Girish Karnad Birth Anniversary : ‘ಕಾರ್ನಾಡರ ‘ಒಡಕಲು ಬಿಂಬ’ದಿಂದಲೇ ಇಡೀ ಭಾರತವನ್ನು ನೋಡಿದೆ’ ಗಾಯತ್ರಿ ಕೃಷ್ಣ

|

Updated on: May 20, 2022 | 12:39 PM

Odakalu Bimba : ‘ಈ ನಾಟಕಕ್ಕೆ 54 ಇಂಚಿನ ಟಿವಿಗಳು ಬೇಕು ಎಂದರು ಗಿರೀಶ. ಒಂದು ಟಿವಿಯ ಒಂದು ದಿನದ ಬಾಡಿಗೆ ಆಗ 20,000 ರೂಪಾಯಿ. ಅಂಥ 12 ಟಿವಿಗಳು ಬೇಕಿದ್ದವು. ಈ ಪ್ರಾಜೆಕ್ಟ್ ನಿಲ್ಲುವ ಹಂತಕ್ಕ ಬಂದಿತು.​ ಆಗ ಒಂದು ಸುಳ್ಳು ಹೇಳಬೇಕಾಯಿತು.’ ಗಾಯತ್ರಿ ಕೃಷ್ಣ

Girish Karnad Birth Anniversary : ‘ಕಾರ್ನಾಡರ ‘ಒಡಕಲು ಬಿಂಬ’ದಿಂದಲೇ ಇಡೀ ಭಾರತವನ್ನು ನೋಡಿದೆ’ ಗಾಯತ್ರಿ ಕೃಷ್ಣ
‘ಒಡಕಲು ಬಿಂಬ’ ತಾಲೀಮಿನಲ್ಲಿ ಗಿರೀಶ ಕಾರ್ನಾಡರೊಂದಿಗೆ ಅರುಂಧತಿ ನಾಗ್. ಪಕ್ಕದ ಚಿತ್ರದಲ್ಲಿ ಈ ನಾಟಕ ನಿರ್ಮಾಣ ನಿರ್ವಹಣೆ ಮಾಡಿದ ಗಾಯತ್ರಿ ಕೃಷ್ಣ
Follow us on

Girish Karnad Birth Anniversary : ಗಿರೀಶ ಕಾರ್ನಾಡರು ತಾವು ಬರೆದ ಹೊಸ ನಾಟಕಗಳ ಓದನ್ನು ತಮ್ಮ ಆಪ್ತರೆದುರು ಓದುತ್ತಿದ್ದರು. ಆ ಆಪ್ತ ಕೇಳುವ ವಲಯದಲ್ಲಿ ನಾನೂ ಒಬ್ಬಳಾಗಿದ್ದೆ ಎಂದು ಹೇಳಿಕೊಳ್ಳಲು ಹೆಮ್ಮೆ ಮತ್ತು ಪ್ರೀತಿ. ಅವರು 2005ರಲ್ಲಿ ‘ಒಡಕಲು ಬಿಂಬ’ ನಾಟಕ ಬರೆದರು. ಕನ್ನಡ ಮತ್ತು ಇಂಗ್ಲಿಷ್ ಓದನ್ನು ಆ ದಿನ ನಮ್ಮೆಲ್ಲರೆದುರೂ ಓದಿದರು. ‘ಈ ನಾಟಕವನ್ನು ನಾನೇ ನಿರ್ದೇಶನ ಮಾಡುತ್ತೇನೆ. ನನ್ನೊಂದಿಗೆ ಕೆ.ಎಂ. ಚೈತನ್ಯ ಇರುತ್ತಾರೆ. ತಾಂತ್ರಿಕವಾಗಿ ಇದನ್ನು ವಿಭಿನ್ನ ಪ್ರಯೋಗ ಮಾಡುವ ಆಲೋಚನೆ ಇದೆ. ಇದು ಸವಾಲಿನದಾಗಿದ್ದರಿಂದ ನಾನೇ ನಿರ್ದೇಶಿಸುವೆ. ಬೇರೆಯವರಿಗೆ ಕೊಟ್ಟರೆ ಇದರ ‘ಆತ್ಮ’ ದಕ್ಕಲಾರದು ಎನ್ನಿಸುತ್ತದೆ.’ ಎಂದರು. ಕನ್ನಡದಲ್ಲಿ ಅರುಂಧತಿ ನಾಗ್, ಇಂಗ್ಲಿಷ್​ನಲ್ಲಿ ಅರುಂಧತಿ ರಾಜಾ ಈ ನಾಟಕದ ಪಾತ್ರಧಾರಿಗಳು ಎಂಬ ನಿರ್ಧಾರವೂ ಆಯಿತು. ಈ ನಾಟಕಕ್ಕೆ ಮೆಟಾ ಅವಾರ್ಡ್ ಕೂಡ ಬಂದಿತು. ಭಾರತದ ಎಲ್ಲಾ ಮುಖ್ಯನಗರಗಳಲ್ಲಿಯೂ ಈ ನಾಟಕದ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತು ಗಿರೀಶರೊಂದಿಗೆ ಪ್ರಯಾಣಿಸಿದ್ದು ಅಪೂರ್ವ ಅನುಭವ ಮತ್ತು ಬದುಕಿನ ಸಾರ್ಥಕತೆ.
ಗಾಯತ್ರಿ ಕೃಷ್ಣ, ಬೆಂಗಳೂರು

