪದಾರ್ಥಗಳ ಆಶ್ರಯ ಪಡೆಯಬೇಕಾಗುತ್ತದೆ. ತನ್ನನ್ನು ತಾನು ಮರೆಯುವುದಕ್ಕಾಗಿ ನವ್ಯ ಪ್ರಕಾರದ ಮಾದಕ ಪದಾರ್ಥಗಳ ಆಶ್ರಯ ಪಡೆಯಬೇಕಾಗುತ್ತದೆ. ತನ್ನನ್ನು ತಾನು ಮರೆಯುವುದಕ್ಕಾಗಿ ನವ್ಯ ಪ್ರಕಾರದ ಮಾದಕ ಪದಾರ್ಥಗಳನ್ನು ಅವಲಂಬಿಸುವುದಕ್ಕಿಂತ ಆ ಹಳೆಯ ಧಾರ್ಮಿಕ ತಿಳಿವಳಿಕೆಯ ಅಫು ಹೆಚ್ಚು ಒಳ್ಳೆಯದು. ಇದು ಒಂದು ಕ್ಷಣ ಮನಸ್ಸಿನಲ್ಲಿ ಬರದೇ ಹೋಗದು.
ನನ್ನ ಬಾಲ್ಯದಲ್ಲಿ ಸಾಮಾಜಿಕ ಚೌಕಟ್ಟು ತುಂಬಾ ಬಂಧುರವಾಗಿತ್ತು. ಉಕ್ಕಿನಂತಿತ್ತು ಎಂದು ಹೇಳಿದರೂ ನಡೆಯುತ್ತದೆ. ತಲೆ ತಲಾಂತರದಿಂದ ನಡೆದು ಬಂದ ರೂಢಿಯನ್ನು ಪ್ರತಿಯೊಬ್ಬ ವ್ಯಕ್ತಿ ಮೌನವಾಗಿ ಮುಂದುವರಿಸುತ್ತಿದ್ದನು. ಹೀಗೇಕೆ? ಎಂಬ ಪ್ರಶ್ನೆ ಸಹಸಾ ಉದ್ಭವಿಸುತ್ತಿರಲಿಲ್ಲ. ಅದು ಯಾರ ಮನಸ್ಸಿನಲ್ಲಿ ಬಂದರೆ, ಅದಕ್ಕೆ ಸಂಪೂರ್ಣವಾದ ಪಾರಲೌಕಿಕ ಉತ್ತರ ಸಿದ್ಧವಾಗಿರುತ್ತಿತ್ತು. ಟೆನಿಸನ್ ನ ‘ಚಾರ್ಜ ಆಫ್ ದ ಲಾಯಿಟ ಬ್ರಿಗೇಡ’ ಈ ಕವಿತೆಯನ್ನು ನಾನು ಮೊದಲಿಗೆ ಓದಿದಾಗ ನಿಶ್ಚಿತ ಗಾಡಿಯ ಹೆಜ್ಜೆಗಳಲ್ಲಿ ಶತಶತಮಾನಗಳಿಂದ ಕಷ್ಟದಲ್ಲಿಯೂ ನಡೆದು ಬಂದ ನಮ್ಮ ಹಳೆಯ ಪೌರಾಣಿಕ ಸಮಾಜದ ಗಾಡಿಯ ನೆನಪಾಯಿತು. ಈ ಕವಿತೆಯಲ್ಲಿಯ ಸಾಹಸಿ ಸೈನಿಕನು ಆಜ್ಞೆ ಕೇಳಿದೊಡನೆ ಒಂದಿಷ್ಟೂ ಆಲೋಚನೆ ಮಾಡದೆ ಎದುರಿಗೆ ಖಚಿತವಾಗಿರುವ ಮೃತ್ಯುವಿನ ಮುಖದಲ್ಲಿ ಹಾರಿ ಬಿಡುತ್ತಾನೋ ಹಾಗೆ ನಮ್ಮ ಎಲ್ಲ ಸಾಮಾಜಿಕ ಆಚಾರ-ವಿಚಾರಗಳ ಸ್ಥಿತಿ ಇತ್ತು. ಟೆನಿಸನ್ ನ ಕವಿತೆಯಲ್ಲಿ Theirs not to question why ಹೀಗೆ ಒಂದು ಸಾಲು ಇದೆ. ಆ ಸೈನಿಕರಿಗೆ ಏನನ್ನು ವಿಚಾರಿಸುವ ಹಕ್ಕಿರಲಿಲ್ಲ.