‘ಒಡಕಲು ಬಿಂಬ’ ಅಭೂತಪೂರ್ವ ಯಶಸ್ಸು ಕಂಡ ವಿಭಿನ್ನ ರಂಗಪ್ರಯೋಗ. ಒಂದು ಇಮೇಜ್ ಕೂಡ ಇಲ್ಲಿ ಪಾತ್ರ. ಆ ಇಮೇಜ್​ನೊಂದಿಗೆ ಪಾತ್ರ ಸಂವಾದಿಸುತ್ತಾ ಸಾಗಬೇಕು. ಇದನ್ನು ತಾಂತ್ರಿಕವಾಗಿ ಸಾಧ್ಯವಾಗಿಸುವ ಪರಿಕಲ್ಪನೆಯ ಬಗ್ಗೆ ಗಿರೀಶ ಅವರಿಗೆ ಬಹಳ ಸ್ಪಷ್ಟತೆ ಇತ್ತು. ಆಗಿನದು ಪ್ಲಾಸ್ಮಾ ಟಿವಿ ಯುಗ. ಈ ನಾಟಕಕ್ಕೆ 54 ಇಂಚಿನ ಟಿವಿ ಬೇಕು ಎಂದರು. ಒಂದು ಟಿವಿಯನ್ನು ಒಂದು ದಿನಕ್ಕೆ ಬಾಡಿಗೆ ಪಡೆಯಲು 20,000 ರೂಪಾಯಿ. ಅಂಥ 12 ಟಿವಿಗಳು ಬೇಕಿದ್ದವು. ಲಕ್ಷಗಟ್ಟಲೆ ಖರ್ಚಿನ ವಿಷಯ! ಆದರೆ, ಇದನ್ನೇ ಪರಿಕರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಬಲವಾದ ಕಾರಣವಿತ್ತು. ನೀವು ಯಾವ ಅಂಚಿನಲ್ಲಿ ಕುಳಿತು ನೋಡಿದರೂ ಇಮೇಜ್ ಹೇಗಿದೆಯೋ ಹಾಗೇ ಕಾಣಿಸುವುದು ಇದರ ತಾಂತ್ರಿಕ ವೈಶಿಷ್ಟ್ಯ. ಆದರೆ, ಆಗಷ್ಟೇ ರಂಗಶಂಕರ ನಿರ್ಮಾಣಗೊಂಡಿತ್ತು. ಎಲ್ಲಿಂದ ತರುವುದು ಅಷ್ಟೊಂದು ಹಣ? ಬೇಡ ಈ ಆಲೋಚನೆಯೇ ಬೇಡ. ಈ ಪ್ರಾಜೆಕ್ಟ್​ ನಿಲ್ಲಿಸಿಬಿಡೋಣ ಎಂಬ ತೀರ್ಮಾನಕ್ಕೆ ಬಹಳೇ ಬೇಸರದಿಂದ ಬರಲಾಯಿತು.

ಆದರೆ ನನಗೆ ಸುಮ್ಮನಿರಲಾಗಲಿಲ್ಲ. ಏನಾದರೂ ಒಂದು ಸುಳ್ಳು ಹೇಳಿ ಒಟ್ಟಿನಲ್ಲಿ ಇದು ಪ್ರದರ್ಶನವಾಗುವಂತೆ ಮಾಡಲೇಬೇಕು ಎಂದು ನಿರ್ಧರಿಸಿದೆ. ‘ಈಗ ಬಜೆಟ್ ಕಡಿಮೆಯಾಗಿದೆ ನಾವು ನಾಟಕ ಮಾಡಬಹುದು’ ಹೀಗೇನೋ ಒಂದು ಸುಳ್ಳನ್ನು ಗಟ್ಟಿಮನಸ್ಸು ಮಾಡಿ ಹೇಳಿಬಿಟ್ಟೆ. ಆಗ ಇಡೀ ತಂಡಕ್ಕೆ ಎಂಥ ಉತ್ಸಾಹ ಬಂದಿತೆಂದರೆ…  ಭಾರತೀಯ ರಂಗಭೂಮಿಯಲ್ಲಿ ಆ ವರ್ಷದ ಅತ್ಯುತ್ತಮ ನಾಟಕ ಎಂಬ ಹೆಗ್ಗಳಿಕೆಗೆ ಈ ನಾಟಕ ಪಾತ್ರವಾಯಿತು. ಆರು ತಿಂಗಳುಗಳ ಕಾಲ ಕನ್ನಡ, ಇಂಗ್ಲಿಷ್​ನಲ್ಲಿ ಸತತವಾಗಿ ಪ್ರದರ್ಶನ ಸಾಗಿತು. ಗಿರೀಶರಿಗೆ 75 ತುಂಬುವ ಹೊತ್ತಿಗೆ ಈ ನಾಟಕಕ್ಕೆ ಮೆಟಾ ಅವಾರ್ಡ್ ಕೂಡ ಬಂದಿತು.

ಇದನ್ನೂ ಓದಿ
ಅಂಕಪರದೆ: ರಂಗಶಂಕರದಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕ ಇಂದು ಪ್ರದರ್ಶನ
Theatre: ಅಂಕಪರದೆ; ಹೋಟೆಲು, ಬಾರ್, ಪಬ್… ಶೇ. 100ರಷ್ಟು ಅನುಮತಿ ಕೊಟ್ಟ ಸರ್ಕಾರ ರಂಗಮಂದಿರಗಳಿಗೇಕೆ ಶೇ. 50?
New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು
New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್

ಇದನ್ನೂ ಓದಿ : Theatre : ಡೆಸ್ಡೆಮೋನಾಳನ್ನು ಕೊಂದವರು ಯಾರು? ನಾಳೆ ಬೆಂಗಳೂರಿನಲ್ಲಿ ತನಿಖೆ ಶುರುವಾಗಲಿದೆ

ಬೆಂಗಳೂರಿನಲ್ಲಿದ್ದಾಗೆಲ್ಲ ಗಿರೀಶ ಈ ನಾಟಕ ನಡೆಯುವಾಗ ರಂಗಶಂಕರಕ್ಕೆ ಬರುತ್ತಿದ್ದರು. ತುಂಬಿದ ಸಭಾಂಗಣ ಅವರು ಬರುತ್ತಿದ್ದಂತೆ ಒಂದು ಕ್ಷಣ ಎದ್ದು ನಿಂತು ಚಪ್ಪಾಳೆ, ಉದ್ಗಾರಗಳ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದರು. ಮತ್ತವರಲ್ಲಿ ನವಿರಾದ ಹಾಸ್ಯಪ್ರಜ್ಞೆ ಇತ್ತು. ‘ಅರು, ನೀನೆಂಥ ಅದ್ಭುತ ನಟಿ ಮತ್ತು ಬರಹಗಾರ್ತಿ!’ ಎಂದು ಛೇಡಿಸುತ್ತಿದ್ದರು. ಅರುಂಧತಿ ನಾಗ್ ಅಭಿನಯಿಸುವಾಗ ಶಬ್ದ ವ್ಯತ್ಯಾಸ ಮಾಡಿದಾಗೆಲ್ಲ.