ಹಾಗೆಯೇ ಹಿಂದೂ ಸಮಾಜದಲ್ಲಿಯ ಸ್ತ್ರೀ-ಪುರುಷರಿಗೆ ಹಕ್ಕಿರಲಿಲ್ಲ. ಗಂಡ ತೀರಿಕೊಂಡ ಮೇಲೆ ಕೇಶಮುಂಡನೆ ಏಕೆ ಮಾಡಬೇಕು? ಅಸ್ಪೃಶ್ಯ ಎನ್ನಿಸಲ್ಪಟ್ಟ ಮನುಷ್ಯನನ್ನು ಮುಟ್ಟಬಾರದೇಕೆ? ಬ್ರಾಹ್ಮಣನು ಮರಾಠರ ಮನೆಯಲ್ಲಿ ಏಕೆ ಊಟಮಾಡಬಾರದು? ಈ ಮತ್ತು ಇಂಥ ಅನೇಕ ಅನೇಕ ಪ್ರಶ್ನೆಗಳು ಯೌವನದ ಕಾಲದಲ್ಲಿ ನನ್ನನ್ನು ಒಂದೇ ಸವನೆ ಪೀಡಿಸುತ್ತಿದ್ದವು. ಇವುಗಳಿಗೆ ಉತ್ತರ ಶಿಕ್ಷಣದಿಂದ ಅಥವಾ ಹಿರಿಯರಿಂದ ದೊರೆಯುವಂತಿರಲಿಲ್ಲ. ಈ ಎಲ್ಲವನ್ನು ನನಗೆ ತೀರ ಹತ್ತಿರದ ಮನುಷ್ಯರು ಪರಂಪರೆಯಿಂದ ನಡೆದು ಬರುತ್ತಿರುವ ವಿಷಯ ಕುರಿತು ಯಾವುದೇ ರೀತಿಯ ಸಂದೇಹ-ದುಸ್ಸಂದೇಹ ವ್ಯಕ್ತ ಪಡಿಸದೆ ಸ್ವೀಕರಿಸುತ್ತಿದ್ದರು. ನನ್ನ ಮನಸ್ಸು ಮಾತ್ರ ಅದನ್ನೆಲ್ಲ ಸ್ವೀಕರಿಸಲು ಸಿದ್ಧವಿರಲಿಲ್ಲ. ವಯಸ್ಸಿನ ಹತ್ತನೆಯ-ಹನ್ನೆರಡನೆಯ ವರ್ಷದವರೆಗೆ ತತ್ಕಾಲೀನ, ಪ್ರಚಲಿತ ಶ್ರದ್ಧೆಯ ಮತ್ತು ಅಂಧಶ್ರದ್ಧೆಯ ವರ್ಚಸ್ಸು ನನ್ನ ಮನಸ್ಸಿನ ಮೇಲೆ ಇತ್ತು. ಷಾಣ್ಮಾಸಿಕ ಅಥವಾ ವಾರ್ಷಿಕ ಪರೀಕ್ಷೆ ಬಂತೆಂದರೆ ಶಾಲೆಗೆ ಹೋಗುತ್ತ ಹೋಗುತ್ತ ದತ್ತಾತ್ರೇಯ ದೇವಾಲಯದಲ್ಲಿ ಹೋಗಿ ಅವನ ದರ್ಶನ ಪಡೆದು ಹೋಗಿದ್ದೇನೆ.