ಈ ನಾಟಕಕ್ಕಾಗಿ ವಿಮಾನ ಪ್ರಯಾಣ ಮಾಡುವಾಗೆಲ್ಲಾ ನಾವು ನಿದ್ದೆಗಿಳಿಯುತ್ತಿದ್ದೆವು. ಎದ್ದ ಮೇಲೆ ಗಿರೀಶ, ‘ನೋಡಿ ನೀವೆಲ್ಲ ಚೆನ್ನಾಗಿ ನಿದ್ದೆ ಮಾಡಿದಿರಿ ನಾನಿದೆಲ್ಲಾ ಓದಿದೆ’ ಎಂದು 1970-80ರ ಕಾಲದ ನ್ಯೂಯಾರ್ಕ್ ಟೈಮ್ಸ್, ಗಾರ್ಡಿಯನ್, ಟೆಲಿಗ್ರಾಫ್ ಪತ್ರಿಕೆಗಳಲ್ಲಿನ ಲೇಖನಗಳನ್ನು ತೋರಿಸುತ್ತಿದ್ದರು. ಅವರು ಓದದೇ ಇರುವುದು ಏನೂ ಇರಲಿಲ್ಲ. ಏನು ಬರೆದರೂ ವಾಸ್ತವಿಕ ಅಂಶಗಳನ್ನು ಅರ್ಥ ಮಾಡಿಕೊಂಡೇ ಮುಂದುವರಿಯುತ್ತಿದ್ದರು.

ಇದನ್ನೂ ಓದಿ : ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​

ಸಂಶೋಧನೆ ಮಾಡಲಾರದೆ, ಚರ್ಚಿಸದೆ ಅವರು ನಾಟಕಗಳನ್ನು ಬರೆಯುತ್ತಿರಲಿಲ್ಲ. ‘ರಾಕ್ಷಸ ತಂಗಡಿ’, ‘ಬೆಂದಕಾಳು ಆನ್​ ಟೋಸ್ಟ್’ ಮುಂತಾದ ನಾಟಕಗಳ ಸ್ಕ್ರಿಪ್ಟ್ ಮುಗಿದ ಮೇಲೆ ಆಪ್ತರೆದುರು ಓದಿ ಅಭಿಪ್ರಾಯಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದರು. ‘ವೆಡ್ಡಿಂಗ್ ಆಲ್ಬಮ್’ ಬರೆಯುವಾಗ ಆಗಷ್ಟೇ ಇಂಟರ್​ನೆಟ್ ಕಾಲಿಟ್ಟ ಕಾಲ. ‘ನನ್ನ ತಲೆಯಲ್ಲಿ ಒಂದು ನಾಟಕ ಹುಟ್ಟತಾ ಇದೆ. ಅದಕ್ಕಾಗಿ ನನಗೆ ಈಗಿನ ಕಾಲದ ಒಂದಿಷ್ಟು ಹುಡುಗರೊಂದಿಗೆ ಮಾತನಾಡಬೇಕು ಎಂದರು. ಆಗ ನಾನು ಕಾಲೇಜು ಓದುತ್ತಿದ್ದ ನನ್ನ ಅಕ್ಕನ ಮಕ್ಕಳು, ಸ್ನೇಹಿತರನ್ನು ಕರೆಸಿದೆ. ಐಸ್ಕ್ರೀಮ್ ಸ್ನ್ಯಾಕ್ಸ್​ ಮೆಲ್ಲುತ್ತ, ‘ಈಗಿನ ಹುಡುಗರು ನೀವು. ಇಂಟರ್​ನೆಟ್​ನೊಂದಿಗೆ ನಿಮಗಿರುವ ಸಂಬಂಧದ ಬಗ್ಗೆ ಏನೆನ್ನಿಸುತ್ತದೆ’ ಎಂದು ಮಾತು ಪ್ರಾರಂಭಿಸಿದ್ದರು. ಈ ಮೀಟಿಂಗ್ ಸುಮಾರು 3 ತಾಸುಗಳವರೆಗೆ ನಡೆಯಿತು.

ಪ್ರತಿಭಾವಂತ, ವಿಚಾರವಂತ, ಸಹೃದಯಿ ಗಿರೀಶ ಎಂದಿಗೂ ಚೈತನ್ಯಸ್ವರೂಪದಲ್ಲಿ ನಮ್ಮೊಳಗೆ ಇದ್ದೇ ಇದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ.

 

Published On - 11:05 am, Thu, 19 May 22