ಮನಸ್ಸಿನಲ್ಲಿಯ ಉದ್ದೇಶ ಒಂದೇ ಒಂದು, ಅದೆಂದರೆ ಅವನ ಕೃಪೆಯಿಂದ ಪರೀಕ್ಷೆಯಲ್ಲಿ ನನಗೆ ಹೆಚ್ಚು ಅಂಕಗಳು ಬರಬೇಕು. ತಂದೆ ಅರ್ಧಾಂಗವಾಯುವಿನಿಂದ ಹಾಸಿಗೆಯ ಮೇಲೆ ಮಲಗಿದ್ದರು. ಆಗ ದೊಡ್ಡ ಭಾವಿಕ ಮನೋವೃತ್ತಿಯಿಂದ ಶನಿಮಹಾತ್ಮ್ಯ ಓದಿದ್ದೇನೆ. ಉಪವಾಸ ಮಾಡುವುದು, ಯಾವುದಾದರೂ ದೇವರಿಗೆ ನಿಯಮಿತವಾಗಿ ಹೋಗಿ ಪ್ರದಕ್ಷಿಣೆ ಹಾಕುವುದು ಹೀಗೆ ಏನಾದರೂ ಮಾಡಿದರೆ ದೇವರು ನಮಗೆ ಪ್ರಸನ್ನನಾಗುತ್ತಾನೆ. ನಮ್ಮ ದುಃಖವನ್ನು ನಿವಾರಿಸುತ್ತಾನೆ. ಹೀಗೆಲ್ಲ ಮನ್ನಿಸುವುದು ಆಗಿನ ಸಮಾಜದ ರೀತಿಯಂತೆ ನನಗೂ ಒಂಬತ್ತನೆಯ-ಹತ್ತನೆಯ ವರ್ಷ ಯಾವುದೇ ದೋಷ ಕಾಣುತ್ತಿರಲಿಲ್ಲ. ಆದರೆ ಈ ಯಾವ ಉಪಾಯದಿಂದಲೂ ನನ್ನ ತಂದೆಯ ಕಾಯಿಲೆ ಒಂದಿಷ್ಟೂ ಕಡಿಮೆಯಾಗಲಿಲ್ಲ. ನಮ್ಮ ಕುಟುಂಬದ ಪರಿಸ್ಥಿತಿ ತಿಲಮಾತ್ರವೂ ಸುಧಾರಿಸಲಿಲ್ಲ. ಈ ಕಾರಣದಿಂದ ಇರಬಹುದು ಅಥವಾ ನಿರಂತರವಾಗಿ ಓದುತ್ತಿದ್ದೆ, ಅದರಿಂದ ಒಂದಿಲ್ಲ ಒಂದು ರೀತಿಯಾದ ವಿಚಾರ ಮಾಡತೊಡಗಿದ್ದರಿಂದ ಇರಬಹುದು. ಹನ್ನೆರಡು-ಹದಿಮೂರನೆಯ ವರ್ಷದಿಂದ ಈ ಎಲ್ಲ ಪರಂಪರಾಗತ ಶ್ರದ್ಧಾಕಡೆಗೆ ನಾನು ಸಾಶಂಕಿತನಾಗಿ ನೋಡತೊಡಗಿದೆ ಮತ್ತು ಸಮಾಜಮಾನ್ಯ ಧಾರ್ಮಿಕ ರೂಢಿ ಮತ್ತು ಪ್ರಚಲಿತ ಕಲ್ಪನೆಗಳ ಪೊಳ್ಳತನ ನನ್ನ ಮನಸ್ಸನ್ನು ಮೆಲ್ಲ ಮೆಲ್ಲನೆ ತಿವಿಯ ತೊಡಗಿದವು.
ಇದನ್ನೂ ಓದಿ : Book Release: ಅಚ್ಚಿಗೂ ಮೊದಲು; ಶ್ರದ್ಧಾಳು, ತನ್ಮಯಿ, ಹಟಮಾರಿ, ಪ್ರತಿಭಾವಂತ, ನಿಸ್ವಾರ್ಥಿ ಚನ್ನಕೇಶವ
ಮುಂಜಿವೆಯಾದ ಮೇಲೆ ನಾನು ಕೆಲವು ದಿವಸ ಸಂಧ್ಯಾವಂದನೆ ಮಾಡುತ್ತಿದ್ದೆ. ಮುಂದೆ ಶಾಲೆಯ ಗಡಿಬಿಡಿಯಲ್ಲಿ ಅದು ‘ಕೇಸ್ತು’ ಮೇಲೆ ಬಂದು ನಿಂತಿತು. ಇದು ಬೇರೆ. ಆದರೆ ಸಂಸ್ಕೃತದಲ್ಲಿ ಒಂದಿಷ್ಟು ಗತಿ ದೊರತ ಮೇಲೆ ಗಿಳಿಯಂತೆ ಪಾಠ ಮಾಡಿದ ಸಂಧೆಯ ಅರ್ಥ ನನ್ನ ಮನಸ್ಸಿಗೆ ಹೊಳೆಯತೊಡಗಿತು. ಅದರಲ್ಲಿ ‘ತದಹಂ ಪಾಪಮಕಾರ್ಷಮ್’ ಇತ್ಯಾದಿ ಸ್ಥಳ ಸಂಬಂಧ ಕುರಿತು ನಾನು ವಿಚಾರ ಮಾಡತೊಡಗಿದೆ. ರಾತ್ರಿ ನಾನು ಯಾವುದೇ ಪಾಪ ಮಾಡಿರಲಿ, ನನ್ನ ಇಂದ್ರಿಯಗಳು ಮನ, ಬುದ್ಧಿ, ಇತ್ಯಾದಿಗಳ ಮೂಲಕ ಯಾವದೇ ಪಾಪ ಘಟಿಸಿರಲಿ, ಅದು ಈ ಸಂಧ್ಯಾವಂದನೆ ಮಾಡುವುದರಿಂದ ಇಲ್ಲದಾಗುತ್ತದೆ. ಹೀಗೆಂದು ಅದರ ಅರ್ಥವಿದೆ. ಪಾಪ ನಿವಾರಣೆಯ ಈ ಅತ್ಯಂತ ಸುಲಭವಾದ ಉಪಾಯವು ಏನು ಮಾಡಿದರೂ ನನ್ನ ಮನಸ್ಸಿಗೆ ನಾಟಲಿಲ್ಲ. ರಾತ್ರಿ ಕಳವು ಮಾಡಿ, ಮುಂಜಾನೆ ಕೇವಲ ಸಂಧ್ಯಾವಂದನೆ ಮಾಡಿದರೆ ಒಬ್ಬ ಬ್ರಾಹ್ಮಣನು ಕಳುವಿನ ಪಾಪದಿಂದ ಮುಕ್ತನಾಗಬಲ್ಲನು. ಇದನ್ನು ಒಪ್ಪಿಕೊಳ್ಳಲು ನನ್ನ ಬುದ್ಧಿ ಸಿದ್ಧವಾಗಲಿಲ್ಲ. ಇನ್ನೊಂದು ವಿಚಾರ ಮನಸ್ಸಿಗೆ ಚುಚ್ಚತೊಡಗಿತು. ಮನುಷ್ಯ ದುರ್ಬಲ ಪ್ರಾಣಿಯಾಗಿದ್ದಾನೆ. ಅವನು ಸಹಜ ಮೋಹದಲ್ಲಿ ಬೀಳುತ್ತಾನೆ. ಯಾವುದು ಮಾಡಬಾರದೋ ಅದು ಅವನ ಕೈಯಿಂದ ಆಗಿಬಿಡುತ್ತದೆ. ಆದರೆ ಈ ರೀತಿಯಿಂದ ಮನುಷ್ಯನ ಕೈಯಿಂದ ಘಟಿಸುವ ಪಾಪವನ್ನು ಇಲ್ಲದಂತೆ ಮಾಡುವ ಗುಣ ಸಂಧ್ಯಾವಂದನೆಗೆಯಿದ್ದರೆ ಅದನ್ನು ಮಾಡುವ ಹಕ್ಕು ಬ್ರಾಹ್ಮಣ-ಕ್ಷತ್ರಿಯರಂತೆ ಹೊಲೆ-ಮಾದಿಗರಿಗೆ ಏಕಿರಬಾರದು?
ಪೂರ್ಣ ಓದಿಗೆ ಸಂಪರ್ಕಿಸಿ : ಮನೋಹರ ಗ್ರಂಥಮಾಲಾ
Published On - 6:52 pm, Fri, 24 June 22